ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಮಾಪನ ಎಂಬ ಮಹತ್ತರ ಕಲಿಕೆ

ಉಪನ್ಯಾಸಕರಿಗೆ ಗೊತ್ತಿರದ ಎಷ್ಟೋ ವಿಷಯಗಳನ್ನು ಮೌಲ್ಯಮಾ‍ಪನದ ಸಂದರ್ಭದಲ್ಲಿ ವಿದ್ಯಾರ್ಥಿಗಳೇ ಕಲಿಸುತ್ತಾರೆ!
Last Updated 4 ಏಪ್ರಿಲ್ 2019, 19:07 IST
ಅಕ್ಷರ ಗಾತ್ರ

ಅವು ತೊಂಬತ್ತರ ದಶಕದ ಆರಂಭದ ದಿನಗಳು. ಸ್ನಾತಕೋತ್ತರ ಪದವಿ ಗಳಿಸಿ ಉಪನ್ಯಾಸಕ ವೃತ್ತಿಗೆ ಸೇರಿದ ಹೊಸತು. ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಮೂರು ವರ್ಷ ಸೇವಾ ಅನುಭವ ಹೊಂದಿದ ಉಪನ್ಯಾಸಕರು ಮಾತ್ರದ್ವಿತೀಯ ಪಿಯುಸಿ ಮೌಲ್ಯಮಾಪನ ಕಾರ್ಯಕ್ಕೆ ನಿಯುಕ್ತಿಗೊಳ್ಳುತ್ತಿದ್ದರು.

ಎಷ್ಟೇ ಸೇವಾ ಅನುಭವವಿದ್ದರೂ ಅನುದಾನರಹಿತ ಕಾಲೇಜಿನ ಉಪನ್ಯಾಸಕರು ಮೌಲ್ಯಮಾಪನ ಮಾಡುವಂತಿರಲಿಲ್ಲ. ನಾನೂ ಅನುದಾನರಹಿತ ವಿಭಾಗದಲ್ಲಿ ಇದ್ದುದರಿಂದ ಮೌಲ್ಯಮಾಪನ ಆದೇಶ ಬರುತ್ತಿರಲಿಲ್ಲ. ಮುಂದಿನ ಏಳೆಂಟು ವರ್ಷ ಹಾಗೇ ನಡೆಯಿತು.

ಕಾಲೇಜು ಮಟ್ಟದಲ್ಲಿ ನಡೆಯುತ್ತಿದ್ದ ಪರೀಕ್ಷೆಗಳ ನಮ್ಮದೇ ವಿದ್ಯಾರ್ಥಿಗಳ ಉತ್ತರಪತ್ರಿಕೆ ಮೌಲ್ಯಮಾಪನ ಮಾಡಿ ತೃಪ್ತಿ ಪಟ್ಟುಕೊಳ್ಳಬೇಕಾದ ಅನಿವಾರ್ಯ ನಮಗೆಲ್ಲ ಇತ್ತು. ನಮ್ಮ ಪ್ರಾಚಾರ್ಯರು ‘ಪದವಿ ಗಳಿಸುವಾಗ ನಿಮಗೆ ಕಾಲುಭಾಗ ವಿಷಯ ತಿಳಿದಿರುತ್ತದೆ. ಕಲಿಸುವಾಗ ನೀವೂ ಸ್ವಲ್ಪ ಕಲಿಯುತ್ತೀರಿ. ಆದರೆ ಸಬ್ಜೆಕ್ಟ್‌ನ ಪೂರ್ಣ ಕಲಿಕೆ ಸಾಧ್ಯವಾಗುವುದು ನೀವು ಬೇರೆ ಬೇರೆ ವಿದ್ಯಾರ್ಥಿಗಳ ಉತ್ತರಪತ್ರಿಕೆಗಳನ್ನು ವಾರ್ಷಿಕ ಪರೀಕ್ಷೆಗಳಲ್ಲಿ ಮೌಲ್ಯಮಾಪನ ಮಾಡಿದಾಗ ಮಾತ್ರ. ಅಲ್ಲಿಯವರೆಗೆ ಕಾಯದೇ ವಿಧಿಯಿಲ್ಲ’ ಎನ್ನುತ್ತಿದ್ದರು.

ಅಂತೂ ಆ ದಿನ ಬಂತು. ಪ್ರತೀ ವರ್ಷ ತಪ್ಪದೆ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗಲು ಶುರುಮಾಡಿದೆವು. ಅಲ್ಲಿಂದೀಚೆಗೆ ಹದಿನೈದು ವರ್ಷಗಳೇ ಕಳೆದಿವೆ. ಪ್ರತೀ ಬಾರಿಯ ಮೌಲ್ಯಮಾಪನ ಕಾರ್ಯದಲ್ಲಿ ‘ನಾವು ವಿಶ್ವವಿದ್ಯಾಲಯದಲ್ಲಿ ಕಲಿತದ್ದು ತೀರಾ ಕಡಿಮೆ ಹಾಗೂ ಪಾಠ ಮಾಡುವಾಗ ಕಲಿತದ್ದು ಸಾಲದು’ ಎಂಬುದು ಅರಿವಿಗೆ ಬಂದಿದೆ.

ಪ್ರಶ್ನೆಪತ್ರಿಕೆಯಲ್ಲಿ ಒಂದು ಅಂಕದ ಪ್ರಶ್ನೆಯಿಂದ ಹಿಡಿದು ಗರಿಷ್ಠ ಹತ್ತು ಅಂಕಗಳವರೆಗಿನ ಪ್ರಶ್ನೆಗಳೂ ಇರುತ್ತವೆ. ಕೆಲವನ್ನು ಒಂದೇ ವಾಕ್ಯದಲ್ಲಿ ಉತ್ತರಿಸಿದರೆ, ಇನ್ನು ಕೆಲವಕ್ಕೆ ಪುಟಗಟ್ಟಲೆ ಬರೆಯಬೇಕಾಗುತ್ತದೆ. ಒಂದು ಪದ, ವಾಕ್ಯ, ಸಂಖ್ಯೆ, ಸಂಕೇತಗಳನ್ನು ಉತ್ತರವನ್ನಾಗಿ ಬಯಸುವ ಒಂದಂಕದ ಪ್ರಶ್ನೆಗೆ ಎಲ್ಲ ವಿದ್ಯಾರ್ಥಿಗಳು ಒಂದೇ ರೀತಿಯ ಉತ್ತರ ಬರೆದಿರುತ್ತಾರೆ. ಉಳಿದವು ಹಾಗಲ್ಲ.

ಪ್ರಶ್ನೆ ಒಂದೇ ಆಗಿದ್ದರೂ ಉತ್ತರಿಸುವ ರೀತಿ ಭಿನ್ನವಾಗಿರುತ್ತದೆ. ರಾಜ್ಯದಲ್ಲಿನ ಸಾವಿರಾರು ಉಪನ್ಯಾಸಕರು ತಮ್ಮದೇ ಶೈಲಿಯಲ್ಲಿ ಉತ್ತರ ಬರೆಯುವುದನ್ನು ಕಲಿಸಿರುತ್ತಾರೆ. ಉದಾಹರಣೆಗೆ, ಗಣಿತದ ತ್ರಿಕೋನಮಿತಿಯ ಸಮಸ್ಯೆಗಳನ್ನು ಕನಿಷ್ಠ ನಾಲ್ಕು ರೀತಿಯಲ್ಲಿ ಉತ್ತರಿಸಬಹುದಾಗಿದೆ. ಮೌಲ್ಯಮಾಪನ ಕೇಂದ್ರದಲ್ಲಿ ಉಪನ್ಯಾಸಕರಿಗೆ ಒಂದು ನೇರ ಮಾದರಿಯನ್ನು ನೀಡಿ, ಅದಕ್ಕೆ ಸಮಾನವಾದ ಯಾವುದೇ ಉತ್ತರವಿದ್ದರೂ ಅಂಕ ನೀಡಬೇಕೆಂಬ ಆದೇಶವಿರುತ್ತದೆ. ಹಾಗಾಗಿ ವಿದ್ಯಾರ್ಥಿ ಪ್ರಸ್ತುತಪಡಿಸುವ ಯಾವುದೇ ಹೊಸ ಮಾದರಿಯ ಪ್ರತೀ ಉತ್ತರವನ್ನೂ ಅರ್ಥಮಾಡಿಕೊಳ್ಳುವ ಜ್ಞಾನವನ್ನು ಉಪನ್ಯಾಸಕ ಹೊಂದಿರಲೇಬೇಕಾಗುತ್ತದೆ.

ಭೌತಶಾಸ್ತ್ರ ವಿಷಯದ ಸಮಸ್ಯಾತ್ಮಕ ಪ್ರಶ್ನೆಗಳನ್ನೂ ಎರಡು ಮೂರು ವಿಧಗಳಲ್ಲಿ ಉತ್ತರಿಸಬಹುದಾಗಿದೆ. ಉಪನ್ಯಾಸಕರಿಗೆ ಗೊತ್ತಿರದ ಎಷ್ಟೋ ವಿಷಯ, ಮಾದರಿಗಳನ್ನು ವಿದ್ಯಾರ್ಥಿಗಳೇ ಕಲಿಸುತ್ತಾರೆ. ನಗರ ಪ್ರದೇಶದ ಕಾಲೇಜುಗಳಲ್ಲಿ ಒಂದು ವಿಷಯವನ್ನು ಬೋಧಿಸಲು ಹಲವು ಉಪನ್ಯಾಸಕರಿರುತ್ತಾರೆ. ಆಗ ಉಪನ್ಯಾಸಕನೊಬ್ಬನಿಗೆ ಇಡೀ ಸಿಲೆಬಸ್‍ನ ವಿಷಯವನ್ನು ಬೋಧಿಸುವ ಅವಕಾಶ ಲಭಿಸುವುದೇ ಇಲ್ಲ. ಅಂತಹ ಉಪನ್ಯಾಸಕರಿಗೆ ಮೌಲ್ಯಮಾಪನ ಕಾರ್ಯ ದೊಡ್ಡ ವರವಾಗಿ ನೆರವಿಗೆ ಬರುತ್ತದೆ.

ಒಮ್ಮೆ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗುವ ಉಪನ್ಯಾಸಕ ಒಂದೇ ವಿಷಯ ಬೋಧಿಸುವ ನೂರಾರು ಉಪನ್ಯಾಸಕರ ಸಂಪರ್ಕಕ್ಕೆ ಬಂದು ಹಲವು ಮೌಲಿಕ ವಿಷಯಗಳನ್ನು ಕಲಿಯುತ್ತಾನೆ. ಅಲ್ಲದೆ, ತಾವು ಕಲಿಸಿದ ವಿಷಯದ ಮೌಲ್ಯಮಾಪನ ಮಾಡಿದ ತೃಪ್ತಿಯೂ ಇರುತ್ತದಲ್ಲದೆ ಮುಂದೆ ಪಾಠ ಮಾಡುವಾಗ ಹೆಚ್ಚಿನ ಆತ್ಮವಿಶ್ವಾಸವೂ ಇರುತ್ತದೆ, ಪಾಠದ ಗುಣಮಟ್ಟವೂ ಹೆಚ್ಚುತ್ತದೆ. ಅದಕ್ಕೆಂದೇ ಸರ್ಕಾರ ಮೌಲ್ಯಮಾಪನ ಕಾರ್ಯವನ್ನು ಕಡ್ಡಾಯಗೊಳಿಸಿದೆ. ಆದರೆ ಕೆಲವು ಉಪನ್ಯಾಸಕರು ಅತ್ಯಂತ ಉದಾಸೀನದಿಂದ ಮೌಲ್ಯಮಾಪನ ಮಾಡಿ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡಿದ ಅನೇಕ ಉದಾಹರಣೆಗಳಿವೆ.

ಉತ್ತರದ ಮಾದರಿಯನ್ನು ಸರಿಯಾಗಿ ಗ್ರಹಿಸದೆ ಕಡಿಮೆ ಅಂಕ ನೀಡಿದ್ದರಿಂದ ಅನೇಕ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡದ್ದೂ ಇದೆ. ಸ್ಥಿತಿವಂತರು ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿ ನ್ಯಾಯ ಪಡೆದರೆ, ಇನ್ನು ಕೆಲವರು ನ್ಯಾಯಾಲಯದ ಮೆಟ್ಟಿಲೇರಿ ಹೆಚ್ಚಿನ ಅಂಕ ಪಡೆದದ್ದೂ ಇದೆ. ವಿದ್ಯಾರ್ಥಿಗಳ ಉತ್ತರದ ಮಾದರಿಯನ್ನು ಅರ್ಥಮಾಡಿಕೊಳ್ಳದೆ ಕಡಿಮೆ ಅಂಕ ನೀಡಿದ ಉಪನ್ಯಾಸಕರಿಗೆ ಶಿಕ್ಷೆಯೂ ಆಗಿದೆ.

ನಾವು ಮಾಡುವ ಮೌಲ್ಯಮಾಪನ, ನೀಡುವ ಅಂಕಗಳಿಗೆ ವಿದ್ಯಾರ್ಥಿಯ ಭವಿಷ್ಯದ ದೃಷ್ಟಿಯಿಂದ ತುಂಬಾ ಮಹತ್ವವಿರುತ್ತದೆ ಮತ್ತು ಅದು ಅತ್ಯಂತ ಜವಾಬ್ದಾರಿಯುತ ಕೆಲಸವೂ ಹೌದು. ಹೀಗಾಗಿ ಉಪನ್ಯಾಸಕರು ಸರಿಯಾದ ಸಿದ್ಧತೆ, ಸೂಕ್ತ ಗಮನ, ಮುಕ್ತ ಮನಸ್ಸಿನಿಂದ ಕೆಲಸ ನಿರ್ವಹಿಸಬೇಕಾಗುತ್ತದೆ. ಪ್ರಶ್ನೆಗಳಿಗೆ ಉತ್ತರಿಸುವ ಲಕ್ಷಾಂತರ ವಿದ್ಯಾರ್ಥಿಗಳ ಉತ್ತರದ ವಿವಿಧ ಮಾದರಿಗಳನ್ನು ಪರಿಶೀಲಿಸುವಾಗ ಹೊಸ ಕಲಿಕೆಯೇ ಸಂಭವಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT