ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಆ ಕಂದನ ಕಣ್ಣಲ್ಲೂ ನಾಳೆಗಳ ಕನಸಿದೆ

Last Updated 14 ಆಗಸ್ಟ್ 2022, 21:24 IST
ಅಕ್ಷರ ಗಾತ್ರ

ಹೌದು, ಸ್ವತಂತ್ರ ಭಾರತವೆಂಬ ವಿಶಾಲ ಆಲದ ಮರಕ್ಕೆ 75 ವಸಂತಗಳು ತುಂಬಿಕೊಂಡವು. ಪ್ರತಿಯೊಬ್ಬ ಭಾರತೀಯನಿಗೂ ಇದು ಹೆಮ್ಮೆಯ ದಿನ. ಕಾರಣವಿದೆ, ಕ್ರಿಸ್ತಪೂರ್ವದಲ್ಲಿ ಗ್ರೀಕ್ ದೊರೆ ಅಲೆಗ್ಸಾಂಡರನನ್ನುಎದುರಿಸುವುದರೊಂದಿಗೆ ಆರಂಭಗೊಂಡ ನಮ್ಮ ಭಾರತದ ಸ್ವಾತಂತ್ರ್ಯ ಹೋರಾಟವು ಜಾಗತಿಕ ಚರಿತ್ರೆಯಲ್ಲಿ ಅತ್ಯಂತ ಸುದೀರ್ಘ ಹೋರಾಟ ಎನಿಸಿಕೊಂಡಿದೆ. ಈ ಹೋರಾಟದಲ್ಲಿ ಸಾವಿರಾರು ಜನರ ಬೆವರಿದೆ, ನೆತ್ತರಿದೆ, ತ್ಯಾಗವಿದೆ. ದೊಡ್ಡಸಂಖ್ಯೆಯಲ್ಲಿ ಬಲಿದಾನಗಳು ಕೂಡ. ಆದರೆ ಅಂತಿಮವಾಗಿ ಆಧುನಿಕ ಶಸ್ತ್ರಾಸ್ತ್ರಗಳಿಂದ ಅತ್ಯಂತ ಬಲಾಢ್ಯರೂ ಸರ್ವಸನ್ನದ್ಧರೂ ಆಗಿದ್ದ ಬ್ರಿಟಿಷರು ಕೆಲವು ದೇಶದ್ರೋಹಿಗಳ ಕುತಂತ್ರ, ಒಳಒಪ್ಪಂದಗಳ ಲಾಭ ಪಡೆದು ಸ್ವಾತಂತ್ರ್ಯ ಹೋರಾಟಗಾರರ ಪಟ್ಟುಗಳನ್ನು ಹಿಮ್ಮೆಟ್ಟಿಸುವ ಸಂದರ್ಭವಿತ್ತು. ಹಾಗೆ ಮತ್ತಷ್ಟು ದೂರವೇ ಉಳಿಯಬಹುದಾಗಿದ್ದ ಸ್ವಾತಂತ್ರ್ಯವನ್ನು ಗಾಂಧೀಜಿ ಶಾಂತಿ, ಅಹಿಂಸೆ, ಸತ್ಯಾಗ್ರಹ ಮಾದರಿಯ ವಿಶ್ವವಿನೂತನ ಅಸ್ತ್ರ ಪ್ರಯೋಗಿಸಿ ಹೋರಾಟಕ್ಕೆ ತಾರ್ಕಿಕ ಅಂತ್ಯ ನೀಡುವಂತಾಗಿದ್ದು ಈಗ ಇತಿಹಾಸ. ಸರ್ವಜನಾಂಗದ ತ್ಯಾಗ, ಬಲಿದಾನಗಳ ಫಲವೇ ನಮ್ಮ ಈ ಸ್ವತಂತ್ರ ಭಾರತ. ಅವರೆಲ್ಲರನ್ನೂ ಕೃತಜ್ಞತೆಯಿಂದ ಸ್ಮರಿಸುವ ಸಮಯವಿದು.

ಹೌದು, ನಮ್ಮದು ಹತ್ತಾರು ಧರ್ಮ, ನೂರಾರು ಜಾತಿ, ಸಾವಿರಾರು ಭಾಷೆ ಹಿನ್ನೆಲೆಯ ಜನರೆಲ್ಲ ಕೂಡಿ ಬಾಳಿದ ಪುಣ್ಯನೆಲ. ಹಾಗಾಗಿ ಇದು ಏಕವರ್ಣದಲ್ಲಿಚಿತ್ರಿಸಿದ ಆಕೃತಿಯಾಗಿರದೆ ಹಲವು ಬಣ್ಣಗಳನ್ನು ತುಂಬಿಕೊಂಡ ರಂಗೋಲಿಯಂತಿದೆ. ಭರತದೇಶದ ರಚನೆ, ಸ್ವರೂಪ, ಬೆಳವಣಿಗೆ, ಉನ್ನತಿಯಲ್ಲಿ ಎಲ್ಲ ವರ್ಗದವರ ಬೆವರು, ನೆತ್ತರು, ಬಲಿದಾನಗಳ ಪಾಲೂ ಇದೆ. ಕಥೆಗಾರ ದಿವಂಗತ ಗೌರೀಶ ಕಾಯ್ಕಿಣಿ ಅವರ ಹೇಳಿಕೆ ಅರ್ಥಗರ್ಭಿತ– ‘ನಮ್ಮದು ಒಂದೇ ಕೂಳ್ಗಂಬದ ಮೇಲೆ ನಿಂತ ಡೇರೆಯಲ್ಲ, ಸಾವಿರಕಂಬಗಳನ್ನಾಶ್ರಯಿಸಿದ ಚಪ್ಪರ’.

ತಿಳಿಯಬೇಕಾದ್ದೇನೆಂದರೆ, ಸ್ವತಂತ್ರಗೊಂಡ ದೇಶವನ್ನು ಮುನ್ನಡೆಸುವುದೂ ಸಲೀಸಾಗಿರಲಿಲ್ಲ. ಆಡಳಿತಗಾರರಿಗೆ ದೇಶವನ್ನು ಮತ್ತೆ ಸಶಕ್ತವಾಗಿ ಕಟ್ಟುವ ಕಠಿಣ ಸವಾಲು ಎದುರಿಗಿತ್ತು. ಪರಕೀಯ ದಾಳಿಯಿಂದ ಗಾಸಿಗೊಂಡಿದ್ದ ದೇಶದಲ್ಲಿ ಭೀಕರವಾಗಿದ್ದ ಬಡತನ- ಹಸಿವು, ನಿರುದ್ಯೋಗ, ಅಸ್ಪೃಶ್ಯತೆ, ಸಾಮಾಜಿಕ ತಾರತಮ್ಯ, ಮತೀಯ ಗಲಭೆಗಳನ್ನೆಲ್ಲಾ ಮೀರುವ ಸವಾಲುಗಳಿದ್ದವು. ಕೃಷಿ, ಬೃಹತ್‍ ನೀರಾವರಿ ಯೋಜನೆಗಳು, ಬೃಹತ್‍ ಕೈಗಾರಿಕೆ, ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ವಿಜ್ಞಾನ- ತಂತ್ರಜ್ಞಾನ ವಲಯಗಳಲ್ಲಿ ದೇಶ ಗಟ್ಟಿ ಹೆಜ್ಜೆಯನ್ನೇ ಊರಲಾರಂಭಿಸಿತು. ಆಹಾರೋದ್ಯಮ ಕ್ಷೇತ್ರದಲ್ಲಿ ಕ್ರಾಂತಿಗಳೇ ನಡೆದುಹೋದವು. ಕೆಲವೇ ಉದ್ಯಮಿಗಳ ಹಿಡಿತದಲ್ಲಿದ್ದ ಬ್ಯಾಂಕ್‍ಗಳು ರಾಷ್ಟ್ರೀಕರಣಗೊಂಡವು. ಬಲಾಢ್ಯ ಭೂಒಡೆಯರುಗಳಿಂದ ಪಡೆದು ಭೂರಹಿತರಿಗೆ ಕೃಷಿಭೂಮಿ ಹಂಚಿದ ಭೂಸುಧಾರಣೆ ಕಾಯ್ದೆಯು ದೇಶದ ಕ್ರಾಂತಿಕಾರಿ ಘಟನೆಯೇ ಸರಿ.

ಯುದ್ಧಗಳು, ಸಾಂಕ್ರಾಮಿಕ ರೋಗ, ನೈಸರ್ಗಿಕ ವಿಕೋಪಗಳನ್ನೆಲ್ಲ ಎದುರಿಸುತ್ತಲೇ ಯಶಸ್ವಿ ಪರಮಾಣು ಪ್ರಯೋಗಗಳಿಂದ ದೇಶ ಸ್ವಾವಲಂಬಿಯಾಗಿ ಬೀಗಿತು. ಬಾಹ್ಯಾಕಾಶ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿತು. ವಿಶ್ವಶಾಂತಿ ಸಾರುವ ಅಲಿಪ್ತನೀತಿಯೊಂದಿಗೆ ಭಾರತವೊಂದು ಪರಿಪೂರ್ಣ ವಿದೇಶಾಂಗ ನೀತಿಯನ್ನು ಹೊಂದಿರುವ ನೆಲವಾಗಿ ವಿಶ್ವ ಸಮುದಾಯದೆದುರು ಮಾನ್ಯವಾಯಿತು.

ಸೊನ್ನೆಯಿಂದ ಶುರುವಾದ ದಾರಿಯಲ್ಲಿನ ಪ್ರಗತಿಯ ದೃಢ ಹೆಜ್ಜೆಗಳು ಮುಂದಿನ ಕೆಲವು ದಶಕಗಳಲ್ಲಿ ಭಾರತವನ್ನು ವಿಶ್ವಭೂಪಟದಲ್ಲಿಗುರುತಿಸುವಂತೆ ಮಾಡಿದವು. ಸಾಮಾಜಿಕ ನ್ಯಾಯವನ್ನು ಮುಂದಿನ ಹಲವಾರು ಸಂವೇದನಾಶೀಲ ನೇತಾರರು ಎತ್ತಿಹಿಡಿದರು. ಅಲ್ಲಿಂದ ಇಲ್ಲಿಯವರೆಗೂ ಹಲವು ನ್ಯೂನತೆಗಳ ನಡುವೆ ಸರ್ವರನ್ನೂ ಒಳ ಗೊಳ್ಳುವ ಶ್ರೇಯೋಭಿವೃದ್ಧಿಯ ಕಾರ್ಯಕ್ರಮಗಳನ್ನು ದೇಶಕ್ಕೆ ಕೊಡುಗೆಯಿತ್ತರು.

ನಿರ್ಲಕ್ಷ್ಯ ತಾಳುವ ಮುನ್ನ ಇವತ್ತಿನ ಯುವಸಮೂಹವು ಸ್ವಾತಂತ್ರ್ಯದ ಮಹತ್ವವನ್ನು ತಿಳಿಯಬೇಕೆಂದರೆ, ಸದ್ಯ ಸ್ವಾತಂತ್ರ್ಯ ಕಳೆದುಕೊಂಡು ಸರ್ವಾಧಿಕಾರಿಗಳ ಶೋಷಣೆ, ದಬ್ಬಾಳಿಕೆ, ಕ್ರೌರ್ಯಗಳಿಂದ ನಿತ್ಯ ನರಳುತ್ತಿರುವ ದೇಶಗಳ ಕಡೆಗೊಮ್ಮೆ ಕಣ್ಣಾಯಿಸಬೇಕು. ಅಫ್ಗಾನಿಸ್ತಾನದಂತಹ ದೇಶವಾಸಿಗಳ ದಾರುಣ ಬದುಕು ನೋಡಿ ನಾವು ಕಲಿಯಬೇಕಾದ್ದು ಬಹಳಷ್ಟಿದೆ.

ಅಮೃತ ಮಹೋತ್ಸವದ ಆಚರಣೆಯ ಹೊತ್ತಿನಲ್ಲಿ ಹಲವು ವಿಷಾದಗಳೂ ಶ್ರೀಸಾಮಾನ್ಯನನ್ನು ಕಾಡುತ್ತವೆ. ಬೆಲೆ ಏರಿಕೆಯಲ್ಲಿ ಜನಸಾಮಾನ್ಯರ ಬದುಕು ದುಸ್ತರವಾಗುತ್ತಿರುವಾಗಲೇ ಚುನಾವಣೆ-ಅಧಿಕಾರದ ಸುತ್ತ ಗಿರಕಿ ಹೊಡೆಯುತ್ತಿರುವ ನಮ್ಮ ಪ್ರಜಾಪ್ರಭುತ್ವ ನಿಜಕ್ಕೂ ಅಪಾಯದಲ್ಲಿದೆ. ಕೋಮುಗಲಭೆಗಳಲ್ಲಿ ದೇಶ ತಲ್ಲಣಿಸುವುದು ನಿಂತಿಲ್ಲ. ಹಾಗಾಗಿ ಈಗಷ್ಟೇ ಬೆಳಕು ಕಾಣುತ್ತಿರುವ ಅದೆಷ್ಟೋ ಶೋಷಿತವರ್ಗಗಳು ಮೈಮರೆತರೆ ಮತ್ತೆ ಜೀತಕ್ಕೆ ನೂಕಲ್ಪಡುತ್ತವೆ. ನಮ್ಮ ಎಳೆಯರಿಗೆ ದೇಶದ ಚರಿತ್ರೆಯನ್ನು ಸ್ವಾತಂತ್ರ್ಯ ಹೋರಾಟದ ಸಂಯಮದಿಂದ ಅರ್ಥೈಸಿಕೊಳ್ಳುವುದು ಮುಖ್ಯವಾಗಬೇಕು.

ದೇಶಾಭಿಮಾನವೆಂದರೆ ಬರೀ ಬಣ್ಣ, ಬಾವುಟ, ಭೂಪಟ, ಭಾಷಣ, ಘೋಷಣೆ ಅಂದುಕೊಂಡರೆ ಅಪಾಯ. ನೆಲಜಲದೊಟ್ಟಿಗೆ ದೇಶವಾಸಿಗಳ ಬದುಕು-ಬವಣೆ, ದುಡಿಮೆ, ತ್ಯಾಗ, ಸಂತೋಷ, ಸಂಬಂಧ, ಹಾಡು-ಪಾಡು ಎಲ್ಲದರ ಮಿಳಿತದಲ್ಲಿ ದೇಶವಿದೆ.

ರಸ್ತೆಬದಿಯ ಜೋಪಡಿ ಎದುರಿಗೆ ಬಾವುಟ ಹಿಡಿದು ಕಂಬಕ್ಕಾಗಿ ಹುಡುಕುವಾಗಲೂ ಆ ಕಂದಮ್ಮನ ಕಣ್ಣಲ್ಲಿ ಅಮೃತಮಹೋತ್ಸವದ ಹೊಳಪಿದೆ. ನಾಳೆಗಳ ಕನಸಿದೆ. ಈಡೇರುವಂತಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT