ಕೈಗಾರಿಕೆಗಳ ಅಡ್ಡ ಪರಿಣಾಮಗಳು ಒಂದು ಪ್ರದೇಶವನ್ನು ಎಷ್ಟೆಲ್ಲ ಬಾಧಿಸಬಹುದು ಎನ್ನುವುದಕ್ಕೆ ಕೊಪ್ಪಳ ಜಿಲ್ಲೆ ನಿದರ್ಶನದಂತಿದೆ. ಕಬ್ಬಿಣ ಸಂಬಂಧಿ ಉದ್ದಿಮೆಗಳ ಕೇಂದ್ರವಾಗಿ ಬೆಳೆದಿರುವ ಕೊಪ್ಪಳ, ಈಗ ಕಾರ್ಖಾನೆಗಳ ಕಬಂಧ ಬಾಹುಗಳಿಗೆ ಸಿಲುಕಿ ಏದುಸಿರು ಬಿಡುತ್ತಿದೆ.

ಒಂದು ವರದಿಯ ಪ್ರಕಾರ, ಕೊಪ್ಪಳ ತಾಲ್ಲೂಕಿನ ಐದಾರು ಕಿ.ಮೀ. ವ್ಯಾಪ್ತಿಯ ಗ್ರಾಮೀಣ ಪ್ರದೇಶದಲ್ಲಿ 200ಕ್ಕೂ ಹೆಚ್ಚಿನ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಸುಮಾರು 24 ಕಬ್ಬಿಣ ಸಂಬಂಧಿ ದೊಡ್ಡ ಕಾರ್ಖಾನೆಗಳಲ್ಲಿ 13 ಸ್ಪಾಂಜ್ ಕಬ್ಬಿಣ ಕಾರ್ಖಾನೆಗಳಾಗಿವೆ. ಇವುಗಳನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ‘ಕೆಂಪು’ ಕಾರ್ಖಾನೆಗಳೆಂದು ವರ್ಗೀಕರಿಸಿದೆ. ಮಂಡಳಿಯ ಪ್ರಕಾರ, ಕೆಂಪು ಘಟಕಗಳು ಅತ್ಯಂತ ವಿಷಕಾರಕ ಮಾಲಿನ್ಯ ಉಂಟು ಮಾಡುವ ಕಾರ್ಖಾನೆಗಳಾಗಿವೆ.

ಕೊಪ್ಪಳ ತಾಲ್ಲೂಕಿನ ಕೈಗಾರಿಕಾ ಪ್ರದೇಶದ ಗ್ರಾಮಗಳಲ್ಲಿ ಮಾಲಿನ್ಯ ಸೂಚ್ಯಂಕವು ಶಿಫಾರಸು ಮಾಡಿದ ಮಟ್ಟಕ್ಕಿಂತ ಅದೆಷ್ಟೋ ಪಟ್ಟು ಅಧಿಕವಾಗಿದೆ. ಇಲ್ಲಿನ ಕಾರ್ಖಾನೆಗಳು ಕಲ್ಲಿದ್ದಲನ್ನು ಬಳಸಿ ಶಾಖೋತ್ಪನ್ನ ಇಂಧನ ಉತ್ಪಾದನೆ ಯಲ್ಲಿಯೂ ತೊಡಗಿವೆ. ಒಟ್ಟಾರೆ ಈ ಪ್ರದೇಶದಲ್ಲಿ ಯಾವುದೇ ಮಾನದಂಡವಿಲ್ಲದ ಕಾರಣವಾಗಿ ಕಾರ್ಖಾನೆಗಳ ಸಾಂದ್ರತೆ ಮಿತಿಮೀರಿ ಬೆಳೆದಿದೆ. ಈ ಎಲ್ಲ ಕಾರ್ಖಾನೆಗಳು ದೊಡ್ಡ ಪ್ರಮಾಣದ ಮಾಲಿನ್ಯಕಾರಕ ಘಟಕಗಳಾಗಿವೆ. ಇವು ತಮ್ಮ ನೂರಕ್ಕೂ ಹೆಚ್ಚಿನ ಚಿಮಣಿಗಳಿಂದ ಹೊಗೆಯನ್ನು, ಕಪ್ಪು ಕಿಟ್ಟವನ್ನು ಉಗುಳುತ್ತಿವೆ. ಕಲ್ಲಿದ್ದಲಿನ ದೂಳು ಮತ್ತು ಬೂದಿ ಜನರ ಆರೋಗ್ಯವನ್ನು ಹಾಳು ಮಾಡಿದೆ. ಮೊದಲೇ ಇಲ್ಲಿನ ಅಂತರ್ಜಲವು ಫ್ಲೋರೈಡ್ಯುಕ್ತವಾಗಿದೆ. ಈಗ ಕಾರ್ಖಾನೆಗಳ ದೂಳು, ಹೊಗೆ, ಕಪ್ಪುಕಿಟ್ಟ ಜಲಮೂಲ ಸೇರುತ್ತಿದೆ. ನದಿ–ಹಳ್ಳಗಳಿಗೆ ಕಾರ್ಖಾನೆಗಳು ಬಿಡುವ ವಿಷಯುಕ್ತ ತಾಜ್ಯದಿಂದ ಕುಡಿಯುವ ನೀರು ನಂಜಾಗಿದೆ, ಗಾಳಿಯು ಉಸಿರಾಟಕ್ಕೆ ಯೋಗ್ಯವಾಗಿಲ್ಲ.

ಮರಗಿಡಗಳ ಮೇಲೆ ಮತ್ತು ಕೃಷಿ ಬೆಳೆಗಳ ಮೇಲೆ ಕಾರ್ಖಾನೆಯ ಮಾಲಿನ್ಯಕಾರಕ ಕಣಗಳು ದಟ್ಟವಾಗಿ ಕೂರುವುದರಿಂದ ದ್ಯುತಿಸಂಶ್ಲೇಷಣಾ ಪ್ರಕ್ರಿಯೆಯು ಕುಂಠಿತ ಗೊಂಡಿದೆ. ಪರಿಣಾಮವಾಗಿ, ಬೆಳೆಗಳ ಇಳುವರಿ ಕುಸಿದಿದೆ. ತೋಟಗಾರಿಕಾ ಬೆಳೆಗಳು ನೆಲಕಚ್ಚಿವೆ. ಅನೇಕ ರೈತರು ಉಳುಮೆ ಮಾಡುವುದನ್ನೇ ಕೈಬಿಟ್ಟಿದ್ದಾರೆ.

ಕೊಪ್ಪಳ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿನ ಊರೊಟ್ಟಿಗಿನ ಸಂಪನ್ಮೂಲಗಳಾದ ಕೆರೆ, ಕಟ್ಟೆ, ಗೋಮಾಳ, ಗೋಕಟ್ಟೆ, ಹಳ್ಳ, ಕೆರೆಅಂಗಳ ಮುಂತಾದವುಗಳನ್ನು ಸೇರಿಸಿ ಕೊಂಡು ಕಾರ್ಖಾನೆಗಳು ಒತ್ತುವರಿ ಮಾಡಿಕೊಂಡಿವೆ ಇಲ್ಲವೇ ಸರ್ಕಾರವೇ ಪರಭಾರೆ ಮಾಡಿದೆ. ತಾಲ್ಲೂಕಿನ ಬಸಾಪುರ ಗ್ರಾಮದ 44.35 ಎಕರೆ ವಿಸ್ತೀರ್ಣದ ಕೆರೆಯನ್ನು ಉದ್ದಿಮೆ ಯೊಂದು ತನ್ನ ಖಾಸಗಿ ಆಸ್ತಿಯನ್ನಾಗಿ ಮಾಡಿಕೊಂಡಿದೆ; ಸಾರ್ವಜನಿಕರಿಗೆ, ದನಕರುಗಳಿಗೆ, ಕುರಿ–ಮೇಕೆಗಳಿಗೆ ಅಲ್ಲಿನ ನೀರು ದೊರೆಯದಂತೆ ಮಾಡಿದೆ. ಬೃಹತ್ ಕೆರೆಯ ಸುತ್ತಲೂ ಗೋಡೆ ಕಟ್ಟಿ, ತನ್ನ ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡಿದೆ.

ಊರೊಟ್ಟಿಗಿನ ಸಂಪನ್ಮೂಲದ ಪರಭಾರೆ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ 2011ರಲ್ಲಿ ತೀರ್ಪು ನೀಡಿ, ಗ್ರಾಮೀಣ ಪ್ರದೇಶ ದಲ್ಲಿ ಕಾನೂನುಬಾಹಿರವಾಗಿ ಊರೊಟ್ಟಿಗಿನ ಸಂಪನ್ಮೂಲವನ್ನು ವಶಪಡಿಸಿಕೊಂಡಿರುವ ವ್ಯಕ್ತಿಗಳಿಂದ–ಉದ್ದಿಮೆಗಳಿಂದ ಅವು ಗಳನ್ನು ಮುಕ್ತಗೊಳಿಸಿ ಸಾರ್ವಜನಿಕರಿಗೆ ದೊರೆಯುವಂತೆ ಮಾಡುವುದಕ್ಕೆ ಸರ್ಕಾರವು ಕ್ರಮ ತೆಗೆದುಕೊಳ್ಳಬೇಕೆಂದು ನಿರ್ದೇಶನ ನೀಡಿದೆ. ಆ ನಿರ್ದೇಶನ ಕೊಪ್ಪಳದಲ್ಲಿ ಅನುಷ್ಠಾನಕ್ಕೆ ಬರಬೇಕಾಗಿದೆ.

ಹಿರೆಬದನಾಳ, ಕಿರೆಬದನಾಳ, ಗಿಣಿಗೇರ, ಕಾಸನಕಿಂಡಿ, ಲಚ್ಚನಕೆರೆ, ಕುರ್ಕಿಹಳ್ಳಿ, ಹ್ಯಾಟಿ, ಕನಕಪುರ, ಅಲ್ಲಾನಗರ, ಕುಣಿಕೇರ, ಕುಣಿಕೇರ ತಾಂಡ, ಹಾಲವರ್ತಿ ಮುಂತಾದ ಗ್ರಾಮಗಳ ಮಹಿಳೆಯರು ಮತ್ತು ಮಕ್ಕಳು ಮಾಲಿನ್ಯ ಸಂಬಂಧಿ ರೋಗಗಳನ್ನು ಎದುರಿಸುತ್ತಿದ್ದಾರೆ. ಪಿಎಂ 2.5 ಮತ್ತು ಪಿಎಂ 10 ಮಾಲಿನ್ಯದ ಪ್ರಮಾಣವು ಶಿಫಾರಸು ಮಾಡಿದ ಪ್ರಮಾಣಕ್ಕಿಂತ ಅಧಿಕವಾಗಿದೆ. ಅಂತಹ ಮಾಲಿನ್ಯಕಾರಕ ಗಾಳಿಯ ಸೇವನೆಯಿಂದ ಶ್ವಾಸಕೋಶ ಸಂಬಂಧಿತ ಕಾಯಿಲೆಗಳು ಸಾಮಾನ್ಯವಾಗಿವೆ. ಮಕ್ಕಳು ಚರ್ಮದ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಮನೆಗಳು, ಗುಡಿಗಳು, ಬೆಳೆಗಳು, ಮರಗಿಡಗಳು ಕಾರ್ಖಾನೆಗಳು ಉಗುಳುವ ಕಿಟ್ಟದಿಂದಾಗಿ ಕಪ್ಪು ಬಣ್ಣಕ್ಕೆ ತಿರುಗಿವೆ. ಕೈಗಾರಿಕಾ ತ್ಯಾಜ್ಯವನ್ನು ಶುದ್ಧೀಕರಿಸದೆ ನದಿಗಳಿಗೆ, ಹಳ್ಳಗಳಿಗೆ, ಬಯಲಿಗೆ ಹರಿಯಬಿಡುತ್ತಿರುವುದರಿಂದ ನೀರು, ಅಂತರ್ಜಲ, ಮಣ್ಣು ಮಾಲಿನ್ಯಕ್ಕೆ ಒಳಗಾಗು ತ್ತಿವೆ. ತುಂಗಭದ್ರಾ ನದಿಯ ಹಿನ್ನೀರಿಗೆ ಅಂಟಿಕೊಂಡ ಪ್ರದೇಶದಲ್ಲಿ ಕಾರ್ಖಾನೆಗಳು ಇರುವುದರಿಂದ ಆ ನದಿಯೂ ಮಾಲಿನ್ಯಕ್ಕೆ ಒಳಗಾಗಿದೆ.

ಅಭಿವೃದ್ಧಿಯು ಜನರ ಜೀವನ ಮತ್ತು ಜೀವನೋಪಾ ಯಕ್ಕೆ ಸಂಬಂಧಿಸಿದ ಸಂಗತಿ ಎಂಬುದನ್ನು ಸರ್ಕಾರಗಳು ಮತ್ತು ನೀತಿನಿರೂಪಕರು ಮನದಟ್ಟು ಮಾಡಿಕೊಳ್ಳಬೇಕು. ರಸ್ತೆ, ಇಂಧನ, ಕೈಗಾರಿಕೆ, ಮುಂತಾದವು ಅಭಿವೃದ್ಧಿಗೆ ಅಗತ್ಯ. ಆದರೆ, ಅವೇ ಅಭಿವೃದ್ಧಿಯಲ್ಲ. ಇವೆಲ್ಲವೂ ಅಭಿವೃದ್ಧಿಯ ಸಾಧನಗಳಷ್ಟೇ.

ಕೊಪ್ಪಳದ ಪರಿಸರದಲ್ಲಿನ ಕೈಗಾರಿಕೆಗಳ ಉತ್ಪಾದನಾ ಸಾಮರ್ಥ್ಯದ ವಿಸ್ತರಣೆಗೆ ಸರ್ಕಾರ ಅನುಮತಿ ನೀಡಬಾರದು. ಕೇಂದ್ರ ಪರಿಸರ ಇಲಾಖೆ ಶಿಫಾರಸು ಮಾಡಿರುವಂತೆ, ತೀವ್ರ ವಾಗಿ ಮಾಲಿನ್ಯವನ್ನು ಹರಡುತ್ತಿರುವ ಕಾರ್ಖಾನೆಗಳನ್ನು ಮುಚ್ಚುವ ಮತ್ತು ಕೆಲವನ್ನು ಸ್ಥಳಾಂತರಿಸುವ ಆದೇಶವನ್ನು ಅನುಷ್ಠಾನಗೊಳಿಸಬೇಕು. ಪರಭಾರೆಯಾಗಿರುವ ಮತ್ತು ಒತ್ತುವರಿಯಾಗಿರುವ ಸಂಪನ್ಮೂಲಗಳನ್ನು ಸರ್ಕಾರ ವಶ ಪಡಿಸಿಕೊಳ್ಳಬೇಕು. ಬಸಾಪುರದ ಕೆರೆಯನ್ನು ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಬೇಕು.

ಕಾರ್ಖಾನೆಗಳ ಮಾಲಿನ್ಯ ಸಮಸ್ಯೆ ಹಾಗೂ ಅದರಿಂದ ಜನರು ಎದುರಿಸುತ್ತಿರುವ ಸಂಕಷ್ಟಗಳ ಕುರಿತಂತೆ ವಿಸ್ತೃತ ಅಧ್ಯಯನ ನಡೆಸಲು ತಜ್ಞರ ಸಮಿತಿ ನೇಮಿಸುವುದು ಸೇರಿದಂತೆ, ಕೊಪ್ಪಳ ಜಿಲ್ಲೆಯ ಜನರ ಹಿತಾಸಕ್ತಿಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.