ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ‍್ವಾದೆ ಮುಖ್ಯ ಕಲಾ... ಮರ‍್ವಾದೆ !

Last Updated 11 ಜುಲೈ 2019, 19:30 IST
ಅಕ್ಷರ ಗಾತ್ರ

‘ಘಾತ ಆಯ್ತು ಮೇಷ್ಟ್ರೇ, ಘಾತ ಆಯ್ತು’ ಆತಂಕದಲ್ಲಿ ಓಡಿ ಬಂದ ಮುದ್ದಣ್ಣ. ‘ಅಂಥದ್ದೇನಾಯ್ತು, ನನಗೇನಾದ್ರೂ ಅವಾರ್ಡ್‌ ಬಂತಾ’ ಆಗ ತಾನೇ ಬಾಯಿಗೆ ತುಂಬಿಕೊಂಡಿದ್ದ ಎಲೆ ಅಡಿಕೆ ಉಗಿದು ಕೇಳಿದ್ರು ಮೇಷ್ಟ್ರು.

‘ಅಂಥಾ ದೊಡ್ಡ ಅನಾಹುತವೇನೂ ಆಗಿಲ್ಲ ಮೇಷ್ಟ್ರೇ, ನಮ್ ಕಂಪನಿಯ ಎಲ್ಲ ಕಲಾವಿದರನ್ನ ಬೇರೆ ಕಂಪನಿಯವರು ಕಿಡ್ನಾಪ್ ಮಾಡಿದಾರೆ.. ನಾಳೆನೇ ಷೋ... ಈಗ ಏನ್ಮಾಡೋದು’ ಬಹುಮತ ಕಳೆದುಕೊಂಡ ಸಿಎಂ ರೀತಿ ಕೈ ಕೈ ಹಿಸುಕಿಕೊಳ್ಳುತ್ತಾ ಮುದ್ದಣ್ಣ ನಿಂತ.
‘ಅಂಥಾ ನೂರಾರು ಕಲಾವಿದರನ್ನ ಹುಟ್ಟು ಹಾಕೋ ಶಕ್ತಿ ನಂಗಿದೆ. ಹೋಗು, ಇಲ್ಲೇ ವಿಧಾನಸೌಧದ ಸುತ್ತ - ಮುತ್ತ ಓಡಾಡೋ ಹದಿನೈದು ಜನಾನ ಎತ್ತಾಕಿಕೊಂಡು ಬಾ... ಅವರ ಕೈಯಿಂದ್ಲೇ ನಾಟಕ ಮಾಡ್ಸೋಣ’ ಮೇಷ್ಟ್ರು ಫುಲ್ ಕಾನ್ಫಿಡೆನ್ಸ್ ನಲ್ಲಿ ಹೇಳಿದ್ರು.
‘ವಿಧಾನಸೌಧದ ಬಳಿ ಇರೋರೇ ಏಕೆ ಮೇಷ್ಟ್ರೇ’

‘ಮಾಡಿ ಕಲಿಯೋರಿಗಿಂತ ನೋಡಿ ಕಲಿಯೋರೆ ಹೆಚ್ಚು ಕಣೋ... ಅಭಿನಯಕ್ಕೆ ಸ್ಪೂರ್ತಿ ಸಿಗೋ ಸ್ಥಳ ಅದು.. ಬೇಗ ಹೋಗು’.
15 ಜನರನ್ನ ತುಂಬಿಕೊಂಡಿದ್ದ ಮಿನಿ ಲಾರಿ ಥಿಯೇಟರ್ ಮುಂದೆ ಬಂದು ನಿಂತಿತು.

‘ಏನ್ ಕಥೆ ಮೇಷ್ಟ್ರೇ, ಯಾವ ಪಾಲ್ಟು ಮಾಡಬೇಕು ನಾನು’ ಅತ್ಯುತ್ಸಾಹದಲ್ಲಿದ್ದ ಯುವಕನೊಬ್ಬ ಕೇಳ್ದ.

‘ಕಥೆ ಹೇಳೋಕೆ ಟೈಮಿಲ್ಲ. ಮಹಾಭಾರತ, ರಾಮಾಯಣ, ರಾಜಕಾರಣ ಯಾವುದನ್ನಾದರೂ ಸೆಲೆಕ್ಟ್ ಮಾಡ್ಕೊಳಿ, ಒಳ್ಳೆ ಆಕ್ಟಿಂಗ್ ಮಾಡಬೇಕು, ಜನ್ರಿಗೆ ಎಂಟರ್‌ಟೇನ್ಮೆಂಟ್‌ ಬೇಕು ಅಷ್ಟೇ’ ಮೇಷ್ಟ್ರು ಸಿಂಪಲ್ ಕಂಡಿಷನ್ ಹಾಕಿದ್ರು.

‘ನೀ ಸನಿಹಕೆ ಬಂದರೆ ಹೃದಯದ ಗತಿಯೇನು, ಹೇಳು ನೀನು, ನೀನೇ ಹೇಳು’ ಹಾಡಿಗೆ ತದ್ವಿರುದ್ಧವಾಗಿ ನಟಿಸುತ್ತಾ ಹೇಳ್ದ ಕುಮಾರ.
‘ಲವ್ ಫೀಲಿಂಗ್ಸ್ ಎಲ್ಲ ಬೇಡಪ್ಪ, ಪಾಲಿಟಿಕ್ಸ್ ಇರಲಿ, ಪಾಲಿಟಿಕ್ಸ್’ ಮೇಷ್ಟ್ರು ಹೇಳಿದ್ರು.

‘ಇದೂ ರಾಜಕೀಯವೇ ಮೇಷ್ಟ್ರೆ. ರಾಜೀನಾಮೆ ಪತ್ರ ಕೈಯಲ್ಲಿ ಹಿಡಿದುಕೊಂಡು ಬಂದ ಎಮ್ಮೆಲ್ಲೆನ ನೋಡಿ ಹೈಕಮಾಂಡ್ ಲೀಡರ್ ಹೇಳೋ ಹಾಡಿದು. ಈಗ ಇನ್ನೊಂದು ಸಲ ಹಾಡಿಕೊಳ್ಳಿ ಅರ್ಥ ಆಗುತ್ತೆ’ ನಕ್ಕ ಕುಮಾರ.

‘ಒಂದೇ ಒಂದು ಆಸೆ ನಂದು, ಐವತ್ತು ಕೋಟಿ ಬೇಕು.. ಸಣ್ಣದೊಂದು ಪೋಸ್ಟು ಬೇಕು, ಮಿನಿಸ್ಟರ್ ಆದ್ರೆ ಸಾಕು’ ಸುದೀಪ್ ಸ್ಟೈಲ್ ನಲ್ಲಿ ಹಾಡತೊಡಗಿದ ನಾಗೇಶ.

‘ಬರೀ ಸಿನಿಮಾ ಹಾಡು ಬೇಡ... ಪುರಾಣವೂ ಇರಲಿ, ಪುರಾಣ ಪುರಾಣ’ ಎಕೊ ಮೈಕ್ ನುಂಗಿದವರಂತೆ ಎರಡೆರಡು ಸಲ ಹೇಳಿದ್ರು ಮೇಷ್ಟ್ರು.

‘ಆರವಮಂನರ‍್ಜಿನಾಗ ಕಂಠೀರವ ರವಮಂ ನಿರಸ್ತಘನರವಮಂ ಕೋಪಾರುಣ ನೇತ್ರಂ ಕೇಳ್ದಾ ನೀರೊಳಗರ‍್ದುಂ ಬೆರ‍್ತನುಲಗಪತಾಕಂ’ ರಾಗವಾಗಿ ಹೇಳತೊಡಗಿದ ಧಾರವಾಡದ ನಿಂಗಣ್ಣ. ‘ಅಯ್ಯಯ್ಯೋ, ಅಷ್ಟು ಡೀಪ್ ಪುರಾಣ ಬೇಡಪ್ಪ, ಪ್ರೇಕ್ಷಕರನ್ನ ಫಟ್ ಅಂತಾ ತಲುಪಬೇಕು ನೀನು ಹೇಳೋದು’ ಸಿಟ್ಟು ಬಂದರೂ ಸಹನೆಯಿಂದ ಹೇಳಿದ್ರು ಮೇಷ್ಟ್ರು.

‘ಎಗರಿಸಿಕೊಂಡ್ ಹೋಗಾಕ್ ಬಂದಿದ್ದ ಕನಕಪುರದ ಭೀಮ್ಯಾನ ಕಂಡು, ರೆಸಾರ್ಟ್‌ನಎ. ಸಿ ಕೋಣಿಯೊಳಗಿದ್ದರೂ ಕೌರವ ಪಾಟೀಲ ಬೆವರಾಕ್ಹತ್ತ’ ಧಾರವಾಡ ಸ್ಟೈಲಲ್ಲೇ ಹೇಳ್ದ ನಿಂಗಣ್ಣ.

‘ಜನ್ರ ಹಾರ್ಟ್‌ ಟಚ್ ಮಾಡಬೇಕಪ್ಪ, ಅಂಥ ಡೈಲಾಗ್ ಹೇಳ್ರಿ’ ತಲೆ ಚಚ್ಕೊಳ್ತಾ ಹೇಳಿದ್ರು ಮೇಷ್ಟ್ರು.

ದ್ರೌಪದಿ ವೇಷದಲ್ಲಿದ್ದ ಮಂಡ್ಯದ ನಾಣಿ ಪಕ್ಕದಲ್ಲಿದ್ದವನನ್ನ ನೋಡ್ತಾ ಹೇಳತೊಡಗಿದ, ‘ಜೂಜು ಆಡ್ತಿ ಏನ್ಲಾ ಜೂಜು ಬಡ್ಡೆತದೆ.. ಇಂಥಾ ಜೂಜಾಟದಾಗೆಲ್ಲ ಗೆಲ್ಲೋರು ಕೆಟ್ಟೆವ್ರೇಯಾ... ಪಾಂಡವರೇ ಆಡಿದ್ರು ಅಂತಾ ನೀನು ಆಡೋಕಾಯ್ತದಾ... ಅದು ಪುರಾಣ, ಇದು ಪ್ರಾಕ್ಟಿಕಲ್ಲು... ಏನೇ ಮಾಡಿದ್ರೂ ಮರ‍್ವಾದೆ ಮುಖ್ಯ ಕಲಾ.. ಮರ‍್ವಾದೆ...’

ನಾಣಿಯ ನಯನ ಘೋರ- ಕರ್ಣ ಕಠೋರ ಅಭಿನಯವನ್ನು ಕಂಡು ಮೇಷ್ಟ್ರು ಹೇಳಿಕೊಂಡರು, ವಿಧಾನ ಸೌಧದ ಸುತ್ತ ಓಡಾಡಿಯೇ ಈ ನನ್ಮಕ್ಳು ಇಂಥಾ ಅಭಿನಯ ಮಾಡ್ತಿದಾರೆ ಅಂದ್ರೆ, ವಿಧಾನಸೌಧದ ಒಳಗಿರೋರು ಇನ್ನೆಂಥ ಆ್ಯಕ್ಟಿಂಗ್ ಮಾಡಬಹುದು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT