ಭಾರತ– ಪಾಕ್‌: ಯಾರ ದ್ವೇಷ ಎಷ್ಟು?

7

ಭಾರತ– ಪಾಕ್‌: ಯಾರ ದ್ವೇಷ ಎಷ್ಟು?

Published:
Updated:

‘ದ್ವೇಷಿಸುತ್ತ ಇರುವುದರಲ್ಲೇ ಸಂತೋಷ ಕಾಣುವವರು’ (ಪ್ರ.ವಾ., ಜುಲೈ 30) ಲೇಖನದಲ್ಲಿ ಆಕಾರ್ ಪಟೇಲ್ ಅವರು ಭಾರತ ಮತ್ತು ಪಾಕಿಸ್ತಾನ ‘ದ್ವೇಷಿಸುತ್ತ ಇರುವುದರಲ್ಲೇ ಸಂತೋಷ ಕಾಣುವ ರಾಷ್ಟ್ರಗಳು’ ಎಂದಿದ್ದಾರೆ. ಆದರೆ ಈ ವಿಷಯದಲ್ಲಿ ಭಾರತವು ಪಾಕಿಸ್ತಾನಕ್ಕಿಂತ ಭಿನ್ನವಾಗಿದೆ ಎಂಬುದಕ್ಕೆ ಹಲವಾರು ಸಾಕ್ಷ್ಯಾಧಾರಗಳು ಇವೆ. 1960ರಲ್ಲಿ ಸಿಂಧೂ ನದಿಯ ನೀರಿನ ಹಂಚಿಕೆಗಾಗಿ ಈ ಎರಡೂ ದೇಶಗಳ ಮಧ್ಯೆ ಒಪ್ಪಂದವಾಗಿ, ಅದು ಇಂದಿಗೂ ಜಾರಿಯಲ್ಲಿದೆ. ಈ ಒಪ್ಪಂದದಿಂದ ಭಾರತಕ್ಕೆ ಅನ್ಯಾಯವಾದರೂ, ಪಾಕಿಸ್ತಾನದ ಜೊತೆಗಿನ ಸ್ನೇಹ ಸಂಬಂಧವನ್ನು ಗಟ್ಟಿಗೊಳಿಸಬೇಕು ಎಂಬ ಉದ್ದೇಶದಿಂದ ಅಂದಿನ ಪ್ರಧಾನಿ ನೆಹರೂ ಅವರು ಈ ಒಪ್ಪಂದವನ್ನು ಅನುಮೋದಿಸಿದರು. ಆದರೆ ಪಾಕಿಸ್ತಾನವು ಸ್ನೇಹಹಸ್ತ ಚಾಚುವ ಬದಲು 1965ರಲ್ಲಿ ಭಾರತದ ಮೇಲೆ ಆಕ್ರಮಣ ನಡೆಸಿತು.

ಆಕಾರ್‌ ಅವರೇ ಲೇಖನದಲ್ಲಿ ಹೇಳಿರುವಂತೆ, ಈ ಯುದ್ಧದಿಂದಾಗಿ ಹಿಂದಿನ ಹದಿನೇಳು ವರ್ಷಗಳಿಂದ ಎರಡೂ ದೇಶಗಳ ನಡುವೆ ರೂಪುಗೊಂಡಿದ್ದ ಜನರ ಸುಗಮ ಸಂಚಾರ ವ್ಯವಸ್ಥೆ ಮತ್ತು ವ್ಯಾಪಾರ ವ್ಯವಹಾರಗಳು ಸ್ಥಗಿತಗೊಂಡವು. ಆ ಯುದ್ಧ ನಡೆಸಲು ಪಾಕಿಸ್ತಾನ ಸರ್ಕಾರದ ಮೇಲೆ ಒತ್ತಡ ಹೇರಿದವರು ಅಲ್ಲಿನ ಆಗಿನ ವಿದೇಶಾಂಗ ಸಚಿವ ಜುಲ್ಫಿಕರ್ ಅಲಿ ಭುಟ್ಟೊ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ದೊಡ್ಡ ಜಮೀನ್ದಾರರ ಕುಟುಂಬದಲ್ಲಿ ಹುಟ್ಟಿ ಬೆಳೆದ ಇವರು, ಅಮೆರಿಕದ ಪ್ರತಿಷ್ಠಿತ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಮತ್ತು ಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಗಳಿಂದ ಪದವಿಗಳನ್ನು ಪಡೆದವರಾಗಿದ್ದರು. ಇಂತಹ ಹಿನ್ನೆಲೆ ಇರುವ ವ್ಯಕ್ತಿಯಲ್ಲಿ ದ್ವೇಷದಂತಹ ಕೀಳು ಕಾಮನೆ ಇರುವುದನ್ನು ಯಾರೂ ಅಪೇಕ್ಷಿಸಲಾರರು. ಚೀನಾದೊಡನೆ ಪಾಕಿಸ್ತಾನದ ನಿಕಟ ಸ್ನೇಹ ಸಂಬಂಧಕ್ಕೆ ಬುನಾದಿ ಹಾಕಿದವರು ಇದೇ ಭುಟ್ಟೊ.

ಇನ್ನೊಂದು ಉದಾಹರಣೆ ನೋಡಿ; ವಿಶ್ವ ವಾಣಿಜ್ಯ ಸಂಘಟನೆಯ ನಿಯಮದಂತೆ ಭಾರತವು ‍ಪಾಕಿಸ್ತಾನಕ್ಕೆ 1996ರಲ್ಲಿ ‘ಮೋಸ್ಟ್ ಫೇವರ್ಡ್ನೇಷನ್’ (ಎಂಎಫ್ಎನ್) ಎಂಬ ಮಾನ್ಯತೆ ಕೊಟ್ಟಿತು. ಈ ನಿಯಮದ ಪ್ರಕಾರ ಸದಸ್ಯ ದೇಶಗಳು ಪರಸ್ಪರ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಒಂದೇ ಪ್ರಮಾಣದ ಸೀಮಾ ಸುಂಕವನ್ನು ಹೇರಬೇಕು. ಆದರೆ ‍ಪಾಕಿಸ್ತಾನವು ಭಾರತಕ್ಕೆ ಇಂದಿನವರೆಗೂ ಎಂಎಫ್ಎನ್ ಸ್ಥಾನವನ್ನು ಕೊಟ್ಟಿಲ್ಲ. ಮೊದಲಿಗೆ ಅಲ್ಲಿನ ವ್ಯಾಪಾರೋದ್ಯಮಿಗಳು ತಮ್ಮ ಹಿತಾಸಕ್ತಿಗಳಿಗೆ ಧಕ್ಕೆಯಾಗಬಹುದೆಂಬ ಭಯದಿಂದ ಭಾರತಕ್ಕೆ ಇಂತಹ ಸ್ಥಾನ ಕೊಡುವುದನ್ನು ವಿರೋಧಿಸಿದ್ದರು. ಒಂದು ದಶಕದಿಂದ ಈಚೆಗೆ ಉದ್ಯಮಿಗಳು ವಿರೋಧವನ್ನು ಕೈಬಿಟ್ಟಿದ್ದರೂ ಅಲ್ಲಿನ ಸರ್ಕಾರವನ್ನು ನಿಯಂತ್ರಿಸುವ ಮಿಲಿಟರಿ ಅಧಿಕಾರಿಗಳು ಅದನ್ನು ಆಗಗೊಡುತ್ತಿಲ್ಲ. ಭಾರತವನ್ನು ‘ಎನಿಮಿ ನಂಬರ್ ವನ್’ ಎಂದು ಘೋಷಿಸಿರುವ ಅವರಿಗೆ, ಈ ದೇಶವನ್ನು ‘ಮೋಸ್ಟ್ ಫೇವರ್ಡ್ ನೇಷನ್’ ಎಂದು ಹೇಳುವುದು ಹೇಗೆ ಎಂಬ ಸಮಸ್ಯೆ ಕಾಡಿದೆ. ಇದರ ಬದಲಾಗಿ ಭಾರತವನ್ನು ‘ಭೇದಕ್ಕೊಳಪಡದ ದೇಶ’ (ನಾನ್ ಡಿಸ್ಕ್ರಿಮಿನೇಟೆಡ್) ಎಂದು ಗುರುತಿಸಬಹುದೇ ಎಂಬುದರ ಬಗ್ಗೆ ಕಳೆದ ಹಲವು ವರ್ಷಗಳಿಂದ ಅವರು ಚಿಂತಿಸುತ್ತಿದ್ದಾರೆ ಎಂದು ಪತ್ರಿಕಾ ವರದಿಗಳು ತಿಳಿಸಿವೆ.

ಎಂಬತ್ತು– ತೊಂಬತ್ತರ ದಶಕದಲ್ಲಿ ಪಾಕಿಸ್ತಾನಿ ನಟಿ ಸಲ್ಮಾ ಆಗಾ ಅವರು ಭಾರತದ ಹಲವು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದರು. ಪಾಕಿಸ್ತಾನದ ಪ್ರಸಿದ್ಧ ಗಜಲ್ ಗಾಯಕರಾದ ಮೆಹದಿ ಹಸನ್, ಗುಲಾಂ ಅಲಿ, ಫರೀದಾ ಖಾನಂ ಮುಂತಾದವರು ಭಾರತದಾದ್ಯಂತ ಕಾರ್ಯಕ್ರಮಗಳನ್ನು ನಡೆಸಿ ಜನಪ್ರಿಯರಾಗುವುದರ ಜೊತೆಗೆ ಇಲ್ಲಿಂದ ಸಾಕಷ್ಟು ಸಂಪಾದನೆಯನ್ನೂ ಮಾಡಿಕೊಂಡಿದ್ದಾರೆ. ಪಾಕಿಸ್ತಾನದ ಉರ್ದು ಲೇಖಕರಾದ ಇಂತೆಜಾರ್ ಹುಸೇನ್, ಇಂಗ್ಲಿಷ್‌ ಸಾಹಿತಿ ಬಾಪ್ಸಿ ಸಿಧ್ವ, ಕಮಿಲ್ಲಾ ಶಮ್ಸಿ, ಮೊಹ್ಸೀನ್ ಹಮೀದ್ ಅವರ ಕೃತಿಗಳು ಭಾರತದಲ್ಲಿ ಮನ್ನಣೆ ಗಳಿಸಿವೆ. ಇವರೆಲ್ಲಾ ಭಾರತದಲ್ಲಿ ನಡೆಯುವ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.

ಆಕಾರ್ ಪಟೇಲ್ ತಮ್ಮ ಲೇಖನದಲ್ಲಿ ಹೇಳದೆ ಬಿಟ್ಟಿರುವ ಒಂದು ಮುಖ್ಯ ವಿಷಯ ಎಂದರೆ, ಹತ್ತು ಲಕ್ಷಕ್ಕೂ ಹೆಚ್ಚು ಕುಟುಂಬಗಳು ಈ ಎರಡೂ ದೇಶಗಳಲ್ಲಿ ಹಂಚಿ ಹೋಗಿವೆ ಎಂಬುದು. ಇಂತಹ ವಿಭಜಿತ ಕುಟುಂಬಗಳ ಅನೇಕ ಸದಸ್ಯರು ಈ ಎರಡೂ ದೇಶಗಳ ಸರ್ಕಾರಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ. 1965ರಲ್ಲಿ ಈ ದೇಶಗಳ ನಡುವೆ ಆದ ಕಛ್‌ ಒಪ್ಪಂದಕ್ಕೆ ಸಹಿಹಾಕಿದ ಭಾರತದ ಅಜೀಮ್ ಹುಸೇನ್ ಮತ್ತು ಪಾಕಿಸ್ತಾನದ ಅರ್ಷದ್ ಹುಸೇನ್ ಭಾವಂದಿರಾಗಿದ್ದರು. ಈ ಮಾಹಿತಿ ಈಚೆಗೆ ಪಾಕಿಸ್ತಾನದಲ್ಲಿ ಭಾರತದ ರಾಯಭಾರಿಯಾಗಿದ್ದ, ವಿದೇಶಾಂಗ ಇಲಾಖೆಯ ನಿವೃತ್ತ ಅಧಿಕಾರಿ ಟಿ.ಸಿ.ಎ. ರಾಘವನ್ ತಮ್ಮ ಪುಸ್ತಕ ‘The People Next Door, The Curious History Of India's Relations with Pakistan’ದಲ್ಲಿ ದಾಖಲಿಸಿದ್ದಾರೆ. ಕಳೆದ ವರ್ಷದ ತನಕ ಭಾರತದ ಉಪರಾಷ್ಟ್ರಪತಿಯಾಗಿದ್ದ ಹಮೀದ್ ಅನ್ಸಾರಿಯವರ ಕುಟುಂಬದಲ್ಲಿ ನಡೆದ ಒಂದು ಸಮಾರಂಭಕ್ಕೆ ಪಾಕಿಸ್ತಾನದಿಂದ ಬಂದಿದ್ದ ಅವರ ಸಂಬಂಧಿಕರಿಗೆ ಕೆಲವು ಅಧಿಕೃತ ದಾಖಲೆಗಳನ್ನು ಒದಗಿಸುವುದಕ್ಕಾಗಿ ನಮ್ಮ ವಿದೇಶಾಂಗ ಇಲಾಖೆಯ ಅಧಿಕಾರಿಗಳು ರಜಾ ದಿನದಂದೂ ಕಚೇರಿಗೆ ಬರಬೇಕಾಯಿತೆಂದು ಹಿರಿಯ ಪತ್ರಕರ್ತೆ ಕೂಮಿ ಕಪೂರ್ ತಮ್ಮ ಅಂಕಣದಲ್ಲಿ ದಾಖಲಿಸಿದ್ದರು.

ಇಂದಿಗೆ ಇಪ್ಪತ್ತೈದು ವರ್ಷಗಳ ಹಿಂದೆ ಪಾಕಿಸ್ತಾನದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿಯಾಗಿದ್ದ ಶೆಹರ್‌ಯಾರ್ ಖಾನ್ ಎಂಬುವರು ದೆಹಲಿಯಲ್ಲಿ ನಡೆದ ಒಂದು ಸಮಾರಂಭದಲ್ಲಿ ಭಾರತವನ್ನು ಅತ್ಯಂತ ತುಚ್ಛವಾಗಿ ನಿಂದಿಸಿ ನಂತರ ವಿಮಾನ ಹತ್ತಿ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ಗೆ ಹೋಗಿ ತಮ್ಮ ಮಗಳ ವಿವಾಹದ ನಿಶ್ಚಿತಾರ್ಥವನ್ನು ನೆರವೇರಿಸಿದ್ದರು. ಖಾನ್ ಅವರ ಕುಟುಂಬ ಹಿಂದಿನ ಭೋಪಾಲ್ ಸಂಸ್ಥಾನದ ರಾಜವಂಶಕ್ಕೆ ಸೇರಿದ್ದು, ಭಾರತದ ಪ್ರಸಿದ್ಧ ಕ್ರಿಕೆಟ್ ಆಟಗಾರ ದಿವಂಗತ ಮನ್ಸೂರ್ ಅಲಿಖಾನ್ ಪಟೌಡಿ ಅವರ ತಾಯಿಯೂ ಇದೇ ವಂಶದವರು. ಇಂತಹ ಅನೇಕಾನೇಕ ಉದಾಹರಣೆಗಳನ್ನು ಕೊಡಬಹುದು. ಆದರೂ ಆಕಾರ್ ಅವರಂತಹ ಶಾಂತಿ ದೂತರಿಗೆ ‘ಭಾರತವೂ ಪಾಕಿಸ್ತಾನದಂತಹದೇ ದೇಶ’ ಎಂದೆನಿಸಿದೆ. ನಾವೇನು ಮಾಡೋಣ?

Tags: 

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !