ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯದಲ್ಲಿ ಅಭಿವೃದ್ಧಿ ಯೋಜನೆ ಬೇಕೇ?

ಅಭಿವೃದ್ಧಿ ಯೋಜನೆಗಳಿಗೆ ಪರಿಸರವನ್ನು ನಾಶಮಾಡುವ ಬದಲು ವೈಜ್ಞಾನಿಕ ರೀತಿಯಲ್ಲಿ ಪರ್ಯಾಯ ಮಾರ್ಗ ಹುಡುಕಿಕೊಳ್ಳಬೇಕು
Last Updated 4 ಜುಲೈ 2018, 5:41 IST
ಅಕ್ಷರ ಗಾತ್ರ

ಪಶ್ಚಿಮ ಘಟ್ಟಗಳ ಮೂಲಕ ಸಾಗುವ ರೈಲು ಮಾರ್ಗಗಳಲ್ಲಿ ವನ್ಯಜೀವಿಗಳ ಸಾವಿನ ಸರಣಿ ಮುಂದುವರಿದಿದೆ. ಜೂನ್ 4ರಂದು ಬೆಂಗಳೂರು- ಮಂಗಳೂರು ರೈಲು ಮಾರ್ಗದ ವ್ಯಾಪ್ತಿಯಲ್ಲಿ ಚಲಿಸುತ್ತಿರುವ ರೈಲಿಗೆ ಸಿಲುಕಿ ಎರಡು ಕಾಡಾನೆಗಳು ದಾರುಣವಾಗಿ ಸಾವನ್ನಪ್ಪಿವೆ. ಇಂತಹ ಘಟನೆ ನಡೆದಿರುವುದು ಇದೇ ಮೊದಲೇನಲ್ಲ. ಏಳು ವರ್ಷಗಳ ಅವಧಿಯಲ್ಲಿ ಧಾರವಾಡ- ಅಳ್ನಾವರ- ಲೋಂಡಾ ಮೂಲಕ ವಾಸ್ಕೊ ಹಾಗೂ ಬೆಳಗಾವಿಗೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗದ ಬೆಳಗಾವಿ, ಹಳಿಯಾಳ, ಧಾರವಾಡ ಪ್ರಾದೇಶಿಕ ಅರಣ್ಯ ವಿಭಾಗಗಳ ವ್ಯಾಪ್ತಿಯಲ್ಲಿ 15 ಕಾಡುಕೋಣಗಳು, 2 ಕಾಡಾನೆ ಹಾಗೂ ಒಂದು ಕರಡಿ ರೈಲು ಅಪಘಾತದಲ್ಲಿ ಸಾವನ್ನಪ್ಪಿರುವುದು ಮಾಹಿತಿ ಹಕ್ಕು ಕಾಯ್ದೆ ಅಡಿ ಹಾಗೂ ಇತರೆ ಮೂಲಗಳಿಂದ ಪಡೆದ ಮಾಹಿತಿಯಿಂದ ತಿಳಿದುಬಂದಿದೆ. ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹಾದುಹೋಗುವ ಕೊಂಕಣ ರೈಲ್ವೆ ಮಾರ್ಗದಲ್ಲೂ ಕಾಡುಕೋಣ, ಚಿರತೆ, ಜಿಂಕೆ ಮತ್ತಿತರ ವನ್ಯಜೀವಿಗಳು ರೈಲಿಗೆ ಸಿಲುಕಿ ಪ್ರಾಣ ತೆತ್ತಿವೆ. ಘಟನೆ ನಡೆದ ಸ್ಥಳವು ಹುಲಿಗಳ ಆವಾಸಸ್ಥಾನ ಮತ್ತು ಆನೆ ಕಾರಿಡಾರ್ ಸಹ ಆಗಿದೆ.

ಜಗತ್ತಿನಲ್ಲೇ ಅತೀ ಸೂಕ್ಷ್ಮ ಜೀವವೈವಿಧ್ಯಕ್ಕೆ ಹೆಸರಾಗಿರುವ ಭಾರತದಲ್ಲಿ ಅರಣ್ಯ ಪ್ರದೇಶಗಳ ಮೂಲಕವೇ ಪ್ರತಿನಿತ್ಯ ನೂರಾರು ರೈಲುಗಳು ಓಡಾಡುತ್ತಿವೆ. ರೈಲುಮಾರ್ಗ ಹಾಗೂ ರಸ್ತೆಗಳು ವನ್ಯಜೀವಿಗಳ ಅಸಹಜ ಸಾವಿಗೆ ಒಂದು ಕಾರಣ. ರೈಲುಮಾರ್ಗಗಳು ವನ್ಯಜೀವಿಗಳ ಸಹಜ ನೆಲೆಯನ್ನು ನಾಶಗೊಳಿಸುತ್ತವೆ. ಅವುಗಳ ಆವಾಸ ಸ್ಥಾನವನ್ನು ಛಿದ್ರಗೊಳಿಸುತ್ತವೆ ಅಥವಾ ಅದರ ಗುಣಮಟ್ಟವನ್ನು ಹಾಳುಗೆಡವುತ್ತವೆ. ಇದರ ಪರಿಣಾಮ ಎಂಬಂತೆ ಮಾನವ- ವನ್ಯಜೀವಿಗಳ ಸಂಘರ್ಷ ಏರ್ಪಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅಭಿವೃದ್ಧಿ ಹಾಗೂ ವನ್ಯಜೀವಿ ಸಂರಕ್ಷಣೆ ಮಧ್ಯೆ ಸಮನ್ವಯ ಸಾಧಿಸುವುದೇ ಬಹುದೊಡ್ಡ ಸವಾಲು.

ಇಂಥ ಸ್ಥಿತಿಯಲ್ಲಿ ನಾವು ಪ್ರಮುಖವಾಗಿ ವಿಚಾರ ಮಾಡಬೇಕಾದ ಅಂಶವೆಂದರೆ, ಅರಣ್ಯ ಪ್ರದೇಶಗಳ ಮೂಲಕ ಹೊಸ ರೈಲು ಮಾರ್ಗಗಳನ್ನು ನಿರ್ಮಿಸುವುದು ಅನಿವಾರ್ಯವೇ? ಎಂಬುದು. ಉದಾಹರಣೆಗೆ– ಬಳ್ಳಾರಿಯಿಂದ ಕಾರವಾರಕ್ಕೆ ಕಬ್ಬಿಣದ ಅದಿರು ಸಾಗಾಣಿಕೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹುಬ್ಬಳ್ಳಿ- ಅಂಕೋಲಾ ರೈಲುಮಾರ್ಗವನ್ನು ನಿರ್ಮಿಸಬೇಕೆಂದು ರೈಲ್ವೆ ಇಲಾಖೆ ಪ್ರಸ್ತಾವ ಸಲ್ಲಿಸಿದೆ. ಆದರೆ ‘ಈಗ ಬಳ್ಳಾರಿಯಲ್ಲಿ ಕಬ್ಬಿಣದ ಅದಿರಿನ ಉತ್ಪಾದನೆಯು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಅದಿರಿನ ಸಾಗಾಣಿಕೆಯೂ ಕಡಿಮೆಯಾಗಿದೆ. ಆದ್ದರಿಂದ ಅದಿರು ಸಾಗಾಣಿಕೆಗಾಗಿ ರೈಲುಮಾರ್ಗ ನಿರ್ಮಾಣ ಅನಿವಾರ್ಯ ಅಲ್ಲ. ಅಲ್ಲದೇ ಹೊಸ ರೈಲುಮಾರ್ಗದಿಂದ ಇಲ್ಲಿನ ಪರಿಸರದ ಮೇಲೆ ಗಂಭೀರ ಪರಿಣಾಮಗಳು ಉಂಟಾಗುತ್ತವೆ’ ಎಂದು ಈ ಕುರಿತು ಸ್ಥಳ ಪರಿಶೀಲನೆ ನಡೆಸಿದ್ದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ತನ್ನ ಮೊದಲ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ. ಅದಿರು ಸಾಗಾಣಿಕೆ ಪ್ರಮಾಣ ಕಡಿಮೆ ಆಗಿದೆ ಎಂಬುದನ್ನು ಸುಪ್ರೀಂ ಕೋರ್ಟ್‌ ಸಹ ಒಪ್ಪಿದೆ.

ಈಗಿರುವ ಹುಬ್ಬಳ್ಳಿ- ಅಂಕೋಲಾ- ಕಾರವಾರ ರಾಷ್ಟ್ರೀಯ ಹೆದ್ದಾರಿಯೂ ಅದರ ಸಾಮರ್ಥ್ಯಕ್ಕೆ ಅನುಗುಣವಾಗಿ ಪೂರ್ಣ ಮಟ್ಟದಲ್ಲಿ ಬಳಕೆ ಆಗುತ್ತಿಲ್ಲ ಎನ್ನುವ ವಿಚಾರವೂ ಬೇರೆ ವರದಿಗಳಿಂದ ತಿಳಿದುಬಂದಿದೆ. ಆದ್ದರಿಂದ ಆರ್ಥಿಕವಾಗಿ ಕಾರ್ಯಸಾಧುವಲ್ಲದ ಹಾಗೂ ಪರಿಸರದ ಮೇಲೆ ದುಷ್ಪರಿಣಾಮ ಬೀರುವಂಥ ರೈಲ್ವೆ ಯೋಜನೆಗಳನ್ನು ಆರಂಭಿಕ ಹಂತದಲ್ಲೇ ಕೈಬಿಡುವುದು ಉತ್ತಮ.

ನೈರುತ್ಯ ರೈಲ್ವೆ ವಿಭಾಗವು ಗಣಿಗಾರಿಕೆಯ ಸರಕು ಸಾಗಾಣಿಕೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹೊಸಪೇಟೆ- ತಿನೈಘಾಟ್- ಕ್ಯಾಸಲ್‌ರಾಕ್- ವಾಸ್ಕೊ ಮಧ್ಯೆ ದ್ವಿಪಥ ರೈಲುಮಾರ್ಗ ನಿರ್ಮಾಣ ಕಾಮಗಾರಿ ನಡೆಸಲು ಅರಣ್ಯ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ. ಇನ್ನೊಂದೆಡೆ, ಗಣಿಗಾರಿಕೆ ಹಾಗೂ ಪ್ರವಾಸೋದ್ಯಮಕ್ಕೆ ಅನುಕೂಲಕರ ವಾತಾವರಣ ನಿರ್ಮಿಸುವ ದೃಷ್ಟಿಯಿಂದ ಈ ಸೂಕ್ಷ್ಮ ವನ್ಯಜೀವಿ ಆವಾಸಸ್ಥಾನಗಳ ಮೂಲಕವೇ ಹಾದುಹೋಗುವ ಬೆಳಗಾವಿ- ಪಣಜಿ ರಾಷ್ಟ್ರೀಯ ಹೆದ್ದಾರಿ ‘4ಎ’ ಅನ್ನು ಅಗಲಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡ ಪ್ರಸ್ತಾವ ಸಲ್ಲಿಸಿದೆ. ಈಗ ಅದರ ಅಂತಿಮ ಒಪ್ಪಿಗೆಗೆ ಕಾಯುತ್ತಿದೆ. ಕಬ್ಬಿಣದ ಅದಿರಿನ ಉತ್ಪಾದನೆ ಕಡಿಮೆಯಾಗಿದೆ ಎಂಬುದು ಸ್ಪಷ್ಟವಾಗಿರುವಾಗ, ಈ ಸೂಕ್ಷ್ಮ ವನ್ಯಜೀವಿ ಆವಾಸಸ್ಥಾನಗಳ ಮೂಲಕ ರೈಲ್ವೆ ಕಾಮಗಾರಿ ನಡೆಸುವ ಬದಲು, ಈಗಿರುವ ಮಾರ್ಗವನ್ನೇ ಸಮರ್ಥವಾಗಿ ಬಳಸಿಕೊಂಡರೆ ವನ್ಯಜೀವಿಗಳಿಗೆ ಅನುಕೂಲ ಹಾಗೂ ಆರ್ಥಿಕವಾಗಿಯೂ ಕಾರ್ಯಸಾಧು. ಆದ್ದರಿಂದ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ದ್ವಿಪಥ ಕಾಮಗಾರಿ ಯೋಜನೆಯನ್ನು ಇಲಾಖೆ ಕೈಬಿಡುವುದು ಉತ್ತಮ.

ಅಲ್ಲದೇ ರೈಲು ಅಪಘಾತಗಳಲ್ಲಿ ಆನೆಗಳ ಸಾವಿನ ಕುರಿತಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ‘ಅರಣ್ಯ ಪ್ರದೇಶಗಳ ಮೂಲಕ ಹಾದುಹೋಗುವ ರೈಲುಮಾರ್ಗಗಳಲ್ಲಿ ರೈಲುಗಳ ವೇಗವನ್ನು ನಿಯಂತ್ರಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೂ ಸದರಿ ಆದೇಶವನ್ನು ಪಾಲಿಸದಿರುವ ಲೋಕೋ ಪೈಲಟ್ (ಚಾಲಕರು) ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆದೇಶ ನೀಡಿದೆ. ಆದರೆ ಈ ಆದೇಶ ಪಾಲನೆಯಾಗುತ್ತಿಲ್ಲ ಎಂಬುದು ದುರದೃಷ್ಟಕರ.

