ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಸಂತೋಷದ ಜಾಡು ಹಿಡಿದು...

ನಾವಿಂದು ಹೆಚ್ಚು ದುಡ್ಡು ಗಳಿಸಿ, ಹೆಚ್ಚೆಚ್ಚು ಸಂತೋಷವನ್ನು ಪಡೆದುಕೊಳ್ಳುವ ಭ್ರಮೆಯಲ್ಲಿದ್ದೇವೆ
Last Updated 17 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ನಾವಿಂದು ಹೆಚ್ಚು ದುಡ್ಡು ಗಳಿಸಿ, ಹೆಚ್ಚೆಚ್ಚು ಸಂತೋಷವನ್ನು ಪಡೆದುಕೊಳ್ಳುವ ಭ್ರಮೆಯಲ್ಲಿದ್ದೇವೆ...

ತುಂಡು ಬಟ್ಟೆಯುಟ್ಟು, ಸಾತ್ವಿಕ ಆಹಾರ ಸೇವಿಸಿ ಅತ್ಯಂತ ಸರಳವಾಗಿ ಬದುಕಿದ್ದ ಮಹಾತ್ಮ ಗಾಂಧಿಯ ಮುಖದಲ್ಲಿ ಸದಾ ಕಾಣಿಸುತ್ತಿದ್ದ ಸಂತೃಪ್ತಿ, ವರ್ತಮಾನಕಾಲದ ಆಗರ್ಭ ಶ್ರೀಮಂತರ ಮುಖದಲ್ಲೂ ಕಾಣಿಸದಿರುವುದನ್ನು ಗಮನಿಸಿದರೆ, ಮನುಷ್ಯಜೀವನದ ಸಂತೋಷದ ಮೂಲವೆಲ್ಲಿದೆ ಎನ್ನುವ ಪ್ರಶ್ನೆ ಕಾಡುವುದು ಸಹಜ. ಹಾಗಿದ್ದಲ್ಲಿ, ಮನುಷ್ಯಜೀವನದ ಸಂತೋಷ ವಸ್ತುಸಂಗ್ರಹದಲ್ಲಿದೆಯೇ ಮನುಷ್ಯ ಸಂಬಂಧಗಳಲ್ಲಿದೆಯೇ ಸಾಧನೆಯಲ್ಲಿದೆಯೇ ಸಮಾಜ ಸೇವೆಯಲ್ಲಿದೆಯೇ ಹೆಸರು ಮಾಡುವುದರಲ್ಲಿದೆಯೇ?... ಮನುಷ್ಯ, ಈ ಕಾಡುವ ಪ್ರಶ್ನೆಗಳಿಗೆ ಕಾಲಕಾಲಕ್ಕೆ ಉತ್ತರ ಕಂಡು ಹಿಡಿಯುವ ಪ್ರಯತ್ನಗಳ ಪುರಾವೆಗಳು ಧರ್ಮ ಮತ್ತು ತತ್ವ ಚಿಂತನೆಗಳಲ್ಲಿ ಹೇರಳವಾಗಿ ಕಾಣಸಿಗುತ್ತವೆ.

ಪ್ರತಿವರ್ಷ ಮಾರ್ಚ್ 20 ಅನ್ನು ‘ಅಂತರರಾಷ್ಟ್ರೀಯ ಸಂತೋಷದ ದಿನ’ವೆಂದು ಆಚರಿಸುತ್ತಾರೆ. ಸಂತೋಷವಾಗಿರುವುದು ಮನುಷ್ಯನ ಮೂಲಭೂತ ಹಕ್ಕೆಂದು ವಿಶ್ವಸಂಸ್ಥೆ ಪರಿಗಣಿಸಿ, ಅದರ ಅರಿವನ್ನು ಪಸರಿಸುವ ಸಲುವಾಗಿ 2013ರಿಂದ, ಈ ದಿನವನ್ನು ಜಗತ್ತಿನಾದ್ಯಂತ ಆಚರಿಸಲು ಆರಂಭಿಸಿತು. ಸಂತೋಷ ವನ್ನು ಹರಡುವ ಮೂಲಕ, ಜಗತ್ತಿನಲ್ಲಿರುವ ಅಸಮಾನತೆ ಮತ್ತು ಬಡತನ ನಿರ್ಮೂಲ ಮಾಡಿ ಮುಂದಿನ ಪೀಳಿಗೆಗಳಿಗೆ ಭೂಮಿಯನ್ನು ಸಂರಕ್ಷಿಸುವ ಮಹತ್ತರ ಉದ್ದೇಶವನ್ನು ಈ ದಿನಾಚರಣೆ ಹೊಂದಿದೆ. ಈ ವರ್ಷದ ಧ್ಯೇಯ ವಾಕ್ಯ- ‘ಶಾಂತಿ, ಸಂಯಮ ಮತ್ತು ಕರುಣೆ ಕಾಯ್ದುಕೊಳ್ಳೋಣ’. ಕೊರೊನಾ ವೈರಾಣು ತಂದಿರುವ ಜಾಗತಿಕ ಮಟ್ಟದ ಸಂಕಷ್ಟಗಳ ನಡುವೆ ಸಂತೋಷದ ಹುಡುಕಾಟ ಅತ್ಯಂತ ಜರೂರಿನ ಆದ್ಯತೆಯಾಗಿದೆ. ಒಟ್ಟಿನಲ್ಲಿ, ಸಂಶೋಧನೆಗಳು ಹೇಳುವಂತೆ, ಸಂತೋಷವಾಗಿ ಇರುವವರು ಹೆಚ್ಚು ಕಾಲ ಬದುಕುತ್ತಾರೆ ಮತ್ತು ಕಡಿಮೆ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ.

ಇಲ್ಲಿನ ಮುಖ್ಯ ತಾತ್ವಿಕ ಪ್ರಶ್ನೆಯೆಂದರೆ, ಜೀವನದ ಗುರಿಯು ಸಂತೋಷದ ಹುಡುಕಾಟವೇ ಅಥವಾ ಮಹತ್ತರ ಸಾಧನೆಯೇ? ಈ ಪ್ರಶ್ನೆಗೆ ಉತ್ತರ ಕಂಡು ಹಿಡಿಯುವ ಸಲುವಾಗಿ ಅಮೆರಿಕದಲ್ಲಿ 2016ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ 81ರಷ್ಟು ಮಂದಿಯ ಆಯ್ಕೆ ಸಂತೋಷವೇ ಹೊರತು, ಸಾಧನೆಯಾಗಿರಲಿಲ್ಲ. ಶೇ 13ರಷ್ಟು ಜನ ಮಾತ್ರ ಜೀವನ ಸಾಧನೆಯನ್ನು ಆರಿಸಿಕೊಂಡಿದ್ದರು. ಸ್ವಾರಸ್ಯ ವೆಂದರೆ, ಅವರ ಈ ಸಂತೋಷದ ಹುಡುಕಾಟದ ಸಾಮಾನ್ಯ ನೆಲೆಗಳೆಂದರೆ; ಮನುಷ್ಯ ಸಂಬಂಧಗಳು, ವೃತ್ತಿ, ಮನೆ ನಿರ್ವಹಣೆ, ದೈಹಿಕ ಆರೋಗ್ಯ, ಸ್ವಾದಿಷ್ಟ ಆಹಾರ... ಆದರೆ, ಇವುಗಳನ್ನು ಅರಸುತ್ತ ಎಲ್ಲೂ ಪೂರ್ಣ ಸಂತೋಷ ಸಿಗದೆ, ಕೆಲವೊಮ್ಮೆ ಅದೊಂದು ಮಾನಸಿಕ ಗೀಳಾಗಿ ಖಿನ್ನತೆಗೆ ಒಳಗಾಗುವ ಸಾಧ್ಯತೆಯು ವರ್ತಮಾನದ ವಸ್ತುನಿಷ್ಠ ಪ್ರಪಂಚದಲ್ಲಿ ಹೆಚ್ಚಾಗಿದೆ.

ಇಲ್ಲಿನ ಮುಖ್ಯ ಸಮಸ್ಯೆಯೆಂದರೆ, ಒಂದು ಕಾಲ ದಲ್ಲಿ ಜೀವನದ ಅತ್ಯುನ್ನತ ಮೌಲ್ಯವಾಗಿದ್ದ ಸಂತೋಷದ ಪರಿಕಲ್ಪನೆ, ಆಧುನಿಕ ಜೀವನಶೈಲಿಯಲ್ಲಿ ಸುಲಭವಾಗಿ ಖರೀದಿಸಬಹುದಾದ ಸರಕಾಗಿ ಪರಿವರ್ತನೆಯಾಗಿರುವುದು. ಇದರ ಫಲವಾಗಿ, ನಾವಿಂದು ಹೆಚ್ಚು ದುಡ್ಡು ಗಳಿಸಿ (ಹೇಗಾದರೂ ಸರಿ), ಆ ಮೂಲಕ ಹೆಚ್ಚೆಚ್ಚು ಸಂತೋಷವನ್ನು ಪಡೆದುಕೊಳ್ಳುವ ಭ್ರಮೆಯಲ್ಲಿದ್ದೇವೆ. ಈ ಭ್ರಮೆ ಏನೆಲ್ಲಾ ಅವ್ಯವಹಾರಗಳನ್ನು ಮಾಡಲು ಮನುಷ್ಯನನ್ನು ಪ್ರೇರೇಪಿಸುತ್ತಿದೆ. ಆದರೆ, ಪೂರ್ಣ ಸಂತೋಷ ಎನ್ನುವುದು ಮಾತ್ರ ಮರೀಚಿಕೆಯಾಗಿಯೇ ಉಳಿಯುತ್ತದೆ.

ಗಮನಾರ್ಹ ಅಂಶವೆಂದರೆ, ಮೂಲತಃ ಮನುಷ್ಯನ ಮನಃಸ್ಥಿತಿಯು ಕ್ಷಣಿಕ ಮತ್ತು ಅನಿಶ್ಚಿತ. ಈ ಸ್ಥಿತ್ಯಂತರದ ಮನಸ್ಸಿನಲ್ಲಿ ಸಂತೋಷದ ಪರಿಕಲ್ಪನೆ ಕೂಡ ಚಂಚಲವಾಗಿರುವ ಸಾಧ್ಯತೆಯೇ ಹೆಚ್ಚು. ಇದನ್ನು ಮೀರಿ ಮನಸ್ಸನ್ನು ಸ್ಥಿರಗೊಳಿಸಿ ಸಂತೋಷ ದಿಂದಿರುವುದು ಹೇಗೆ? ಯಾಕೆಂದರೆ, ಮನುಷ್ಯನನ್ನು ಜೀವನದುದ್ದಕ್ಕೂ ನೋವು, ನಿರಾಶೆ, ಬೇಸರ, ಒಂಟಿತನ ಬಾಧಿಸುತ್ತಲೇ ಇರುತ್ತವೆ. ಅದಕ್ಕಾಗಿಯೇ, ಪ್ರಾಚೀನ ತತ್ವಶಾಸ್ತ್ರಜ್ಞರು ನೋವನ್ನು ಕಡಿಮೆ ಮಾಡುವ ಮಾರ್ಗಗಳನ್ನು ಸೂಚಿಸಿ, ಅದರ ಮೂಲಕ ಜೀವನದ ಸಂತೋಷವನ್ನು ಕಾಣುವ ಸಲಹೆ ನೀಡಿದ್ದಾರೆ.

ಆದರೆ, ತತ್ವಶಾಸ್ತ್ರಜ್ಞ ಫ್ರೆಡ್ರಿಕ್ ನೀಷೆ ಹೇಳುವಂತೆ, ಮನುಷ್ಯ ಮೂಲತಃ ನೋವನ್ನು ನಿರಾಕರಿಸುವುದಿಲ್ಲ. ಬದಲಾಗಿ ಅದರಲ್ಲಿ ಅರ್ಥ ಹುಡುಕುತ್ತಾನೆ. ಒಂದುವೇಳೆ ಅರ್ಥ ಸಿಕ್ಕಿದರೆ ಎಂತಹ ಸಂಕಟವನ್ನಾದರೂ ಸಹಿಸುತ್ತಾನೆ. ಈ ರೀತಿ ಜೀವನವನ್ನು ಗ್ರಹಿಸಿದರೆ, ಅರ್ಥಪೂರ್ಣ ನೋವು, ಅರ್ಥಹೀನ ಸಂತೋಷಕ್ಕಿಂತ ಹೆಚ್ಚು ಮೌಲ್ಯಯುತವಾದುದು. ಆದರೆ, ವಸ್ತುನಿಷ್ಠ ಗ್ರಹಿಕೆಯ ಆಧುನಿಕ ಕಾಲಘಟ್ಟದ ಜನಪ್ರಿಯ ಪರಿಕಲ್ಪನೆಯಂತೆ, ಜೀವನದ ಅಂತಿಮ ಉದ್ದೇಶ ಸಂತೋಷಪ್ರಾಪ್ತಿ. ಅದು ಕೂಡ ಬಾಹ್ಯವಸ್ತು ಗಳಿಂದಲೇ ವಿನಾ ಆಂತರಿಕ ಗಟ್ಟಿತನದಿಂದಲ್ಲ. ಆದರೆ, ಸಂತೋಷ ಹೊರಗಿನಿಂದ ಪಡೆಯುವ ವಸ್ತುವಲ್ಲ, ಬದಲಾಗಿ ನಾವು ಪ್ರತಿದಿನ ಮಾಡುವ ಕೆಲಸದಲ್ಲಿ ಕಂಡುಕೊಳ್ಳಬೇಕಾಗಿದೆ.

ಈ ಗೊಂದಲಗಳ ನಡುವೆ ನಮ್ಮ ಸಹಾಯಕ್ಕೆ ಬರುವುದು ಅರಿಸ್ಟಾಟಲ್‌ನ ಸಂತೋಷದ ಅನ್ವೇಷಣೆ. ಅವನ ಪ್ರಕಾರ, ಬಾಹ್ಯವಾಗಿ ದೊರಕುವ ಸಂತೋಷ, ಅದೃಷ್ಟದ ಒತ್ತೆಯಾಳು. ನಮ್ಮ ನಿಯಂತ್ರಣ ಮೀರಿದ ಘಟನೆಗಳಾದ, ದೊರಕದ ಪ್ರೀತಿ, ಬಡತನ, ಸಾಂಕ್ರಾಮಿಕ ರೋಗ, ಯುದ್ಧ, ಪ್ರಾಕೃತಿಕ ವಿಕೋಪ... ಹೀಗೆ ನಮ್ಮ ಸಂತೋಷವನ್ನು ಸದಾ ಕಸಿದುಕೊಳ್ಳಬಹುದು. ಅಂದರೆ, ಸಂತೋಷವೆನ್ನುವುದು ಶಾಶ್ವತವಾಗಿ ಗೆಲ್ಲಬಹುದಾದ ಸ್ಥಿತಿಯಲ್ಲ. ಬದಲಾಗಿ ಅಪೂರ್ಣವಾದ, ಆದರೆ ಆಂತರಿಕ ಸದೃಢತೆಯಿಂದ ನಿರಂತರವಾಗಿ ಅಭ್ಯಾಸ ಮಾಡಿ ರೂಢಿಸಿಕೊಳ್ಳಬಹುದಾದ ಜೀವನಶೈಲಿ. ಈ ಅಂಶವನ್ನು ಗುರುತಿಸುವುದರಿಂದ ಶಾಶ್ವತ ಸಂತೋಷದ ಭ್ರಾಂತಿಯಿಂದ ಸ್ವಲ್ಪ ಮಟ್ಟಿಗೆ ಹೊರಬರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT