ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡಿಪಿ ಬೆಳವಣಿಗೆ ದರ ವಿವಾದ

‘ಮೂಲ ವರ್ಷ’ ಬದಲಾವಣೆಯಾದಾಗೆಲ್ಲ ವಿವಾದಗಳು ಹುಟ್ಟಿಕೊಂಡಿವೆ
Last Updated 19 ಡಿಸೆಂಬರ್ 2018, 19:51 IST
ಅಕ್ಷರ ಗಾತ್ರ

ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆ ದರಗಳನ್ನು ಅಂದಾಜು ಮಾಡಿ ತ್ರೈಮಾಸಿಕ ವರದಿ ನೀಡುವ ಹೊಣೆಗಾರಿಕೆಯು ಸ್ವಾಯತ್ತತೆಯುಳ್ಳ ಕೇಂದ್ರೀಯ ಸಾಂಖ್ಯಿಕ ಕಚೇರಿ (ಸಿಎಸ್ಒ) ಮೇಲಿದೆ. ಆದರೆ ಅದು ಅಂದಾಜು ಮಾಡಲು ಬಳಸುವ ಅಂಕಿ-ಅಂಶಗಳ ವಿಶ್ವಾಸಾರ್ಹತೆಯನ್ನೇ ಕೆಲವು ಅರ್ಥಶಾಸ್ತ್ರಜ್ಞರು, ಸಂಖ್ಯಾಶಾಸ್ತ್ರಜ್ಞರು ಪ್ರಶ್ನಿಸಿದ್ದಾರೆ.

ಉದ್ಯೋಗ ಸೃಷ್ಟಿಯಲ್ಲಿ ದೊಡ್ಡದಾದ, ಉತ್ಪಾದಕತೆಯಲ್ಲಿ ಸಣ್ಣದಾದ ಅಸಂಘಟಿತ ವಲಯ ಇಂದಿಗೂ ಪೂರ್ತಿಯಾಗಿ ಜಿಡಿಪಿ ಅಂದಾಜಿನ ವ್ಯಾಪ್ತಿಯೊಳಗೆ ಬಂದಿಲ್ಲ. ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ವೈ.ವಿ.ರೆಡ್ಡಿ ‘ಭಾರತದಲ್ಲಿ ಭವಿಷ್ಯತ್ಕಾಲ ಮಾತ್ರವಲ್ಲ, ಭೂತಕಾಲವೂ ಅಷ್ಟೇ ಅನಿಶ್ಚಿತವಾಗಿದೆ’ ಎಂದು ಮಾರ್ಮಿಕವಾಗಿ ಹೇಳಿದ್ದು ನೆನಪಾಗುತ್ತದೆ.

ಮುಂದಿನ ವರ್ಷವನ್ನು ಹಿಂದಿನ ವರ್ಷಕ್ಕೆ ಹೋಲಿಸಲು ಜಿಡಿಪಿಯನ್ನು ಮಾರುಕಟ್ಟೆ ಬೆಲೆಗಳಲ್ಲಿ ಲೆಕ್ಕಹಾಕಿದರೆ ಕಾಣುವುದು ಸಾಂಕೇತಿಕ (ನಾಮಿನಲ್) ಜಿಡಿಪಿ. ಬೆಲೆಗಳು ಸಾಮಾನ್ಯವಾಗಿ ಏರುತ್ತಿರುವುದರಿಂದ ಸಾಂಕೇತಿಕ ಜಿಡಿಪಿ ಆಧರಿತ ಬೆಳವಣಿಗೆ ದರ ಗಣನೀಯವಾಗಿ ಹೆಚ್ಚುವುದು ಸಹಜ. ಈ ಹೆಚ್ಚಳವೂ ಸಾಂಕೇತಿಕವೇ! ಸಂಖ್ಯಾಶಾಸ್ತ್ರದ ವಿಧಾನವನ್ನು ಬಳಸಿ ಸಾಮಾನ್ಯ ಆರ್ಥಿಕ ಸ್ಥಿತಿಗತಿಯುಳ್ಳ ವರ್ಷವೊಂದನ್ನು ಮೂಲ ವರ್ಷ (ಬೇಸ್ ಇಯರ್) ಎಂದು ಆಯ್ಕೆ ಮಾಡಿಕೊಂಡು, ನಂತರದ ವರ್ಷವನ್ನು ಚಾಲ್ತಿ ವರ್ಷವೆಂದು ಪರಿಗಣಿಸಿ ಅದನ್ನು ಮೂಲ ವರ್ಷಕ್ಕೆ ಹೋಲಿಸಿ ನೈಜ ಜಿಡಿಪಿಯನ್ನು ಲೆಕ್ಕಹಾಕಲಾಗುತ್ತದೆ.

ಮೂಲ ವರ್ಷದ ಪರಿಷ್ಕರಣೆ ಎಂದರೆ ತುಲನೆಗಾಗಿ ನಂತರದ ವರ್ಷವೊಂದರ ಆಯ್ಕೆ. ಹೀಗೆ ಪರಿಷ್ಕರಣೆ ಆದಾಗ ನೈಜ ಬೆಳವಣಿಗೆ ದರದಲ್ಲೂ ಹೆಚ್ಚಳವಾಗುತ್ತದೆ. ಈ ಹೆಚ್ಚಳದ ಮೇಲೂ ಸರಕು-ಸೇವೆಗಳ ಬೆಲೆಗಳಲ್ಲಾದ ಏರಿಕೆಯ ಪ್ರಭಾವ ಸ್ವಲ್ಪಮಟ್ಟಿಗೆ ಇದ್ದೇ ಇರುತ್ತದೆ. ಭಾರತದಲ್ಲಿ 1948-49ರ ನಂತರ ಏಳು ಬಾರಿ ಮೂಲ ವರ್ಷ ಬದಲಾಗಿದೆ. ಹೀಗೆ ಬದಲಾವಣೆಯಾದಾಗೆಲ್ಲ ವಿವಾದಗಳು ಹುಟ್ಟಿಕೊಂಡಿವೆ.

2004-05 ಮೂಲ ವರ್ಷವಾಗಿ ಪರಿಗಣನೆಗೆ ತೆಗೆದುಕೊಳ್ಳುತ್ತಿದ್ದಾಗಯುಪಿಎ ಸರ್ಕಾರದ ಆಡಳಿತದ ಕೊನೆಯ ವರ್ಷ 2013-14ರಲ್ಲಿ ಬೆಳವಣಿಗೆ ದರ ಶೇ 4.7ಕ್ಕೆ ಕುಸಿದಿತ್ತು. 2015ರ ಜನವರಿ ಕೊನೆಗೆ ಅಂತರರಾಷ್ಟ್ರೀಯ ಪರಂಪರೆಯನ್ನು ಅಳವಡಿಸಿ
ಕೊಂಡು ಮೂಲವರ್ಷವನ್ನು ಸಿಎಸ್ಒ 2011-12ಕ್ಕೆ ಬದಲಾಯಿಸಿತು. ಅಸಂಘಟಿತ ವಲಯಗಳನ್ನು ಜಿಡಿಪಿ ಅಂದಾಜಿನೊಳಗೆ ಸೇರಿಸುವ ಸಣ್ಣ ಪ್ರಯತ್ನ ಪ್ರಾರಂಭವಾಯಿತು. ಈ ಕಾರಣಗಳಿಂದ ನೈಜ ಜಿಡಿಪಿಯ ಪುನರ್ ಪರಿಶೀಲನೆಯಾಗಿ 2013-14ನೇ ಸಾಲಿನಲ್ಲಿ ಬೆಳವಣಿಗೆ ದರ ಶೇ 4.7ರಿಂದ ಶೇ 6.9ಕ್ಕೆ ಏರಿಕೆಯಾದಾಗ ಯುಪಿಎ ಅವಧಿಯಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದ ಪಿ.ಚಿದಂಬರಂ ಇದು ತಮ್ಮ ಸರ್ಕಾರದ ಸಾಧನೆ ಎಂದು ಸಂಭ್ರಮಿಸಿದರು. ಆದರೆ ಆಗ ಅವರು ‘ಮಾಜಿ’ ಆಗಿಬಿಟ್ಟಿದ್ದರಿಂದ ಅವರ ಸಂಭ್ರಮ ಮಾಸಿಹೋಯಿತು.

2015-16ರಲ್ಲಿ ನೈಜ ಜಿಡಿಪಿ ಆಧಾರಿತ ಬೆಳವಣಿಗೆ ದರ ಶೇ 7.6ಕ್ಕೆ ಜಿಗಿದಾಗ ಕೇಂದ್ರ ಹಣಕಾಸುಸಚಿವ ಅರುಣ್‌ ಜೇಟ್ಲಿ ಎರಡಂಕಿ ಬೆಳವಣಿಗೆ ದರದ ಕನಸು ಕಾಣುತ್ತ ಸಂಭ್ರಮಿಸಿದರು. ‘ಹಾಲಿ’ ಆಗಿರುವ ಕಾರಣ ಅವರ ಸಂಭ್ರಮಕ್ಕೆ ರಾಜಕೀಯ ಮಹತ್ವ ಪ್ರಾಪ್ತಿ
ಯಾಯಿತು. ತಮ್ಮ ಸರ್ಕಾರ ತೆಗೆದುಕೊಂಡ ಸುಧಾರಣಾ ಕ್ರಮಗಳಿಂದ, ಪ್ರಧಾನಿ ಸಾರಿದ ಮೇಕ್ ಇನ್ ಇಂಡಿಯಾ ನೀತಿಯಿಂದ (!) ಭಾರತ ವಿಶ್ವದಲ್ಲೇ ಅತಿ ಹೆಚ್ಚು ಬೆಳವಣಿಗೆ ದರ ಸಾಧಿಸಿದ ದೇಶ ಎಂದು ಘೋಷಿಸಿದರು.

ಜೇಟ್ಲಿ ಘೋಷಣೆಯ ಬೆನ್ನಲ್ಲೇ ಅಂತರರಾಷ್ಟ್ರೀಯ ಖ್ಯಾತಿಯುಳ್ಳ ಹಾಂಕಾಂಗ್‌ ಮತ್ತು ಶಾಂಘೈ ಬ್ಯಾಂಕಿಂಗ್ ಕಾರ್ಪೊರೇಷನ್‌ಗಳು ಜಿಡಿಪಿ ಅಂದಾಜಿಸಲು ಸಿಎಸ್ಒ ಅನುಸರಿಸಿದ ವಿಧಾನದ ಔಚಿತ್ಯವನ್ನೇ ಪ್ರಶ್ನಿಸಿಬಿಡಬೇಕೇ? ಮೂಲ ವರ್ಷವನ್ನು 2011-12ಕ್ಕೆ ಬದಲಾಯಿ
ಸಿದ್ದರಿಂದ ಗುಲಾಬಿ ರಂಗಿನ ಚಿತ್ರಣ ಸಾಧ್ಯವಾಯಿತೆಂದು ಹೇಳಿದ್ದಲ್ಲದೆ ಅದು ಬೆಲೆಯೇರಿಕೆಯ ಪ್ರಭಾವವನ್ನು ಸಂಖ್ಯಾಶಾಸ್ತ್ರದ ವಿಧಾನದ (ಡಿಫ್ಲೇಟರ್) ಮೂಲಕ ಸಂಪೂರ್ಣ ಸ್ಥಗಿತಗೊಳಿಸಿದರೆ ಭಾರತದ ನೈಜ ಬೆಳವಣಿಗೆ ದರ ಶೇ 6.5ಕ್ಕಿಂತ ಜಾಸ್ತಿಯಾಗಲು ಸಾಧ್ಯವಿಲ್ಲವೆಂದು ಹೇಳಿ ಬಾಂಬ್ ಸಿಡಿಸಿತು. ಜೇಟ್ಲಿ ಸಂಭ್ರಮಿಸುತ್ತಿರುವಾಗಲೇ ಆಗಿನ ಸಿಎಸ್ಒ ಚೀಫ್ ಅನಂತ್ ಅವರಿಗೆ ಮುಜುಗರ. ಮುಜುಗರ ತಪ್ಪಿಸಿಕೊಳ್ಳಲು ಅನಂತ್ ಮೂಲ ವರ್ಷದ ಬದಲಾವಣೆಗಿಂತ ಹಿಂದಿನ ಪರಿಷ್ಕೃತ ನೈಜ ಜಿಡಿಪಿಯ ಚಿತ್ರಣ ನೀಡುವ ಭರವಸೆ ನೀಡಿದ್ದರು. ಆ ಭರವಸೆಯನ್ನು ಅವರು ಈಡೇರಿಸಲೇ ಇಲ್ಲ!

ನವದೆಹಲಿಯಲ್ಲಿ ನ. 29ರಂದು ಇನ್ನೊಂದು ದೊಡ್ಡ ವಿವಾದ ಸೃಷ್ಟಿಯಾಯಿತು. ಅನಂತ್ ಅವರ ಉತ್ತರಾಧಿಕಾರಿ ಪ್ರವೀಣ್ ಶ್ರೀವಾಸ್ತವ ಮತ್ತು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ 2019ರ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ಪರಿಷ್ಕೃತ ನೈಜ ಜಿಡಿಪಿಯನ್ನು ಬಹಿರಂಗಪಡಿಸಿದ್ದಾರೆ. ಯುಪಿಎ ಅವಧಿಯಲ್ಲಿ (2005-14) ವಾರ್ಷಿಕ ಬೆಳವಣಿಗೆ ದರ ಶೇ 6.7ರಷ್ಟು ಇದ್ದದ್ದು ಎನ್‌ಡಿಎ ಅವಧಿಯಲ್ಲಿ (2014-18) ಶೇ 7.35ಕ್ಕೆ ಏರಿದೆಯೆಂಬ ವಾದ ಅವರಿಂದ ಮಂಡನೆಯಾಗಿದ್ದು ವಿಸ್ಮಯ ಹುಟ್ಟಿಸಿದೆ. ಈ ವಿಷಯದಲ್ಲಿ ಮೊದಲ ಬಾರಿಗೆ ನೀತಿ ಆಯೋಗದ ಪ್ರವೇಶವು ಈ ತನಕ ಇದ್ದೂ ಇಲ್ಲವಾಗಿದ್ದ ನೀತಿ ಆಯೋಗ ಇದೆಯೆಂಬ ಭಾವನೆ ಬರುವಂತಾಗಿದ್ದರಿಂದ ಚಿದಂಬರಂ ಈ ಪ್ರವೇಶವನ್ನು ಟೀಕಿಸಿದರೆ, ಜೇಟ್ಲಿ ಸಮರ್ಥಿಸಿಕೊಂಡಿದ್ದಾರೆ. ಹೀಗೆ ಮಾಜಿ-ಹಾಲಿಗಳ ನಡುವೆ ಇನ್ನೊಂದು ಜಟಾಪಟಿ! ಈ ಮಧ್ಯ ಮೂಲ ವರ್ಷವನ್ನು 2017-18ಕ್ಕೆ ಬದಲಾಯಿಸುವ ಪ್ರಸ್ತಾಪವೂ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT