ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶವ ಸಂಸ್ಕಾರಕ್ಕಿಂತ ‌ಶ್ರೇಷ್ಠ ಕೆಲಸ ಬೇರಿಲ್ಲ

ಫಟಾಫಟ್‌
Last Updated 12 ಏಪ್ರಿಲ್ 2019, 20:30 IST
ಅಕ್ಷರ ಗಾತ್ರ

* ಇದುವರೆಗೆ ಹತ್ತಾರು ಸಾವಿರ ಅನಾಥ ಶವಗಳನ್ನು ಏಕಾಂಗಿಯಾಗಿ ಸಂಸ್ಕಾರ ಮಾಡಿದ್ದೀರಿ. ಅವುಗಳ ಮೇಲೇಕೆ ನಿಮಗೆ ಅಷ್ಟೊಂದು ಕಾಳಜಿ?
ನಂಜನಗೂಡು ತಾಲ್ಲೂಕಿನ ಅಂಚೆಪುರ ನಮ್ಮೂರು. ಅದು 1969ನೇ ಇಸವಿ. ನನಗಾಗ ಎಂಟು ವರ್ಷ. ನಮ್ಮವ್ವ ಕಾಯಿಲೆ ಬಿದ್ದಿದ್ದರಿಂದ ಆಕೆಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದಿದ್ದೆ. ಚಿಕಿತ್ಸೆ ಸಿಗದೆ ಆಕೆ ಫುಟ್‌ಪಾತ್‌ ಮೇಲೇ ಪ್ರಾಣ ಬಿಟ್ಟಳು. ಅನಾಥ ಶವಗಳ ಸಂಸ್ಕಾರ ಮಾಡುತ್ತಿದ್ದ ಕೃಷ್ಣಪ್ಪ, ನಮ್ಮವ್ವನ ಹೆಣವನ್ನು ಒಯ್ದು ಮಣ್ಣು ಮಾಡಿದರು. ನೀನು ನನ್ನ ಜತೆಗೆ ಇರಪ್ಪ ಅಂತ ಅವರೇ ಊಟ ಕೊಟ್ಟು ಸಾಕಿದರು. ಆಗಿನಿಂದ ನನಗೂ ಅನಾಥ ಶವಗಳಿಗೂ ನಂಟು ನೋಡಿ. ಕೃಷ್ಣಪ್ಪ ಸತ್ತಾಗ, ಅವರನ್ನು ಮಣ್ಣು ಮಾಡಿ ಅವರ ಋಣ ತೀರಿಸಿದೆ.

* ಒಂದು ದಿನಕ್ಕೆ ಹೆಚ್ಚೆಂದರೆ ಎಷ್ಟು ಶವಸಂಸ್ಕಾರ ಮಾಡಿದ್ದೀರಿ?
ಅದನ್ನು ಯಾಕೆ ಕೇಳ್ತೀರಿ? ಒಮ್ಮೆ ನಾಲ್ಕೈದು (ಪೊಲೀಸ್‌) ಸ್ಟೇಶನ್‌ಗಳ 18 ಶವಗಳನ್ನು ಒಟ್ಟು ಮಾಡಿಕೊಂಡು ತಳ್ಳುವ ಗಾಡಿಯಲ್ಲಿ ದಬ್ಬಿಕೊಂಡು ಹೋಗಿದ್ದೆ. ಗುಂಡಿಯಲ್ಲಿ ಅವುಗಳನ್ನೆಲ್ಲ ತಳ್ಳುವಾಗ ಶವಗಳ ಜತೆ ನಾನೂ ಗುಂಡಿಯಲ್ಲಿ ಬಿದ್ದುಬಿಟ್ಟಿದ್ದೆ.

* ಈಗಲೂ ತಳ್ಳುವ ಗಾಡಿಯಲ್ಲೇ ಶವ ಸಾಗಿಸುತ್ತೀರಾ?
ಮೊದಲು ತಳ್ಳುವ ಗಾಡಿಯಿತ್ತು. ಆಮೇಲೆ ಕುದುರೆ ಗಾಡಿ. ಈಗ ಮಾರುತಿ ವ್ಯಾನ್‌ ಬಂದಿದೆ.

* ಶವಸಂಸ್ಕಾರಕ್ಕೆ ಯಾರು ಸಹಾಯ ಮಾಡುತ್ತಾರೆ?
ಆಸ್ಪತ್ರೆಯಿಂದ ಬಂದ ಹೆಣವಾದರೆ ₹ 250 ಕೊಡುತ್ತಾರೆ. ಪೊಲೀಸರು ಶವ ಕೊಟ್ಟರೆ ಸಂಸ್ಕಾರಕ್ಕೆ ₹ 800 ಕೊಡುತ್ತಾರೆ. ನಾನು ಕಾಸಿಗಾಗಿ ಈ ಕೆಲಸ ಮಾಡುವುದಿಲ್ಲ.

* 48 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದೀರಿ. ಈ ಕೆಲಸ ಮಾಡಬಾರದಿತ್ತೆಂದುಎಂದಾದರೂ ಅನಿಸಿದ್ದಿದೆಯೇ?
ನನಗೆ ಊಟ, ಬದುಕು ಕೊಟ್ಟಿದ್ದೇ ಈ ಅನಾಥ ಶವಗಳು ಸರ್‌. ಹೃದಯಪೂರ್ವಕವಾಗಿ ಈ ಕೆಲಸ ಮಾಡುತ್ತಿದ್ದೇನೆ. ನನ್ನ ಕೆಲಸ ದೇವರ ಪೂಜೆ ಮಾಡುವ ಪೂಜಾರಿ ಕೆಲಸಕ್ಕಿಂತ ಶ್ರೇಷ್ಠ.

* ಸರ್ಕಾರದಿಂದ ನಿಮಗೆ ಏನು ಸಹಾಯ ಬೇಕು?
ಹೆಣ ಹೂಳೋಕೆ ಜಾಗ ಇಲ್ಲದಂತಾಗಿದೆ. ಅದಕ್ಕೆ ಏನಾದರೂ ವ್ಯವಸ್ಥೆ ಮಾಡಬೇಕು, ಇಷ್ಟೇ ನನ್ನ ಬೇಡಿಕೆ.

(ತ್ರಿವಿಕ್ರಮ ಮಹಾದೇವ ಬೋಧಿವರ್ಧನ ಪ್ರಶಸ್ತಿ ಪುರಸ್ಕೃತ, ಅನಾಥ ಶವಗಳ ಸಂಸ್ಕಾರ ಮಾಡುವ ಸಾಧಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT