ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಿದಾದ ಲಕ್ಷ್ಮಣತೀರ್ಥ, ಕೀರೆಹೊಳೆ; ಆತಂಕ

ದಕ್ಷಿಣ ಕೊಡಗಿನಲ್ಲಿ ಕುಗ್ಗುತ್ತಿರುವ ಅಂತರ್ಜಲ ಪ್ರಮಾಣ
Last Updated 4 ಮಾರ್ಚ್ 2018, 10:55 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಕೊಡಗು ಎಂದ ಕೂಡಲೇ ನೆನಪಾಗುವುದು ಮಳೆ, ಗಿರಿಶ್ರೇಣಿಗಳ ಹಸಿರ ಸಂಪತ್ತು. ಇಂಥ ಸಂಪದ್ಭರಿತ ಜಿಲ್ಲೆಯಲ್ಲಿ ಇಂದು ನದಿ ಮೂಲಗಳು ಒಣಗುತ್ತಿವೆ. ದಕ್ಷಿಣ ಕೊಡಗು ಭಾಗದಲ್ಲಿ ಜಲಸಮಸ್ಯೆ ಇದೆ.

ಹಸಿರು ಸಂಪತ್ತು ಮಾಯವಾಗಿ ಜಲಮೂಲ ಕ್ಷೀಣಿಸುತ್ತಿದೆ. ಪರಿಸರದ ನಾಶ ಇದಕ್ಕೆ ಕಾರಣ ಎನ್ನಲಾಗಿದೆ. ಲಕ್ಷ್ಮಣ ತೀರ್ಥ ನದಿಯನ್ನು ದಕ್ಷಿಣ ಕೊಡಗಿನ ಜೀವನಾಡಿ ಎನ್ನಲಾಗುತ್ತದೆ.

ಆದರೆ, ಇಂದು ಈ ನದಿಯಲ್ಲಿ ನೀರು ಇಲ್ಲದಾಗಿದೆ. ನದಿಯ ಒಡಲು ಒಣಗಿ ಮಂಡಕ್ಕಿ ಬಟ್ಟಿಯಂತಾಗಿದೆ. ಇಂಥ ಸ್ಥಿತಿಯನ್ನು ಹಿಂದೆಂದೂ ಕಂಡಿರಲಿಲ್ಲ ಎಂಬ ಆತಂಕ ಸ್ಥಳೀಯರದು.

ಮೂರು ವರ್ಷಗಳ ಹಿಂದಿನ ವರೆಗೂ ಬಿರು ಬೇಸಿಗೆಯಲ್ಲಿ ನದಿಯಲ್ಲಿ ಸ್ವಲ್ಪವಾದರೂ ನೀರು ಹರಿಯುತ್ತಿತ್ತು. ಬರ ಕಾಣಿಸಿಕೊಂಡ 2016ರ ಬಳಿಕ ನದಿಯ ಸ್ವರೂಪವೇ ಬದಲಾಯಿತು.

ಬೇಸಿಗೆಯಲ್ಲಿ ನದಿ ಒಣಗಿದಂತೆ ನದಿ ತಟದ ಮರಗಿಡಗಳು ಒಣಗಿದವು. ಬಿದಿರು ಹೇಳ ಹೆಸರಿಲ್ಲದಾಯಿತು. ಬದಲಾದ ಈ ಸ್ಥಿತಿ ಇನ್ನೊಂದೆಡೆ ಮರಳು ತೆಗೆಯುವವರಿಗೆ ಹೊಸ ರಹದಾರಿ ಕಲ್ಪಿಸಿದಂತಾಗಿದೆ.

ಕುಸಿದ ಅಂತರ್ಜಲ: ನದಿಯಲ್ಲಿ ನೀರಿಲ್ಲದಿರುವುದರಿಂದ ಅಂತರ್ಜಲ ಮಟ್ಟವೂ ಕುಸಿದಿದೆ. 20 ಅಥವಾ 30 ಅಡಿ ಕೊರೆಯಿಸಿದರೂ ನೀರು ದಕ್ಕುತ್ತಿದ್ದ ತೆರೆದ ಬಾವಿಗಳಲ್ಲಿ 60 ಅಡಿ ತೆಗೆದರೂ ನೀರು ಮೂಲ ಸಿಗುತ್ತಿಲ್ಲ.

ವರ್ಷ ಕಳೆದಂತೆ ಅಂತರ ಹೆಚ್ಚುತ್ತಲಿದೆ. ಪ್ರತಿ ವರ್ಷ ಕೊಳವೆಬಾವಿ ಕೊರೆಯಿಸುವ ಆಳ ಹೆಚ್ಚುತ್ತಲೇ ಇದೆ ಎನ್ನುತ್ತಾರೆ ಕೊಟ್ಟಗೇರಿ ಗ್ರಾಮದ ಮಾಚಂಗಡ ಕುಟ್ಟಪ್ಪ.

‘ಈಗಿರುವ ಗಿಡ, ಮರಗಳ ನ್ನಾದರೂ ಉಳಿಸದಿದ್ದರೆ ಭವಿಷ್ಯದಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ.

ಕುಟ್ಟ, ಶ್ರೀಮಂಗಲ ಸಮೀಪದ ಬ್ರಹ್ಮಗಿರಿ ಪರ್ವತ ಶ್ರೇಣಿ ಲಕ್ಷ್ಮಣ ತೀರ್ಥ ನದಿಯ ಉಗಮ ಸ್ಥಾನ. ಇಲ್ಲಿ ಪರ್ವತ ಶ್ರೇಣಿಗಳ ನಡುವೆ ಹಲವು ಶೋಲೈ ಕಾಡುಗಳಿವೆ. ಕಾಳ್ಗಿಚ್ಚು ಸೇರಿ ಅರಣ್ಯ ಪ್ರಮಾಣ ಕುಗ್ಗುತ್ತಿದ್ದು, ಲಕ್ಷ್ಮಣ ತೀರ್ಥದ ಜಲಮೂಲ ಕುಗ್ಗಲು ಇದೂ ಕಾರಣವೆನ್ನಲಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ. ಪರಿಸರವಾದಿಗಳು ಈ ಬಗ್ಗೆ ಅಷ್ಟಾಗಿ ಗಮನಹರಿಸುತ್ತಿಲ್ಲ.

ಲಕ್ಷ್ಮಣ ತೀರ್ಥದ ನದಿ ಸೇರುವ ವಿವಿಧ ಕೀರೆಹೊಳೆಗಳು ಬತ್ತಿವೆ. ಅಮ್ಮತ್ತಿ, ಅತ್ತೂರು, ಗೋಣಿಕೊಪ್ಪಲು, ಕಿರುಗೂರು ಮಾರ್ಗ ಹರಿಯುವ ಕೀರೆಹೊಳೆ ಕೇವಲ 2 ತಿಂಗಳು ಮಾತ್ರ ನೀರು ಹೊಂದಲಿದೆ. , ತ್ಯಾಜ್ಯ, ಕಲುಷಿತ ನೀರು ಇದನ್ನು ಸೇರಲಿದೆ.

ಹೆಚ್ಚಿದ ಜನಸಂಖ್ಯೆ: ಕೊಡಗು ಜಿಲ್ಲೆಯಲ್ಲಿ ಜನಸಂಖ್ಯೆ ಏರಿಕೆ ಹಿಂದೆಯೇ ಕಾಂಕ್ರೀಟಿಕರಣ ಗೊಳ್ಳುತ್ತಿದೆ. ಮರಗಿಡಗಳ ಪ್ರಮಾಣ ಕುಗ್ಗುತ್ತಿದೆ.

ಕೊಡಗಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಜನಸಂಖ್ಯೆ ವಿಪರೀತ ಹೆಚ್ಚುತ್ತಿದೆ. ಹೊರಿಗಿನ ಜನತೆಯೂ ಇಲ್ಲಿ ನಿವೇಶನ ಮತ್ತು ಕಾಫಿ ತೋಟ ಖರೀದಿಸುತ್ತಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಮರಗಿಡಗಳು ಪ್ರಮಾಣ ಕಡಿಮೆ ಆಗುತ್ತಿದೆ. ಈ ಎಲ್ಲದರ ಪರಿಣಾಮ, ಜಲಮೂಲದ ಮೇಲೂ ಆಗುತ್ತಿದೆ.

ಮಳೆಗಾಲದ ಒಂದು ತಿಂಗಳು ಹೊರತು ಪಡಿಸಿದರೆ ಕೊಡಗು ಜಿಲ್ಲೆಯಲ್ಲಿಯೂ ನೀರಿನ ಸಮಸ್ಯೆ ಕಾಡುತ್ತದೆ. ಪರಿಸರ ರಕ್ಷಣೆಯೇ ಭವಿಷ್ಯದಲ್ಲಿ ಸಮಸ್ಯೆ ಇನ್ನಷ್ಟು ಙೆಚ್ಚುವುದನ್ನು ತಪ್ಪಿಸುವ ಮಾರ್ಗ.

ಕೆರೆ ಒಡ್ಡು ನಿರ್ಮಿಸಿ ಅಂತರ್ಜಲ ಪ್ರಮಾಣ ಹೆಚ್ಚಿಸಲು ಒತ್ತು ನೀಡಬೇಕು. ಹೊಸ ರಸ್ತೆ ಅಭಿವೃದ್ಧಿಗೆ ಮುಂದಾಗದೇ ಇರುವ ರಸ್ತೆಯ ಗಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಪರಿಸರ ರಕ್ಷಣೆಯ ಮಹತ್ವ ಕುರಿತು ವ್ಯಾಪಕವಾಗಿ ಜಾಗೃತಿ ಮೂಡಿಸಬೇಕು ಎಂಬುದು ಪರಿಸರ ಪ್ರೇಮಿಗಳ ಆಶಯ.
**
‘ಮನಸೋಇಚ್ಛೆ ಮರಗಿಡ ಕಡಿದು, ಪರಿಸರ ನಾಶಮಾಡಿ ಬಡಾವಣೆ ಅಭಿವೃದ್ಧಿ ಪಡಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಜಲಮೂಲ ಕುಗ್ಗುತ್ತಿರುವ ಕುರಿತು ಯಾರೂ ಚಿಂತಿಸುತ್ತಿಲ್ಲ’
ಅಜ್ಜಿಕುಟ್ಟೀರ ಸೂರಜ್, ಜಲತಜ್ಞ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT