ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಯ ಆಳ ಅರಿಯಿರಿ

ಬಡತನ, ನಿರುದ್ಯೋಗ ಸಮಸ್ಯೆ ನಿವಾರಣೆಯಾಗದೆ ಅಪೌಷ್ಟಿಕತೆ ನೀಗಿಸಲು ಅಸಾಧ್ಯ
Last Updated 18 ಡಿಸೆಂಬರ್ 2018, 5:19 IST
ಅಕ್ಷರ ಗಾತ್ರ

ಅಪೌಷ್ಟಿಕಾಂಶದ ಬಿಕ್ಕಟ್ಟನ್ನು ಭಾರತ ಎದುರಿಸುತ್ತಿದೆ ಎಂಬ ಮಾಹಿತಿ ವಿಶ್ವ ಆರೋಗ್ಯ ಸಂಸ್ಥೆಯ 2018ರ ಜಾಗತಿಕ ಪೌಷ್ಟಿಕಾಂಶ ವರದಿಯಿಂದ ತಿಳಿದು ಬಂದಿದೆ. ಪ್ರಪಂಚದ ಕುಂಠಿತಗೊಂಡ ಮಕ್ಕಳಲ್ಲಿ ಶೇ 33ರಷ್ಟು ಮಂದಿ ಭಾರತದಲ್ಲಿದ್ದಾರೆ. ವಯಸ್ಸಿಗೆ ಅನುಗುಣವಾದ ಎತ್ತರವನ್ನು ಮಕ್ಕಳು ಹೊಂದಿರದಿದ್ದರೆ ಅದನ್ನು ಕುಂಠಿತ ಬೆಳವಣಿಗೆ (stunted growth) ಎನ್ನಲಾಗುತ್ತದೆ.

ಮಕ್ಕಳ ಬೆಳವಣಿಗೆಯ ಮೇಲೆ ಇದು ಧೀರ್ಘಾವಧಿ ಅಪಾಯ ಉಂಟುಮಾಡಬಲ್ಲದು. ವ್ಯರ್ಥ ಬೆಳವಣಿಗೆ (wasted growth) ಎಂದರೆ ಎತ್ತರಕ್ಕೆ ತಕ್ಕಷ್ಟು ತೂಕವಿಲ್ಲದಿರುವುದು. ಇದನ್ನು ತೀವ್ರತರ ಅಪೌಷ್ಟಿಕಾಂಶದ ಹಂತ ಎನ್ನಲಾಗುತ್ತದೆ. ಇಂತಹವರು ಭೇದಿ, ನ್ಯುಮೋನಿಯ ಮುಂತಾದ ಕಾಯಿಲೆಗಳಿಗೆ ತುತ್ತಾಗಿ ಸಾಯುವ ಸಾಧ್ಯತೆ 15-20 ಪಟ್ಟು ಹೆಚ್ಚಿದೆ. ಈ ಎರಡೂ ವಿದ್ಯಮಾನಗಳು ಭಾರತದ ಮಕ್ಕಳಲ್ಲಿ ತೀವ್ರವಾಗಿದೆ ಎಂದು ಈ ವರದಿ ಹೇಳಿದೆ. ಇಂತಹವರ ಪೈಕಿ ಬಹಳಷ್ಟು ಮಕ್ಕಳು ಅಪೌಷ್ಟಿಕಾಂಶ ಹಂತದಲ್ಲಿ ಗ್ರೇಡ್ 3 ಹಾಗು ಗ್ರೇಡ್ 4ಕ್ಕೆ ಪ್ರವೇಶಿಸುತ್ತಿದ್ದು ಅವರ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯ ಮೇಲಾಗುವ ಹಾನಿ ಶಾಶ್ವತ ಸ್ವರೂಪದ್ದಾಗಿರುತ್ತದೆ.

ಸಮಸ್ಯೆಯ ಆಳಕ್ಕೆ ಇಳಿಯದೆ ಇದನ್ನು ಪರಿಹರಿಸಲಾಗದು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಪೌಷ್ಟಿಕತೆ ನಿವಾರಣೆಗೆ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಆಹಾರದ ಸಾರವರ್ಧನೆ (food forification) ಇದರಲ್ಲಿ ಒಂದು. ಅಂದರೆ, ಆಹಾರದ ಸರಕುಗಳಿಗೆ ಕೆಲವು ನಿರ್ದಿಷ್ಟ ಪೋಷಕಾಂಶಗಳನ್ನು ಸೇರಿಸಲಾಗುತ್ತದೆ. ನಂತರ ಬಳಸಲು ತಯಾರಾಗಿರುವ ಚಿಕಿತ್ಸಕ ಆಹಾರದ (ready to use therapeutic food) ಸ್ವರೂಪದಲ್ಲಿ ಮಕ್ಕಳಿಗೆ ಇದನ್ನು ನೀಡುತ್ತಾರೆ. ಈ ಆಹಾರ ಸಂಸ್ಕರಣೆಯಲ್ಲಿ ಖಾಸಗಿ ಕಂಪನಿಗಳ ಪಾಲುದಾರಿಕೆ ಇದೆ. ಸರ್ಕಾರವು ತನ್ನ ಯೋಜನೆಗಳಲ್ಲಿ ಸಂಸ್ಕರಿಸಿದ ಪದಾರ್ಥವನ್ನೇ ನೀಡುವಂತೆ ಕಡ್ಡಾಯಗೊಳಿಸಬೇಕು ಎಂದು ಕಂಪನಿಗಳು ಒತ್ತಾಯಿಸಿವೆ. ಇದರಿಂದ ಅಪೌಷ್ಟಿಕತೆ ನೀಗುವುದೇ?

ಸಂಸ್ಕರಿಸಿದ ಆಹಾರ ಅರೋಗ್ಯಕರವೇ ಎಂಬ ಬಗ್ಗೆಯೇ ಅಹಾರ ತಜ್ಞರು ಸಂದೇಹಗಳನ್ನು ವ್ಯಕ್ತಪಡಿಸಿದ್ದಾರೆ. ಸಂಸ್ಕರಿಸಿದ ಆಹಾರಗಳ ಪೈಕಿ, ಶೇ 80ರಷ್ಟು ಆರೋಗ್ಯಕರವಲ್ಲ ಎಂಬುದನ್ನು ಪ್ರಸಕ್ತ ವರದಿಯೇ ಹೇಳಿದೆ. ಜಾಗತಿಕ ಮಟ್ಟದಲ್ಲಿ ಶೇ 31ರಷ್ಟು ಸಂಸ್ಕರಿಸಿದ ಆಹಾರ ಮಾತ್ರ ಆರೋಗ್ಯಕರ ಎಂದು ವರದಿ ಹೇಳಿರುವುದರಿಂದ ಬೇಯಿಸಿದ ಆಹಾರವೇ ಉತ್ತಮವಾದದ್ದು ಎಂಬುದನ್ನು ಇದು ಸೂಚಿಸುತ್ತದೆ.

ಮಹಾರಾಷ್ಟ್ರದ ಫಾಲ್ಗಾರ್ ಜಿಲ್ಲೆಯಲ್ಲಿ ನೀಡಲಾಗಿರುವ ಪರಿಷ್ಕರಿಸಿದ ಆಹಾರ- ರವೆಯನ್ನೆ ತೆಗೆದುಕೊಳ್ಳಿ. 7 ತಿಂಗಳಿಂದ 2 ವರ್ಷದವರೆಗಿನ ಮಕ್ಕಳಿಗೆ ಇದನ್ನು ಸೂಚಿಸಲಾಗಿತ್ತು. ನೀರಿನಲ್ಲಿ ಬೆರೆಸಿ ಉಣ್ಣಬೇಕಾದ ಈ ಪದಾರ್ಥವು ಎಷ್ಟು ತಿನ್ನಲಸಾಧ್ಯವಾಗಿತ್ತೆಂದರೆ- ಮಕ್ಕಳು ಬಿಡಿ, ದನಗಳೂ ತಿನ್ನಲಿಲ್ಲ ಎಂದು ಪತ್ರಿಕೆಗಳು ವರದಿ ಮಾಡಿದ್ದವು.

ರಾಷ್ಟ್ರೀಯ ಪೌಷ್ಟಿಕಾಂಶ ಉಸ್ತುವಾರಿ ಬ್ಯೂರೊ (NNMB), ಪೌಷ್ಟಿಕಾಂಶದ ಕುರಿತು ನಾಲ್ಕು ದಶಕಗಳಿಂದ ಅಂಕಿಅಂಶಗಳನ್ನು ಕಲೆ ಹಾಕಿದೆ. ದೇಶದ ಜನ ಏನನ್ನು ಉಣ್ಣುತ್ತಿದ್ದಾರೆ ಎಂಬುದರ ಕುರಿತು ಕ್ಷೇತ್ರಅಧ್ಯಯನವನ್ನೂ ನಡೆಸಲಾಗಿತ್ತು. ಅಪೌಷ್ಟಿಕತೆ ಬಗ್ಗೆ ನೀತಿಗಳನ್ನು ರೂಪಿಸಲು ಸರ್ಕಾರಕ್ಕೆ ಇದು ಸಹಕಾರಿಯಾಗುತ್ತಿತ್ತು. ಆದರೆ, ಇದು ಕ್ರೋಡೀಕರಿಸಿದ ಮಾಹಿತಿಯನ್ನು ಯಾವ ಸರ್ಕಾರವೂ ಬಳಸಿಕೊಂಡಿಲ್ಲ. ದುರಂತವೆಂದರೆ NNMBಯನ್ನು ಕೇಂದ್ರಸರ್ಕಾರ ಈಗ ಮುಚ್ಚಿಬಿಟ್ಟಿದೆ! ದ್ವಿದಳ ಧಾನ್ಯ, ತರಕಾರಿ, ಎಣ್ಣೆ, ಕೊಬ್ಬು ಹೊರತುಪಡಿಸಿ ಬೇರೆಲ್ಲ ಆಹಾರಪದಾರ್ಥಗಳನ್ನು ಬಡವರು ಸೇವಿಸುತ್ತಿರುವುದು ಕಳೆದ ನಾಲ್ಕು ದಶಕಗಳಲ್ಲಿ ಇಳಿಮುಖವಾಗಿದೆ ಎಂದು NNMB ಸಮೀಕ್ಷೆ ಹೇಳಿತ್ತು. ಆಹಾರದ ಕೊರತೆಯೇ ಆಪೌಷ್ಟಿಕಾಂಶದ ಸಮಸ್ಯೆಗೆ ಕಾರಣ ಎಂಬುದು ಇದರಿಂದ ಸ್ಪಷ್ಟ.

ಅಪೌಷ್ಟಿಕತೆ ತಡೆಯಲು ಇರುವ ಮಕ್ಕಳ ಸಮಗ್ರ ಅಭಿವೃದ್ದಿ ಯೋಜನೆಯೂ (ICDS)ಬಡಕಲಾಗುತ್ತಿದೆ. ಅಲ್ಲಿನ ಸಾಕಷ್ಟು ಮೇಲ್ವಿಚಾರಕರ ಹುದ್ದೆಗಳು ಹಣದ ಕೊರತೆಯಿಂದ ಖಾಲಿ ಬಿದ್ದಿವೆ. ಪೌಷ್ಟಿಕಾಂಶದ ಕುರಿತು ಅಂಕಿಅಂಶಗಳನ್ನು ಕಲೆ ಹಾಕುವ ಸ್ಟಾಟಿಸ್ಟಿಕಲ್ ಅಕೌಂಟಂಟ್ ಹುದ್ದೆಗಳು ಭರ್ತಿಯಾಗಿಲ್ಲ. ಸಂಬಳ ಹಲವೆಡೆ 4 ರಿಂದ 5 ತಿಂಗಳಿಗೊಮ್ಮೆ ತಲುಪುತ್ತಿದೆ. ಅಪೌಷ್ಟಿಕತೆ ಮತ್ತು ಹಸಿವೆಯಿಂದ ಬಳಲುವವರ ಸಂಖ್ಯೆ ಕ್ಷೀಣಿಸಿದೆ ಎಂದು ತೋರಿಸಲು ಅವರನ್ನು ಒತ್ತಾಯಿಸಲಾಗುತ್ತಿದೆ. ಇದು ಸಾಲದು ಎಂದು ಕೇಂದ್ರ ಸರ್ಕಾರ 2016ರಲ್ಲಿ 3000 ಹೊಸ ಅಂಗನವಾಡಿಗಳನ್ನು ತೆರೆಯಲು ವೇದಾಂತ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಅಂಗನವಾಡಿಗಳ ಖಾಸಗೀಕರಣದ ಎಡೆ ಹೆಜ್ಜೆ ಹಾಕಿತ್ತು!

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಕಾರ, ದಿವಸಕ್ಕೆ 3000ಕ್ಕೂ ಅಧಿಕ ಮಕ್ಕಳು ದೇಶದಲ್ಲಿ ಅಸುನೀಗುತ್ತಿದ್ದಾರೆ. ಈ ಸಾವುಗಳು ಬಹುತೇಕವಾಗಿ ಸಾಮಾನ್ಯ ಕಾಯಿಲೆಗಳಿಂದ ಸಂಭವಿಸುತ್ತಿವೆ. ಅಪೌಷ್ಟಿಕತೆಯೇ ಅದಕ್ಕೆ ಮೂಲ ಕಾರಣ. ಇಷ್ಟಾಗ್ಯೂ ಕಳೆದ ಕೆಲವು ಬಜೆಟ್‌ಗಳಲ್ಲಿ ಐಸಿಡಿಎಸ್‍ನ ಪಾಲು ಶೇ 0.74 ರಿಂದ 0.49ಕ್ಕೆ ಇಳಿಸಲಾಗಿದೆ. ಇದು ಅಂಗನವಾಡಿ ನಿರ್ವಹಣೆಯ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಅಂಗನವಾಡಿಗಳ ಸ್ಥಿತಿಗತಿಗಳಿಗೂ ಅಪೌಷ್ಟಿಕತೆಯ ಮಟ್ಟಕ್ಕೂ ಸಂಬಂಧ ಇದೆ. ಮಹಾಲೇಖಪಾಲರ (CAG) ವರದಿಯ ಪ್ರಕಾರ ಕೆಲವು ರಾಜ್ಯಗಳಲ್ಲಿ ಶೇ 30ರಷ್ಟು ಅಂಗನವಾಡಿಗಳಲ್ಲಿ ಪಾತ್ರೆ ಸರಂಜಾಮುಗಳೇ ಇಲ್ಲ, ಶೇ 65ರಷ್ಟರಲ್ಲಿ ಶೌಚಾಲಯಗಳಿಲ್ಲ ಹಾಗೂ ಅಂಗನವಾಡಿಗಳು ನಿರ್ಧರಿಸಿರುವ ಸಂಖ್ಯೆಗಿಂತ ಶೇ 25ರಷ್ಟು ಕಡಿಮೆ ಇವೆ. ಈ ಮೂಲ ಕಾರಣಗಳೆಡೆಗೆ ಸರ್ಕಾರ ತುರ್ತಾಗಿ ಗಮನ ಹರಿಸಲಿ.

ಲೇಖಕಿ ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT