ಶುಕ್ರವಾರ, ಡಿಸೆಂಬರ್ 6, 2019
19 °C
ಜಾತಿಗಳಿರುವಷ್ಟೂ ಕಾಲ ಧರ್ಮದ ಹೆಸರಿನಲ್ಲಿ ಹಿಂದೂಗಳೆನಿಸಿಕೊಂಡವರ ಸಂಘಟನೆ ಅಸಾಧ್ಯದ ಮಾತು

ಹಿಂದುತ್ವ: ಸರಿದಾರಿಯ ಹುಡುಕಾಟವೇ?

Published:
Updated:

‘ಕಠೋರ ಹಿಂದುತ್ವ’ಕ್ಕೆ ಬದಲಾಗಿ ‘ಮೃದು ಹಿಂದುತ್ವ’ ಒಳ್ಳೆಯದೆಂದು ಪ್ರಚಾರ ಮಾಡುತ್ತಿರುವ ಪ್ರವೃತ್ತಿಯನ್ನು ರಾಜಾರಾಮ ತೋಳ್ಪಾಡಿ ಮತ್ತು ನಿತ್ಯಾನಂದ ಬಿ. ಶೆಟ್ಟಿ ಅವರು ತಮ್ಮ ಲೇಖನದಲ್ಲಿ ವಿಶ್ಲೇಷಿಸಿದ್ದಾರೆ. ಜೊತೆಗೆ ಹಿಂದುತ್ವಕ್ಕೆ ಬದಲಾಗಿ ನೈತಿಕ ಪ್ರಶ್ನೆಗಳನ್ನು ಆಧರಿಸಿದ ಹಿಂದೂಧರ್ಮವನ್ನು ಆಶ್ರಯಿಸುವುದು ಸೂಕ್ತವೆಂದು ಸೂಚಿಸಿದ್ದಾರೆ (ಪ್ರ.ವಾ., ಆ. 25). ಆದರೆ ಹಿಂದುತ್ವದ ಕುರಿತ ವಿಶ್ಲೇಷಣೆಗಳಲ್ಲಿ ಅವರು ಕೆಲವು ಅಂಶಗಳತ್ತ ಗಮನ ಹರಿಸಿದಂತಿಲ್ಲ.

ಮೊದಲಿಗೆ, ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಬಲಗೊಳ್ಳುತ್ತಿರುವ ಅಸಹನೆಗೆ ‘ಇದು ಹಿಂದೂಗಳ ಅಸಹಿಷ್ಣುತೆ’ ಎಂದು ನಾಮಕರಣ ಮಾಡುವುದೇ ದಾರಿತಪ್ಪಿಸುವ ಕೆಲಸವಾಗುತ್ತದೆ. ಈ ಕೆಲಸವನ್ನು ಹಿಂದುತ್ವ
ವಾದಿಗಳು ಮತ್ತು ಹಿಂದೂ ವಿರೋಧಿಗಳಿಬ್ಬರೂ ಮಾಡುತ್ತಿದ್ದಾರೆ. ಒಂದು, ಹಿಂಸಾಚಾರವನ್ನು ಧರ್ಮದೊಂದಿಗೆ ತಳಕು ಹಾಕುವುದರಿಂದ ಸಮಾಜದಲ್ಲಿ ಭುಗಿಲೆದ್ದಿರುವ ಅಶಾಂತಿಗೆ ಇನ್ನಷ್ಟು ತುಪ್ಪ ಸುರಿದಂತಾಗುತ್ತದೆಯೇ
ವಿನಾ ಹಿಂಸಾಚಾರ ಕಡಿಮೆಯಾಗುವುದಿಲ್ಲ. ಭಯೋತ್ಪಾದನೆಗೆ ಹೇಗೆ ಧರ್ಮವಿಲ್ಲವೋ ಹಾಗೆಯೇ ಹಿಂಸಾಚಾರ, ಅಸಹಿಷ್ಣುತೆಗಳಿಗೂ ಧರ್ಮವಿಲ್ಲ ಎಂದು ಎರಡೂ ಗುಂಪಿನವರು ತಿಳಿಯಬೇಕಾಗಿದೆ.

ಎರಡನೆಯದಾಗಿ, ಇಲ್ಲಿನ ಬಹುಸಂಖ್ಯಾತರ ಹಲವು ವೈವಿಧ್ಯಮಯ ನಂಬಿಕೆಗಳಿಗೆ ಮತ್ತು ಒಂದಕ್ಕೊಂದು ಸಂಬಂಧವೇ ಇಲ್ಲದ ನೂರೆಂಟು ಆಚರಣೆಗಳಿಗೆ ‘ಹಿಂದೂ’ ಎಂಬ ಸಮಾನವಾದ ಏಕರೂಪದ ಅಭಿಧಾನ ನೀಡುವುದೇ ದಾರಿ ತಪ್ಪಿಸುವ ವಿಚಾರವಾಗಿದೆ. ಭಾರತದ ಬಹುಸಂಖ್ಯಾತರ ಧರ್ಮವನ್ನು ‘ಹಿಂದೂಧರ್ಮ’ವೆಂದು ವಾದಕ್ಕೆ ಕರೆದರೂ ಇದು ಭಾರತದ ಹೊರಗಿನ ಸೆಮೆಟಿಕ್ ಧರ್ಮಗಳಂತಲ್ಲ. ಇದು ಆ ಧರ್ಮಗಳಂತೆ ಬೇರೆ ಮತ್ತೊಂದು ಪ್ರತಿಷ್ಠಿತ ಧಾರ್ಮಿಕ ಹಿತಾಸಕ್ತಿಯೊಂದರ ವಿರುದ್ಧ ಬಂಡೆದ್ದು ಪ್ರಜ್ಞಾಪೂರ್ವಕವಾಗಿಯೇ ತಲೆಯೆತ್ತಿದ ಧರ್ಮವಲ್ಲ. ಭಾರತವನ್ನಾಳಿದ ಹೊರಗಿನ ಜನಾಂಗಗಳು ತಮ್ಮದೇ ಹಿನ್ನೆಲೆಯಿಂದ ಇಲ್ಲಿನ ಹೆಸರಿರದ ಧರ್ಮಕ್ಕೆ ‘ಹಿಂದೂ’ ಎಂಬ ನಾಮಕರಣ ಮಾಡಿದ್ದರಿಂದ ಮತ್ತು ಆ ನಾಮಕರಣವನ್ನು
ನಾವು ವಿವೇಚಿಸಿಕೊಳ್ಳದೇ ಪ್ರಶ್ನಾತೀತವಾಗಿ ಒಪ್ಪಿದ್ದರಿಂದ ಇಲ್ಲಿ ಈ ಎಲ್ಲ ವಾದ- ವಿವಾದಗಳಾಗುತ್ತಿವೆ. ಪ್ರತ್ಯೇಕ ಲಿಂಗಾಯತ ಧರ್ಮದ ವಿವಾದವನ್ನೂ ಈ ಹಿನ್ನೆಲೆಯಲ್ಲೇ ಪರಿಭಾವಿಸಬೇಕಾಗುತ್ತದೆ.

ಮೂರನೆಯದಾಗಿ, ‘ಹಿಂದೂ’ ಎಂಬ ಸಮುದಾಯವಿದೆ ಎಂದು ವಾದಕ್ಕೆ ಒಪ್ಪುವುದಾದರೆ, ಒಂದು ಸಮುದಾಯವನ್ನು ಒಗ್ಗೂಡಿಸಲು ಪೂರಕವಾಗಬಲ್ಲ ಒಂದೇ ಒಂದು ಅಂಶವೂ ಹಿಂದೂ ಧರ್ಮದಲ್ಲಿಲ್ಲ. ಅನ್ಯಧರ್ಮದವರಂತೆ ಇವರಿಗೆ ಒಬ್ಬ ಪ್ರವಾದಿಯಿಲ್ಲ, ಒಂದು ಧರ್ಮಗ್ರಂಥವಿಲ್ಲ, ಸಮಾನವಾದ ನೀತಿ ಸಂಹಿತೆ, ಆಚಾರ ಸಂಹಿತೆಗಳೂ ಇಲ್ಲ. ಅದಾವ ನೆಲೆಯಲ್ಲಿ ಹಿಂದುತ್ವವಾದಿಗಳು ಹಿಂದೂಗಳನ್ನು ಒಗ್ಗೂಡಿಸಲು ಹೊರಟಿದ್ದಾರೋ ತಿಳಿಯದು.

‘ನಾವು ಅನ್ಯರಿಗಿಂತ ವಿಶಿಷ್ಟರು’ ಎಂಬ ಧೋರಣೆ ಇದ್ದಾಗಲಷ್ಟೇ ಯಾವುದೋ ಒಂದು ಧರ್ಮದೊಂದಿಗೆ ಗುರುತಿಸಿಕೊಳ್ಳುವಿಕೆ (ರಿಲಿಜಿಯಸ್ ಐಡೆಂಟಿಟಿ) ಸಾಧ್ಯವಾಗುತ್ತದೆ. ಆದರೆ ಭಾರತೀಯರು ಅನಾದಿಕಾಲದಿಂದಲೂ ತಮ್ಮನ್ನು ಗುರುತಿಸಿಕೊಂಡು ಬಂದಿರುವುದು ಜಾತಿಗಳೊಂದಿಗೆ, ಧರ್ಮದೊಂದಿಗಲ್ಲ. ನಾವು ನಮ್ಮ ಅನನ್ಯತೆಯನ್ನು ಕಾಪಾಡಿಕೊಂಡು ಬಂದಿರುವುದೂ ಸಹಜಾತಿಗಳಲ್ಲೇ. ಆದ್ದರಿಂದ ಹಿಂದೂಗಳನ್ನು ಸಂಘಟಿಸಬೇಕೆಂಬ ಉಮೇದಿನಲ್ಲಿರುವವರು ಮೊದಲು ಭಾರತೀ
ಯರ ಈ ಗುರುತಿಸಿಕೊಳ್ಳುವಿಕೆಯನ್ನು ಜಾತಿಯಿಂದ ಧರ್ಮಕ್ಕೆ ಸ್ಥಿತ್ಯಂತರಗೊಳಿಸಬೇಕಾಗುತ್ತದೆ. ಭಾರತದ ಒಬ್ಬನೇ ಒಬ್ಬ ಮಠಾಧಿಪತಿ ತನ್ನ ಪೀಠಕ್ಕೆ ಬೇರೆ ಮತ್ತೊಂದು ಜಾತಿಯವನನ್ನು ಉತ್ತರಾಧಿಕಾರಿಯನ್ನಾಗಿ ಮಾಡಿದರೂ ಸಾಕು, ಈ ಸ್ಥಿತ್ಯಂತರದ ಕೆಲಸ ಸುಗಮವಾಗಿಬಿಡುತ್ತದೆ. ಈ ಜಾತಿ ನಿರ್ಮೂಲನೆಯನ್ನು ಮೃದು ಹಿಂದುತ್ವಕ್ಕಿಂತ ಉಗ್ರ ಹಿಂದುತ್ವ ನಿರಾಯಾಸವಾಗಿ ಕೈಗೆತ್ತಿಕೊಳ್ಳಬಲ್ಲದು. ಏಕೆಂದರೆ ಜಾತಿಗಳಿರುವಷ್ಟೂ ಕಾಲ ಧರ್ಮದ ಹೆಸರಿನಲ್ಲಿ ಹಿಂದೂಗಳೆನಿಸಿಕೊಂಡವರ ಸಂಘಟನೆ ಅಸಾಧ್ಯದ ಮಾತು. ಈ ವಾಸ್ತವವನ್ನರಿತೂ ಹಿಂದೂಗಳ ಸಂಘಟನೆಯಲ್ಲಿ ತೊಡಗಿರುವವನು ಅಮಾಯಕನಾಗಿರುತ್ತಾನೆ ಇಲ್ಲವೇ ಆತ್ಮವಂಚಕನಾಗಿರುತ್ತಾನೆ.

ಇಲ್ಲಿನ ರಾಜಕಾರಣಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ಧಾರ್ಮಿಕ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಓಲೈಕೆಯಿಂದ ಅವರಿಗೆ ಎಷ್ಟರ ಮಟ್ಟಿಗೆ ಪ್ರಯೋಜನವಾಗುತ್ತಿದೆಯೋ ದೇವರೇ ಬಲ್ಲ!
ಏಕೆಂದರೆ ಈಗಲೂ ಅವರಲ್ಲಿ ಬಹುತೇಕರು ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಬೌದ್ಧಿಕವಾಗಿ (ಧಾರ್ಮಿಕಕಂದಾಚಾರವನ್ನು ಪ್ರಶ್ನಾತೀತವಾಗಿ ಒಪ್ಪಬಲ್ಲ ಒಬ್ಬ ಕಟ್ಟಾ ಅನುಯಾಯಿ ಹೇಗೆ ತಾನೇ ಬೌದ್ಧಿಕವಾಗಿ ಸಬಲನಾಗಬಲ್ಲ?) ದುರ್ಬಲ ಸ್ಥಿತಿಯಲ್ಲೇ ಬದುಕುತ್ತಿದ್ದಾರೆ. ಈ ಓಲೈಕೆಯ ರಾಜಕಾರಣದ ಶನಿಸಂತಾನವಾಗಿ - ಇಷ್ಟು ಕಾಲ ಗುಪ್ತವಾಗಿದ್ದ - ಅನ್ಯಧರ್ಮೀಯರ ಮೇಲಿನ ದ್ವೇಷಅಸಹನೆಗಳು ಇಂದು ಭಾರತದೆಲ್ಲೆಡೆ ಎಗ್ಗಿಲ್ಲದೆ ತಾಂಡವವಾಡುತ್ತಿವೆ. ಒಂದು ವೇಳೆ ಭಾರತದಲ್ಲಿ ಅನ್ಯಧರ್ಮೀಯರೇ ಇರದ ಒಂದು ಕಾಲ್ಪನಿಕ ಸನ್ನಿವೇಶವನ್ನು ಸೃಷ್ಟಿಸಿಕೊಂಡರೆ ಅಂತಹ ಭಾರತದಲ್ಲಿ ಇವರು ತಮ್ಮ ಕ್ರೌರ್ಯ, ಹಿಂಸಾಚಾರಗಳನ್ನು ಪ್ರಾಯಶಃ ಜಾತಿಯ ನೆವದಲ್ಲಿ ಮುಂದುವರಿಸುತ್ತಿದ್ದರೇನೋ! ಸದ್ಯಕ್ಕೆ ಹೀಗೆ ಹಿಂದೂ ಸಂಘಟನೆಯಲ್ಲಿ ತೊಡಗಿರುವವರು ಎಂದೂ ಸಮಸ್ತ ಹಿಂದೂಗಳ ಪ್ರತಿನಿಧಿಗಳಾಗಲಾರರು. ಭಾರತದ ಬಹುಸಂಖ್ಯಾತರು ಇವರನ್ನು ತಮ್ಮ ಪ್ರತಿನಿಧಿಗಳೆಂದು ಒಪ್ಪಿಲ್ಲದಿರುವುದು ನಿಜಕ್ಕೂ ಸುದೈವ.

ಇಂದು ನಮ್ಮ ಮುಂದಿರುವ ಸವಾಲು ಹಿಂದುತ್ವವಾದಿ ಶಕ್ತಿಗಳಿಗೆ ‘ಸರಿದಾರಿ’ ತೋರಿಸುವುದಲ್ಲ (ಅಂತಹ‘ಸರಿದಾರಿ’ಯನ್ನು ಕಾಣಬೇಕೆಂಬ ಹಂಬಲವೂ ಅವರಿಗೆಇದ್ದಂತಿಲ್ಲ), ಬದಲಾಗಿ ಆ ಶಕ್ತಿಯನ್ನೇ ಶಮನಗೊಳಿಸುವುದು ನಮ್ಮ ಆದ್ಯತೆಯಾಗಬೇಕಾಗಿದೆ. ಏಕೆಂದರೆ ಇವರಿಂದ ಅನ್ಯಕೋಮುಗಳಿಗೆ ನಿಜಕ್ಕೂ ಹಾನಿಯಾಗುತ್ತದೋ ಇಲ್ಲವೋ ಅದು ಬೇರೆಯ ಮಾತು. ಆದರೆ ಇವರ ಸಿದ್ಧಾಂತ ಮತ್ತು ಕಾರ್ಯಚಟುವಟಿಕೆಗಳಿಂದ ಹಿಂದೂ ಧರ್ಮಕ್ಕಂತೂ ನಿರಂತರವಾಗಿ ಅಪಚಾರವಾಗುತ್ತ ಬಂದಿದೆ. ಭಾರತದ ಬಹುಸಂಖ್ಯಾತರ ಧರ್ಮ, ಅಂದರೆ ಹಿಂದೂಧರ್ಮವು ಅನ್ಯ ಕೋಮುಗಳ ವಿರುದ್ಧಒಂದಾಗುವ ಜಾಯಮಾನದ್ದೇ ಅಲ್ಲ. ಒಂದು ಧರ್ಮದಮೂಲ ಸ್ವಭಾವಕ್ಕೆ ಒಗ್ಗದ ಆಶಯಗಳನ್ನು ಅದಕ್ಕೆ ಆರೋಪಿ
ಸುವುದು, ಅಂತಹ ಆಶಯಗಳನ್ನು ಆ ಧರ್ಮದ ಹೆಸರಿನಲ್ಲಿ ನೆರವೇರಿಸಿಕೊಳ್ಳಲು ಹೊರಡುವುದು ಇವೆಲ್ಲ ಏನನ್ನು ಸೂಚಿಸುತ್ತವೆ? ಮೃದು ಮತ್ತು ಕಠೋರ ಹಿಂದುತ್ವವಾದಿಗಳಿಬ್ಬರೂ ತಮ್ಮ ಪ್ರೇರಣೆಯನ್ನು ಪಡೆಯುತ್ತಿರುವುದು ಹಿಂದೂಧರ್ಮದ ಅಂತಃಸತ್ವದಿಂದಲ್ಲ. ಬದಲಾಗಿಯಾವುದೋ ಬಾಹ್ಯ ಪ್ರೇರಣೆಗಳು ಅವರನ್ನು ಹಿಂದೂ ಸಂಘಟನೆಯಲ್ಲಿ ತೊಡಗಿಸಿವೆ ಎಂಬುದನ್ನಲ್ಲವೇ?

ಪ್ರತಿಕ್ರಿಯಿಸಿ (+)