ಬೆಂಗಳೂರಿನೊಂದಿಗೆ ನಿಕಟ ಸಂಪರ್ಕ ಹೊಂದಿರುವ, ನಗರಾಭಿವೃದ್ಧಿ ಸಚಿವರಾಗಿಯೂ ಅನುಭವ ಹೊಂದಿರುವ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಹೊಸ ಮುಖ್ಯಮಂತ್ರಿಗಳಾಗಲಿದ್ದಾರೆ. ರಾಜಧಾನಿಯನ್ನು ಗ್ರೇಟರ್ ಬೆಂಗಳೂರಾಗಿ ರೂಪಿಸುವ ಕನಸು ಕಂಡವರು ಅವರು. ನಗರವೊಂದಕ್ಕೆ ಸುಸ್ಥಿರನಿರ್ವಹಣೆ ಸಾಧ್ಯವಾದರೆ, ಆಗ ಅದು ನಿಜವಾಗಿ ‘ಗ್ರೇಟ್’ (ಮಾದರಿ) ಆಗಬಲ್ಲದು. ಅಂಥ ದೂರದೃಷ್ಟಿಯ ಹಾಗೂಪರಿಣಾಮಕಾರಿಯಾದ ನೀತಿಯನ್ನು ರೂಪಿಸಿ, ಅನುಷ್ಠಾನಗೊಳಿಸುವ ಸುವರ್ಣ ಅವಕಾಶ ಅವರ ಮುಂದಿದೆ. ಅದು ಸಾಧ್ಯವಾದಲ್ಲಿ ರಾಜಧಾನಿಯ ಜನರೆಲ್ಲರ ಬದುಕು ಸಾಕಷ್ಟು ಸುಗಮವಾದೀತು. ಜೊತೆಗೆ, ವೇಗವಾಗಿ ಹಿಗ್ಗುತ್ತಿರುವ ನಾಡಿನ ಇತರ ನಗರಗಳ ನಿರ್ವಹಣೆಗೂ ಅದು ದಿಕ್ಕು ತೋರೀತು.

ಗ್ರೇಟರ್ ಬೆಂಗಳೂರು ಜಲಸುರಕ್ಷಿತ ಹಾಗೂ ಹವಾಮಾನ ಬದಲಾವಣೆಗೆ ಒಗ್ಗಿಕೊಳ್ಳಬಲ್ಲ ಸುಸ್ಥಿರ ನಗರವಾಗಬೇಕಾದರೆ, ವೈಜ್ಞಾನಿಕ ನೆಲ–ಜಲ–ಹಸಿರು ಹೊದಿಕೆಯ ನಿರ್ವಹಣೆ ಹಾಗೂ ಪಾರದರ್ಶಕವಾದ ವಿಕೇಂದ್ರೀಕೃತ ಆಡಳಿತಕ್ಕೆ ಆದ್ಯತೆ ಒದಗಲೇಬೇಕು. ಆ ನಿಟ್ಟಿನಲ್ಲಿ ಕೆಲವು ಪ್ರಮುಖ ಸಂಗತಿಗಳತ್ತ ಹೊಸ ಮುಖ್ಯಮಂತ್ರಿ ಅವರು ಆದ್ಯತೆ ನೀಡಲಿ.

ಆದ್ಯತೆಗಳ ಪಟ್ಟಿಯಲ್ಲಿ ಮೊದಲನೆಯದು ಜಲಸುರಕ್ಷತೆ. ನಾಡಿನ ಪ್ರತಿ ಮೂಲೆಯಿಂದ ಪ್ರತಿ ದಿನವೂ ಬೆಂಗಳೂರಿಗೆ ಯುವ ಜನತೆಯ ಗುಳೆ ಹೆಚ್ಚುತ್ತಲೇ ಇದೆ. ಸ್ಥಳೀಯ ಜಲಮೂಲಗಳೆಲ್ಲ ಬರಿದಾಗಿ, ಕಾವೇರಿ ಕಣಿವೆಯ ನೀರು ಖಾಲಿಯಾದರೂ ನೀರಿನ ಬವಣೆ ಮಾತ್ರ ನೀಗುತ್ತಿಲ್ಲ. ಹೀಗಾಗಿ, ನೂರಕ್ಕೆ ನೂರರಷ್ಟು ಜಲ ಮರು
ಬಳಕೆ ಕಡ್ಡಾಯವಾಗಬೇಕಾದುದು ಅನಿವಾರ್ಯ. ತ್ಯಾಜ್ಯ ನೀರನ್ನು ಶುದ್ಧೀಕರಿಸುವ ಈಗಿರುವ ನಗರಪಾಲಿಕೆಯ ಘಟಕಗಳನ್ನು ಸುವ್ಯವಸ್ಥಿತಗೊಳಿಸುವ ಜೊತೆಗೆ, ವಾಣಿಜ್ಯ ಕಟ್ಟಡಗಳು, ಉದ್ಯಾನಗಳು, ಅಪಾರ್ಟ್ಮೆಂಟ್ ಇತ್ಯಾದಿಗಳೆಲ್ಲ ವಿಕೇಂದ್ರೀಕೃತ ತ್ಯಾಜ್ಯನೀರು ಶುದ್ಧೀಕರಣ ಘಟಕ ಅಳವಡಿಸುವುದನ್ನು ಕಡ್ಡಾಯಗೊಳಿಸಬೇಕಿದೆ.

ಕುಡಿಯಲು ಹೊರತುಪಡಿಸಿ ಉಳಿದೆಲ್ಲ ಅಗತ್ಯಕ್ಕೆ ಈ ಶುದ್ಧೀಕರಿಸಿದ ನೀರನ್ನು ವಿತರಿಸುವ ಯೋಜನೆ ರೂಪುಗೊಳ್ಳಬೇಕಿದೆ. ಇದಕ್ಕೆ ಪೂರಕವಾಗಿ, ಕೆರೆಗಳ ರಕ್ಷಣೆ, ಮಳೆನೀರು ಸಂಗ್ರಹದ ವಿವಿಧ ಸೂಕ್ತ ತಂತ್ರಗಳ ಕಡ್ಡಾಯ ಅನುಷ್ಠಾನ, ನೀರಿನ ಹಿತ–ಮಿತ ಬಳಕೆಯ ತಂತ್ರಜ್ಞಾನ ಮತ್ತು ಮನೋಧರ್ಮ ಉತ್ತೇಜಿಸುವುದು ಇತ್ಯಾದಿ ಅಂಶಗಳಿಗೆ ಆದ್ಯತೆ ಒದಗಬೇಕು. ಕೆರೆಗಳ ಸಂರಕ್ಷಣೆ, ಬಫರ್ ವಲಯಗಳ ವಿಸ್ತರಣೆ, ರಾಜಕಾಲುವೆಗಳ ಒತ್ತುವರಿ ತಡೆ ಇತ್ಯಾದಿಗಳನ್ನು ಸಮಗ್ರ ಜಲಾನಯನ ಅಭಿವೃದ್ಧಿ ತತ್ತ್ವದಡಿ ಕೈಗೊಳ್ಳಬೇಕಿದೆ. ಸ್ಪಷ್ಟ ಮತ್ತು ಕಾಲಬದ್ಧ ಯೋಜನೆ ಮಾತ್ರ ಈಗ ಬೆಂಗಳೂರಿಗೆ ಉಳಿದಿರುವ ಭವಿಷ್ಯದ ಏಕೈಕ ದಾರಿ.

ಘನತ್ಯಾಜ್ಯ ನಿರ್ವಹಣೆ ಆಡಳಿತದ ಮುಂದಿರುವ ಬಹುದೊಡ್ಡ ಸವಾಲು. ಮೂಲದಲ್ಲಿಯೇ ಪೂರ್ಣ ಪ್ರಮಾಣದಲ್ಲಿ ತ್ಯಾಜ್ಯ ವಿಂಗಡಣೆ, ಸೂಕ್ತ ವಿಲೇವಾರಿ, ಪ್ರತಿ ವಾರ್ಡ್ನಲ್ಲಿ ಕಾಂಪೋಸ್ಟ್ ಘಟಕ, ನಿರಂತರ ನಿಗಾ ಇತ್ಯಾದಿ ವಿಕೇಂದ್ರೀಕೃತ ತಂತ್ರಗಳ ಮೂಲಕ ಈಗಾಗಲೇ ಬೃಹದಾಕಾರವಾಗಿ ಬೆಳೆದಿರುವ ತ್ಯಾಜ್ಯ ವಿಸರ್ಜನಾ ಪ್ರದೇಶಗಳಿಗೆ ತಲಪುತ್ತಿರುವ ತ್ಯಾಜ್ಯದ ಪ್ರಮಾಣ ತಗ್ಗಿಸಲು ಸಾಧ್ಯವಿದೆ.

ಮೂರನೇ ಆದ್ಯತೆ, ವೇಗವಾಗಿ ಏರುತ್ತಿರುವ ಸರಾಸರಿ ತಾಪಮಾನದ ನಿಯಂತ್ರಣ.
ನಗರವೇ ಒಂದು ಉಷ್ಣ ದ್ವೀಪವಾಗುತ್ತಿದೆ! ಶೀತಲ ಮೇಲ್ಚಾವಣಿಗಳು, ಸೌರಶಕ್ತಿ ಆಧಾರಿತ ಗೃಹ ಶೀತಲಘಟಕಗಳು, ಮೇಲ್ಚಾವಣಿ ಸೌರವಿದ್ಯುತ್, ಇತ್ಯಾದಿ ಹಲವು ಬಗೆಯ ಸುಸ್ಥಿರ ತಂತ್ರಜ್ಞಾನಗಳು ಈಗ ಲಭ್ಯ. ಅವುಗಳನ್ನು ಒಂದು ಸಮಗ್ರ ಯೋಜನೆಯನ್ನಾಗಿ ರೂಪಿಸಿ ಅನುಷ್ಠಾನಗೊಳಿಸಬೇಕಿದೆ. ನಗರದ ಹಸುರುಕವಚ ಹಿಗ್ಗಿಸುವ ಕಾರ್ಯವಂತೂ ಶೀಘ್ರ ಆಗಲೇಬೇಕಾದ್ದು. ರಸ್ತೆಬದಿಗಳಲ್ಲಿ ಮರ ಬೆಳೆಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಗಿಡ ನೆಡುವುದು, ಉದ್ಯಾನಗಳನ್ನು ಪೋಷಿಸುವುದು, ಇತ್ಯಾದಿ ಅಂಶಗಳ ಸಮಗ್ರ ‘ನಗರ ವೃಕ್ಷನೀತಿ’ ಜಾರಿಯಾಗಬೇಕಿದೆ.

ಸಾರಿಗೆ ವ್ಯವಸ್ಥೆಯ ಇಂಗಾಲದ ಹೊರೆ ತಗ್ಗಿಸುವ ಸವಾಲು ಸುಲಭದ್ದಲ್ಲ. ಮೆಟ್ರೊ ಮಾರ್ಗ, ವಿದ್ಯುತ್ ಚಾಲಿತ ಬಸ್ಸುಗಳು, ಇತ್ಯಾದಿಗಳೆಲ್ಲ ಬಂದಿವೆ. ಆದರೆ, ಸಾಮೂಹಿಕ ಸಾರಿಗೆಯನ್ನು ವ್ಯಾಪಕವಾಗಿ ಬಳಸಲು ಅನುಕೂಲವಾಗುವ ಸೌಲಭ್ಯಗಳು ಮತ್ತು ವಾತಾವರಣವನ್ನು ಹಿಗ್ಗಿಸುವ ಕಾರ್ಯ ಆಗಬೇಕಿದೆ. ವಿವೇಕಯುತ ವಾಹನ ಬಳಕೆಯ ಜೀವನವಿಧಾನ ವಿಸ್ತರಣೆಗೆ ಚಿಂತಿಸದೆ, ಸುರಂಗ ರಸ್ತೆಗಳಂಥ ಅವೈಜ್ಞಾನಿಕವಾದ ಭಾರೀ ಕಾಮಗಾರಿಗಳ ಅನುಷ್ಠಾನಕ್ಕೆ ಸರ್ಕಾರ ಮುಂದಾದರೆ ಬೆಂಗಳೂರಿನ ಸುರಕ್ಷತೆ ಮತ್ತಷ್ಟು ಕುಗ್ಗೀತೇ ಹೊರತು, ಸಂಚಾರ ವ್ಯವಸ್ಥೆಯ ಸಮಸ್ಯೆಗಳಲ್ಲ!

ಈ ಎಲ್ಲ ಆಯಾಮಗಳ ಜೊತೆ, ಸಾರ್ವಜನಿಕ ನೈರ್ಮಲ್ಯ, ಆರೋಗ್ಯ, ಸುಸ್ಥಿರ ಇಂಧನ, ಹಳೆಯ ಕಟ್ಟಡಗಳ ಸುರಕ್ಷತೆ ಇತ್ಯಾದಿಗಳಂತೆಲ್ಲ ತೀವ್ರ ಗಮನ ನೀಡಬೇಕಿದೆ.

ಶೀಘ್ರ ಅಧಿಕಾರದ ಸೂತ್ರ ಹಿಡಿಯಲಿರುವ ಹೊಸ ಮುಖ್ಯಮಂತ್ರಿ ಅವರು, ಈ ಬಗೆಯ ಹೊಸ ದೃಷ್ಟಿ ಮತ್ತು ಕರ್ತೃತ್ವಶಕ್ತಿಯ ಮೂಲಕ ಜಡ್ಡುಗಟ್ಟಿದ ನಗರಾಡಳಿತ ವ್ಯವಸ್ಥೆಗೆ ಕಾಯಕಲ್ಪ ನೀಡಬಲ್ಲರೆಂದು ಆಶಿಸೋಣವೆ? ವಾರ್ಡ್ ಸಮಿತಿಗಳು ಮತ್ತು ನಿವಾಸಿಗಳ ಕಲ್ಯಾಣ ಸಂಘಗಳ ಬಲವರ್ಧನೆ ಮಾಡಿ, ಆಡಳಿತದಲ್ಲಿ ಪಾರದರ್ಶಕತೆ ತಂದು ಜನಸ್ನೇಹಿಯಾಗಿಸಲು ಅವರಿಗೆ ಸಾಧ್ಯವಾದೀತೆ? ಇದೆಲ್ಲವೂ ಸಾಧ್ಯವಾದಲ್ಲಿ ಬೆಂಗಳೂರನ್ನು ಸುಸ್ಥಿರ, ಜಲಸುರಕ್ಷಿತ ಮತ್ತು ಹವಾಮಾನ ಬದಲಾವಣೆಗಳಿಗೆ ಹೊಂದಿಕೊಳ್ಳಬಲ್ಲ ನಗರವಾಗಿ ರೂಪಿಸಬಹುದು.

‘ಬ್ರ್ಯಾಂಡ್ ಬೆಂಗಳೂರು’ ಹೇಳಿಕೆ ಅದರ ಸುಸ್ಥಿರ ನಿರ್ವಹಣೆಯಲ್ಲಿ ಪ್ರತಿಫಲನವಾದೀತೆ? ಆ ಮೂಲಕ, ವೇಗವಾಗಿ ಬೆಳೆಯುತ್ತಿರುವ ನಾಡಿನ ಇತರ ನಗರ–ಪಟ್ಟಣಗಳಿಗೂ ನಗರಾಡಳಿತದ ಒಂದು ‘ಆದರ್ಶದ ಮಾದರಿ’ ದೊರಕೀತೆ? ನೂತನ ಮುಖ್ಯಮಂತ್ರಿ ಅವರ ಭವಿಷ್ಯದ ನಡೆಯೇ ಉತ್ತರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.