ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ವರ್ತನೆಯ ಕಲಿಕೆಗೂ ಬೇಕು ಪಠ್ಯ!

ಎಲ್ಲಾ ವಿಧದ ಸಭೆಗಳ ನಡಾವಳಿಯ ಮೂಲದ್ರವ್ಯ ‘ರಾಬರ್ಟ್ಸ್‌ ರೂಲ್ಸ್’
Last Updated 18 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಹೆನ್ರಿ ಮಾರ್ಟಿನ್ ರಾಬರ್ಟ್ ಅಮೆರಿಕದ ಸೇನೆಯಲ್ಲಿ ಮೇಜರ್ ಹುದ್ದೆಯಲ್ಲಿದ್ದವರು. ಒಮ್ಮೆ ಚರ್ಚ್ ಒಂದರ ಸಾರ್ವಜನಿಕ ಸಭೆಯ ಅಧ್ಯಕ್ಷ ಸ್ಥಾನಕ್ಕೆ ಅವರನ್ನು ಬಲವಂತವಾಗಿ ಕೂರಿಸಲಾಗುತ್ತದೆ. ಅವರಿಗೋ ಇದು ತೀರಾ ಅನಿರೀಕ್ಷಿತ. ವಿವಿಧ ಹಿನ್ನೆಲೆಯ, ವಿಭಿನ್ನ ಸಂಸ್ಕೃತಿಯ, ಬೇರೆ ಬೇರೆ ಪ್ರಾಂತ್ಯಗಳಿಂದ ಬಂದ ಸಭಿಕರಿಂದ ತುಂಬಿದ್ದ ಸಭೆಯನ್ನು ನಿಯಂತ್ರಿಸಲಾಗದೆ ರಾಬರ್ಟ್ ತುಂಬಾ ಮುಜುಗರ ಅನುಭವಿಸುತ್ತಾರೆ. ಸಭೆಯನ್ನು ವ್ಯವಸ್ಥಿತವಾಗಿ ನಡೆಸಲು ಕಲಿಯದೆ ಇನ್ನು ಮುಂದೆ ಯಾವುದೇ ಸಂದರ್ಭದಲ್ಲೂ ಅಧ್ಯಕ್ಷ ಸ್ಥಾನದಲ್ಲಿ ಕೂರಬಾರದೆಂದು ನಿರ್ಧರಿಸಿದವರೇ ಈ ಕುರಿತಾಗಿ ವಿವಿಧ ಮೂಲಗಳಿಂದ ಮಾಹಿತಿ ಕಲೆಹಾಕಿ, 1876ರಲ್ಲಿ ‘ರಾಬರ್ಟ್ಸ್‌ ರೂಲ್ಸ್ ಆಫ್ ಆರ್ಡರ್’ ಎಂಬ ಪುಸ್ತಕವನ್ನು ಹೊರತರುತ್ತಾರೆ. ಈ ಹೊತ್ತಗೆಯೇ ಅಧ್ಯಕ್ಷತೆ ಮತ್ತು ಸಂಸದೀಯ ನಡವಳಿಕೆಗಳ ಬೈಬಲ್ ಎಂದು ಖ್ಯಾತಿ ಪಡೆದಿದೆ. ಸಭೆಗಳನ್ನು ವ್ಯವಸ್ಥಿತವಾಗಿ ನಡೆಸುವುದರ ಮೂಲಕ ಉದ್ದೇಶಗಳನ್ನು ಮುಟ್ಟುವ ದಿಸೆಯಲ್ಲಿ ಇದು ಸಾರ್ವಕಾಲಿಕ ಮಾರ್ಗದರ್ಶಿ.

ಅಮೆರಿಕ, ಬ್ರಿಟನ್ ಸೇರಿದಂತೆ ಇಂಗ್ಲಿಷ್ ಮಾತನಾಡುವ ಜಗತ್ತಿನ ಬಹುತೇಕ ರಾಷ್ಟ್ರಗಳು ರಾಬರ್ಟ್‌ ನಿಯಮಗಳನ್ನು ಅಳವಡಿಸಿಕೊಂಡಿವೆ. ಸರ್ಕಾರಗಳಷ್ಟೇ ಅಲ್ಲದೆ, ಅಲ್ಲಿನ ಸಂಘ-ಸಂಸ್ಥೆಗಳು ಸಭೆಗಳನ್ನು ನಡೆಸುವುದು ಈ ನಿಯಮಗಳ ಮೇಲೆಯೆ. ನಂತರದಲ್ಲೂ ಪರಿಣತರು, ಸಂಘ, ಸಂಸ್ಥೆಗಳ ಸಲಹೆಗಳನ್ನು ಆಧರಿಸಿ ರಾಬರ್ಟ್ ತಮ್ಮ ಪುಸ್ತಕವನ್ನು ನಾಲ್ಕು ಬಾರಿ ಪರಿಷ್ಕರಿಸಿದರು. ಇವರ ಕಾಲಾನಂತರವೂ ಇದೇ ಉದ್ದೇಶಕ್ಕಾಗಿ ರೂಪುಗೊಂಡ ‘ರಾಬರ್ಟ್ಸ್‌ ರೂಲ್ಸ್ ಅಸೋಸಿಯೇಶನ್’ ಎಂಬ ಸಂಸ್ಥೆ ಈ ಪುಸ್ತಕವನ್ನು ನಿಯಮಿತವಾಗಿ ನವೀಕರಿಸುತ್ತಿದ್ದು, ಈ ವರ್ಷ 12ನೇ ಪರಿಷ್ಕೃತ ಆವೃತ್ತಿ ಹೊರತಂದಿದೆ.

ನಮ್ಮ ದೇಶದಲ್ಲಿ ಸಂಸತ್ತು, ವಿಧಾನಮಂಡಲ, ಸ್ಥಳೀಯ ಸಂಸ್ಥೆಗಳಲ್ಲಿ ಎಲ್ಲಾ ವಿಧದ ಸಭೆಗಳು ನಡೆಯುವುದು ‘ಮ್ಯಾನ್ಯುಯಲ್ ಆಫ್ ಪಾರ್ಲಿಮೆಂಟರಿ ಪ್ರೊಸೀಜರ್ಸ್‌’ ಆಧಾರದ ಮೇಲೆ. ಇದರ ಮೂಲದ್ರವ್ಯವೂ ರಾಬರ್ಟ್ಸ್‌ ರೂಲ್ಸ್. ರೋಟರಿ, ಲಯನ್ಸ್, ಜೆಸಿಐನಂತಹ ಅಂತರರಾಷ್ಟ್ರೀಯ ಸಂಸ್ಥೆಗಳು, ಸ್ಥಳೀಯ ಕೂಟಗಳು, ಸಹಕಾರ ಸಂಘಗಳು ಸಭೆಯನ್ನು ನಡೆಸುವಾಗ ಪಾಲಿಸಬೇಕಾದ ನಿಯಮಗಳು ಇದೇ ಮೂಲದಿಂದ ಬಂದವು.

ಕಾರ್ಯಸೂಚಿ, ಕಲಾಪಪಟ್ಟಿ, ಅದರ ಅನುಕ್ರಮಣಿಕೆ, ಸದಸ್ಯರು ಮಾತನಾಡಲು ಅನುಮತಿ ಪಡೆಯುವ ಬಗೆ, ವರದಿಗಳನ್ನು ಒಪ್ಪಿಸುವ ರೀತಿ, ಮಸೂದೆಗಳನ್ನು ಮಂಡಿಸುವ ವಿಧಾನ, ಚರ್ಚೆ, ತಿದ್ದುಪಡಿ, ಮತಕ್ಕೆ ಹಾಕುವುದು, ನಿರ್ಣಯದ ಅಂಗೀಕಾರ, ಸಭೆಯ ಮುಕ್ತಾಯ, ಮುಂದೂಡುವ ಕ್ರಮ ಹೀಗೆ ಸಭೆಯೊಂದನ್ನು ವ್ಯವಸ್ಥಿತವಾಗಿ ನಡೆಸಲು ಅನುಕೂಲವಾಗುವಂತೆ ಪ್ರತಿಯೊಂದು ಅಂಶಕ್ಕೂ ನಿಯಮದ ಚೌಕಟ್ಟಿದೆ. ಅಧ್ಯಕ್ಷ, ಸದಸ್ಯರ ಕರ್ತವ್ಯಗಳು, ಸಭೆ ನಡೆಸುವ ರೀತಿಯನ್ನು ನಿರ್ದಿಷ್ಟಪಡಿಸಿರುವುದರಿಂದ ಗೊಂದಲಗಳಿಗೆ ಅವಕಾಶವಿಲ್ಲ. ಸಭಾಧ್ಯಕ್ಷ ಮತ್ತು ಸದಸ್ಯರು ಅದರಂತೆ ನಡೆದುಕೊಂಡಾಗ ಮಾತ್ರ ಕಲಾಪ ಸುಗಮವಾಗಿ ನಡೆದು ಯಶಸ್ವಿಯಾಗುತ್ತದೆ. ಇಲ್ಲಿ ಪ್ರತಿಯೊಬ್ಬ ಸದಸ್ಯನ ಅನಿಸಿಕೆಯನ್ನು ಆಲಿಸಿ ಬಹುಮತದ ಆಧಾರದ ಮೇಲೆ ನಿರ್ಣಯ ಅಂಗೀಕಾರವಾಗುವುದರಿಂದ ಅಸಮಾಧಾನಕ್ಕೆ ಹೆಚ್ಚು ಜಾಗವಿಲ್ಲ.

ಸಭೆಯ ಅಧ್ಯಕ್ಷ ಸ್ಥಾನದಲ್ಲಿ ಇರುವವರು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಸಭೆಯನ್ನು ಕ್ರಮಬದ್ಧವಾಗಿ, ನ್ಯಾಯೋಚಿತವಾಗಿ, ಸುಗಮವಾಗಿ ನಡೆಸುವುದರ ಮೂಲಕ ಉದ್ದೇಶಗಳು ಈಡೇರುವಂತೆ ನೋಡಿಕೊಳ್ಳಬೇಕು. ಸ್ಪೀಕರ್, ಸಭಾಧ್ಯಕ್ಷ, ಸಭಾಪತಿಯ ಅಭಿಪ್ರಾಯ, ಸೂಚನೆ ನ್ಯಾಯಪೀಠದ ನುಡಿಯಂತೆ. ಸಮಯಪ್ರಜ್ಞೆ, ಸ್ಪಷ್ಟ ಧ್ವನಿ, ಸಾಮಾನ್ಯ ಜ್ಞಾನ, ಉತ್ತಮ ಜ್ಞಾಪಕ ಶಕ್ತಿ, ರಾಜಕೀಯಮುಕ್ತ ನಡತೆ, ಸಹನೆ, ಸ್ನೇಹಪರ ಧೋರಣೆ, ಸಂಸದೀಯ ನಡವಳಿಕೆಗಳ ವಿಶೇಷ ಜ್ಞಾನ, ಪ್ರತಿಯೊಬ್ಬರ ಅಭಿಪ್ರಾಯವನ್ನೂ ಪೂರ್ವಗ್ರಹವಿಲ್ಲದೆ ಆಲಿಸುವ ಸ್ವಭಾವ, ಬಹುಮತದ ತೀರ್ಮಾನದಂತಹ ಗುಣ, ನಡತೆಗಳನ್ನು ಅಧ್ಯಕ್ಷರು ಹೊಂದಿರಬೇಕಿರುವುದು ಅತ್ಯಗತ್ಯ.

ಸದಸ್ಯರು ಮಾತನಾಡುವ ಮುನ್ನ ಸಭಾಧ್ಯಕ್ಷರ ಅನುಮತಿ ಕಡ್ಡಾಯ. ಹೆಸರಿಸಿದ ಸದಸ್ಯ ಎದ್ದು ನಿಂತು ಮಾತನಾಡುವಾಗ ಇನ್ನೊಬ್ಬರು ನಿಲ್ಲುವಂತಿಲ್ಲ. ಮಧ್ಯೆ ಬಾಯಿ ಹಾಕುವಂತಿಲ್ಲ. ಪರಸ್ಪರ ಚರ್ಚೆ, ದೂಷಣೆಗೆ ಅವಕಾಶವಿಲ್ಲ. ಸದಸ್ಯ ಮಾತನಾಡುವಾಗ ಪೀಠವನ್ನು ಉದ್ದೇಶಿಸಿಯೇ ಮಾತನಾಡಬೇಕು.

ಸಂಸತ್ತು, ವಿಧಾನಮಂಡಲಗಳ ಕಲಾಪಗಳು, ಸ್ಥಳೀಯ ಸಂಸ್ಥೆಗಳ ಸಾಮಾನ್ಯ ಸಭೆಗಳಲ್ಲಿ ರಾಜಕೀಯದ್ದೇ ಮೇಲಾಟವಾದರೆ ಜನಸಾಮಾನ್ಯರ ಬವಣೆಗಳು ಚರ್ಚೆಗೆ ಬಾರವು. ಅಸಂಸದೀಯ ನಡತೆಯಿಂದ ಅಧ್ಯಕ್ಷಪೀಠಕ್ಕೆ ಅವಮಾನ ಮಾಡುವುದೆಂದರೆ ಪ್ರಜಾಪ್ರಭುತ್ವವೆಂಬ ದೇವಾಲಯದ ಪಾವಿತ್ರ್ಯ ಹಾಳುಮಾಡಿದಂತೆ. ಹಿರಿಮನೆಯಲ್ಲಿ ಗಲಾಟೆ, ಧರಣಿ, ಮಾರಾಮಾರಿಯಾಗಿ ಚರ್ಚೆ, ತಿದ್ದುಪಡಿಗಳಿಗೆ ಅವಕಾಶವಿಲ್ಲದಂತೆ ಮಸೂದೆಗಳು ಅಂಗೀಕಾರಗೊಳ್ಳುವುದು ಜನತಂತ್ರದ ಆರೋಗ್ಯಕ್ಕೆ ಖಂಡಿತಾ ಮಾರಕ. ದೊಡ್ಡವರೇ ಕೆಟ್ಟದ್ದಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟರೆ ಗ್ರಾಮ ಪಂಚಾಯಿತಿ, ಸೊಸೈಟಿಗಳಂತಹ ಕೆಳ ಹಂತದ ಸಂಸ್ಥೆಗಳಿಗೂ ಈ ಸೋಂಕು ಹರಡದಿದ್ದೀತೆ? ಹಾಗಾಗಿಯೇ ಪ್ರಜಾಪ್ರಭುತ್ವದ ಸ್ವಾಸ್ಥ್ಯ ಕಾಪಾಡಲು ಸಂಸದೀಯ ವರ್ತನೆಯ ಕುರಿತಾದ ತರಬೇತಿಗಳನ್ನು ಕಡ್ಡಾಯಗೊಳಿಸುವ ತುರ್ತು ಎದುರಾಗಿದೆ. ಜೆಸಿಐ ಸಂಸ್ಥೆ ತನ್ನೆಲ್ಲಾ ಸದಸ್ಯರಿಗೆ ಅಧ್ಯಕ್ಷತೆ ಮತ್ತು ಸಂಸದೀಯ ನಡವಳಿಕೆಯನ್ನು ಪಠ್ಯವಾಗಿ ಇರಿಸಿರುವುದು ಇಲ್ಲಿ ಉಲ್ಲೇಖಾರ್ಹ. ಇದು ಎಲ್ಲೆಡೆಗೂ ಮಾದರಿಯಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT