ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೌರ್ಜನ್ಯ ಮತ್ತು ಮಹಿಳೆ

ಆರ್ಥಿಕವಾಗಿ, ತಾಂತ್ರಿಕವಾಗಿ ನಾವೆಷ್ಟೇ ಮುಂದುವರಿದಿದ್ದರೂ ಮಹಿಳೆಯರ ಮೇಲಿನ ದೌರ್ಜನ್ಯ ನಿಯಂತ್ರಿಸಲು ಸಾಧ್ಯವಾಗಿಲ್ಲ ಏಕೆ?
Last Updated 25 ನವೆಂಬರ್ 2019, 3:53 IST
ಅಕ್ಷರ ಗಾತ್ರ

ಇಂದು (ನ. 25), ಅಂತರರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನ. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ‘ಭಾರತದಲ್ಲಿ ಅಪರಾಧ- 2017’ ವಾರ್ಷಿಕ ವರದಿಯನ್ನು ನೋಡಿದರೆ, ಇಂಥ ಮಹಿಳಾ ಸಂಬಂಧಿ ದಿನಗಳ ಆಚರಣೆ ಹೆಸರಿಗಷ್ಟೇ ನಡೆಯುತ್ತಿರುವುದು ಸ್ಪಷ್ಟವಾಗುತ್ತದೆ. 2015ಕ್ಕೆ ಹೋಲಿಸಿದರೆ 2017ರಲ್ಲಿ ಮಹಿಳೆಯರ ಮೇಲಿನ ಅಪರಾಧ ಕೃತ್ಯಗಳ ಸಂಖ್ಯೆಯಲ್ಲಿ ಶೇ 9ರಷ್ಟು ಏರಿಕೆಯಾಗಿದೆ. ಅತ್ಯಾಚಾರ ಸಂತ್ರಸ್ತ ಮಹಿಳೆಯರು ಹಾಗೂ ಬಾಲಕಿಯರ ಸಂಖ್ಯೆ ಏರಿದೆ. ಮರ್ಯಾದೆಗೇಡು ಹತ್ಯೆ ಪ್ರಕರಣಗಳು 71ರಿಂದ 92ಕ್ಕೆ ಏರಿವೆ. ಸಮಾಜದ ಮರ್ಯಾದೆಯನ್ನು ಇಳಿಸಿವೆ!

ಈ ಅಂಕಿ-ಅಂಶಗಳ ಮತ್ತೊಂದು ಗಮನಾರ್ಹ ಅಂಶವೆಂದರೆ, ದ್ವೇಷ- ಪ್ರೀತಿ- ಅನೈತಿಕ ಸಂಬಂಧಗಳ ಕಾರಣದಿಂದ ನಡೆಯುವ ಕೊಲೆಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿರುವುದು. ಪ್ರೀತಿ- ಸಾಂಸಾರಿಕ ಸಂಬಂಧಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿ ನಡೆದಿರುವುದರಲ್ಲಿ ಅಚ್ಚರಿಯೇನಲ್ಲ. ಆದರೆ, ಈ ಅಂಕಿ-ಅಂಶಗಳಲ್ಲಿ ಕಾಣದ, ಹಿಡಿತಕ್ಕೆ ಸಿಗದ ಹಲವು ವಿಭಿನ್ನ ಅಂಶಗಳು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಹಲವು ಆಯಾಮಗಳನ್ನು ನೀಡುತ್ತವೆ ಎಂಬುದು ಗಮನಾರ್ಹ.

ಮಹಿಳೆಯರು ಉದ್ಯೋಗ ಸ್ಥಳದಲ್ಲಿ ಎದುರಿಸುವ ದೌರ್ಜನ್ಯ ಇವುಗಳಲ್ಲಿ ಪ್ರಮುಖವಾದುದು. ಲೈಂಗಿಕ
ಕಿರುಕುಳ ಒಳಗೊಂಡಂತೆ ವ್ಯಂಗ್ಯ ಮಾತು, ಟೀಕೆಗಳಿಂದಅಸಹನೀಯ ಎನಿಸುವ ಕಿರುಕುಳದವರೆಗೆ ಮಹಿಳೆ
ಯರು ತಮ್ಮ ಮೇಲಧಿಕಾರಿ, ಸಹೋದ್ಯೋಗಿ, ತಮ್ಮ ಕೈಕೆಳಗೆ ಕೆಲಸ ಮಾಡುವ ನೌಕರರಿಂದ ದೌರ್ಜನ್ಯವನ್ನು ಎದುರಿಸುವುದು ಸಾಮಾನ್ಯ. ಹಲವರು ಇದನ್ನೆಲ್ಲ ಯಾರಲ್ಲಿಯೂ ಹೇಳದೆ ಒಳಗೇ ನುಂಗಿಕೊಳ್ಳುತ್ತಾರೆ. ಹೆಚ್ಚಿನವರು ಕ್ರಮೇಣ ಅವುಗಳನ್ನು ಎದುರಿಸುವ, ತಪ್ಪಿಸಿಕೊಳ್ಳುವ ಉಪಾಯಗಳನ್ನು ಕಂಡುಕೊಳ್ಳು
ತ್ತಾರೆ. ಆದರೆ, ಕೆಲವರು ಇಂಥ ದೌರ್ಜನ್ಯದಿಂದ, ತಮ್ಮ ಬದುಕಿಗೆ ಅನಿವಾರ್ಯವಾದ, ಕೆಲವೊಮ್ಮೆ ಅನಿವಾರ್ಯವಲ್ಲದಿದ್ದರೂ, ಆತ್ಮವಿಶ್ವಾಸ ತಂದುಕೊಡುವ ಉದ್ಯೋಗವನ್ನು ಬಿಟ್ಟುಬಿಡುವ ನಿರ್ಧಾರಕ್ಕೆ ಬರುತ್ತಾರೆ. ಬೇಡದ ಸ್ಥಳಕ್ಕೆ ವರ್ಗಾವಣೆ, ಬಡ್ತಿ ನಿರಾಕರಣೆ, ತಮ್ಮ ಸಾಮರ್ಥ್ಯ-ವಿದ್ಯಾರ್ಹತೆಗೆ ತಕ್ಕುದಾದ ಕೆಲಸವನ್ನು ಬಿಟ್ಟು ಕಡಿಮೆ ಸಂಬಳಕ್ಕೆ ರಾಜಿ ಮಾಡಿಕೊಳ್ಳುವುದು ಇವೆಲ್ಲಕ್ಕೂ ಕಾರಣವಾಗಬಹುದು.

ಅಂಕಿ-ಅಂಶಗಳಿಗೆ ಸ್ಪಷ್ಟವಾಗಿ ಲಭ್ಯವಾಗದ ಮತ್ತೊಂದು ಬಗೆಯ ದೌರ್ಜನ್ಯವೆಂದರೆ ‘ಡಿಜಿಟಲ್ ದೌರ್ಜನ್ಯ’. ನಮ್ಮ ಕಾನೂನು ವ್ಯವಸ್ಥೆಯ ಪ್ರಕಾರ ‘ಅಪರಾಧ’ವನ್ನು ನಾವು ಗಮನಿಸುವುದು ಅದು ‘ದೈಹಿಕ’ವಾದರೆ ಮಾತ್ರ! ಪಶ್ಚಿಮ ಬಂಗಾಳದಲ್ಲಿ ನಡೆದ ಅಧ್ಯಯನವೊಂದರ ಪ್ರಕಾರ, ಆನ್‍ಲೈನ್‍ನಲ್ಲಿ ದೌರ್ಜನ್ಯದ ಪ್ರಯತ್ನಗಳು ನಡೆದಾಗ ಪೊಲೀಸರನ್ನು ಸಂಪರ್ಕಿಸಿದ ಮಹಿಳೆಯರಿಗೆ ಬಂದ ಸಲಹೆ ‘ಬ್ಲಾಕ್ ಮಾಡಿ ಅಥವಾ ನಿರ್ಲಕ್ಷಿಸಿ’.

ಅತ್ಯಾಚಾರದ ದೃಶ್ಯಗಳನ್ನು ವಿಡಿಯೊ ಮಾಡಿಕೊಂಡು, ನಂತರ ಅದನ್ನು ವೈರಲ್ ಮಾಡುವುದಾಗಿ ಬೆದರಿಸಿ ಮತ್ತೆ ಮತ್ತೆ ಅತ್ಯಾಚಾರ ಎಸಗುವ ಪ್ರವೃತ್ತಿಯೂ ಇಂದು ಹೆಚ್ಚಾಗಿದೆ. 2016ರಲ್ಲಿ ಉತ್ತರ ಭಾರತದಲ್ಲಿ ರೇಪ್ ವಿಡಿಯೊ ವ್ಯಾಪಾರದ ಜಾಲವೇ ಪತ್ತೆಯಾಗಿತ್ತು. ಇವು ಬೆಳಕಿಗೆ ಬಾರದಿರುವುದಕ್ಕೆ ಕಾರಣಗಳೆಂದರೆ ಸಾಮಾಜಿಕ ಕಳಂಕದ ಭಯ, ಕಾನೂನಿನ ಬಗ್ಗೆ ಅಜ್ಞಾನ, ಶಾಲಾ ಕಾಲೇಜು ಹಾಗೂ ಕುಟುಂಬದಲ್ಲಿ ಬೆಂಬಲದ ಕೊರತೆ.

ಅಂತರ್ಜಾಲ- ಮೊಬೈಲ್ ತಂತ್ರಜ್ಞಾನವನ್ನು ಇಂದು ವ್ಯಾಪಕವಾಗಿ ಬಳಸುತ್ತಿರುವ ಕ್ಷೇತ್ರ ಪತ್ರಿಕೋದ್ಯಮ. ಇಲ್ಲಿಯೂ ಪತ್ರಕರ್ತೆಯರಿಗೆ ಅಶ್ಲೀಲ ಜೋಕು- ವಿಡಿಯೊಗಳನ್ನು ರವಾನಿಸುವುದು, ಮುಜುಗರ ತರುವ ಸಂದೇಶಗಳು ಮೊಬೈಲ್‍ನಲ್ಲಿ ಹರಿದಾಡುತ್ತವೆ. ಎಷ್ಟೋ ಬಾರಿ ಈ ರೀತಿಯ ‘ಆನ್‍ಲೈನ್ ಹಿಂಸೆ’ ಯಾವುದಾದರೊಂದು ಮುಖ್ಯವಾದ ವಿಷಯದ ಬಗ್ಗೆ ತನಿಖೆ ನಡೆಸುತ್ತಿರುವ ಮಹಿಳಾ ಪತ್ರಕರ್ತರನ್ನು ಸುಮ್ಮನಾಗಿಸುವ ಒಂದು ತಂತ್ರವಾಗಿಯೂ ಬಳಕೆಯಾಗುತ್ತದೆ. ಇಂಥ ಘಟನೆಗಳಿಂದ ಪ್ರಮುಖ ಸಂಪರ್ಕ ಸುದ್ದಿ ತಾಣಗಳಿಂದ ಪತ್ರಕರ್ತೆಯರು ಹಿಂದೆ ಸರಿಯಬಹುದು, ಮುಖ್ಯವಾಹಿನಿ ಚರ್ಚೆಗಳಲ್ಲಿ ಭಾಗವಹಿಸದಿರಬಹುದು. ಪತ್ರಕರ್ತೆಯರಿಗೇ ಈ ಬಗೆಯ ಅಳಲಾದರೆ, ಇನ್ನು ಸಾಮಾನ್ಯ ಮಹಿಳೆಯರ ಗತಿಯನ್ನು ಊಹಿಸಿಕೊಳ್ಳಬಹುದು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೇನೋ ಇಂತಹ ಸಮಸ್ಯೆಗಳ ಬಗ್ಗೆ ದೂರು ದಾಖಲಿಸಲು ಒಂದು ಇ-ಮೇಲ್ ಸೃಷ್ಟಿಸಿದೆ. ಆದರೆ, ಈ ಇ-ಮೇಲ್‌ಗೆ 2016ರ ಜುಲೈನಿಂದ 2018ರ ಫೆಬ್ರುವರಿವರೆಗೆ ಬಂದ ದೂರುಗಳು ಕೇವಲ 185. ದೂರು ನೀಡುವ ಇಂಥ ಅವಕಾಶದ ಬಗ್ಗೆ ಜನರಲ್ಲಿನ ಮಾಹಿತಿ ಕೊರತೆ ಇದಕ್ಕೆ ಪ್ರಮುಖ ಕಾರಣ ಎನಿಸುತ್ತದೆ.‌

ಬಲವಂತದ ಗರ್ಭಪಾತಗಳು, ಬಾಲ್ಯವಿವಾಹ ಎಲ್ಲವೂ ‘ಒಳಿತಿಗಾಗಿ ನಡೆಯುತ್ತವೆ’ ಎಂಬಂತೆ ಬಿಂಬಿಸಲಾಗುವ ದೌರ್ಜನ್ಯದ ಮುಖಗಳು. ಒಟ್ಟಿನಲ್ಲಿ ಆರ್ಥಿಕವಾಗಿ, ತಾಂತ್ರಿಕವಾಗಿ ನಾವೆಷ್ಟೇ
ಮುಂದುವರಿದಿದ್ದರೂ ಮಹಿಳೆಯ ಮೇಲಿನ ದೌರ್ಜನ್ಯ ನಿಯಂತ್ರಣದಲ್ಲಿ ಮಾತ್ರ ಹಿಂದುಳಿದಿದ್ದೇವೆ ಎಂಬುದು ಸ್ಪಷ್ಟ. ಲಿಂಗಭೇದವಿರದ ಅರಿವು, ಆತ್ಮಸಾಕ್ಷಿ ಮತ್ತು ಮಾನವೀಯತೆ ಮಾತ್ರ, ಈಗಾಗಲೇ ಇರುವ ಕಾನೂನುಗಳು ಪ್ರಾಯೋಗಿಕವಾಗಿ ಉಪಯುಕ್ತ ಎನಿಸುವಂತೆ ಮಾಡಬಲ್ಲವು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT