ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಭಾಗಿತ್ವದಿಂದ ಸ್ವಚ್ಛತೆ ಸಾಧ್ಯ

ಆಧುನಿಕ ಜಗತ್ತಿನ ಸಂಕೀರ್ಣ ಸಮಸ್ಯೆಗಳನ್ನು ಮೆಟ್ಟಿನಿಲ್ಲಬೇಕಾದರೆ ಸಂಸ್ಥೆಗಳು ಹೊಸಹೊಸ ಚಿಂತನೆಗಳನ್ನು ಅಳವಡಿಸಿಕೊಳ್ಳುತ್ತಲೇ ಇರಬೇಕು
Last Updated 5 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಬೆಂಗಳೂರು ನಗರದ ಸ್ವಚ್ಛತೆಯ ವಿಷಯವು ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ನಗರವನ್ನು ಕಸಮುಕ್ತ ಮಾಡುವ ನಿಟ್ಟಿನಲ್ಲಿ ಮಹಾನಗರಪಾಲಿಕೆ ಕೈಗೊಳ್ಳುವ ಹೊಸ ಹೊಸ ಕ್ರಮಗಳು ಬೆಂಗಳೂರಿಗರಲ್ಲಿ ರೋಮಾಂಚನ ಉಂಟುಮಾಡುತ್ತವೆ. ಬೆಂಗಳೂರಿನ ಜನರು ಯಾರೊಂದಿಗೆ ಬೇಕಾದರೂ ಮುನಿಸು, ಜಗಳ, ವೈರಗಳನ್ನಿಟ್ಟುಕೊಳ್ಳಬಹುದು, ಆದರೆ ಮನೆಮನೆಯಿಂದ ಕಸ ಸಂಗ್ರಹ ಮಾಡುವವರ ಜೊತೆ ಜಗಳವಾಡುವ ಸಾಹಸ ಮಾಡಲಾರರು!

ಕಸ ಸಂಗ್ರಹ ವ್ಯವಸ್ಥೆ ಸರಿಯಾಗಿಲ್ಲದ ಕಾರಣಕ್ಕೆ, ಜನರು ಅನೇಕ ಸಂದರ್ಭಗಳಲ್ಲಿ ಬಾಲ್ಯದಲ್ಲಿ ಕಲಿತ ಸ್ವಚ್ಛತೆಯ ಪಾಠವನ್ನು ಕ್ಷಣ ಕಾಲ ಮರೆತು, ರಸ್ತೆ ಬದಿಯ ತಿರುವುಗಳಲ್ಲಿ ಕಸವನ್ನು ಎಸೆದುಬಿಡುತ್ತಾರೆ. ಪ್ರತಿದಿನ ಬೆಂಗಳೂರಿನಲ್ಲಿ ಸಂಗ್ರಹವಾಗುವ ಟನ್‍ಗಟ್ಟಲೆ ಕಸದ ವಿಲೇವಾರಿ ದೊಡ್ಡ ಸವಾಲೇ ಸರಿ. ಸ್ವಚ್ಛತೆ ಕಾಪಾಡುವುದು ಕಸ ಸಂಗ್ರಹ ಮತ್ತು ವಿಲೇವಾರಿಯ ಹೊಣೆ ಹೊತ್ತ ಬಾಹ್ಯ ಏಜೆನ್ಸಿಗಳ ಹೊಣೆ ಎಂದು ಹೇಳಿದರೂ ಅಂತಿಮ ಜವಾಬ್ದಾರಿ ಪಾಲಿಕೆಯದ್ದೇ ಆಗಿರುತ್ತದೆ. ಸರ್ಕಾರದ ಎಲ್ಲ ಇಲಾಖೆಗಳಲ್ಲೂ ಹೊರಗುತ್ತಿಗೆಯ ಆಧಾರದಲ್ಲಿ ವಿವಿಧ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಂಡು, ಅವುಗಳ ಮೂಲಕ ವಿವಿಧ ಸೇವೆಗಳನ್ನು ಪಡೆಯುವ ವ್ಯವಸ್ಥೆ ಇದೆ. ಮುಕ್ತ ಟೆಂಡರ್‌ ಮೂಲಕ, ಕಡಿಮೆ ದರವನ್ನು ನಮೂದಿಸಿದ ಸಂಸ್ಥೆಯನ್ನು ಇಂಥ ಸೇವೆಗೆ ಆಯ್ಕೆ ಮಾಡಲಾಗುತ್ತದೆ. ಹೀಗೆ ಆಯ್ಕೆಯಾಗುವ ಕೆಲವು ಸಂಸ್ಥೆಗಳು ಕಳಪೆ ಗುಣಮಟ್ಟದ ಸೇವೆ ಒದಗಿಸುತ್ತವೆ.

ಟೆಂಡರ್‍ ಮೂಲಕ ಆಯ್ಕೆಯಾದ ಸಂಸ್ಥೆಯ ಉದ್ದೇಶ ಹಣ ಸಂಪಾದನೆಯೇ ಆಗಿರುತ್ತದೆ. ಸೇವೆ ಪಡೆಯುವ ಮತ್ತು ನೀಡುವ ಸಂಸ್ಥೆಗಳ ಮಧ್ಯೆ ಕಾನೂನಾತ್ಮಕ ಒಪ್ಪಂದಗಳು ಇರುತ್ತವೆ. ಇವುಗಳ ಉಲ್ಲಂಘನೆಯಾಗಿ ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗುವುದೂ ಇದೆ. ಎಲ್ಲಿಯವರೆಗೆ ಸೇವೆ ನೀಡುವ ಸಂಸ್ಥೆಯು ತಾನು ನೀಡುವ ಸೇವೆಯ ಕಾರ್ಯದಲ್ಲಿ ವಿಶ್ವಾಸಾರ್ಹ ಪಾಲುದಾರನ ರೀತಿಯಲ್ಲಿ ಕಾರ್ಯ ನಿರ್ವಹಿಸುವುದಿಲ್ಲವೋ ಅಲ್ಲಿಯವರೆಗೆ ಸಮರ್ಪಕ ಸೇವೆ ಮರೀಚಿಕೆಯಾಗುತ್ತದೆ.

ಅದೇ ರೀತಿ ಸೇವೆ ಪಡೆಯುವ ಸಂಸ್ಥೆಯೂ ಸೇವೆ ನೀಡುವ ಸಂಸ್ಥೆಯೊಂದಿಗೆ ಉತ್ತಮ ಸಂಬಂಧವಿಟ್ಟುಕೊಂಡು, ಗುಣಮಟ್ಟದ ಸೇವೆ ದೊರೆಯುವುದನ್ನು ಖಾತರಿಪಡಿಸಬೇಕಾಗುತ್ತದೆ. ಸೇವೆ ಕೊಡುವುದು ಮತ್ತು ಪಡೆದುಕೊಳ್ಳುವ ವಿಚಾರದಲ್ಲಿ ಅನೇಕ ಇಲಾಖೆಗಳಲ್ಲಿ ಸಮಸ್ಯೆಗಳು ಇದ್ದರೂ ಹೊರಜಗತ್ತಿಗೆ ಅಷ್ಟಾಗಿ ಅವು ಕಾಣಿಸುವುದಿಲ್ಲ. ಆದರೆ ಕಸ ಸಂಗ್ರಹ ಮತ್ತು ವಿಲೇವಾರಿಯ ವಿಚಾರದಲ್ಲಿ ಆಗುವ ಸಣ್ಣ ವ್ಯತ್ಯಾಸವೂ ಎಲ್ಲರ ಕಣ್ಣಿಗೆ ರಾಚುತ್ತದೆ.

ಆಧುನಿಕ ಜಗತ್ತಿನಲ್ಲಿ ಉದ್ಭವಿಸುವ ಸಂಕೀರ್ಣ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಬೇಕಾದರೆ ಸಂಸ್ಥೆಗಳು ಹೊಸ ಹೊಸ ಚಿಂತನೆಗಳನ್ನು ಮಾಡುತ್ತಲೇ ಇರಬೇಕಾಗುತ್ತದೆ. ಸಮಸ್ಯೆಗಳನ್ನು ಸಮಗ್ರ ದೃಷ್ಟಿಕೋನದಿಂದ ಗ್ರಹಿಸಿ, ಜನರ ವಿಶ್ವಾಸ, ನಂಬಿಕೆ, ಸಹಕಾರ, ಸಹಭಾಗಿತ್ವಗಳ ಮೂಲಕವೇ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ಇಂತಹ ಪ್ರಯತ್ನಗಳನ್ನು ಮಾಡಿ ಯಶಸ್ವಿಯಾದ ಅನೇಕ ಉದಾಹರಣೆಗಳು ಜಾಗತಿಕ ಮಟ್ಟದಲ್ಲಿ ಕಾಣಸಿಗುತ್ತವೆ.

1980ರ ದಶಕದಲ್ಲಿ ಕಾನೂನುಬಾಹಿರ ವಲಸೆ, ಹೊಸಹೊಸ ಅಪರಾಧ ಪ್ರಕರಣಗಳು, ಭಯೋತ್ಪಾದನೆ ಮುಂತಾದ ಸವಾಲುಗಳನ್ನು ಎದುರಿಸುತ್ತಿದ್ದ ಸಿಂಗಪುರ ಪೊಲೀಸ್ ಫೋರ್ಸ್, ಇವುಗಳನ್ನು ಎದುರಿಸಲು ತನ್ನ ಕಾರ್ಯವಿಧಾನದಲ್ಲಿ ಆಮೂಲಾಗ್ರ ಬದಲಾವಣೆ ಮಾಡಿತು. ಸಾಂಸ್ಥಿಕವಾಗಿ ಅನೇಕ ಕ್ರಾಂತಿಕಾರಿ ಬದಲಾವಣೆಗಳನ್ನು ಅಳವಡಿಸಿಕೊಂಡಿತು. ಪೊಲೀಸ್ ವ್ಯವಸ್ಥೆಯನ್ನು ಜನಪರವಾಗಿಸುವುದರ ಜೊತೆ ಜನರ ಸಹಕಾರ ಪಡೆದು, ಸಮುದಾಯ ಪೊಲೀಸ್ ವ್ಯವಸ್ಥೆ ಜಾರಿಗೊಳಿಸಿತು. ಸ್ಥಳೀಯ ಜನರ ನಡುವೆ ಒಡನಾಟವನ್ನು ಹೆಚ್ಚಿಸಿಕೊಂಡು, ಅವರ ಸಹಭಾಗಿತ್ವವನ್ನು ಪಡೆಯುವ ನೂತನ ವಿಧಾನಗಳನ್ನು ಅಳವಡಿಸಿಕೊಂಡಿತು. ಈ ರೀತಿ ಜನರ ಒಡನಾಟಗಳಿಂದ ಹುಟ್ಟಿಕೊಂಡ ಸಾಮೂಹಿಕ ಆಲೋಚನೆಗಳನ್ನು ಗಟ್ಟಿಗೊಳಿಸುವುದರ ಜೊತೆಗೆ ತಮಗೆ ದಕ್ಕುವ ಕಲಿಕೆಯ ಅನುಭವಗಳನ್ನು ತಮ್ಮೊಳಗೆ ನಿರಂತರವಾಗಿ ಹಂಚಿಕೊಳ್ಳುವ ಕಾರ್ಯವಿಧಾನಗಳನ್ನು ಕಂಡುಕೊಂಡಿತು. ಇದರ ಫಲವಾಗಿ ಸಿಂಗಪುರದಲ್ಲಿ ಅಪರಾಧಗಳ ಪ್ರಮಾಣ ಗಣನೀಯವಾಗಿ ಇಳಿಕೆಯಾಯಿತು. ಸಿಂಗಪುರ ಪೊಲೀಸ್ ಫೋರ್ಸ್‌ನ ಈ ಯಶಸ್ವಿ ಪ್ರಯೋಗವನ್ನು ಮುಂದೆ ಇತರ ಕ್ಷೇತ್ರಗಳಿಗೂ ವಿಸ್ತರಿಸಲಾಯಿತು. ಇದರಿಂದಾಗಿ ಸಿಂಗಪುರ ಇತರ ರಾಷ್ಟ್ರಗಳಿಗೆ ಒಂದು ಕಲಿಕೆಯ ಮಾದರಿ ರಾಷ್ಟ್ರವಾಗಿ ರೂಪುಗೊಂಡಿತು. ಒಂದು ಕ್ಷೇತ್ರದಲ್ಲಿ ಆದ ಬದಲಾವಣೆಯು ಇಡೀ ದೇಶವನ್ನು ಮಾದರಿ ರಾಷ್ಟ್ರವಾಗಿ ಮಾರ್ಪಡಿಸಿತು.

ನಮ್ಮ ಬೆಂಗಳೂರನ್ನು ಸಿಂಗಪುರಕ್ಕೆ ಹೋಲಿಸಿ, ಸಿಂಗಪುರದ ಮಾದರಿಯನ್ನೇ ಇಲ್ಲಿಯೂ ನಕಲು ಮಾಡಬೇಕೆಂದಿಲ್ಲ. ಆದರೆ ಅಲ್ಲಿಯ ಪಾಠಗಳನ್ನು ಈ ನೆಲಕ್ಕೆ ಅಳವಡಿಸಿಕೊಳ್ಳುವ ಅಗತ್ಯವಿದೆ. ಪಾಲಿಕೆಯು ಆಲೋಚನಾ ವಿಧಾನವನ್ನು ಬದಲಿಸಿ, ಕಸದ ಸಮಸ್ಯೆಯನ್ನು ಸಮಗ್ರವಾಗಿ ಪರಿಗಣಿಸಿ, ನಾಗರಿಕರೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸಬೇಕು. ಸಾಮುದಾಯಿಕ ನೆಲೆಯಲ್ಲಿ ತನ್ನ ಒಡನಾಟಗಳನ್ನು ಉತ್ತಮಪಡಿಸಿಕೊಳ್ಳುವ ಮೂಲಕ ಸಾಂಸ್ಥಿಕ ರೂಪಾಂತರಕ್ಕೆ ಪಾಲಿಕೆಯು ಮುನ್ನುಡಿ ಬರೆಯಬೇಕು. ತನ್ನ ವ್ಯವಹಾರಗಳಲ್ಲಿ ಪಾರ
ದರ್ಶಕತೆ ತರಬೇಕು. ಜನರಲ್ಲಿ ಪಾಲಿಕೆಯ ಮೇಲಿನ ವಿಶ್ವಾಸ ಹೆಚ್ಚಿಸುವಂತೆ ಮಾಡಬೇಕು. ಆ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿ, ನಿರಂತರ ಕಲಿಕಾ ಸಂಸ್ಥೆಯಾಗಿ ಹೊರಹೊಮ್ಮಿದರೆ ಪಾಲಿಕೆಯೂ ನಾಡಿಗೆ ದಿಕ್ಸೂಚಿಯಾಗಬಲ್ಲದು. ಜನರ ಸಹಭಾಗಿತ್ವದಿಂದ ಮಾತ್ರ ಇಂಥ ದೊಡ್ಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT