ಭಾನುವಾರ, ಆಗಸ್ಟ್ 25, 2019
20 °C

ಗ್ರಾಹಕರ ಧ್ವನಿಗೆ ಮತ್ತಷ್ಟು ಬಲ

Published:
Updated:
Prajavani

ಮೂರು ದಶಕಗಳ ಹಿಂದೆ ಅನುಷ್ಠಾನಕ್ಕೆ ಬಂದ ಗ್ರಾಹಕ ಸಂರಕ್ಷಣಾ ಕಾಯ್ದೆಗೆ ಬಹಳಷ್ಟು ಮಾರ್ಪಾಟು ಮಾಡಿರುವ ಗ್ರಾಹಕ ಸಂರಕ್ಷಣಾ ಮಸೂದೆ– 2019 ಅನ್ನು ಸಂಸತ್ತು ಅಂಗೀಕರಿಸಿದೆ. ಈ 30 ವರ್ಷಗಳಲ್ಲಿ ಮಾರುಕಟ್ಟೆಯ ಚಿತ್ರಣ ಸಂಪೂರ್ಣ ಬದಲಾಗಿದೆ. ಆರ್ಥಿಕ ಉದಾರೀಕರಣ, ಮಾಹಿತಿ ತಂತ್ರಜ್ಞಾನ, ಗ್ರಾಹಕರ ಅಭಿರುಚಿಯಂತಹ ಸಂಗತಿಗಳು ಗ್ರಾಹಕರ ಹಕ್ಕುಗಳ ಮೇಲೆ ಗಂಭೀರ ಪರಿಣಾಮ ಉಂಟುಮಾಡಿವೆ.

ಸಾವಿರಾರು ಹೊಸ ಸರಕುಗಳು ಮತ್ತು ಸೇವೆಗಳು ಮಾರುಕಟ್ಟೆಯನ್ನು ಆಕ್ರಮಿಸಿವೆ. ವಿಶೇಷವಾಗಿ, ಗ್ರಾಹಕರನ್ನು ಆನ್‍ಲೈನ್ ಶಾಪಿಂಗ್ ತೀವ್ರವಾಗಿ ಸೆಳೆದಿದೆ. ಈ ಬೆಳವಣಿಗೆಯು ಗ್ರಾಹಕರಿಗೆ ಲಾಭದ ಜೊತೆಗೆ ಕೆಲವು ಸಮಸ್ಯೆಗಳನ್ನೂ ತಂದೊಡ್ಡಿದೆ. ಈಗಿರುವ ಕಾನೂನು ಹೊಸ ಮಾರುಕಟ್ಟೆಗೆ ಸರಿಹೊಂದದ ಕಾರಣ ಮಾರ್ಪಾಟು ಅಗತ್ಯವಾಗಿತ್ತು. ಹೀಗಾಗಿ 2019ರ ಮಸೂದೆಯನ್ನು ಸ್ವಾಗತಿಸಬೇಕಿದೆ.

ಹೊಸ ಮಸೂದೆಯಲ್ಲಿ ಗ್ರಾಹಕರ ಹಕ್ಕುಗಳ ವ್ಯಾಪ್ತಿ ವಿಸ್ತಾರಗೊಂಡಿದೆ. ನೇರ ಮಾರಾಟದಲ್ಲಿ ವಂಚನೆಗೆ ಒಳಗಾದವರು ದೂರು ಸಲ್ಲಿಸುವ ಹಕ್ಕನ್ನು ಪಡೆದುಕೊಂಡಿದ್ದಾರೆ. ಇ-ಕಾಮರ್ಸ್ ಮೂಲಕ  ಖರೀದಿಸುವುದನ್ನೂ ಮಸೂದೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ. ಜಾಹೀರಾತುಗಳ ಆಕರ್ಷಣೆಗೆ ಸಿಲುಕಿ, ಅದರಿಂದ ಉಂಟಾದ ನಷ್ಟವನ್ನು ಸಾಬೀತುಪಡಿಸಲು ಹಳೆ ಕಾಯ್ದೆಯಲ್ಲಿ ಕಷ್ಟವಾಗುತ್ತಿತ್ತು. ಆದರೆ ಹೊಸ ಮಸೂದೆಯು ಹಾದಿ ತಪ್ಪಿಸುವ ಜಾಹೀರಾತಿನ ಅರ್ಥವನ್ನು ಸ್ಪಷ್ಟಪಡಿಸಿರುವುದರಿಂದ ಗ್ರಾಹಕರು ದೂರು ಸಲ್ಲಿಸಲು ಸುಲಭವಾಗಿದೆ.

ಇದೇ ಮೊದಲಿಗೆ ದೇಶದಲ್ಲಿ ‘ಸರಕು ಜವಾಬ್ದಾರಿ’ ಎಂಬ ಪರಿಕಲ್ಪನೆಗೆ ಕಾನೂನಿನ ರೂಪ ನೀಡಲಾಗಿದೆ. ಅದರ ಪ್ರಕಾರ, ಸರಕುಗಳು ಅಥವಾ ಸೇವೆಯಿಂದ ಹಾನಿ ಉಂಟಾದಲ್ಲಿ ಅದಕ್ಕೆ ತಕ್ಕ ಪರಿಹಾರ ನೀಡು ವುದು ತಯಾರಕರು ಮತ್ತು ಮಾರಾಟಗಾರರ ಜವಾಬ್ದಾರಿ. ಸರಕು ತಯಾರಿಕೆಯಲ್ಲಿನ ದೋಷ, ಸರಕಿನ ವಿನ್ಯಾಸದಲ್ಲಿ ದೋಷ, ನೀಡಿರುವ ವಾರಂಟಿ ಪ್ರಕಾರ ಸರಕು ಇಲ್ಲದಿರುವುದು, ಯಾವ ರೀತಿ ಉಪಯೋಗಿಸಬೇಕೆಂಬ ವಿವರ ನೀಡದಿರುವುದು ಇತ್ಯಾದಿ ಆಧರಿಸಿ ಗ್ರಾಹಕರು ದೂರು ಸಲ್ಲಿಸಬಹುದು.

ಮಸೂದೆಯ ಬಹುಮುಖ್ಯ ಮಾರ್ಪಾಟು, ಅನು ಚಿತ ಒಪ್ಪಂದ ಮತ್ತು ಮಾರಾಟಕ್ಕೆ ಸಂಬಂಧಿಸಿದ್ದು. ಗ್ರಾಹಕರು– ಮಾರಾಟಗಾರರ ನಡುವೆ ಏರ್ಪಡುವ ಒಪ್ಪಂದದಲ್ಲಿ ಏಕಪಕ್ಷೀಯ ನಿಬಂಧನೆಗಳನ್ನು ಸೇರಿಸುವಂತಿಲ್ಲ. ಈ ಅಂಶವು ಮನೆ, ಫ್ಲ್ಯಾಟ್, ನಿವೇಶನ ಖರೀದಿಸುವವರಿಗೆ ಹೆಚ್ಚು ಉಪಯುಕ್ತ. ಗ್ರಾಹಕರು ಸಕಾಲಕ್ಕೆ ಹಣ ಪಾವತಿಸದಿದ್ದರೆ ರಿಯಲ್ ಎಸ್ಟೇಟ್‍ನವರು ಅಧಿಕ ದಂಡ ವಿಧಿಸುತ್ತಾರೆ. ಆದರೆ ಅವರು ಫ್ಲ್ಯಾಟ್ ನಿರ್ಮಾಣ ಮಾಡುವಲ್ಲಿ ವಿಳಂಬ ಮಾಡಿದರೆ ಗ್ರಾಹಕರಿಗೆ ಪರಿಹಾರ ನೀಡುವುದಿಲ್ಲ.

ಈ ರೀತಿಯ ಏಕಪಕ್ಷೀಯ ಷರತ್ತುಗಳಿಗೆ ಮಸೂದೆ ಕಡಿವಾಣ ಹಾಕುತ್ತದೆ. ಗ್ರಾಹಕರನ್ನು ಆಕರ್ಷಿಸಲು ಮಾರಾಟಗಾರರು ಏರ್ಪಡಿಸುವ ಸ್ಪರ್ಧೆ, ಲಾಟರಿ ಮುಂತಾದವನ್ನು ನಿಯಂತ್ರಿಸುವುದಕ್ಕೆ ಮಸೂದೆ ಮುಂದಾಗಿದೆ. ಸ್ಪರ್ಧೆಯ ವಿವರವನ್ನು ಯಾವ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತೋ ಅದರಲ್ಲೇ ಫಲಿತಾಂಶ ವನ್ನೂ ಪ್ರಕಟಿಸದಿರುವುದು, ಗ್ರಾಹಕರು ಖರೀದಿಸಿದ ವಸ್ತು, ಪಡೆದ ಸೇವೆಗೆ ಸೂಕ್ತ ಬಿಲ್ ನೀಡದಿರುವುದು, ದೋಷದಿಂದ ಕೂಡಿದ ಸರಕನ್ನು ಹಿಂದಕ್ಕೆ ಪಡೆಯದಿರುವುದು ಸಹ ಇದರ ವ್ಯಾಪ್ತಿಗೆ ಬರಲಿವೆ.

ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಸ್ಥಾಪನೆಗೆ ಅವಕಾಶ ಮಾಡಿಕೊಡಲಾಗಿದೆ. ಕೇಂದ್ರ ಕಚೇರಿಯು ನವದೆಹಲಿ ಯಲ್ಲಿದ್ದು, ದೇಶದ ಇತರ ಸ್ಥಳಗಳಲ್ಲಿ ಸ್ಥಳೀಯ ಕಚೇರಿ ಗಳನ್ನು ಸ್ಥಾಪಿಸಲು ಅವಕಾಶವಿದೆ. ಗ್ರಾಹಕರ ಹಕ್ಕುಗಳ ಉಲ್ಲಂಘನೆಯನ್ನು ಪತ್ತೆಹಚ್ಚಿ ಅದರ ಬಗ್ಗೆ ತನಿಖೆ ಮಾಡಲು ಪ್ರತ್ಯೇಕ ಶಾಖೆಯೂ ಇರುತ್ತದೆ. ಗ್ರಾಹಕರ ಹಕ್ಕುಗಳಿಗೆ ಚ್ಯುತಿ ಉಂಟುಮಾಡುವ, ಅಪಾಯಕಾರಿ ಸರಕುಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಉತ್ಪಾದಕರು ಮತ್ತು ಮಾರಾಟಗಾರರಿಗೆ ಆದೇಶಿಸುವ ಅಧಿಕಾರವನ್ನು ಪ್ರಾಧಿಕಾರಕ್ಕೆ ನೀಡಲಾಗಿದೆ.

ಜಿಲ್ಲಾ ಮಟ್ಟದ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ ಯನ್ನು ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ಎಂದು ಮರು ನಾಮಕರಣ ಮಾಡಲಾಗುವುದು. ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಆಯೋಗದಲ್ಲಿ ಸಂಧಾನ ಕೋಶ (ಮೀಡಿಯೇಷನ್‌ ಸೆಲ್‌) ಸ್ಥಾಪಿಸಲಾಗುವುದು. ಸಂಧಾನದ ಮೂಲಕ ವ್ಯಾಜ್ಯ ಪರಿಹರಿಸುವುದೇ ಕಾಯ್ದೆಯ ಮೂಲ ಉದ್ದೇಶವಾಗಿರುವುದರಿಂದ ಪ್ರತ್ಯೇಕವಾಗಿ ಈ ಕೋಶದ ಸ್ಥಾಪನೆ ಅನಗತ್ಯ.

ಗ್ರಾಹಕ ಸಂರಕ್ಷಣಾ ಮಸೂದೆಯನ್ನು ಉಲ್ಲಂಘಿಸಿ ದವರಿಗೆ ದಂಡ ವಿಧಿಸುವುದರ ಜೊತೆಗೆ ಜೈಲು ಶಿಕ್ಷೆ ನೀಡುವ ಅಧಿಕಾರವನ್ನು ಆಯೋಗ ಮತ್ತು ಪ್ರಾಧಿಕಾರಕ್ಕೆ ನೀಡಲಾಗಿದೆ. ಶಿಕ್ಷೆಯ ಸ್ವರೂಪ ಗಂಭೀರ ವಾಗಿದೆ. ಪ್ರಾಧಿಕಾರದ ಆದೇಶವನ್ನು ಅನುಷ್ಠಾನ
ಗೊಳಿಸದಿದ್ದಲ್ಲಿ ಆರು ತಿಂಗಳ ಜೈಲು ಶಿಕ್ಷೆ ಅಥವಾ ಇಪ್ಪತ್ತು ಲಕ್ಷ ರೂಪಾಯಿ ದಂಡ ಇಲ್ಲವೇ ಎರಡನ್ನೂ ವಿಧಿಸಲು ಅವಕಾಶ ಇದೆ. ಗ್ರಾಹಕರ ಹಾದಿ ತಪ್ಪಿಸಿ ಅವರ ಹಿತಕ್ಕೆ ಧಕ್ಕೆ ತರುವ ಜಾಹೀರಾತು ನೀಡುವವರ ವಿರುದ್ಧ ಪ್ರಾಧಿಕಾರವು ಕ್ರಮ ಕೈಗೊಳ್ಳಬಹುದು.

ಕಲಬೆರಕೆಯಿಂದ ಕೂಡಿದ ಪದಾರ್ಥಗಳ ತಯಾರಿಕೆ, ದಾಸ್ತಾನು, ವಿತರಣೆ ಅಥವಾ ಆಮದಿಗಾಗಿ ತಯಾರಕರಿಗೆ ವಿಧಿಸುವ ಶಿಕ್ಷೆಯೂ ಗಂಭೀರ ಪ್ರಮಾಣ ದ್ದಾಗಿರುತ್ತದೆ. ಒಂದು ವೇಳೆ, ಕಲಬೆರಕೆಯು ಗ್ರಾಹಕರ ಸಾವಿಗೆ ಕಾರಣವಾದಲ್ಲಿ ₹ 10 ಲಕ್ಷ ದಂಡದ ಜೊತೆಗೆ ಏಳು ವರ್ಷ ಅಥವಾ ಜೀವಾವಧಿ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಶಿಕ್ಷೆಗಳೆಲ್ಲವೂ ಜಾಮೀನುರಹಿತ.

Post Comments (+)