ದೊಡ್ಡ ವಿಜ್ಞಾನಿಯ ಸಣ್ಣ ಮಾತು

7
ನೊಬೆಲ್ ಪ್ರಶಸ್ತಿ ಪುರಸ್ಕೃತ ವ್ಯಾಟ್ಸನ್‌ಗೆ ಅಂಟಿದ ಜನಾಂಗೀಯ ಪೂರ್ವಗ್ರಹ

ದೊಡ್ಡ ವಿಜ್ಞಾನಿಯ ಸಣ್ಣ ಮಾತು

Published:
Updated:

ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿಗಳ ಹೆಸರು ಜನಸಾಮಾನ್ಯರ ನಾಲಗೆಯ ಮೇಲೆ ನಲಿಯುವುದಿಲ್ಲ. ಅವರ ಕೊಡುಗೆಗಳೂ ಬೌದ್ಧಿಕ ಮಟ್ಟದಲ್ಲೇ ಚರ್ಚೆಯಾಗುತ್ತವೆ, ಆಗಲೂ ಜನಸಾಮಾನ್ಯರು ಅವುಗಳಿಂದ ದೂರವೇ. ವಿಜ್ಞಾನವು ಬೌದ್ಧಿಕ ಕಸರತ್ತಿನ ಕ್ಷೇತ್ರ ಎಂಬುದು ಸಮಾಜದ ನಂಬಿಕೆ. ಕೆಲವೊಮ್ಮೆ ನೊಬೆಲ್ ಪ್ರಶಸ್ತಿ ಪುರಸ್ಕೃತರ ಹೆಸರುಗಳು ಲೋಕದ ತುಂಬ ಹರಿದಾಡುತ್ತವೆ, ಕಾರಣ ಮಾತ್ರ ಬೇರೆ. ಈಗ ಅಂಥದೊಂದು ಪ್ರಸಂಗ ಎದುರಾಗಿದೆ.

ಅಮೆರಿಕದ ಜೈವಿಕ ಅಣು ವಿಜ್ಞಾನಿ ಜೇಮ್ಸ್ ವ್ಯಾಟ್ಸನ್ 1953ರಲ್ಲಿ ಫ್ರಾನ್ಸಿಸ್ ಕ್ರಿಕ್ ಎಂಬ ಮತ್ತೊಬ್ಬ ವಿಜ್ಞಾನಿಯ ಜೊತೆಗೂಡಿ, ಜೀವಕೋಶದ ಕೇಂದ್ರದಲ್ಲಿರುವ ಡಿ.ಎನ್.ಎ ಎಂಬ ರಾಸಾಯನಿಕ ಅಣು ತಿರುಚಿದ ಎರಡು ಏಣಿಗಳಂತಿದೆ ಎಂದು ಸಾರಿದಾಗ ಅಣು ಹಂತದ ಜೀವವಿಜ್ಞಾನ ಅಧ್ಯಯನಕ್ಕೆ ದೊಡ್ಡ ಏಣಿಯೇ ಸಿಕ್ಕಿತು; ಹೊಸ ಜಗತ್ತು ಅನಾವರಣವಾಗಿತ್ತು, ಮಾನವನ ವಂಶವಾಹಿಗಳ ಬಗ್ಗೆ ತಿಳಿಯದಿದ್ದ ಇನ್ನೊಂದು ಆಯಾಮ ಸಿಕ್ಕಿತು. ಜೇಮ್ಸ್ ವ್ಯಾಟ್ಸನ್ ಎಷ್ಟು ಪ್ರಸಿದ್ಧರಾದರೆಂದರೆ ಮುಂದೆ ಮಾನವ ತಳಿ ನಕ್ಷೆ ವಿಶ್ಲೇಷಿಸುವ ವಿಜ್ಞಾನಿಗಳ ತಂಡಕ್ಕೆ ಇವರದೇ ಸಾರಥ್ಯ. ಸಹಜವಾಗಿಯೇ ಅದು ಸುದ್ದಿಯಾಗಬೇಕಾದದ್ದೇ. 1962ರಲ್ಲಿ ಅಂತರರಾಷ್ಟ್ರೀಯ ವೈದ್ಯ ವಿಜ್ಞಾನದ ಕಾಂಗ್ರೆಸ್‍ನಲ್ಲಿ ‘ನನ್ನ ಬದುಕು ಡಿ.ಎನ್.ಎ.ಯಲ್ಲಿ ಮಿಂದೆದ್ದಿದೆ’ ಎಂದು ಪ್ರಾಮಾಣಿಕವಾಗಿಯೇ ನುಡಿದಿದ್ದರು. ಆದರೆ ವ್ಯಾಟ್ಸನ್ ಈಗ ಸುದ್ದಿಯಾಗಿರುವುದು ತನ್ನ ಹರಿತವಾದ ನಾಲಗೆಯಿಂದ ಹೊರಬಿಟ್ಟ ಹೊಲಸು ಮಾತಿಗೆ. ಇಡೀ ಒಂದು ಜನಾಂಗವನ್ನು ಹೀಯಾಳಿಸಿದ ಈ ನೀಚಬುದ್ಧಿಗೆ ನೊಬೆಲ್ ಪ್ರಶಸ್ತಿ ಯಾಕೆ ಸಿಕ್ಕಿತು ಎಂದು ಜಗತ್ತೇ ಈಗ ಕೇಳುತ್ತಿದೆ. ವ್ಯಾಟ್ಸನ್‍ಗೆ ಈಗ 90ರ ಹರೆಯ. ಅವರ ಕುರಿತು ಸುದ್ದಿ ಬಂದಿದೆ ಎಂದರೆ ಭೂಮಿಯಿಂದ ಅವರ ನಿರ್ಗಮನವಿರಬಹುದು ಎಂದು ಜನ ಭಾವಿಸುವುದು ಸಹಜವೇ.

ಈ ತಿಂಗಳ ಆರಂಭದಲ್ಲೇ ಅವರ ಸಾಧನೆ ಕುರಿತು ತೆಗೆದ ‘ಅಮೆರಿಕನ್ ಮಾಸ್ಟರ್ಸ್– ವ್ಯಾಟ್ಸನ್ ಅರ್ಥವಾಗುವುದು ಹೇಗೆ?’ ಎಂಬ ಸಾಕ್ಷ್ಯಚಿತ್ರದಲ್ಲಿ ವ್ಯಾಟ್ಸನ್‌ ಅವರ ಮಾತುಗಳು ಜಗತ್ತಿನಾದ್ಯಂತ ಖಂಡನೆಗೆ ತುತ್ತಾಗಿವೆ. ಬಿಳಿಯರು ಮತ್ತು ಕರಿಯರು (ಕರಿಯರು ಎನ್ನುವುದೇ ಜನಾಂಗ ನಿಂದನೆಯ ಪದವಾಗಿದೆ, ಆಫ್ರಿಕನ್ನರು ಎಂಬ ಪದ ಬಳಕೆಯಲ್ಲಿದೆ) ಬುದ್ಧಿಶಕ್ತಿಯ ಅಳತೆಯಲ್ಲಿ ಖಂಡಿತ ಸಮಾನರಲ್ಲ, ಬಿಳಿಯರದೇ ಮೇಲುಗೈ; ಅದಕ್ಕೆ ಕಾರಣ ಅವರ ವಂಶವಾಹಿ ಎಂದು ಕೊಟ್ಟ ಹೇಳಿಕೆ ವಿಜ್ಞಾನಿಯ ಬಾಯಿಂದ ಬರುವಂತಹುದಲ್ಲ ಎಂದು ಜನಸಾಮಾನ್ಯರೂ ಮಾತನಾಡುವಂತಾಗಿದೆ. ಈ ವಿಜ್ಞಾನಿಯನ್ನು ಶಿಖರದಲ್ಲಿಟ್ಟಿದ್ದ ‘ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಲ್ಯಾಬ್’ ಅವರಿಗೆ ನೀಡಿದ್ದ ಉನ್ನತ ಹುದ್ದೆಗಳನ್ನು ಒಡನೆಯೇ ರದ್ದುಮಾಡಿದೆ. ಡೀನ್, ಚಾನ್ಸಲರ್, ಎಮೆರಿಟಸ್ ಎಂಬ ಎಲ್ಲ ಪದಗಳೂ ಅವರ ಕಿರೀಟದಿಂದ ಉದುರಿ ನೆಲಕಚ್ಚಿವೆ. ಇದು ಜನಾಂಗೀಯ ನಿಂದನೆ ಎಂದೂ ಪೂರ್ವಗ್ರಹಪೀಡಿತ ಮನಸ್ಸು ಎಂದೂ ಆ ಸಂಸ್ಥೆ ಆಕ್ರೋಶ ವ್ಯಕ್ತಪಡಿಸಿದೆ.

ವ್ಯಾಟ್ಸನ್‌ ಅವರ ಈ ಬಗೆಯ ವರ್ತನೆ ಇದೇನೂ ಹೊಸತಲ್ಲ. ಆಫ್ರಿಕಾ, ಮುಂದೆ ಬರುವ ಯಾವ ಲಕ್ಷಣಗಳೂ ಇಲ್ಲ ಎಂದು 2007ರಲ್ಲಿ ‘ದಿ ಟೈಮ್ಸ್’ ಪತ್ರಿಕೆಗೆ ಸಂದರ್ಶನದಲ್ಲಿ ಹೇಳಿ ವಿವಾದವನ್ನು ಸೃಷ್ಟಿಸಿದ್ದರು. ಆಗಲೂ ಅಮೆರಿಕ ಸಮಾಜ ಇವರ ಮೇಲೆ ತಿರುಗಿಬಿದ್ದಿತ್ತು. ಆನಂತರ ‘ಎಲ್ಲರೂ ಸಮಾನರು ಎನ್ನುವುದನ್ನು ನಾನೂ ಒಪ್ಪುತ್ತೇನೆ. ಆದರೆ ಕರಿಯರ ವಿಚಾರದಲ್ಲಿ ಇದನ್ನು ಒಪ್ಪುವುದು ಹೇಗೆ?’ ಎಂದು ‘ಅಪಾಲಜಿ’ ಸಲ್ಲಿಸುವಾಗಲೇ ಈ ಭೂಪ ಈ ಮಾತನ್ನು ಉದುರಿಸಿದ್ದರು. ‘ಹುಟ್ಟುವ ಮಗುವಿನ ಭ್ರೂಣ ಹಂತದಲ್ಲೇ ಅದು ಮುಂದೆ ಸಲಿಂಗಿಯಾಗುತ್ತದೆ ಎಂಬ ಸೂಕ್ಷ್ಮ ತಿಳಿವನ್ನು ಅಣು ವಿಜ್ಞಾನ ಕೊಡುವುದಾದರೆ, ಭ್ರೂಣದಲ್ಲೇ ಅದನ್ನು ಹತ್ಯೆ ಮಾಡಿದರೆ ನನ್ನದೇನೂ ತಕರಾರಿಲ್ಲ’ ಎಂದು ಹೇಳಿದ್ದರು. 2000ದಲ್ಲಿ ವ್ಯಾಟ್ಸನ್‌ರಿಂದ ಅಣು ಜೀವ ವಿಜ್ಞಾನದ ಸಂಶೋಧನೆಯ ಬಗ್ಗೆ ಹೊಸ ಹೊಳಹು ಸಿಕ್ಕುತ್ತದೆಂದು ವಿಜ್ಞಾನಿಗಳು ಕಾಯುತ್ತಿದ್ದಾಗ, ‘ಚರ್ಮದ ಬಣ್ಣಕ್ಕೂ, ಲೈಂಗಿಕತೆಗೂ ನೇರ ಸಂಬಂಧವಿದೆ. ಕರಿಯರಲ್ಲಿ ಕಾಮ ಹೆಚ್ಚು’ ಎಂದು ಕೊಂಕು ನುಡಿದಿದ್ದರು. ಮಾನವ ತಳಿ ನಕ್ಷೆ ಸಿದ್ಧಪಡಿಸಲು ಕರಡು ಬರೆದಿದ್ದ ಸಹೋದ್ಯೋಗಿ ಜಾನ್ ಕ್ರೇಗ್ ವೆಂಟರ್ ಎಂಬ ವಿಜ್ಞಾನಿಯನ್ನು, ಇವರ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ ಹಿಟ್ಲರ್ ಎಂದು ಜರೆದಿದ್ದರು. ‘ಅವಾಯ್ಡ್ ಬೋರಿಂಗ್ ಪೀಪಲ್’ ಎಂಬ ಕೃತಿಯಲ್ಲಿ ಸಹೋದ್ಯೋಗಿಗಳನ್ನು ಡೈನೋಸಾರ್, ಪಳೆಯುಳಿಕೆ, ಮಿಡಿಯೋಕರ್ ಎಂದೆಲ್ಲ ಗೇಲಿ ಮಾಡಿದ್ದರು. ವಿಜ್ಞಾನಿಗಳು ಸೃಷ್ಟಿಸುವ ವಿವಾದಕ್ಕೇನಾದರೂ ‘ಪಿತಾಮಹ’ನ ಸ್ಥಾನ ಕೊಡಬೇಕೆಂದರೆ ಅದು ಇವರಿಗೇ ಸಲ್ಲಬೇಕು. ಅದು ನೊಬೆಲ್ ಪ್ರಶಸ್ತಿಯಿಂದಲೇ ಪ್ರಾರಂಭವಾದದ್ದು ಒಂದು ದುರಂತ. ರೋಸಲಿನ್ ಫ್ರಾಂಕ್ಲಿನ್ ಎಂಬ ಮಹಾ ಬುದ್ಧಿವಂತೆ ಡಿ.ಎನ್.ಎ. ರಚನೆ ಕುರಿತು ಗಂಭೀರ ಅಧ್ಯಯನ ಮಾಡಿದ್ದರು. ಅವರ ಬಳಿ ರಾಶಿ ರಾಶಿ ಎಕ್ಸ್-ರೇ ಚಿತ್ರಗಳಿದ್ದವು. ಈ ಮಾಹಿತಿಯನ್ನು ಧಾರಾಳವಾಗಿ ಬಳಸಿಕೊಂಡ ವ್ಯಾಟ್ಸನ್ ಮತ್ತು ಕ್ರಿಕ್ ಜೋಡಿ ಎಲ್ಲೂ ಅವರ ಹೆಸರು ಎತ್ತದೆ ತಮ್ಮ ಸಾಧನೆಯೆಂದೇ ಬಿಂಬಿಸಿಕೊಂಡಿತು. ಮಹಿಳೆಗೆ ಆದ ಅನ್ಯಾಯದ ಬಗ್ಗೆ ಸ್ತ್ರೀವಾದಿಗಳು ಪ್ರತಿಭಟಿಸಿದರು. ವ್ಯಾಟ್ಸನ್‍ ಪ್ರತಿಷ್ಠೆಗೆ ಇದೇನೂ ಧಕ್ಕೆ ತರಲಿಲ್ಲ. ಆದರೆ ಈ ಅನ್ಯಾಯ ವಿಜ್ಞಾನ ಸಮುದಾಯಕ್ಕೆ ತಿಳಿದಿತ್ತು. ಅವರು ಸಂಶೋಧನೆ ಏರುಮುಖದಲ್ಲಿರುವಾಗಲೇ ಬೇರೆ ಬೇರೆ ಕಾರಣಕ್ಕೆ ಸುದ್ದಿಯಾದರು. ‘ನನಗೆ ಜೀವನ ನಡೆಸುವುದು ದುಸ್ತರವಾಗಿದೆ. ನನಗೆ ಬಂದಿರುವ ಚಿನ್ನದ ಪಾರಿತೋಷಕವನ್ನು ಹರಾಜಿಗಿಟ್ಟಿದ್ದೇನೆ’ ಎಂದು 1962ರಲ್ಲೇ ಸುದ್ದಿ ಮಾಡಿದ್ದೇ ಅಲ್ಲದೆ ಹರಾಜು ಹಾಕಿಯೂಬಿಟ್ಟರು. ಆಗಲೂ ಅವರಿಗೆ ಇನ್ನೊಂದು ಸ್ಥಾನ ಚರಿತ್ರೆಯಲ್ಲಿ ಸಿಕ್ಕಿತು. ‘ನೊಬೆಲ್ ಪ್ರಶಸ್ತಿಯನ್ನು ಜೀವಿತಕಾಲದಲ್ಲೇ ಹರಾಜಿಗಿಟ್ಟ ಮಹಾನುಭಾವ’ ಇವರಾದರು. ಹರಾಜಿನಲ್ಲಿ 41 ಲಕ್ಷ ಡಾಲರ್‌ಗೆ ಪ್ರಶಸ್ತಿ ಮಾರಾಟವಾಗಿತ್ತು. ಪ್ರಶಸ್ತಿಯನ್ನು ಹರಾಜಿನಲ್ಲಿ ಕೂಗಿ ಪಡೆದ ಆಲಿಷರ್ ಉಸ್ಮನೋವ್ ಎಂಬ ರಷ್ಯನ್ ವ್ಯಕ್ತಿ ಕನಿಕರಪಟ್ಟು ‘ನೊಬೆಲ್ ಪ್ರಶಸ್ತಿ ಪುರಸ್ಕೃತನಿಗೆ ಇಂಥ ಸಂಕಟ ಬರಬಾರದಾಗಿತ್ತು’ ಎಂದು ನೊಂದು ಪ್ರಶಸ್ತಿಯನ್ನು ಮರಳಿಸಿದ. ಆ ಹಣದಲ್ಲಿ ಸಮಾಜಸೇವೆ ಮಾಡುವುದಾಗಿಯೂ ವ್ಯಾಟ್ಸನ್ ದೊಡ್ಡ ಹೇಳಿಕೆ ಕೊಟ್ಟರು. ನಿಜವಾಗಲೂ ಅವರ ಪ್ರಶಸ್ತಿ ಹರಾಜಾಗಿದ್ದಕ್ಕಿಂತ ಅವರ ಈಗಿನ ಮಾತುಗಳು ಅವರ ಮಾನವನ್ನೇ ಹರಾಜು ಹಾಕಿವೆ.

ವ್ಯಾಟ್ಸನ್ ಈಗಲೂ ಲಾಂಗ್ ಐಲೆಂಡಿನಲ್ಲಿ ‘ಕೋಲ್ಡ್ ಸ್ಪ್ರಿಂಗ್ ಲ್ಯಾಬ್’ನ ಆವರಣದಲ್ಲಿ ಸುಸಜ್ಜಿತ ಮನೆಯಲ್ಲಿ ವಾಸಿಸುತ್ತಿದ್ದಾರೆ. ಏನೂ ನಡೆದಿಲ್ಲವೆಂಬಂತೆ ನಿರ್ಭಾವುಕರಾಗಿದ್ದಾರೆ. ಅವರ ಇಬ್ಬರು ಮಕ್ಕಳಲ್ಲಿ ಒಬ್ಬರು ಮಾಧ್ಯಮವನ್ನು ಪದೇ ಪದೇ ಪ್ರಾರ್ಥಿಸುತ್ತಿದ್ದಾರೆ. ‘ನಮ್ಮ ಅಪ್ಪನಿಗೆ ಮರೆವು ಹೆಚ್ಚಾಗಿದೆ. ಅವರ ಮಾತನ್ನು ಜನಾಂಗೀಯ ನಿಂದನೆ ಎಂದು ಭಾವಿಸಬೇಡಿ’ ಎನ್ನುತ್ತಿದ್ದಾರೆ. ಆದರೆ ವ್ಯಾಟ್ಸನ್‍ ನಾಲಗೆ ಮಾಡಿರುವ ಡ್ಯಾಮೇಜ್ ಸುಲಭಕ್ಕೆ ಮಾಯುವಂಥದ್ದಲ್ಲ. ಶ್ರೇಷ್ಠತೆಯ ವ್ಯಸನಕ್ಕೆ ಬಲಿಯಾದ ಹಿಟ್ಲರನ ಕೃತ್ಯಗಳನ್ನು ಜಗತ್ತು ಇಷ್ಟು ಬೇಗ ಮರೆಯಲು ಸಾಧ್ಯವೇ?

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !