ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಗ್ರಾಮಸ್ವರಾಜ್ಯ: ‘ನಿಲುಕದ ನಕ್ಷತ್ರ’?

ಭವಿಷ್ಯದ ಸುದಿನಗಳಿಗಾಗಿ ಕ್ರಿಯಾಶೀಲ ಮತ್ತು ದಕ್ಷರನ್ನು ಪಂಚಾಯಿತಿ ಸದಸ್ಯರನ್ನಾಗಿ ಆರಿಸಿದರೆ ಗ್ರಾಮಗಳ ಚಹರೆ ಬದಲಿಸಲು ಸಾಧ್ಯವಾಗುತ್ತದೆ
Last Updated 21 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಮಹಾತ್ಮ ಗಾಂಧಿ ಅವರ ‘ಗ್ರಾಮಸ್ವರಾಜ್ಯ’ದ ಕನಸನ್ನು ಇನ್ನೂ ಕಾಣುತ್ತಲೇ ಇದ್ದೇವೆ. ದುರದೃಷ್ಟವಶಾತ್, ಅದು ನನಸಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಕಳೆದ ಆರೇಳು ತಿಂಗಳುಗಳಲ್ಲಿ ಅವಧಿ ಮುಗಿದ ಸಾವಿರಾರು ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಗ್ರಾಮ ಪಂಚಾಯಿತಿಗಳ ಆಡಳಿತಕ್ಕೆ ಸಂಬಂಧವೇ ಇಲ್ಲದ ಹಲವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಹೊಸ ಕ್ಷೇತ್ರ, ಆದರೂ ಸವಾಲಾಗಿ ಸ್ವೀಕರಿಸೋಣ ಅಂತ ಕೆಲವರು ಸದುದ್ದೇಶದಿಂದ ಅಧಿಕಾರ ವಹಿಸಿಕೊಂಡರು. ಆದರೆ, ಗ್ರಾಮ ಪಂಚಾಯಿತಿಗಳಲ್ಲಿ ನಡೆಯುವ ‘ದರ್ಬಾರ್’ ನೋಡಿ ಅಂತಹವರ ಉತ್ಸಾಹವೇ ಉಡುಗಿದೆ.

ಮಹತ್ವಾಕಾಂಕ್ಷೆಯ ‘ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ ಅಚ್ಚುಕಟ್ಟಾಗಿ ಜಾರಿಗೆ ಬಂದರೆ, ಬಡತನವನ್ನು ತಕ್ಕಮಟ್ಟಿಗೆ ನಿರ್ಮೂಲನ ಮಾಡಬಹುದು. ಕೆರೆಕಟ್ಟೆಗಳನ್ನು ಹೂಳುಮುಕ್ತ ಮಾಡಬಹುದು. ಗ್ರಾಮದ ನೈರ್ಮಲ್ಯವನ್ನು ವ್ಯವಸ್ಥಿತವಾಗಿ ಕಾಪಾಡಬಹುದು. ಆದರೆ, ಹಲವಾರು ಕಡೆ ನಕಲಿ ಹೆಸರು ಸೃಷ್ಟಿಸಿ, ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ನಿಗದಿತ ಕೂಲಿ ವೆಚ್ಚವನ್ನು ವಿತರಿಸಲಾಗುತ್ತಿದೆ. ಯಂತ್ರೋಪಕರಣಗಳನ್ನು ಬಳಸಿ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತಿದೆ. ಇದರಲ್ಲಿ ಪಂಚಾಯಿತಿ ಸದಸ್ಯರ ಪಾತ್ರ ಬಹುಮುಖ್ಯವಾಗಿರುತ್ತದೆ.

ಬಹುತೇಕ ಕಡೆ ಕಚೇರಿ ದಾಖಲೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುತ್ತಿಲ್ಲ. ಎಷ್ಟು ಬೀದಿದೀಪಗಳು ಹಾಳಾದವು, ಎಷ್ಟು ಖರೀದಿಸಲಾಯಿತು, ಎಲ್ಲೆಲ್ಲಿ ಅಳವಡಿಸಲಾಯಿತು ಎಂಬುದರ ಬಗ್ಗೆ ದಾಖಲೆಗಳನ್ನು ನಿರ್ವಹಿಸುತ್ತಿಲ್ಲ. ಹಾಗೆಯೇ ಕೊಳಾಯಿ, ತಂತಿಯಂತಹ ವಸ್ತುಗಳನ್ನು ಖರೀದಿಸಿದ ಪಾವತಿ ರಸೀದಿಗಳನ್ನು ಮಾತ್ರ ಕಾಯ್ದಿರಿಸಿ, ಲೆಕ್ಕ ಪರಿಶೋಧನೆಯನ್ನು ಪೂರೈಸಲಾಗುತ್ತದೆ. ಲೆಕ್ಕಪರಿಶೋಧಕರನ್ನು ‘ಸರಿಯಾಗಿ’ ನೋಡಿಕೊಂಡರೆ ಬಹುತೇಕ ಆಕ್ಷೇಪಗಳನ್ನು ಕೈಬಿಡಲಾಗುತ್ತದೆ. ‘ಸರಿಯಾಗಿ ನೋಡಿಕೊಳ್ಳದ’ ಕಾರಣಕ್ಕಾಗಿಯೇ ಹಲವಾರು ಜಿಪುಣ ಪಿಡಿಒಗಳು ಸಂಕಷ್ಟಕ್ಕೆ ಸಿಲುಕಿರುವುದೂ ಇದೆ!

ದೇಶದಾದ್ಯಂತ ಎಲ್‍ಇಡಿ ಬಲ್ಬ್‌ಗಳಿಗೆ ಹೆಚ್ಚಿನ ಮಾರಾಟಗಾರರು ಎರಡು ವರ್ಷ ಖಾತರಿ ನೀಡುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಅಧಿಕ ದರಕ್ಕೆ ಲಭ್ಯವಿರುವ ಬಲ್ಬ್‌ಗಳನ್ನು ಪಂಚಾಯಿತಿಗಳಲ್ಲಿ ಖರೀದಿಸುತ್ತಾರೆ. ಅಚ್ಚರಿಯೆಂದರೆ, ಇವುಗಳ ಖಾತರಿ ಕೇವಲ 6 ತಿಂಗಳು! ಇದನ್ನು ಸರಿಪಡಿಸಲು ಏಕೆ ಸಾಧ್ಯವಿಲ್ಲವೆಂದರೆ, ಪಂಚಾಯಿತಿಯ ಬಹುತೇಕ ಸಿಬ್ಬಂದಿ ಸ್ಥಳೀಯರೇ ಆಗಿದ್ದು, ದಿನಗೂಲಿ ಅಥವಾ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಾರೆ. ಮತಬ್ಯಾಂಕ್ ಕಾರಣಕ್ಕಾಗಿ, ಇವರನ್ನು ಎದುರು ಹಾಕಿಕೊಳ್ಳಲು ಪಂಚಾಯಿತಿ ಸದಸ್ಯರು ಸಿದ್ಧರಿರುವುದಿಲ್ಲ.

ಇನ್ನು ನೀರುಗಂಟಿಗಳ ಕಾರ್ಯವೈಖರಿ ಹೇಗಿರುತ್ತದೆಯೆಂದರೆ, ವಾರಕ್ಕೊಮ್ಮೆ ಅಲ್ಲಲ್ಲಿ ಪೈಪ್‍ಗಳು ಒಡೆದವೆಂದು ದುರಸ್ತಿ ಮಾಡಿದ ಬಿಲ್ಲು ತಂದರೆ ಸುಮ್ಮನೆ ಒಪ್ಪಿ, ಹಣ ಪಾವತಿಸಬೇಕು. ಇಲ್ಲವಾದಲ್ಲಿ ಪಂಪ್‍ಹೌಸ್‍ನಲ್ಲಿ ಶಾರ್ಟ್‌ಸರ್ಕಿಟ್‌ ‘ಸಾಮಾನ್ಯ’ ಎಂಬಂತೆ ಆಗಿಬಿಡುತ್ತದೆ. ಮೋಟರ್ ಸುಟ್ಟು ಹೋಗುತ್ತದೆ, ಸ್ಟಾರ್ಟರ್ ದುರಸ್ತಿಗೆ ಬರುತ್ತದೆ! ನೀರು ಬಂದಿಲ್ಲವೆಂದರೆ ಸಾರ್ವಜನಿಕರು ಹೇಗೂ ಗಲಾಟೆ ಮಾಡುತ್ತಾರೆ, ಅನಿವಾರ್ಯವಾಗಿ ಖರ್ಚು ಮಾಡಲೇಬೇಕಾದ ಸನ್ನಿವೇಶ ಉದ್ಭವಿಸುತ್ತದೆ.

ನೀರುಗಂಟಿಗಳಿಗೆ ಕೇವಲ ₹8-10 ಸಾವಿರ ವೇತನ ನೀಡಲಾಗುತ್ತದೆ. ಹಬ್ಬ ಹರಿದಿನ ಎನ್ನದೆ ಅವರು ವರ್ಷಪೂರ್ತಿ ಒಂದಿಲ್ಲೊಂದು ಭಾಗದಲ್ಲಿ ನೀರು ಬಿಡುವ, ಕಣ್ಣಾಮುಚ್ಚಾಲೆಯಾಡುವ ವಿದ್ಯುತ್‍ನೊಂದಿಗೆ ಆಟವಾಡಿ, ಎಲ್ಲ ಭಾಗಗಳಿಗೂ ಸಮರ್ಪಕವಾಗಿ ನೀರು ಪೂರೈಸಬೇಕು. ಪೈಪ್‍ಲೈನ್‍ಗಳ ದುರಸ್ತಿ, ನೀರಿನ ಗುಣಮಟ್ಟ ಕಾಯ್ದುಕೊಳ್ಳುವಂತಹ ಹೊಣೆಯನ್ನೂ ನಿರ್ವಹಿಸಬೇಕಿರುತ್ತದೆ. ಆದ್ದರಿಂದ ಆಗಾಗ ಇಂಥ ‘ದುರಸ್ತಿ ಕ್ರಮ’ಗಳಿಗೆ ಕೈಹಾಕುತ್ತಾರೆ!

ಪ್ರತಿಯೊಂದು ಪಂಚಾಯಿತಿಯಲ್ಲಿಯೂ ಚರಂಡಿ ಸ್ವಚ್ಛತೆ, ಗಿಡಗಂಟಿಗಳ ನಿರ್ಮೂಲನೆಗಾಗಿ ಸಾಕಷ್ಟು ಅನುದಾನವಿರುತ್ತದೆ. ಅದನ್ನು ಎಲ್ಲ ಸದಸ್ಯರೂ ಸಮರ್ಪಕವಾಗಿ ಬಳಸಿದರೆ ಗ್ರಾಮಗಳು ನಳನಳಿಸುತ್ತವೆ. ಆದರೆ ಇಲ್ಲಿಯೂ ಯಥಾಪ್ರಕಾರ ದಾಖಲೆಗಳಲ್ಲಿ ಮಾತ್ರ ಕೆಲಸವಾಗಿರುತ್ತದೆ.

ಇನ್ನು ಪಿಡಿಒಗಳಿಗೆ ಇ-ಸ್ವತ್ತು ಮಾಡುವುದೇ ದೊಡ್ಡ ಕೆಲಸ. ಇದರಲ್ಲಿ ಪಂಚಾಯಿತಿ ಸದಸ್ಯರ ಪಾತ್ರ, ಪ್ರಭಾವ ಅಷ್ಟಾಗಿ ಇರದ ಕಾರಣ, ಸುಲಭವಾಗಿ, ನೇರವಾಗಿ ಫಲಾನುಭವಿಗಳು ವ್ಯವಹಾರ ಕುದುರಿಸುವ ಕಾರಣ ಇದೇ ಆದ್ಯತೆಯಾಗಿರುತ್ತದೆ. ಹಿರಿಯ ಅಧಿಕಾರಿಗಳ ಒತ್ತಡಕ್ಕಾಗಿ ಅನ್ಯ ಜನೋಪಯೋಗಿ ಕಾರ್ಯಗಳನ್ನು ನಿರ್ವಹಿಸುತ್ತಾರೆಯೇ ವಿನಾ ಹೆಚ್ಚಿನ ಒತ್ತು ನೀಡುವುದಿಲ್ಲ. ಅಲ್ಲಲ್ಲಿ ಕೆಲವು ಪ್ರಾಮಾಣಿಕ, ನಿಷ್ಠಾವಂತ ಪಿಡಿಒಗಳು ಕೂಡ ಇದ್ದಾರೆ.

ಮುಂದಿನ ವರ್ಷದಿಂದ ಪ್ರತೀ ಗ್ರಾಮ ಪಂಚಾಯಿತಿಗೆ ಒಂದು ಕೋಟಿ ರೂಪಾಯಿ ಅನುದಾನ ನೀಡಲಾಗುತ್ತದೆಯೆಂದು ಈಗಾಗಲೇ ಪ್ರಕಟಿಸಲಾಗಿದೆ.ಇಂದು (ಡಿ. 22) ಮತ್ತು 27ರಂದು ನಡೆಯಲಿರುವ ಪಂಚಾಯಿತಿ ಚುನಾವಣೆಯಲ್ಲಿ ತುರುಸಿನ ಸ್ಪರ್ಧೆ ಇದೆ. ಮತದಾರರು ತಮಗಾಗಿ, ತಮ್ಮ ಭವಿಷ್ಯದ ಸುದಿನಗಳಿಗಾಗಿ ಕ್ರಿಯಾಶೀಲ, ದಕ್ಷ ಸದಸ್ಯರನ್ನು ಆಯ್ಕೆ ಮಾಡಿದಲ್ಲಿ ಪಿಡಿಒಗಳನ್ನೂ ಪ್ರಶ್ನಿಸಬಹುದು, ಉತ್ತಮ ಆಡಳಿತ ನೀಡಬಹುದು. ಗ್ರಾಮಗಳು ಸ್ವಚ್ಛವಾಗಿ ಇರುತ್ತವೆ. ರೋಗರುಜಿನಗಳಿಂದ ಬಳಲುವ, ಆರ್ಥಿಕ ಸಂಕಷ್ಟಕ್ಕೆ ಈಡಾಗುವ ಪ್ರಮೇಯ ತಪ್ಪುತ್ತದೆ. ಮುಖ್ಯವಾಗಿ ನಮ್ಮ ಹಣ ನಮಗಾಗಿ ಸದ್ಬಳಕೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT