7
ಪೂಜೆ ಮುಂತಾದ ಆಚರಣೆ ಮತ್ತು ಒಟ್ಟಾರೆ ವೇದ ಪ್ರಾಮಾಣ್ಯದ ಕುರಿತಾದ ಸಾವರ್ಕರರ ವಿಚಾರಗಳನ್ನು ಅನಂತಕುಮಾರ ಹೆಗಡೆ ಮತ್ತು ಅವರ ಸಂಗಡಿಗರು ಓದಬೇಕಾಗಿದೆ

ಹಿಂದುತ್ವವೋ ಭಾರತೀಯತೆಯೋ?

Published:
Updated:

‘ಹಿಂದುತ್ವವನ್ನು ಮಾತುಗಳಲ್ಲಿ ವಿವರಿಸುವುದೆಂದರೆ ಸಮುದ್ರವನ್ನು ನುಡಿಗಳಲ್ಲಿ ಪರಿಚಯಿಸುವಷ್ಟೇ ಅಸಾಧ್ಯದ ಕೆಲಸ’ ಎಂದು ಅಭಿಪ್ರಾಯಪಡುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ತಮ್ಮ ಭಾಷಣದುದ್ದಕ್ಕೂ ಹಿಂದೂ ಧರ್ಮವನ್ನು ಬಗೆಬಗೆಯಲ್ಲಿ ವಿವರಿಸುವ ಪ್ರಯತ್ನ ಮಾಡಿರುವುದು (ಪ್ರ.ವಾ., ಜೂನ್‌ 18) ವಿಪರ್ಯಾಸ! ಹಿಂದುತ್ವ ‘ಅನಿರ್ವಚನೀಯ’ ಎಂದ ಮೇಲೆ ಅದನ್ನು ನಿರ್ವಚಿಸುವ ಗೊಡವೆಯೇಕೆ? ಸಾಮಾನ್ಯವಾಗಿ ಕೆಲವು ಬುದ್ಧಿಜೀವಿಗಳಲ್ಲಿ ಕಂಡುಬರುವ ಗೊಂದಲದ ವಿಚಾರ ಹಾಗೂ ದ್ವಂದ್ವಮಯ ನಿಲುವುಗಳು ಈಗೀಗ ಇವರ ಮಾತುಗಳಲ್ಲೂ ತಲೆದೋರುತ್ತಿರುವುದನ್ನು ನೋಡಿದರೆ ಈ ಸಚಿವರು ಬುದ್ಧಿಜೀವಿಯಾಗಿ ಬದಲಾಗಿಬಿಟ್ಟರೇ ಎಂದು ಗಾಬರಿಯಾಗುತ್ತದೆ!

ಇವರ ಈ ಬೌದ್ಧಿಕತೆ ಇಂದಿನ ಬುದ್ಧಿಜೀವಿಗಳಿಂದ ಪ್ರೇರಿತವಾಗುವ ಬದಲಾಗಿ, ಇವರು ಆರಾಧಿಸುವ ಸಾವರ್ಕರ್ ಅವರಿಂದಲೇ ಪ್ರೇರಿತವಾಗಿದ್ದಿದ್ದರೆ ಅದು ಅಸಲಿ ಬೌದ್ಧಿಕತೆ ಆಗುತ್ತಿತ್ತೇನೋ. ಆದರೆ ಅನಂತಕುಮಾರ ಹೆಗಡೆ ಮತ್ತು ಅವರ ಸಂಗಡಿಗರ ವಿಚಾರಗಳು ಇಂದಿನಬುದ್ಧಿಜೀವಿಗಳ ಮಾತುಗಳಿಗೆ ತತ್‍ಕ್ಷಣದ ಪ್ರತಿಕ್ರಿಯೆಯಾಗಿ ಹುಟ್ಟಿ ಸಾಯುತ್ತಿವೆ. ಈ ಕಾರಣದಿಂದಲೇ ಇವರೊಂದಿಗೆ ಯಾವುದೇ ಸಂವಾದ ನಡೆಸುವುದು ಅಸಾಧ್ಯ ಮತ್ತು ಅನಗತ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

‘ಹಿಂದೂ’ ಎಂಬ ಪದ ಭಾರತೀಯ ನೆಲದ್ದಲ್ಲ, ವೇದೋಪನಿಷತ್ತುಗಳಲ್ಲಾಗಲಿ ಅಥವಾ ಇವರು ಪೂಜಿಸುವ ಸ್ಮೃತಿ ಶಾಸ್ತ್ರಗಳಲ್ಲಾಗಲಿ ಆ ಪದದ ಪ್ರಯೋಗವೇ ಇಲ್ಲ. ಕ್ರಿಸ್ತಪೂರ್ವದಲ್ಲಿ ಪರ್ಷಿಯನ್ ಲೇಖಕರು ‘ಹಿಂದೂ’ ಎಂಬ ಪದವನ್ನು ಬಳಸಿದ ಮೇಲೆ 12ನೇ ಶತಮಾನದಲ್ಲಿ ಕಾಶ್ಮೀರದ ಸಂಸ್ಕೃತ ವಿದ್ವಾಂಸನಾದ ಕಲ್ಹಣ ತನ್ನ ‘ರಾಜತರಂಗಿಣಿ’ ಕೃತಿಯಲ್ಲಿ ಈ ಪದವನ್ನು ಮೊದಲ ಸಲ ಬಳಸಿದ್ದಾನೆ. ಮುಂದೆ ಸಾವರ್ಕರ್ ‘ಹಿಂದುತ್ವ’ ಎಂಬ ಕಾಲ್ಪನಿಕ ಪದವೊಂದನ್ನು ಟಂಕಿಸಿದರು.

ತಮ್ಮ ಕಲ್ಪನೆಯ ಕೂಸಾದ ಆ ಹೊಸ ಪರಿಕಲ್ಪನೆಯನ್ನೇ ನಿಜವಾಗಿಸಲು ಪ್ರಯತ್ನಿಸಿದ ಸಾವರ್ಕರ್, ಆಂತರ್ಯದಲ್ಲಿ ಒಬ್ಬ ಬುದ್ಧಿಜೀವಿಯಾಗಿದ್ದರು, ನಾಸ್ತಿಕ ವ್ಯಕ್ತಿಯಾಗಿದ್ದರು. ತಮ್ಮ ಮಡದಿ ಸತ್ತಾಗ ಯಾವುದೇ ಶ್ರಾದ್ಧ ವಿಧಿಗಳನ್ನು ನಡೆಸಬಾರದು ಎಂದು ಸಂಬಂಧಿಗಳಿಗೆ ಆಗ್ರಹಿಸಿದ್ದರಂತೆ. ಹಾಗೆಂದು ಸಾವರ್ಕರ್ ಜೀವನ ಚರಿತ್ರಕಾರರಾದ ಧನಂಜಯ ಕೀರ್ ಬರೆಯುತ್ತಾರೆ. ಪೂಜೆ ಮುಂತಾದ ಸಾಂಪ್ರದಾಯಿಕ ಆಚರಣೆಗಳು, ಗೋಮಾಂಸ ಸೇವನೆ ಮತ್ತು ಒಟ್ಟಾರೆ ವೇದ ಪ್ರಾಮಾಣ್ಯದ ಕುರಿತಾದ ಸಾವರ್ಕರರ ವಿಚಾರಗಳನ್ನು ಅನಂತಕುಮಾರ ಹೆಗಡೆ ಮತ್ತು ಅವರ ಸಂಗಡಿಗರು ಇಂದು ಅಗತ್ಯವಾಗಿ ಓದಬೇಕಾಗಿದೆ. ಆಗ ಅವರು ಇಂದಿನ ಬಡಪಾಯಿ ಬುದ್ಧಿಜೀವಿಗಳನ್ನು ತರಾಟೆಗೆ ತೆಗೆದುಕೊಳ್ಳುವುದನ್ನು ಬಿಟ್ಟು ಸಾವರ್ಕರ್ ವಿಚಾರಗಳನ್ನು ಮರೆಮಾಚುವ ಅಥವಾ ಮರುನಿರ್ವಚಿಸುವ ಬೌದ್ಧಿಕ ಕಸರತ್ತಿನಲ್ಲಿ ನಿಸ್ಸಂಶಯವಾಗಿ ತೊಡಗಿಕೊಳ್ಳುತ್ತಾರೆ.

‘ಭಾರತದ ರಾಷ್ಟ್ರಪಿತ ಗಾಂಧಿ ಒಬ್ಬ ಆಸ್ತಿಕನಾದರೆ, ಪಾಕಿಸ್ತಾನದ ರಾಷ್ಟ್ರಪಿತ ಜಿನ್ನಾ ಒಬ್ಬ ನಾಸ್ತಿಕನಾಗಿದ್ದಾನೆ. ವಿಚಿತ್ರವೆಂದರೆ ಅಪ್ಪಟ ಧಾರ್ಮಿಕ ವ್ಯಕ್ತಿಯಾಗಿದ್ದ ಗಾಂಧಿ, ಸ್ಥಾಪಿಸಲು ಬಯಸಿದ್ದು ಒಂದು ‘ಸೆಕ್ಯುಲರ್’ ರಾಷ್ಟ್ರವನ್ನು ಮತ್ತು ಜಿನ್ನಾ ಸ್ಥಾಪಿಸಲು ಬಯಸಿದ್ದು ಒಂದು ‘ಮುಸ್ಲಿಂ’ ರಾಷ್ಟ್ರವನ್ನು’ ಎಂದು ಅನಂತಮೂರ್ತಿ ತಮ್ಮ ಒಂದು ಕೃತಿಯಲ್ಲಿ ಬರೆದಿದ್ದಾರೆ. ಜಿನ್ನಾ ಮತ್ತು ಗಾಂಧಿ ಎಂದೂ ತಾತ್ವಿಕವಾಗಿ ಸಮಾನ ನೆಲೆಯಲ್ಲಿ ನಿಲ್ಲಲಾರರು (ಅವರಿಬ್ಬರ ನಡುವೆ ವೈಯಕ್ತಿಕ ಬಾಂಧವ್ಯ ಮತ್ತು ಪರಸ್ಪರ ಗೌರವಾದರಗಳು ಇದ್ದವು ಎಂಬುದು ಬೇರೆಯ ಮಾತು). ಇಂದು ಪಾಕಿಸ್ತಾನವು ತನ್ನ ನೆಲದಲ್ಲಿ ಜಿನ್ನಾರನ್ನು ನಿರ್ಲಕ್ಷಿಸಿ ‘ಗಾಂಧಿ ಮಾದರಿ’ಯನ್ನು ಶೋಧಿಸಿಕೊಳ್ಳಬೇಕಾಗಿದೆ. ಆದರೆ ದುರದೃಷ್ಟವೆಂದರೆ ಭಾರತ ತನ್ನ ನೆಲದಲ್ಲಿ ಗಾಂಧಿಯನ್ನು ನಿರ್ಲಕ್ಷಿಸಿ ಜಿನ್ನಾ ಮಾದರಿಯನ್ನು ಹುಡುಕಿಕೊಳ್ಳಲು ಹೊರಟಿದೆ. ಇದನ್ನು ಭಾರತದ ಹಿನ್ನಡೆಯೆಂದೇ ಕರೆಯಬೇಕಾಗುತ್ತದೆ. ಏಕೆಂದರೆ ಯಾರ ವಿರುದ್ಧ ಹಿಂದೂಗಳು ಒಂದಾಗಬೇಕು ಎಂದು ಸಾವರ್ಕರ್ ಆ ಪುಸ್ತಕದಲ್ಲಿ ವ್ಯಕ್ತವಾಗಿ ಹೇಳದಿದ್ದರೂ ಸೂಕ್ಷ್ಮಜ್ಞರಾದ ಓದುಗರಿಗೆ ವ್ಯಕ್ತ ಸಾಲುಗಳ ನಡುವಿನ ಅವರ ಅವ್ಯಕ್ತ ಇಂಗಿತ ಅರ್ಥವಾಗದಿರದು.

ಇನ್ನು ಸಾವರ್ಕರರ ನಾಸ್ತಿಕತೆಗೆ ಬರುವುದಾದರೆ ಅದಕ್ಕೆ ದೃಢವಾದ ತಾತ್ವಿಕ ಅಥವಾ ದಾರ್ಶನಿಕ ತಳಹದಿಯೇನಿಲ್ಲ. ಅದು ವೇದಪ್ರಾಮಾಣ್ಯವನ್ನು ಅಲ್ಲಗಳೆದು ಹೊಸ ದಿಕ್ಕಿನಲ್ಲಿ ಸತ್ಯಾನ್ವೇಷಣೆಗೆ ಹೊರಟ ಶ್ರಮಣ ಧಾರೆಗೆ ಅಥವಾ ವೇದಾಂತಕ್ಕೆ ಹೋಲಿಸಬಹುದಾದ ನಾಸ್ತಿಕತೆಯಲ್ಲ. ‘ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರವೂ ರಾಜಕೀಯ ಗೆಲುವಿಗೆ ದಾರಿಯಾಗಬಹುದು’ ಎಂಬ ಅವರ ಊಹೆ ಹಾಗೂ ಆ ಊಹೆಯ ಸಮರ್ಥನೆ ಹಿಂದೂಗಳಿಗಲ್ಲ, ಮನುಷ್ಯ ಮಾತ್ರರಿಗೆ ಅದು ವಿಕೃತಿ ಎನಿಸುತ್ತದೆ.

ಅಸಲಿಗೆ ಸಾವರ್ಕರರ ‘ಹಿಂದುತ್ವ’ ಒಂದು ಧರ್ಮಗ್ರಂಥವಲ್ಲ, ಧರ್ಮಪ್ರತಿಪಾದನೆಯ ಗ್ರಂಥವೂ ಅಲ್ಲ. ಅದು ಬ್ರಿಟಿಷ್ ವಸಾಹತುಶಾಹಿಗೆ ವಿರುದ್ಧದ ಒಂದು ಪ್ರತಿಭಟನೆಯಾಗಿ ಧರ್ಮದ ನೆವದಲ್ಲಿ ಹೊಸ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಕಟ್ಟುವ ಸಾಧ್ಯತೆಗಳನ್ನು ಶೋಧಿಸುವ ಪುಸ್ತಕವಾಗಿದೆ. ಧರ್ಮವನ್ನು ಹೇಗೆಲ್ಲ ದುರ್ಬಳಕೆ ಮಾಡಿಕೊಳ್ಳಬಹುದು ಎಂಬುದಕ್ಕೆ ಇದಕ್ಕಿಂತ ಮತ್ತೊಂದು ಒಳ್ಳೆಯ ಉದಾಹರಣೆ ನಮಗೆ ಸಿಗದು. ಧರ್ಮ ಮತ್ತು ರಾಜಕಾರಣಗಳು ಪ್ರತ್ಯೇಕಗೊಂಡಾಗ ಮಾತ್ರ ಎರಡರ ಸುಧಾರಣೆಯೂ ನೆರವೇರುತ್ತದೆ ಎಂಬ ವಿಚಾರವನ್ನು ಪಶ್ಚಿಮದ ದೇಶಗಳು ಪಡಬಾರದ ಪಾಡು ಪಟ್ಟು ಶತಮಾನಗಳಷ್ಟು ಹಿಂದೆಯೇ ಕಂಡುಕೊಂಡಿದ್ದವು. ಈಗ ನಾವು ಪಶ್ಚಿಮ ದೇಶಗಳು ಪಟ್ಟ ಪಾಡನ್ನೆಲ್ಲ ಅನುಭವಿಸಿಯೇ ಆ ಸತ್ಯವನ್ನು ಕಂಡುಕೊಳ್ಳಬೇಕಾದ ಅಗತ್ಯವೇನಿಲ್ಲ.

ಕಾಲ್ಪನಿಕತೆಯಲ್ಲಿ ಮೈಮರೆವ ಬುದ್ಧಿಜೀವಿಗಳಂತೆ ಹಿಂದೂ ಧರ್ಮವನ್ನು ‘ಒಂದು ಅದ್ಭುತ ಜೀವನಶೈಲಿ’ ಎಂದು ವ್ಯಾಖ್ಯಾನಿಸುವ ನಮ್ಮ ಸಚಿವರಿಗೆ ನಾಡಿನ ನೂರಾರು ದೇವಾಲಯಗಳಲ್ಲಿ ಇಂದಿಗೂ ದಲಿತರಿಗೆ ಪ್ರವೇಶಾವಕಾಶವಿಲ್ಲ ಎಂಬ ವಾಸ್ತವ ಕಾಣಿಸದೇ? ‘ಜಾತಿಯಿಂದ ಗೌರವ ಕೊಡುವುದು ಹಿಂದುತ್ವವಾದಿಗಳ ಸ್ವಭಾವವಲ್ಲ’ ಎಂದು ಖಾಲಿ ಸಮಜಾಯಿಷಿ ನೀಡುವ ಸಚಿವರು, ಕೂಡಲೇ ವಾಸ್ತವದತ್ತ ಗಮನ ಹರಿಸಬೇಕಾಗಿದೆ. ಏಕೆಂದರೆ ಅನಂತಕುಮಾರ ಹೆಗಡೆಯಂತಹವರು ಒಮ್ಮೆ ಈ ನಿಟ್ಟಿನಲ್ಲಿ ಕ್ರಿಯಾಶೀಲರಾದರೆ ನೂರಾರು ಬುದ್ಧಿಜೀವಿಗಳಿಂದ ಆಗದ ಕೆಲಸ ಕ್ಷಣಾರ್ಧದಲ್ಲಿ ಅವರಿಂದ ನೆರವೇರೀತು ಎಂಬ ಭರವಸೆ ಇನ್ನೂ ನಾಡಿನ ಜನರಲ್ಲಿ ಉಳಿದಿದೆ.

ಬರಹ ಇಷ್ಟವಾಯಿತೆ?

 • 27

  Happy
 • 2

  Amused
 • 5

  Sad
 • 1

  Frustrated
 • 6

  Angry

Comments:

0 comments

Write the first review for this !