ಸೂಕ್ಷ್ಮ ತಿರುವುಗಳಲ್ಲಿ ವೇಗ ನಿಯಂತ್ರಣ ಕಷ್ಟಸಾಧ್ಯ. ಇಂತಹ ಕಡೆಗಳಲ್ಲಿ ವನ್ಯಜೀವಿಗಳು ಹಳಿ ದಾಟುವುದು ಚಾಲಕರಿಗೆ ಗೋಚರಿಸುವುದೂ ಇಲ್ಲ. ಇಂತಹ ಪ್ರದೇಶಗಳಲ್ಲಿ ಹಳಿಯ ಸುತ್ತಲೂ ಕಂದಕಗಳನ್ನು ತೋಡಿ, ಪ್ರಾಣಿಗಳು ಹಳಿ ದಾಟದಂತೆ ಮಾಡಬೇಕು. ರೈಲ್ವೆ ಹಳಿಗಳ ಸುತ್ತಲಿನ ದಿಬ್ಬಗಳನ್ನು ಸಮತಟ್ಟು ಮಾಡಬೇಕು. ಆನೆಯಂಥ ಪ್ರಾಣಿ ಹಳಿಗಳನ್ನು ದಾಟಿ ಇಳಿಯುವಾಗ ಕಡಿದಾದ ಇಳಿಜಾರಿನಲ್ಲಿ ರೈಲಿಗೆ ಸಿಲುಕಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿರುತ್ತದೆ. ವನ್ಯಜೀವಿಗಳು ಹಳಿ ದಾಟುವುದು ಚಾಲಕರಿಗೆ ದೂರದಿಂದಲೇ ಕಾಣುವಂತೆ ಉತ್ತಮ ಗುಣಮಟ್ಟದ ರೈಲು ದೀಪಗಳನ್ನು ಅಳವಡಿಸಬೇಕು. ಉತ್ತರಾಖಂಡ ರಾಜ್ಯದಲ್ಲಿ ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದುಹೋಗುವ ರೈಲುಮಾರ್ಗದಲ್ಲಿ ಇಂಥ ಕ್ರಮಗಳನ್ನು ಕೈಗೊಂಡಿದ್ದರ ಪರಿಣಾಮ ಅಲ್ಲಿ ವನ್ಯಜೀವಿಗಳ ಸಾವಿನ ಸಂಖ್ಯೆ ತಕ್ಕಮಟ್ಟಿಗೆ ಕಡಿಮೆಯಾಗಿದೆ.

ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆ ಮಧ್ಯೆ ಸಮತೋಲನ ಇರಬೇಕು. ಅಭಿವೃದ್ಧಿ ಯೋಜನೆಗಳಿಗೆ ಪರಿಸರವನ್ನು ನಾಶ ಮಾಡುವ ಬದಲು ವೈಜ್ಞಾನಿಕ ರೀತಿಯಲ್ಲಿ ಪರ್ಯಾಯ ಮಾರ್ಗ ಹುಡುಕಿಕೊಳ್ಳಬೇಕು. ನಮ್ಮ ನಾಡಿನ ಜೀವನದಿಗಳ ಮೂಲವಾಗಿರುವ ಪಶ್ಚಿಮಘಟ್ಟ ಈಗಾಗಲೇ ಅರಣ್ಯ ಅತಿಕ್ರಮಣ, ಮರಗಳ್ಳತನ, ಹೆದ್ದಾರಿ, ರೈಲ್ವೆ ಯೋಜನೆಗಳು, ಜಲ ವಿದ್ಯುತ್ ಯೋಜನೆ ಮುಂತಾದವುಗಳಿಂದ ನಲುಗಿ ಹೋಗಿದ್ದು ಇಲ್ಲಿ ವನ್ಯಜೀವಿಗಳ ನೆಲೆಗೆ ಧಕ್ಕೆಯಾಗಿದೆ. ಇಷ್ಟಾದರೂ ನಾವು ಎಚ್ಚೆತ್ತುಕೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಜೀವನದಿಗಳ ಸೆಲೆ ಬತ್ತಿಹೋಗಿ ನಮ್ಮ ಮುಂದಿನ ಪೀಳಿಗೆ ಹನಿ ನೀರಿಗೂ ಪರಿತಪಿಸುವ ದಿನಗಳು ಬರುವುದು ಖಚಿತ. ನಾವು ಕಾಂಕ್ರೀಟ್ ಕಾಡುಗಳನ್ನು ಸೃಷ್ಟಿಸಬಹುದು. ಆದರೆ ಪಶ್ಚಿಮ ಘಟ್ಟಗಳನ್ನು ಯಾರಿಂದಲೂ ಸೃಷ್ಟಿಸಲು ಸಾಧ್ಯವಿಲ್ಲ. ವನ್ಯಜೀವಿಗಳು ಹಾಗೂ ಅವುಗಳ ನೆಲೆ ಉಳಿದರೆ ಮಾತ್ರ ಮನುಕುಲದ ಉಳಿವು ಎಂಬುದನ್ನು ನಾವು ಅರಿತು, ಆ ದಿಕ್ಕಿನಲ್ಲಿ ಕಾರ್ಯೋನ್ಮುಖರಾಗಬೇಕಾಗಿರುವುದು ಅತೀ ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT