ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಏಕರೂಪಿಯಲ್ಲ, ಮಾದರಿ ಪಠ್ಯಕ್ರಮ

ಇದರ ಜಾರಿಯಿಂದಾಗುವ ಪ್ರಯೋಜನಕ್ಕಿಂತ ಕಲ್ಪಿತ ಬಾಧಕದ ಕುರಿತೇ ಹೆಚ್ಚು ಚರ್ಚೆ ನಡೆದಿರುವುದು ದುರದೃಷ್ಟಕರ ಸಂಗತಿ
Last Updated 22 ಜೂನ್ 2020, 19:31 IST
ಅಕ್ಷರ ಗಾತ್ರ

ಕರ್ನಾಟಕವು ಐಟಿ-ಬಿಟಿ ಸೇವೆಗಳ ರಫ್ತಿನಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಜೊತೆಗೆ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುವ ಮೂಲಕ, ಜಾಗತಿಕವಾಗಿ ಗಮನ ಸೆಳೆಯುತ್ತಿದೆ. ಈ ಕ್ಷೇತ್ರದ ದಾಖಲಾತಿ ಪ್ರಮಾಣವು 2018-19ರಲ್ಲಿ ಶೇ 28.8ರಷ್ಟಿದ್ದು, 2025ರ ಹೊತ್ತಿಗೆ ಅದನ್ನು ಶೇ 40ಕ್ಕೆ ಏರಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಬರೀ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ ಹೆಚ್ಚಾದರೆ ಸಾಲದು. ಅದರೊಟ್ಟಿಗೆ, ಗುಣಮಟ್ಟದ ಸುಧಾರಣೆಯೂ ಅತ್ಯಗತ್ಯ. ಈ ಪ್ರಯತ್ನದ ಭಾಗವಾಗಿ, ಉನ್ನತ ಶಿಕ್ಷಣ ಇಲಾಖೆಯು ಮಾದರಿ ಪಠ್ಯವನ್ನು ಸಿದ್ಧಪಡಿಸಲು ಮುಂದಾಗಿದ್ದು, ಇದರ ಹಿಂದೆ ಸುಸ್ಪಷ್ಟ ಕಾರಣಗಳಿವೆ. ಹೀಗಾಗಿ, ಇದು ಮಾಧ್ಯಮಗಳಲ್ಲಿ ಚರ್ಚಿತವಾಗಿರುವಂತೆ ಮತ್ತು ಕೆಲವರು ಆರೋಪಿಸಿರುವಂತೆ ಏಕರೂಪಿ ಪಠ್ಯವಲ್ಲ.

ದಿ ನ್ಯಾಷನಲ್ ಅಸೋಸಿಯೇಷನ್ ಆಫ್ ಸಾಫ್ಟ್‌ವೇರ್ ಆ್ಯಂಡ್‌ ಸರ್ವೀಸ್ ಕಂಪನೀಸ್ (NASSCOM), ವಿಶ್ವ ಆರ್ಥಿಕ ವೇದಿಕೆ, ಗಾರ್ಟನರ್ ಇಂಕ್ ಮುಂತಾದ ಸಂಸ್ಥೆಗಳು ವ್ಯವಸ್ಥಿತ ಅಧ್ಯಯನ ನಡೆಸಿ, ಉದ್ಯೋಗ ಹೊಂದಲು ಸಾಮರ್ಥ್ಯವಿರುವ ಪದವೀಧರರ ಸೃಷ್ಟಿಗೆ ಒತ್ತು ನೀಡುವ ಉನ್ನತ ಶಿಕ್ಷಣದ ಅಗತ್ಯವನ್ನು ಎತ್ತಿ ಹಿಡಿದಿವೆ.

ಕರ್ನಾಟಕ ಸರ್ಕಾರದ ಅಧೀನಕ್ಕೆ ಒಳಪಟ್ಟ 30 ವಿಶ್ವವಿದ್ಯಾಲಯಗಳಿದ್ದು, ಅವು ಭೌಗೋಳಿಕ, ಸಾಂಸ್ಕೃತಿಕ ವಿಭಿನ್ನತೆ ಇರುವ ಪ್ರದೇಶ, ಪರಿಸರಗಳಲ್ಲಿ ಸ್ಥಾಪಿತವಾಗಿವೆ. ಅವುಗಳ ಪರಮ ಗುರಿಯಾದ ಗುಣಮಟ್ಟದ ಶಿಕ್ಷಣದ ಸಾಧನೆಗೆ, ಉದ್ದೇಶಿತ ಮಾದರಿ ಪಠ್ಯವು ಪೂರಕವಾಗಿ ಇರಲಿದೆ. ಈ ಖಾತೆಯ ಹೊಣೆ ಹೊತ್ತಿರುವ ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಅವರ ಕಾಳಜಿಯೂ ಇದೇ ಆಗಿದೆ. ಈ ಪ್ರಕ್ರಿಯೆಯಲ್ಲಿ ದೇಶ– ವಿದೇಶಗಳ ವಿಷಯತಜ್ಞರ ಸಲಹೆ- ಸೂಚನೆ ಪಡೆಯಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಯುಜಿಸಿ, ಎಐಸಿಟಿಇ ಇವೇ ಮೊದಲಾದ ನಿಯಂತ್ರಣ ಮಂಡಳಿಗಳ ಮಾರ್ಗಸೂಚಿಯಂತೆ ಬೋಧನಾ ಅವಧಿ, ಪ್ರಾಯೋಗಿಕ ತರಗತಿ, ಸೆಮಿನಾರ್‌ ಇತ್ಯಾದಿಗಳನ್ನು ಅಳವಡಿಸಲು ನಿರ್ದೇಶಿಸಲಾಗಿದೆ.

ಶಿಕ್ಷಣ ಪದ್ಧತಿಯಲ್ಲಿ ಕಾಲಾಂತರದಲ್ಲಿ ಬಹಳಷ್ಟು ಬದಲಾವಣೆಗಳಾಗಿದ್ದು, ಇದಕ್ಕೆ ‘ಶಿಕ್ಷಣ 1.0’, ‘ಶಿಕ್ಷಣ 2.0’, ‘ಶಿಕ್ಷಣ 3.0’ ಮತ್ತು ‘ಶಿಕ್ಷಣ 4.0’ ಸಾಕ್ಷಿಯಾಗಿವೆ. ಈಗ ಜಾಗತಿಕ ಮಟ್ಟದಲ್ಲಿ ‘ಶಿಕ್ಷಣ 4.0’ ಮತ್ತು ‘ಕೈಗಾರಿಕೆ 4.0’ ಚಾಲ್ತಿಯಲ್ಲಿವೆ. ‘ಕೈಗಾರಿಕೆ 4.0’ರಲ್ಲಿ ಕೃತಕ ಬುದ್ಧಿಮತ್ತೆ, ರೊಬೋಟಿಕ್ಸ್, ಬೃಹತ್ ಅಂಕಿ-ಅಂಶಗಳ ವಿಶ್ಲೇಷಣೆಯಂಥ ವಿನೂತನ ವಿಷಯಗಳು ಮಹತ್ವ ಪಡೆದಿದ್ದು, ಅದಕ್ಕೆ ಪೂರಕವಾಗಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸುವ ಜವಾಬ್ದಾರಿ ಉನ್ನತ ಶಿಕ್ಷಣ ಸಂಸ್ಥೆಗಳ ಮೇಲಿದೆ. ಅಂತೆಯೇ ‘ಶಿಕ್ಷಣ 4.0’ ಅಡಿಯಲ್ಲಿ 21ನೇ ಶತಮಾನದ ಅವಶ್ಯಕತೆಗಳಿಗೆ ಅನುಗುಣವಾಗಿ ಪಠ್ಯಕ್ರಮವನ್ನು ಮಾರ್ಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ತನ್ಮೂಲಕ ಪದವೀಧರರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಉದ್ಯೋಗ ಹೊಂದಲು ಅವಕಾಶಗಳು ಹೆಚ್ಚಾಗಬಹುದೆಂಬ ನಿರೀಕ್ಷೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸರಿಹೊಂದುವ ಪಠ್ಯಕ್ರಮವನ್ನು ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಜಾರಿಗೆ ತಂದರೆ, ಈ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಲು ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸಿದಂತಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಪಠ್ಯಕ್ರಮದಲ್ಲಿ ಮಾನವೀಯ ಮೌಲ್ಯಗಳಿಗೆ ಸ್ಥಾನವಿಲ್ಲದ್ದರಿಂದ ಜಪಾನಿನಲ್ಲಿ ‘ಸಮಾಜ 5.0’ ಎಂಬ ಮಾನವಕೇಂದ್ರಿತಸಮಾಜದ ಹೊಸ ಪರಿಕಲ್ಪನೆ ಜನ್ಮತಳೆದಿದೆ. ಇಲ್ಲಿ ಆರ್ಥಿಕ ಪ್ರಗತಿ ಸಾಧಿಸಲು ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಮಾಹಿತಿ ತಂತ್ರಜ್ಞಾನವನ್ನು ವಿಶೇಷವಾಗಿ ಬಳಸಿಕೊಳ್ಳುವುದರ ಜೊತೆಗೆ, ಜನರ ಮಧ್ಯೆ ಪರಸ್ಪರ ಉತ್ತಮ ಬಾಂಧವ್ಯವನ್ನು ಬೆಳೆಸುವ ಗುರಿ ಹೊಂದಲಾಗಿದೆ. ಅಂತೆಯೇ, ಮಾದರಿ ಪಠ್ಯಕ್ರಮದಲ್ಲಿ ಯೋಗ, ನೈತಿಕ ಮೌಲ್ಯಗಳು, ಸೈಬರ್ ಅಪರಾಧದ ವಿರುದ್ಧ ಜಾಗೃತಿ, ಪರಿಸರ ಕಾಳಜಿ, ಸಂವಿಧಾನ ಇವೇ ಮೊದಲಾದವನ್ನು ಅಳವಡಿಸಲು ಸೂಚಿಸಲಾಗಿದೆ.

ಮಾದರಿ ಪಠ್ಯದ ಜಾರಿಯಿಂದಾಗುವ ಸಾಧಕಗಳ ಕುರಿತು ಕಿಂಚಿತ್ತೂ ವಿವೇಚಿಸದೆ, ಅದರಿಂದ ಆಗುತ್ತವೆ ಎನ್ನಲಾದ ಬಾಧಕಗಳ ಕುರಿತು ಕೆಲವರು ಹುರುಳಿಲ್ಲದ ಚರ್ಚೆಯಲ್ಲಿ ತೊಡಗಿರುವುದು ದುರದೃಷ್ಟಕರ. ಇದರಲ್ಲಿ ಪ್ರಾದೇಶಿಕ ವಿಭಿನ್ನತೆಗೆ ತಕ್ಕಂತೆ ಸೂಕ್ತ ಪಠ್ಯ ರೂಪಿಸಲು ಅವಕಾಶವಿಲ್ಲ ಎಂದು ಕೆಲವರು ದೂರುತ್ತಾರೆ. ಆದರೆ, ಕೆಲವು ವಿಷಯಗಳಲ್ಲಿ ಅಗತ್ಯ ಇದ್ದಾಗ ಪ್ರಾದೇಶಿಕ ವಿಭಿನ್ನತೆಗೆ ತಕ್ಕಂತೆ ಪಠ್ಯವನ್ನು ಮಾರ್ಪಾಡು ಮಾಡಲು ಸಂಬಂಧಿಸಿದ ವಿಶ್ವವಿದ್ಯಾಲಯಕ್ಕೆ ಅವಕಾಶ ಕಲ್ಪಿಸಬಹುದಾಗಿದೆ.

ಇತ್ತೀಚೆಗೆ ಬಿಡುಗಡೆಯಾದ ವಿಶ್ವ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಕರ್ನಾಟಕದ ಒಂದೇ ಒಂದು ವಿಶ್ವವಿದ್ಯಾಲಯವೂ ಮೊದಲ 1,000 ರ‍್ಯಾಂಕ್‌ಗಳಲ್ಲಿಯೂ ಇರದಿರುವುದು ಹಾಗೂ ಎನ್‌ಐಆರ್‌ಎಫ್‌ ರ‍್ಯಾಂಕಿಂಗ್‍ನಲ್ಲಿ ಮೊದಲ 100 ಸ್ಥಾನಗಳಲ್ಲಿ ಕರ್ನಾಟಕ ಸರ್ಕಾರದ ಅಧೀನಕ್ಕೆ ಒಳಪಟ್ಟ ನಾಲ್ಕು ವಿಶ್ವವಿದ್ಯಾಲಯಗಳಷ್ಟೇ ಸ್ಥಾನ ಪಡೆದಿರುವುದು ದುರದೃಷ್ಟಕರ. ಇದು, ಶಿಕ್ಷಣ ಪದ್ಧತಿಯಲ್ಲಿ ಗುಣಮಟ್ಟದ ಸುಧಾರಣೆಯ ಅವಶ್ಯಕತೆಯನ್ನು ಬಿಂಬಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಇಲಾಖೆಯ ಉದ್ದೇಶಿತ ಮಾದರಿ ಪಠ್ಯಕ್ರಮವು ಒಂದು ಪ್ರಬಲ ಉಪಕ್ರಮ ಎಂಬುದು ನಿಸ್ಸಂಶಯ.

ಲೇಖಕ: ಕಾರ್ಯನಿರ್ವಾಹಕ ನಿರ್ದೇಶಕ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT