ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಮಾಣಿಕತೆಯೇ ಇಲ್ಲಿ ಹಾಸ್ಯಾಸ್ಪದ!

ಪೋಷಕರ ಗಮನ ತಮ್ಮ ಮಕ್ಕಳ ಕಲಿಕೆಯು ಪರಿಣಾಮಕಾರಿ ಆಗುವುದರ ಕಡೆಗೆ ಇರಬೇಕೋ ಅಥವಾ ಕಲಿಯದೆಯೂ ಗಳಿಸಬಹುದಾದ ಅಂಕಗಳ ಕಡೆಗೋ?
Last Updated 8 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಬೇರೊಬ್ಬ ಬರೆದ ಆಂತರಿಕ ಪರೀಕ್ಷೆಯ ಉತ್ತರಪತ್ರಿಕೆಗೆ ತಮ್ಮ ಹೆಸರು ಸೇರಿಸಿ ಕಳಿಸಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅಧ್ಯಾಪಕರೊಬ್ಬರು ಸೊನ್ನೆ ಅಂಕ ನೀಡಿದ್ದರು. ಕೊರೊನಾ ಕಾರಣದಿಂದ ಆಂತರಿಕ ಪರೀಕ್ಷೆಗಳು ಕೂಡ ಆನ್‍ಲೈನ್‍ನಲ್ಲೇ ನಡೆಯುತ್ತಿರುವುದರಿಂದ, ಮತ್ತೊಬ್ಬರ ಉತ್ತರಪತ್ರಿಕೆಯನ್ನು ಫೋಟೊ ಎಡಿಟಿಂಗ್ ಆ್ಯಪ್ ಬಳಸಿ ಚೂರೇ ಚೂರು ಎಡಿಟ್ ಮಾಡಿ, ಹೆಸರು ಬದಲಿಸಿ ಕಳಿಸುವ ಕುತಂತ್ರವನ್ನು ಕೆಲ ವಿದ್ಯಾರ್ಥಿಗಳು ಕರಗತ ಮಾಡಿಕೊಂಡಿರುವುದು ಅವರಿಗೆ ಮೊದಲೇ ತಿಳಿದಿತ್ತು. ಹಾಗಾಗಿ, ಒಂದೆರಡು ಉತ್ತರಪತ್ರಿಕೆಗಳಲ್ಲಿನ ಅಸಾಮಾನ್ಯ ಸಾಮ್ಯತೆ ಕಂಡಾಗಲೇ ಅದರ ಹಿಂದೆ ಎಡಿಟಿಂಗ್ ಕೈಚಳಕ ಇರುವುದು ಅವರಿಗೆ ಮನದಟ್ಟಾಗಿತ್ತು. ಹೀಗೆ ಮಾಡಿದವರಿಗೆಲ್ಲ ಅವರು ಸೊನ್ನೆ ಅಂಕ ನೀಡಿದ್ದರು.

ಬಹುತೇಕ ವಿದ್ಯಾರ್ಥಿಗಳು ತಾವು ಮಾಡಿದ ತಪ್ಪಿಗೆ ಸೊನ್ನೆ ಅಂಕ ಸಿಕ್ಕಿರುವುದನ್ನು ತಿಳಿದು ಸುಮ್ಮನಿದ್ದರೆ, ಒಬ್ಬ ವಿದ್ಯಾರ್ಥಿ ಮಾತ್ರ ನೇರವಾಗಿ ಅಧ್ಯಾಪಕರ ಬಳಿ ತಾನೇ ಅಳಲು ತೋಡಿಕೊಳ್ಳುವ ಬದಲು, ತನ್ನ ತಾಯಿಯ ಮೂಲಕ ಅವರಿಗೆ ಕರೆ ಮಾಡಿಸಿದ್ದ. ತಮ್ಮ ಮಗನಿಗೆ ಆಂತರಿಕ ಪರೀಕ್ಷೆಯಲ್ಲಿ ಸೊನ್ನೆ ಅಂಕ ದೊರೆತು ಆತ ಫೇಲ್ ಆಗಿರುವುದಕ್ಕೆ ಬೇಸರಗೊಂಡಿದ್ದ ತಾಯಿ, ‘ಹೇಗಾದರೂ ಮಾಡಿ ಪಾಸ್ ಮಾಡಲು ಸಾಧ್ಯವಿಲ್ಲವೇ? ದಯವಿಟ್ಟು ಫೇಲ್ ಮಾಡಬೇಡಿ’ ಎಂದು ಮನವಿ ಮಾಡಿಕೊಂಡರು.

ಅಧ್ಯಾಪಕರು ‘ನಿಮ್ಮ ಮಗ ಮಾಡಿರುವುದು ವಂಚನೆಯಲ್ಲವೇ?’ ಎಂದರೂ ತಲೆಕೆಡಿಸಿಕೊಳ್ಳದ ತಾಯಿ, ತಮ್ಮ ಮಗನಿಂದ ತಪ್ಪಾಗಿದೆ ಎನ್ನುವ ವಾಸ್ತವ ಒಪ್ಪಿಕೊಳ್ಳಲು ಮಾತ್ರ ಸಿದ್ಧರಿರಲಿಲ್ಲ. ಅವರಿಗೆ ಮಗ ಯಾವ ದಾರಿ ಹಿಡಿದಾದರೂ ಸರಿ, ಪಾಸ್ ಆದರೆ ಸಾಕೆಂಬ ಹಂಬಲ ಇದ್ದಂತೆ ತೋರುತ್ತಿತ್ತು.

ಓದಿನಲ್ಲಿ ಆಸಕ್ತಿ ಇರದ ತಮ್ಮ ಮಕ್ಕಳು ಫೇಲ್ ಆದಾಗ ಅಧ್ಯಾಪಕರ ಬಳಿ ಬಂದು ‘ಹೇಗಾದರೂ ಪಾಸ್ ಮಾಡಿ’ ಎಂದು ಮಕ್ಕಳ ಪರವಾಗಿ ಬೇಡಿಕೊಳ್ಳುವ ಕೆಲ ಪೋಷಕರನ್ನು ಈ ಮೊದಲೇ ಕಂಡಿದ್ದ ನನಗೆ, ಇದೂ ಅಂತಹದ್ದೇ ಒಂದು ಪ್ರಕರಣ ಎನಿಸಿತು.

‘ಮನೆಯೇ ಮೊದಲ ಪಾಠಶಾಲೆ’ ಎಂಬ ಜನಜನಿತ ಹೇಳಿಕೆ ಈ ಕೊರೊನಾ ಕಾಲಘಟ್ಟದಲ್ಲಿ ಮತ್ತಷ್ಟು ಮಹತ್ವ ದಕ್ಕಿಸಿಕೊಂಡಿದೆ. ಮಕ್ಕಳು ಮನೆಯಲ್ಲಿ ಕುಳಿತೇ ಪಾಠ ಕೇಳುತ್ತಿದ್ದಾರೆ. ಪರೀಕ್ಷೆಗಳನ್ನು ಬರೆಯು ತ್ತಿದ್ದಾರೆ. ತರಗತಿಯಲ್ಲಿ ನಡೆಯುತ್ತಿದ್ದ ಶೈಕ್ಷಣಿಕ ಚಟುವಟಿಕೆಗಳೆಲ್ಲ ಮನೆಗೆ ಸ್ಥಳಾಂತರಗೊಂಡಿವೆ. ಇಂತಹ ಈ ಹೊತ್ತಿನಲ್ಲಿ, ಪೋಷಕರ ಗಮನ ತಮ್ಮ ಮಕ್ಕಳ ಕಲಿಕೆಯು ಪರಿಣಾಮಕಾರಿಯಾಗಿ ಇದೆಯೇ ಎಂದು ಪರಿಶೀಲಿಸುವುದರೆಡೆಗೆ ಇರಬೇಕೋ ಅಥವಾ ಕಲಿಯದೆಯೂ ಗಳಿಸಬಹುದಾದ ಅಂಕಗಳ ಕಡೆಗೋ?

ಅಂಕಗಳು ನಿಜಕ್ಕೂ ಮಕ್ಕಳ ಕಲಿಕಾ ಮಟ್ಟಕ್ಕೆ ಕೈಗನ್ನಡಿಯಂತಿದ್ದರೆ ಮಾತ್ರ ಅವುಗಳಿಗೆ ಮೌಲ್ಯವಲ್ಲವೇ? ಕಲಿಕೆಗೆ ಬೆನ್ನು ತೋರಿ, ಅಡ್ಡದಾರಿಗಳ ಮೂಲಕ ತಮ್ಮ ಮಕ್ಕಳು ಅಂಕ ಗಳಿಸಲು ಕಸರತ್ತು ನಡೆಸುತ್ತಿದ್ದರೆ, ಅವರಿಗೆ ಕಲಿಕೆಯ ಮಹತ್ವ ಮನದಟ್ಟು ಮಾಡಬೇಕಿರುವ ಹೊಣೆಗಾರಿಕೆಯನ್ನು ಪೋಷಕರು ನಿಭಾಯಿಸಬೇಕಲ್ಲವೇ? ಏನನ್ನೂ ಕಲಿಯದೆ ಗಳಿಸುವ ಅಂಕಗಳನ್ನು ಇಟ್ಟುಕೊಂಡು ಸಾಧಿಸುವುದಾದರೂ ಏನನ್ನು?

ತಮ್ಮ ಮಕ್ಕಳು ಓದಿನ ಮೂಲಕ ಉತ್ತಮ ವ್ಯಕ್ತಿತ್ವ ಮೈಗೂಡಿಸಿಕೊಳ್ಳುವಂತೆ ಆಗಲಿ ಎನ್ನುವ ಆಶಯವೇ ಇನ್ನಿಲ್ಲವಾಗಿ, ಹೇಗಾದರೂ ಸರಿ ತಮ್ಮ ಮಕ್ಕಳು ಈ ಓದುವ ರೇಸಿನಲ್ಲಿ ಹಿಂದೆ ಬೀಳದಿದ್ದರೆ ಸಾಕು ಎನ್ನುವ ಮನಃಸ್ಥಿತಿಯೆಡೆಗೆ ಪೋಷಕರು ವಾಲುತ್ತಿದ್ದಾರೆ. ಇದು ಒಟ್ಟಾರೆ ಸಮಾಜವಾಗಿ ನಾವು ಸೋಲುತ್ತಿರುವುದರ ಸೂಚನೆಯಲ್ಲವೇ?

ವಂಚಿಸುವುದನ್ನೇ ಬುದ್ಧಿವಂತಿಕೆ ಎಂದು ಭಾವಿಸಿರುವ ಸಮಾಜದಲ್ಲಿ, ತಮ್ಮ ಮಕ್ಕಳು ಮಾತ್ರ ಪ್ರಾಮಾಣಿಕರಾದರೆ ಬದುಕು ಕಟ್ಟಿಕೊಳ್ಳುವುದು ಕಷ್ಟ ಎನ್ನುವ ನಿಲುವಿಗೆ ಪೋಷಕರು ಜೋತು ಬಿದ್ದಿರುವರೇ? ಶಿಕ್ಷಣದ ಉದ್ದೇಶ ನುರಿತ ವಂಚಕರನ್ನು ರೂಪಿಸುವುದೇ? ಶಿಕ್ಷಣ ಸಂಸ್ಥೆಗಳ ಆಡಳಿತಗಾರರು, ಬೋಧಕರು, ಪಾಲಕರು ಮತ್ತು ವಿದ್ಯಾರ್ಥಿ ಸಮೂಹದಲ್ಲಿ ನೈತಿಕ ಪ್ರಜ್ಞೆಯ ಅನುಪಸ್ಥಿತಿ ಎದ್ದು ಕಾಣುತ್ತಿರುವ ಹೊತ್ತಿನಲ್ಲೇ ಖಾಸಗಿ ವಿಶ್ವವಿದ್ಯಾಲಯಗಳಿಗೆ ಅಪರಿಮಿತ ಸ್ವಾತಂತ್ರ್ಯವೂ ದಕ್ಕುತ್ತ ಹೋಗುತ್ತಿರುವುದು ವಿಪರ್ಯಾಸವಲ್ಲವೇ?

ತಮ್ಮ ಮನೆಯ ಮುಂಭಾಗದ ರಸ್ತೆ ಕಾಮಗಾರಿಯ ಗುಣಮಟ್ಟ ನಿರ್ವಹಣೆಯ ಹೊಣೆ ಹೊತ್ತಿರುವ ಎಂಜಿನಿಯರ್ ಒಬ್ಬರ ಕಾರ್ಯವೈಖರಿ ಗಮನಿಸಿ ಅಸಮಾಧಾನಗೊಂಡಿರುವ ಸ್ನೇಹಿತರೊಬ್ಬರು, ‘ಈತನಂಥ ಎಂಜಿನಿಯರ್‌ಗಳನ್ನು ಸಮಾಜಕ್ಕೆ ನೀಡಿರುವ ಕಾಲೇಜು ಮತ್ತು ಅದರ ಬೋಧಕರಿಗೆ ಮೊದಲು ಬುದ್ಧಿ ಹೇಳಬೇಕು’ ಎಂದು ಆಗಾಗ ಆಕ್ರೋಶ ಹೊರಹಾಕುತ್ತಿರುತ್ತಾರೆ.

ತಮ್ಮ ಕಾಲೇಜಿನಲ್ಲಿ ಓದಿದ ಸಿವಿಲ್ ಎಂಜಿನಿ ಯರ್‌ಗಳು ಕಡು ಭ್ರಷ್ಟರಾಗಿರುವುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಯಾವುದಾದರೂ ಕಾಲೇಜಿಗೆ ಎಂದಾದರೂ ಅನಿಸಲು ಸಾಧ್ಯವೇ? ಇಂತಹದ್ದೊಂದು ನಿರೀಕ್ಷೆ ಹಾಸ್ಯಾಸ್ಪದವಾಗಿರುವ ವರ್ತಮಾನ ನಮ್ಮದೆಂದು ಬೀಗುವುದೋ ಮರುಗುವುದೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT