ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ಕರ್ನಾಟಕದ ಕಾಲ್ಗುಣ!

Last Updated 20 ಸೆಪ್ಟೆಂಬರ್ 2019, 19:39 IST
ಅಕ್ಷರ ಗಾತ್ರ

ಕನಕಪುರದ ಬಂಡೆ, ಹುಲಿ (ಕು)ಖ್ಯಾತಿಯ ಡಿಕೆಶಿ ಬೆಂಬಲಿಗರು ‘ಜಾ.ನಿ’ ವಿರುದ್ಧ ನಡೆಸುತ್ತಿದ್ದ ಪ್ರತಿಭಟನೆಯನ್ನ ಟೀವ್ಯಾಗ್‌ ಮಂಡೆ ಬಿಸಿ
ಮಾಡ್ಕೊಂಡ್‌ ನೋಡ್ತಾ ಕುತ್ಕೊಂಡಾಗ್ ಪ್ರಭ್ಯಾನ್‌ ಫೋನ್‌ ಬಂತು. ‘ಬೆಂದಕಾಳೂರಿನ ಭಾರಿ ಟ್ರಾಫಿಕ್‌ನ್ಯಾಗ್‌ ಸಿಕ್ಕಾಕ್ಕೊಂಡೀನಿ. ಇಷ್ಟ್‌ ಜನಾ ಎದಕ್‌ ಸೇರ‍್ಯಾರ್. ದಾರಿ ಯಾವುದಯ್ಯಾ ಟ್ರಾಫಿಕ್‌ನಿಂದ ಹೊರಗ್‌ ಬರಾಕ್‌’ ಎಂದ.

‘ಸ್ವಲ್ಪ ಕಣ್ಣ ಕಿಸಿದು ನೋಡಲೇ, ಎಲ್ಲಾರ್‌ ಕೈಯ್ಯಾಗ್‌ ಡಿಕೆಶಿ ಚಿತ್ರ ಕಾಣಾಕತ್ತದಿಲ್ಲ. ‘ಜಾ.ನಿ’ಯವರು ಇವ್ರನ್ನ ಒಳಗ್‌ ಹಾಕ್ಯಾರಲ್ಲ. ಅದ್ನ ವಿರೋಧಿಸಿ ಜನಾ ಬೀದಿಗೆ ಇಳದಾರಲೇ’ ಎಂದೆ.

‘ಜಾನಿ ಅಂದ್ರ ನಮ್ಮ ಚೆಡ್ಡಿ ದೋಸ್ತs ಏನ್‌. ಅವ್ನ ಹೆಸರ‍್ಯಾಕ್‌ ಎಳ್ಕೊಂಡ್‌ ಬರ‍್ತಿ. ಸ್ವಲ್ಪ ಬಿಡಿಸಿ ಹೇಳ್‌’ ಎಂದ.

‘ಬಂಡೆ ಬಾಯಿ ಬಿಡಸಾಕ್‌ ಇ.ಡಿಯವರು ಹುಲಿಯನ್ನ ದಿಲ್ಲಿಯ ಪಂಜರದಾಗ್‌ ಇಟ್ಟಾರ್‌’ ಅಂತ ಹೇಳುತ್ತಿದ್ಹಂಗ್‌, ‘ಗೊತ್ತಾತು ಬಿಡು. ಎಲ್ಲಾದರೂ ಇಡಿ, ಎಷ್ಟಾದರೂ ಇಡಿ, ಇ.ಡಿಗೆ ಗೊತ್ತಾಗದ್ಹಂಗ್‌ ಇಡಿ’ ಅಂತ ವಾಟ್ಸ್‌ಆ್ಯಪ್‌ನಾಗ್‌ ಹೊಸ ತ್ರಿಪದಿ ಹರಿದಾಡಾಕತ್ತದಲ್ಲ. ನೀ ಅದ್ನ ಜಾರಿ ನಿರ್ದೇಶನಾಲಯ (ಜಾ.ನಿ) ಅಂತಂದ್ರ ಯಾರ‍್ಗೂ ಅರ್ಥ ಆಗುದಿಲ್ಲಲೇ ಮಳ್ಳ’ ಎಂದು ಬೈದ.

ಅದ್ಕ ಉತ್ರಾ ಕೊಡ್ದ, ‘ನೀ ಶ್ರೀಮಂತರ ಪರನs ಇಲ್ಲಾ ಬಡವರ ಪರನs’ ಎಂದೆ. ‘ನಾನು ಮಧ್ಯಮ ವರ್ಗದವ. ಯಾರ್‌ ಕಡೆಗೂ ಇಲ್ಲ’ ಎಂದ. ‘ಹಂಗಿದ್ರ ಆ ಮೆರವಣಿಗೆ ಒಳ್ಗ ಯಾಕ್‌ ಅದಿಲೇ. ಭಾಳಷ್ಟು ರೊಕ್ಕಾ ಮಾಡಿದವ್ರನ್ನೆಲ್ಲ ಅನುಮಾನದಿಂದ ನೋಡಬಾರ‍್ದು ಅಂತ ‘ನಮೋ’ ಸಾಹೇಬ್ರು ಹೇಳ್ತಿದ್ರ, ಅವರ ಸರ್ಕಾರನ 840 ಕೋಟಿಯ ಯಜಮಾನನನ್ನ ಹಬ್ಬಕ್ಕೂ ಬಿಡ್ದ ವಿಚಾರಣೆ ಹೆಸರ್‌ನ್ಯಾಗ್‌ ಹೀಂಗ್‌ ರುಬ್ಬೋದು ಸರಿ ಕಾಣಸ್ತದ್‌ ಏನ್‌ ನಿಂಗ್‌’ ಎಂದೆ.

‘ರೊಕ್ಕಾ ಗಳಿಸ್ಲಿ, ಯಾರ್‌ ಬ್ಯಾಡ್‌ ಅಂತಾರ್‌. ಅದ್ಕ ಒಂದ್‌ ಮಿತಿ ಇರ‍್ತದ್‌’ ಅಂದ. ‘ನೀನ್‌ ಹೇಳೂದು ಖರೆ ಬಿಡು’ ಅಂತ ಹೇಳುತ್ತಲೇ, ‘ಬೀಗರ್‌ ಮನಿ ಊಟಕ್ಕ ಹೊಂಟಿ ಏನ್‌’ ಎಂದು ಮಾತು ಬದಲಿಸಿದೆ. ‘ಆಫೀಸ್‌ ಕೆಲ್ಸಕ್ಕ ಬಂದಿದ್ದೆ. ಇದ್ರಾಗ್‌ ಬೀಗರನ್ನ ಯಾಕ್‌ ಎಳಕೊಂಡು ಬಂದಿ’ ಅಂದ.

‘ಡಿಕೆಶಿ ಪರ ಮೆರವಣಿಗೆಗೆ ಕುಮಾರಣ್ಣಗ್‌ ಕರ್ದಿದಿಲ್ಲಂತ. ಅದ್ಕ ಅವ್ರ ಮಾಜಿ ಖಾಸಾ ದೋಸ್ತ್‌ ಚಲುವಪ್ಪ, ಅದೇನ್‌ ಬೀಗರ್‌ ಊಟೇನ್‌, ಕರಿಲಾಕ್‌’ ಅಂತ ನೀರ್‌ ಇಳಸ್ಯಾನ. ಅದಿರ‍್ಲಿ ಬಿಡು. ನಿನ್ನ ಕಾಲ್ಗುಣ ಸರಿ ಇದ್ಹಂಗ್ ಕಾಣುದಿಲ್ಲ. ಅದ್ಕ ಟ್ರಾಫಿಕ್ಯಾಗ್‌ ಸಿಕ್ಕಾಕೊಂಡಿದ್ದಿ’ ಎಂದೆ.

‘ಏಯ್‌, ಹುಚ್ಮಲ್ಲ. ನಂಗೂ ಅದಕ್ಕೂ ಏನ್‌ ಸಂಬಂಧ. ಕಾಲ್ಗುಣದ ಮಾತನ್ನ ಹೆಂಡ್ತಿ ಹೊಸದಾಗಿ ಮನಿಗಿ ಬಂದಾಗ್‌ ಬಳಸ್ತಾರಲೆ. ಅಷ್ಟೂ ಗೊತ್ತಿಲ್ಲೇನ್‌’ ಎಂದು ಬೈದ. ‘ಹೊಸ್ತಲ್‌ದಾಗ್‌ ಅಕ್ಕಿ– ಜ್ವಾಳ ತುಂಬಿ ಇಟ್ಟಿದ್ದ ಚೆರಗಿಯನ್ನ ಝಾಡಿಸಿ ಒದ್ದು ಒಳಗ್‌ ಕಾಲಿಟ್ಟ ಹೆಂಡ್ತಿ ಕಾಲ್ಗುಣದ ಕತೀನ ಬ್ಯಾರೆ ಬಿಡು. ಚಂದಪ್ಪನ ಅಂಗಳದಾಗ್‌ ಲ್ಯಾಂಡರ್‌ ಕೊನೆ ಗಳಿಗ್ಯಾಗ್‌ ಕೈಕೊಟ್ಟಿದ್ದಕ್ಕೂ, ‘ನಮೋ’ ಸಾಹೇಬ್ರು, ‌ನಡುರಾತ್ರಿ ಇಸ್ರೊ ಕಚೇರಿಗೆ ಕಾಲಿಟ್ಟಿದ್ದೇ ಕಾರಣ ಅಂತ ಕುಮಾರಣ್ಣ,ಹೊಳಿ ತುಂಬಿ ಹರ‍್ಯಾಕ್‌ ಆಡಿಯೋರಪ್ನೋರ ಕಾಲ್ಗುಣ ಕಾರಣ ಅಂತ ಇನ್ಯಾರೋ ಹೇಳ್ಯಾರಲ್ಲ’ ಎಂದೆ.

‘ಹೈ.ಕ ಹೋಗಿ ಕ.ಕ (ಕಲ್ಯಾಣ ಕರ್ನಾಟಕ) ಆಗಾಕ್‌, ಕರ್ನಾಟಕದಾಗ ಕಮಲ ಅರಳಾಕ್‌ (ಕ.ಕ) ಇವ್ರ ಕಾಲ್ಗುಣನs ಕಾರಣ ಗೊತ್ತೈತಿಲ್ಲ ಮಗ್ನ. ಮುಂದ ಅತೃಪ್ತರ ಕಲ್ಯಾಣನೂ (ಅ.ಕ) ಆಗ್ತದ ನೋಡ್ತಾ ಇರು’ ಅಂತ ರೋಫ್‌ ಹಾಕ್ದಾ. ಅದೇ ಭರದಾಗ, ‘ಈ ಟ್ರಾಫಿಕ್‌ ನೋಡಿದ್ರ, ಮೆಜೆಸ್ಟಿಕ್‌ಗೆ ಹೋಗಿ ಬಸ್‌ ಹತ್ಕೊಂಡು ಊರಿಗೆ ಹೋಗೋದs ಭಾಳ ಛಲೋ ಅಂತ ಅನಸ್ತದ’ ಅಂತನೂ ಸೇರ‍್ಸಿದ.

‘ಹಂಗೇನರ ಮಾಡಿಗಿಡಿ ಮಗ್ನ. ಕಚೇರಿ ಕೆಲ್ಸಾ ಮಾಡ್ಕೊಳಾರ‍್ದ ಬರಿಗೈಲಿ ಬಂದು ಹಿಜಡಾತನ ತೋರಿಸ್ಯಾಣ್‌ ಅಂತ ಈಶ್ವರಪ್ನೋರ್‌ ಥರಾ ಊರಾನ್‌ ಮಂದಿ ನಾಲಗಿ ಹೊರಗ್‌ ತಗ್ದು ನಿಂಗೂ ಬೈತಾರ್‌ ನೋಡ್‌’ ಎಂದೆ.

‘ಹಂಗಿದ್ರ, ಓಡ್ಕೊತ್‌ ಓಡ್ಕೊತ್‌ ಹೋಗಿ ಬರ್ತಿನಿ’ ಅಂತ ಅವಸರಿಸಿದ. ‘ಅವ್ಸರಾ ಮಾಡಬ್ಯಾಡಲೆ. ಸಾಲ ವಸೂಲಿಗೆ ಅವ್ಸರಾ ಮಾಡಬಾರದಂತ ಆರ್‌ಬಿಐ, ಅತೃಪ್ತ ಶಾಸಕರ ಅರ್ಜಿ ವಿಚಾರಣೆಗೆ ಏನ್‌ ಅವ್ಸರ ಐತಿ ಅಂತ ಸುಪ್ರೀಂ ಕೋರ್ಟ್‌ ಕೇಳೇದ. ಅಂಥಾದ್ರಾಗ್‌ ನೀ ಬಂದಿದ್ದ ಕೆಲ್ಸಾ ಮುಗುಸ್‌ಲಾರ‍್ದ ಹೋಗಾಕ್‌ ಏನ್‌ ಅಂಥಾ ಘನಂದಾರಿ ಕೆಲ್ಸಾ ಐತಿ’ ಎಂದೆ.

‘ಆಫೀಸ್‌ ಕೆಲ್ಸಾ ಮುಗಿಸಿಕೊಂಡ್‌ ಇವತ್‌ ರಾತ್ರೀನ ಬಸ್‌ ಹತ್ತೀನಿ ಅಂತ ಹೆಂಡ್ತಿಗೆ ಹೇಳಿ ಬಂದೀನಿ. ಒಂದ್‌ ದಿನ ಲೇಟ್‌ ಆದ್ರ ನನ್ನ ಕಾಲ್ಗುಣ ಅಲ್ಲಲೇ ನಸೀಬs ಸರಿ ಇರುದಿಲ್ಲ. ವಾರ ಪೂರ್ತಿ ಧುಮುಗುಡುತಿರ‍್ತಾಳ್‌. ಆಕೀನ ಸಮಾಧಾನ ಪಡಸಾಕ್‌ ಆಕಾಶ್ ಪಾತಾಳ್‌ ಒಂದ್‌ ಮಾಡಬೇಕಾಗ್ತೈತಿ’ ಎಂದ.

‘ಹೆಂಡ್ತೀನ ಹೆಂಗರs ಸಂಬಾಳ್ಸಬಹುದು. ತಮ್ಮನ್ನ ಯಾರೂ ರಮಸಾಕತ್ತಿಲ್ಲ ಅಂತ ಅತೃಪ್ತ ಶಾಸಕರು ಅಳಾಕತ್ತಾರಂತ ಸುದ್ದಿ ಕೇಳಿ ಏನ್‌. ಪಾಪ ಅವ್ರ ಕಾಲ್ಗುಣಾನೂ ಸರಿ ಇದ್ದಂಗ್‌ ಕಾಣುತ್ತಿಲ್ಲ’ ಎಂದೆ. ‘ಪಿಕ್ಚರ್‌ ಅಭಿ ಬಾಕಿ ಹೈ... ಅಂತ ನಮ್ಮ ‘ನಮೋ’ ಸಾಹೇಬ್ರು ಹೇಳ್ಯಾರಲ್ಲ’ ಎಂದ. ‘ಏಯ್‌ ಮಳ್ಳ, ಇದು ಇಂಡಿಯಾ. ಹಿಂಡಿ(ದಿ)ಯಾ ಅಲ್ಲಲೇ. ಸುದ್ದ ಕನ್ನಡದಾಗ್ ಮಾತಾಡ್‌’ ಎಂದು ದಬಾಯಿಸಿದೆ.

ಸಂಗಮ ಚಿತ್ರದ, ‘ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ, ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ’ ಎಂದು ಹಾಡು ಹೇಳ್ತಾ ಪ್ರಭ್ಯಾ ತನ್ನ ಕನ್ನಡಾಭಿಮಾನ ತೋರಿಸಿದ. ‘ನವೆಂಬರ್‌ಗಿಂತ ಮೊದ್ಲ ಕನ್ನಡ ಜಾಗೃತಿಗೆ ಕಾರಣನಾದ ಶಾಣ್ಯಾಗೆ ದೊಡ್ಡ ನಮಸ್ಕಾರ್‌ ಹೇಳ್ಬೇಕ್‌ ನೋಡ್‌’ ಅಂತ ಹೇಳ್ತಾ ಇರುವಾಗ್ಲ, ‘ರೀ, ಆಫೀಸ್‌ಗೆ ಹೋಗಾಕ್‌ ಟೈಮಾತು. ಊಟಾ ಮಾಡ್ತೀರ ಇಲ್ಲ’ ಅಂತ ಹೆಂಡ್ತಿ ಆವಾಜ್‌ ಹಾಕುತ್ತಿದ್ಹಂಗ್‌, ಅವಸರದಲ್ಲಿ ಫೋನ್‌ ಕಟ್‌ ಮಾಡ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT