ಬುಧವಾರ, ಜೂನ್ 29, 2022
24 °C
ಸಮಸ್ಯೆಯ ಕುರಿತು ಆಯಾ ಇಲಾಖೆಯು ವಿಶ್ಲೇಷಣೆ, ಪರೀಕ್ಷೆ, ಸಂಶೋಧನೆ, ಅಧ್ಯಯನವನ್ನು ಪ್ರತ್ಯೇಕವಾಗಿ ಕೈಗೊಂಡರೆ ಅದರ ವ್ಯಾಪ್ತಿ ತುಂಬಾ ಸೀಮಿತವಾಗಿರುತ್ತದೆ

ಸಂಗತ: ಸುಸ್ಥಿರ ಭವಿಷ್ಯಕ್ಕೆ ಒಗ್ಗಟ್ಟಿನ ವಿಜ್ಞಾನ– ಶ್ರೀಗುರು ಅವರ ಲೇಖನ

ಶ್ರೀಗುರು Updated:

ಅಕ್ಷರ ಗಾತ್ರ : | |

Prajavani

ದೇಶದ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ನನ್ನ ವಿಜ್ಞಾನಿ ಗೆಳೆಯನೊಬ್ಬ, ಬೆಂಗಳೂರು ಸಮೀಪದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿರುವ ನೀರಿನ ತಾಣಗಳ ನೀರು ಕಲುಷಿತಗೊಂಡಿದ್ದರಿಂದ ಅದನ್ನು ಕುಡಿಯುವ ವನ್ಯಪ್ರಾಣಿಗಳ ಆರೋಗ್ಯದ ಮೇಲೆ ಯಾವ ಅಡ್ಡ ಪರಿಣಾಮಗಳಾಗುತ್ತವೆ ಎಂಬುದನ್ನು ಅಭ್ಯಸಿಸಲು ರಿಸರ್ಚ್ ಗ್ರಾಂಟ್ ಕೋರಿ ಅರ್ಜಿ ಹಾಕಿದ್ದ. ಅರ್ಜಿಗೆ ಉತ್ತರ ಬರೆದ ಉನ್ನತ ಸಮಿತಿಯು ‘ನಿಮ್ಮ ಈ ಅಧ್ಯಯನಕ್ಕೆ ಯಾವ ತಂತ್ರಜ್ಞಾನ ಸಂಸ್ಥೆಗಳು, ಇಲಾಖೆಗಳು, ವಿಜ್ಞಾನಿಗಳು ಕೈಜೋಡಿಸಬಹುದೆಂಬ ವಿವರಗಳನ್ನು ಸಲ್ಲಿಸಿದಲ್ಲಿ ಅರ್ಜಿಯನ್ನು ಪರಿಗಣಿಸಬೇಕೋ ಬೇಡವೋ ಎಂದು ನಿರ್ಧರಿಸಬಹುದು’ ಎಂದಿತ್ತು.

‘ನಾನು ಮಾಡುವ ಸಂಶೋಧನೆ ಏಳೆಂಟು ಇಲಾಖೆಗಳಿಗೆ ಸಂಬಂಧಿಸಿದೆ. ಅವರನ್ನೆಲ್ಲಾ ಕೇಳುತ್ತ ಕೂತರೆ, ವನ್ಯಪ್ರಾಣಿಗಳ ಕತೆ ಮುಗಿದಂತೆಯೆ’ ಎಂದವನು, ‘ಹಿಂದೆಲ್ಲ ನೇರವಾಗಿ ಅನುಮತಿ ಸಿಗುತ್ತಿತ್ತು, ಈಗ ಹೊಸದೇನೋ ನಿಯಮ ಮಾಡಿದ್ದಾರೆ. ಸಂಶೋಧನೆ ನಡೆಸುವಾಗ ಸಂಬಂಧಪಟ್ಟ ಇಲಾಖೆ, ಉದ್ಯಮ, ವಿಶ್ವವಿದ್ಯಾಲಯ, ಸ್ಥಳೀಯ ಸಂಸ್ಥೆಗಳ ಸಹಯೋಗ ಪಡೆಯಬೇಕು. ಆಗ ಮಾತ್ರ ಅನುಮತಿ, ಅನುದಾನ ಎರಡೂ ಸಿಗುತ್ತವೆ’ ಎಂದು ಖಿನ್ನನಾದ.

ಹೌದು, ಭಾರತ ಸರ್ಕಾರದ ಹೊಸ ನೀತಿಯ ಪ್ರಕಾರ, ಯಾವ ಯಾವ ಕ್ಷೇತ್ರದಲ್ಲಿ ಸಂಶೋಧನೆಯ ತೀವ್ರ ಅಗತ್ಯವಿದೆ ಎಂಬ ಪಟ್ಟಿ, ಸಂಬಂಧಪಡುವ ಇಲಾಖೆ, ಪ್ರಯೋಗಾಲಯ, ವಿಭಾಗ ಯಾವುವೆಂದು ಗುರುತಿಸಿ, ಇಂತಿಂತಹವರು ಸೇರಿ ಕೆಲಸ ಮಾಡಬಹುದು ಎಂಬ ಮಾಹಿತಿ ಮತ್ತು ಪ್ರಾಥಮಿಕ ರೂಪುರೇಷೆಗಳು ಈಗಾಗಲೇ ಲಭ್ಯವಿವೆ.

ಹಿಂದೆಲ್ಲಾ ಒಂದು ಇಲಾಖೆಯಲ್ಲಿ ನಡೆಯುತ್ತಿದ್ದ ಸಂಶೋಧನೆಗಳು ಬೇರೊಂದು ಅಧ್ಯಯನ ವಿಭಾಗಕ್ಕೆ, ಸಂಶೋಧನಾ ತಂಡಕ್ಕೆ ಗೊತ್ತಾಗುತ್ತಲೇ ಇರಲಿಲ್ಲ. ಉದಾಹರಣೆಗೆ, ಅಭಯಾರಣ್ಯದ ವ್ಯಾಪ್ತಿಯ ಕೆರೆ- ಸರೋವರಗಳ ಮಾಲಿನ್ಯವು ಅರಣ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಸೂಕ್ಷ್ಮಜೀವಿ ಪರಿಸರ ಇಲಾಖೆ, ಪಶುಸಂಗೋಪನಾ ಇಲಾಖೆ... ಹೀಗೆ ನಾಲ್ಕಾರು ವಿಭಾಗಗಳಿಗೆ ಸಂಬಂಧಿಸಿರುತ್ತದೆ. ಸಮಸ್ಯೆಯ ಕುರಿತು ಆಯಾ ಇಲಾಖೆಗಳು ವಿಶ್ಲೇಷಣೆ, ಪರೀಕ್ಷೆ, ಸಂಶೋಧನೆ, ಅಧ್ಯಯನವನ್ನು ಪ್ರತ್ಯೇಕವಾಗಿ ಕೈಗೊಂಡರೆ ಅದರ ವ್ಯಾಪ್ತಿ ತುಂಬಾ ಸೀಮಿತವಾಗಿರುತ್ತದೆ. ಅದರ ಬದಲು ಸಮಸ್ಯೆಗೆ ಸಂಬಂಧಿಸಿದ ಇಲಾಖೆಗಳ ಪ್ರತಿನಿಧಿಗಳು, ತಜ್ಞರು, ತಂತ್ರಜ್ಞಾನ ಸಂಸ್ಥೆಗಳು ಪೂರ್ವಾಧ್ಯಯನದ ಆಧಾರದ ಮೇಲೆ ಯೋಜನೆಯೊಂದನ್ನು ಸಿದ್ಧ ಮಾಡಿಕೊಂಡು ಒಟ್ಟಿಗೇ ಕೆಲಸ ಮಾಡಿದರೆ ಹಲವು ಅನುಕೂಲಗಳಾಗುತ್ತವೆ.

ಸುಸ್ಥಿರ ಅಭಿವೃದ್ಧಿಗಾಗಿ ವಿಶ್ವಮಟ್ಟದಲ್ಲಿ ಯೋಜಿಸಿಕೊಂಡಿರುವ ಹದಿನೇಳು ವಿಷಯಗಳು ಒಂದಕ್ಕೊಂದು ತಳುಕು ಹಾಕಿಕೊಂಡಿವೆ. ಆದ್ದರಿಂದ ನಾವು ಎದುರಿಸುತ್ತಿರುವ ಸಮಸ್ಯೆಯ ಪರಿಹಾರ ಯಾರೋ ಒಬ್ಬರ ಬಳಿ ಇರುವುದಿಲ್ಲ. ಇತರರಿಗೂ ಸಮಸ್ಯೆಗೆ ಸಂಬಂಧಿಸಿದಂತೆ ಸೂಕ್ತ ಪರಿಹಾರಗಳು ತಿಳಿದಿರುತ್ತವೆ. ಅವರೆಲ್ಲ ಒಂದು ತಂಡವಾಗಿ ಕೆಲಸ ಮಾಡಿದರೆ ಸಮಯವೂ ಉಳಿದು, ಖರ್ಚೂ ಕಡಿಮೆಯಾಗಿ ಸಮಸ್ಯೆಯ ನೆಲದಲ್ಲಿ ಪರಿಹಾರದ ಸಸಿ ಹುಟ್ಟಿ ಅಭಿವೃದ್ಧಿಯ ಜೀವ ಮೊಳೆಯುತ್ತದೆ. ಕೊರೊನಾಪೀಡಿತ ಕಳೆದೆರಡು ವರ್ಷಗಳಲ್ಲಿ ವೈದ್ಯರು, ಸಂಶೋಧಕರು, ಲ್ಯಾಬ್‍ನವರು, ಸರ್ಕಾರದ ಪ್ರತಿನಿಧಿಗಳು, ಲಸಿಕೆ ತಯಾರಕ ಉದ್ಯಮದವರೆಲ್ಲ ಒಟ್ಟಿಗೆ ಸೇರಿ ಅದನ್ನು ತಹಬಂದಿಗೆ ತರಲು ಹೋರಾಡುತ್ತಿದ್ದಾರೆ. ಸಿಎಸ್‍ಐಆರ್– ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಮಂಡಳಿಯ ನಿರ್ದೇಶಕ ಡಾ. ಶೇಖರ್ ಸಿ. ಮಂಡೆ, ‘ಒಟ್ಟು ಪ್ರಯತ್ನ ಎನ್ನುವುದು ಕೇವಲ ವ್ಯಕ್ತಿಗಳನ್ನು ಒಗ್ಗೂಡಿಸಿ ಕೆಲಸ ಮಾಡಿಸುವುದಲ್ಲ, ವಿವಿಧ ಅಧ್ಯಯನ ರಂಗಗಳೂ ಒಂದೇ ಸೂರಿನಡಿಯಲ್ಲಿ ಕೆಲಸ ಮಾಡಬೇಕು’ ಎನ್ನುತ್ತಾರೆ.

ಕಳೆದ ಜೂನ್‍ನಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳ ಇತ್ತೀಚಿನ ರೂಪುರೇಷೆಗಳನ್ನು ಬಿಡುಗಡೆ ಮಾಡಿದ್ದ ನೀತಿ ಆಯೋಗವು ಹಮ್ಮಿಕೊಂಡ ಕೆಲಸವನ್ನು ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ಸಚಿವಾಲಯಗಳು ಒಟ್ಟಾಗಿ ಮಾಡುವುದು, ದೇಶದ ಎಲ್ಲ ವೈಜ್ಞಾನಿಕ ಸಂಶೋಧನಾ ಕೇಂದ್ರಗಳನ್ನು ಸಂಶೋಧನೆಯ ವಿಷಯಗಳಿಗೆ ಸಂಬಂಧಿಸಿದಂತೆ ಹತ್ತಿರ ತರುವುದು, ನೇರವಾಗಿ ವಿಜ್ಞಾನಕ್ಕೆ ಸಂಬಂಧಿಸದೇ ಇದ್ದರೂ ವಿಜ್ಞಾನಕ್ಕೆ ನೆರವಾಗಬಲ್ಲ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮತ್ತು ಉದ್ಯಮ, ನವೋದ್ಯಮ, ಸ್ವತಂತ್ರ ಸಂಸ್ಥೆಗಳನ್ನು ಒಳಗೊಂಡು ಸಂಶೋಧನೆ ನಡೆಸುವುದು ಇಂದಿನ ಅಗತ್ಯ ಎಂದಿತ್ತು.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದರ್ ಸಿಂಗ್, ‘ಒಬ್ಬೊಬ್ಬರೇ ಕೆಲಸ ಮಾಡುವ ಕಾಲ ಮುಗಿದುಹೋಯಿತು. ಇನ್ನೇನಿದ್ದರೂ ಒಟ್ಟಾಗಿ ದುಡಿಯಬೇಕು. ಪ್ರತೀ ಸಂಶೋಧನೆ, ಫಲದ ಹಿಂದೆ ಅನೇಕ ಇಲಾಖೆಗಳ ಪರಿಶ್ರಮವಿರಬೇಕು. ಆಗ ಮಾತ್ರ ನಾವು ಸುಸ್ಥಿರ ಅಭಿವೃದ್ಧಿ ಗುರಿ ತಲುಪಲು ಸಾಧ್ಯ’ ಎಂದಿದ್ದಾರೆ. ಹಾಗಂದದ್ದೇ ತಡ 33 ವಿವಿಧ ಸಚಿವಾಲಯಗಳು ಒಟ್ಟಿಗೆ ಸೇರಿ 168 ವೈಜ್ಞಾನಿಕ ಪ್ರಸ್ತಾವಗಳನ್ನು ಸರ್ಕಾರದ ಮುಂದಿಟ್ಟು ಅನುಮೋದನೆಗಾಗಿ ಕಾಯುತ್ತಿವೆ. ಎಲ್ಲರನ್ನೂ ಒಳಗೊಂಡು, ಎಲ್ಲರಿಗೂ ಬೇಕಾಗುವ ಕೆಲಸ ಮಾಡುವುದೇ ಅಭಿವೃದ್ಧಿಯ ಮೂಲ ತತ್ವವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.