ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವ್ಯಕ್ತಿ ಸ್ವಾತಂತ್ರ್ಯ ‘ಸ್ವತಂತ್ರ’ವೇ?

Last Updated 23 ಜುಲೈ 2020, 19:31 IST
ಅಕ್ಷರ ಗಾತ್ರ

ಇತಿಹಾಸದ ನೆನಪಿನಂಗಳದಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮೊದಲ ಬಲಿಪಶುವಾಗಿದ್ದು ಗ್ರೀಕ್ ತತ್ವಶಾಸ್ತ್ರಜ್ಞ ಸಾಕ್ರಟೀಸ್. ಇವರ ವಿಭಿನ್ನ ಆಲೋಚನೆಗಳು ಯುವಜನರನ್ನು ಅಡ್ಡದಾರಿಗೆ ಕೊಂಡೊಯ್ಯುತ್ತಿವೆ ಎಂದು ಆಪಾದಿಸಿ, ಪ್ರಭುತ್ವವು ಅವರಿಗೆ ಎರಡು ಆಯ್ಕೆಗಳನ್ನು ನೀಡಿತು. ತಮ್ಮ ವಿಚಾರಗಳು ತಪ್ಪೆಂದು ಒಪ್ಪಿಕೊಳ್ಳುವುದು ಅಥವಾ ಅವನ್ನು ಅಭಿವ್ಯಕ್ತಗೊಳಿಸಿದ್ದಕ್ಕಾಗಿ ವಿಷ ಕುಡಿದು ಪ್ರಾಣ ತ್ಯಜಿಸುವುದು.

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದ ಸಾಕ್ರಟೀಸ್, ವಿಷ ಸೇವಿಸುವ ಶಿಕ್ಷೆಯನ್ನು ಸಮಚಿತ್ತದಿಂದ ಆಯ್ದುಕೊಳ್ಳುತ್ತಾರೆ. ಇದರ ತಾತ್ಪರ್ಯವೇನೆಂದರೆ, ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಎಲ್ಲ ಕಾಲಘಟ್ಟದಲ್ಲಿಯೂ ಮರೀಚಿಕೆಯಷ್ಟೇ. ನಾವಿಂದು ಹೇಳುವ, ‘ಕಾಲ ಬದಲಾಗಿದೆ’, ‘ನಾಗರಿಕರಾಗಿದ್ದೇವೆ’, ‘ಸಹಿಷ್ಣುಗಳಾಗಿದ್ದೇವೆ’, ‘ಪ್ರಜಾಪ್ರಭುತ್ವದ ಮೊದಲ ಮೆಟ್ಟಿಲೇ ಅಭಿವ್ಯಕ್ತಿ ಸ್ವಾತಂತ್ರ್ಯ’... ಎಂಬುವೆಲ್ಲ ಬರಿಯ ಟೊಳ್ಳು ಮಾತುಗಳಷ್ಟೇ.

ಇಲ್ಲಿ ವಿಶೇಷವಾಗಿ ಗಮನಿಸಬೇಕಾಗಿರುವುದು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಅಧಿಕಾರಕ್ಕಿರುವ ನಂಟು. ಉದಾಹರಣೆಗೆ, ಎಡಪಂಥೀಯ ನೇತೃತ್ವದ ಸರ್ಕಾರ ಇರುವಾಗ, ಪೂರಕ ವಿಚಾರಧಾರೆಗಳಿಗೆ ಸ್ವಾತಂತ್ರ್ಯ ಇರುತ್ತದೆ. ಹಾಗೆಯೇ, ಬಲಪಂಥೀಯ ನೇತೃತ್ವದ ಸರ್ಕಾರ, ತನಗೆ ಅನುಕೂಲವಾದ ವಿಚಾರಧಾರೆಗಳನ್ನಷ್ಟೇ ಪೋಷಿಸುತ್ತದೆ. ಈ ರೀತಿಯ ಅನುಕೂಲಸಿಂಧು ಬೆಂಬಲ ಅಥವಾ ನಿಷೇಧದಿಂದ ನಿಜವಾಗಿ ನಷ್ಟವಾಗುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ. ಅಂದರೆ, ಪ್ರತಿಕೂಲ ಸಿದ್ಧಾಂತದ ಪ್ರಭುತ್ವವಿರುವಾಗ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೀಗ ಹಾಕಬೇಕೇ? ಇವುಗಳ ನಡುವೆ ಆರೋಗ್ಯಕರ ಚರ್ಚೆಗಳು ಸಾಧ್ಯವಿಲ್ಲವೇ?‌

‘ವಿಭಿನ್ನ ವಿಚಾರಗಳೊಂದಿಗೆ ಮುಖಾಮುಖಿಯಾಗದಿದ್ದರೆ, ನಿಂತ ನೀರಿನಂತಾಗುತ್ತೇವೆ’ ಎಂಬ ಅರ್ಥಶಾಸ್ತ್ರಜ್ಞ ರಘುರಾಮ್ ರಾಜನ್ ಅವರ ಮಾತು ವಿಶಿಷ್ಟವೆನಿಸುತ್ತದೆ. ವ್ಯಕ್ತಿಯನ್ನು ನಿಶ್ಶಬ್ದಗೊಳಿಸಿದರೆ ಅವನ ವಿಚಾರಗಳು ನಾಶವಾಗುತ್ತವೆ ಎಂಬುದು ತಪ್ಪುಗ್ರಹಿಕೆ. ಹೆಚ್ಚಿನ ಸಂದರ್ಭಗಳಲ್ಲಿ, ದಮನಗೊಳಿಸಿದ ವಿಚಾರಗಳು ಇನ್ನಷ್ಟು ಪ್ರಬಲಗೊಂಡು ಜನಸಾಮಾನ್ಯರನ್ನು ತಲುಪುತ್ತವೆ. ಸಾಕ್ರಟೀಸ್‌ ಕಾಲಾನಂತರ ಪ್ಲೇಟೊ ಮತ್ತು ಅರಿಸ್ಟಾಟಲ್ ಮೂಲಕ ಸಾಕ್ರಟೀಸ್ ವಿಚಾರಧಾರೆ ಹೆಚ್ಚು ಜನಪ್ರಿಯವಾಯಿತು.

ಹೀಗಾಗಿ, ನಾವು ಮುಖಾಮುಖಿಯಾಗಬೇಕಾದುದು ತರ್ಕಬದ್ಧವಾದ ವಿಚಾರಗಳಿಗೇ ಹೊರತು ವ್ಯಕ್ತಿಗಳಿಗಲ್ಲ. ವಿಷಾದವೆಂದರೆ, ನಾವಿನ್ನೂ ವಿಭಿನ್ನ ವಿಚಾರಗಳನ್ನು ಮುಕ್ತವಾಗಿ ಚರ್ಚಿಸುವ ಪ್ರೌಢಿಮೆಯನ್ನು ಮೈಗೂಡಿಸಿಕೊಂಡಿಲ್ಲ. ಇದರ ಫಲವಾಗಿ, ಯಾರೋ ತಮ್ಮ ಟ್ವಿಟರ್ ಅಥವಾ ಫೇಸ್‌ಬುಕ್‌ನಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಛೀಮಾರಿ ಹಾಕುತ್ತೇವೆ, ಪೊಲೀಸರಿಗೆ ದೂರು ಕೊಡುತ್ತೇವೆ ಅಥವಾ ಅವರ ಜನ್ಮ ಜಾಲಾಡಿ, ಅವರು ಕಾರ್ಯ ನಿರ್ವಹಿಸುವ ಸಂಸ್ಥೆ ಮೇಲೆ ಒತ್ತಡ ಹೇರಿ ಕೆಲಸ ಕಳೆದುಕೊಳ್ಳುವಂತೆ ನೋಡಿಕೊಳ್ಳುತ್ತೇವೆ. ಇನ್ನೂ ಅತಿರೇಕವಾಗಿ, ಅವರನ್ನು ದೈಹಿಕವಾಗಿ ದಂಡಿಸುತ್ತೇವೆ ಅಥವಾ ಸಾಯಿಸಲು ಸುಪಾರಿ ಕೊಡುವ ಮಟ್ಟಕ್ಕೆ ಹೋಗುತ್ತೇವೆ. ಈ ಪ್ರಕ್ರಿಯೆಗೆ, ಅಮೆರಿಕ ಇಟ್ಟಿರುವ ಹೆಸರು ‘ಅಳಿಸಿಹಾಕುವ ಸಂಸ್ಕೃತಿ’ (ಕ್ಯಾನ್ಸಲ್ ಕಲ್ಚರ್). ಅಂದರೆ, ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾಶ ಮಾಡುವುದು.

ಕೆಲವು ದಿನಗಳಿಂದ, ಅಮೆರಿಕದ ಸುದ್ದಿಮಾಧ್ಯಮಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಹರಣದ ಕುರಿತು ಚರ್ಚೆಯಾಗುತ್ತಿದೆ. ಸದ್ಯಕ್ಕೆ, ಈ ವಾಗ್ವಾದದಲ್ಲಿ ಸಿಲುಕಿರುವುದು ಖ್ಯಾತ ಭಾಷಾಶಾಸ್ತ್ರಜ್ಞ ಪ್ರೊ. ಸ್ಟೀವನ್ ಪಿಂಕರ್. ಅಮೆರಿಕದಲ್ಲಿ ಕಪ್ಪುವರ್ಣೀಯರ ಮೇಲಿನ ಪೊಲೀಸ್ ದೌರ್ಜನ್ಯದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಈ ಸಂದರ್ಭದಲ್ಲಿ, 2015ರಲ್ಲಿ ಪಿಂಕರ್ ಮಾಡಿದ ಟ್ವೀಟ್ ವಿರುದ್ಧ ಆಕ್ರೋಶವೆದ್ದಿದೆ. ಅದರಲ್ಲಿ ಪಿಂಕರ್, ‘ಕಪ್ಪುವರ್ಣೀಯರ ಮೇಲಿನ ಪೊಲೀಸ್ ದೌರ್ಜನ್ಯವು ಜನಾಂಗ ನಿಂದನೆಯಲ್ಲ. ಸಮಾಜದಲ್ಲಿರುವ ಆರ್ಥಿಕ ಅಸಮಾನತೆಯ ಪರಿಣಾಮ’ ಎಂದಿದ್ದರು. ಸುಮಾರು 550 ಶಿಕ್ಷಣ ತಜ್ಞರು ಈಗ, ಅಮೆರಿಕದ ಭಾಷಾ ಸಂಸ್ಥೆಯ ‘ಹೆಸರಾಂತ ಭಾಷಾ ತಜ್ಞರ’ ಪಟ್ಟಿಯಿಂದ ಪಿಂಕರ್ ಹೆಸರನ್ನು ಕಿತ್ತುಹಾಕುವಂತೆ ಮನವಿ ಸಲ್ಲಿಸಿದ್ದಾರೆ.

ಇದಕ್ಕೆ ತಲೆಕೆಡಿಸಿಕೊಳ್ಳದ ಪಿಂಕರ್, ‘ನಾನೇನೋ ಇಂತಹ ಪ್ರತಿಭಟನೆಯನ್ನು ಸಹಿಸಬಲ್ಲೆ. ಆದರೆ, ವ್ಯವಸ್ಥೆಗೆ ಪ್ರತಿಕೂಲವಾದ ಅಭಿಪ್ರಾಯ ವ್ಯಕ್ತಪಡಿಸುವ ಕಿರಿಯ ಸಹೋದ್ಯೋಗಿಗಳ ಬಗ್ಗೆ ಕಳವಳವಾಗುತ್ತದೆ’ ಎಂದಿದ್ದಾರೆ. ಅದಕ್ಕಾಗಿ, ಪಿಂಕರ್ 153 ಪ್ರಗತಿಪರರೊಂದಿಗೆ (ಇದರಲ್ಲಿ ನೋಮ್ ಚೋಮ್ಸ್‌ಕಿ, ಜೆ.ಕೆ.ರೋಲಿಂಗ್ ಸೇರಿದ್ದಾರೆ) ‘ಹಾರ್ಪರ್ಸ್‌’ ನಿಯತಕಾಲಿಕಕ್ಕೆ ಬರೆದ ಬಹಿರಂಗ ಪತ್ರದಲ್ಲಿ ‘ಅಮೆರಿಕದಲ್ಲೀಗ ಅಸಹಿಷ್ಣುತೆ ಹೆಚ್ಚಾಗಿ ಉಸಿರುಗಟ್ಟಿಸುವ ವಾತಾವರಣವಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಮಟ್ಟಿಗೆ ಹೇಳುವುದಾದರೆ, ಜ್ಞಾನಕೇಂದ್ರಗಳೆಂದು ಬಿಂಬಿಸಲಾಗುವ ವಿಶ್ವವಿದ್ಯಾಲಯಗಳ ಅಧ್ಯಾಪಕ ವರ್ಗಕ್ಕೆ ಅಭಿಪ್ರಾಯ ಸ್ವಾತಂತ್ರ್ಯ ಶೂನ್ಯವೆನ್ನಬಹುದು. ಅದರಂತೆಯೇ, ಸಾಹಿತಿಗಳು ಯಾವಾಗಲೂ ಅಸಹಿಷ್ಣುತೆಯ ಬಲಿಪಶುಗಳು. ಹೀಗೆ, ಭಿನ್ನಾಭಿಪ್ರಾಯಗಳ ಆರೋಗ್ಯಕರ ಚರ್ಚೆಯನ್ನು ಮೊಟಕುಗೊಳಿಸಿದರೆ, ಜ್ಞಾನ ಹೇಗೆ ವೃದ್ಧಿಯಾಗುತ್ತದೆ?

ನಮಗಿಲ್ಲಿ ಸ್ಪಷ್ಟವಾಗಿರಬೇಕಾದುದು, ಅಭಿವ್ಯಕ್ತಿ ಸ್ವಾತಂತ್ರ್ಯ ಮನುಷ್ಯನ ಮೂಲಭೂತ ಹಕ್ಕು ಎಂಬುದು. ಒಂದು ವೇಳೆ, ವ್ಯಕ್ತಪಡಿಸಿದ ಅಭಿಪ್ರಾಯ ಸಾರ್ವಜನಿಕವಾಗಿ ಹಾನಿಕಾರಕವೆನಿಸಿದರೆ, ಸೌಹಾರ್ದವಾಗಿ ಚರ್ಚಿಸುವ ವಾತಾವರಣ ನಿರ್ಮಾಣವಾಗಬೇಕಿದೆ.
ಇದಾಗಬೇಕಿದ್ದರೆ, ನಾವು ನೆಚ್ಚಿಕೊಂಡಿರುವ ‘ಸಿದ್ಧಾಂತ’ದ ಕನ್ನಡಕ ತೆಗೆದಿಟ್ಟು, ವಿಭಿನ್ನ ವಿಚಾರಗಳಿಗೆ ಮುಕ್ತ ಮನಸ್ಸಿನಿಂದ ತೆರೆದುಕೊಳ್ಳುವ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT