ಸಿನಿಮಾ ಸಾಹಿತ್ಯದಲ್ಲಿ ಲವಲವಿಕೆ ಇರಬೇಕು, ಥಟ್ಟನೆ ಗಮನಸೆಳೆಯಬೇಕು ಎಂಬ ಉಮೇದು ಲಾಗಾಯ್ತಿನಿಂದ ಇರುವಂಥದ್ದೇ. ಅದರಲ್ಲೂ ಕ್ಯಾಬರೆ ನೃತ್ಯ ಇರುವ ಹಾಡುಗಳು ಬಂದಮೇಲೆ ರಸಿಕರೆದೆಗೆ ಗಾಳ ಹಾಕುವಂತಹ ಸಾಲುಗಳನ್ನು ಬರೆಯುವ ಸವಾಲು ಉದ್ಭವವಾಯಿತು. ಆ ಟ್ರೆಂಡ್ ಈಗ ಸದಭಿರುಚಿಯ ಎಲ್ಲೆಕಟ್ಟುಗಳನ್ನೆಲ್ಲ ಮೀರಿದಂತಿದೆ.

‘ಪರೋಪಕಾರಿ’ ಸಿನಿಮಾದ ‘ಜೋಕೆ ನಾನು ಬಳ್ಳಿಯ ಮಿಂಚು, ಕಣ್ಣು ಕತ್ತಿಯ ಅಂಚು’ ಎಂಬ ಸಾಲಿನ ರಸಾಸ್ವಾದ ಉಂಡವರು ನಾವು. ಆರ್.ಎನ್. ಜಯಗೋಪಾಲ್ ಅವರ ಸಾಹಿತ್ಯದ ಗೀತೆಯಲ್ಲಿನ ಲಯ ಹಾಗೂ ಶಿಲ್ಪದ ಬಗೆಗೂ ದೀರ್ಘವಾಗಿ ಮಾತಾಡಬಹುದು. ಹಂಸಲೇಖ ಕೂಡ ಇಂತಹ ಗೀತೆಗಳನ್ನು ಬರೆಯುವ ಅವಕಾಶ ಸಿಕ್ಕಾಗಲೆಲ್ಲ ತುಂಟತನದ ಸುಖ ಉಂಡರು, ಉಣಬಡಿಸಿದರು. ‘ಅದೇನದು ಅದೇನದು ಐಸಾ...’ ಎಂದು ಡಿಸ್ಕೋ ಶಾಂತಿ ‘ಸಂಗ್ರಾಮ’ ಚಿತ್ರದಲ್ಲಿ ಮಾದಕವಾಗಿ ಕುಣಿದ ಹಾಡಿನಲ್ಲಿ ಇದ್ದ ಸಾಲುಗಳು ಇದಕ್ಕೆ ಉದಾಹರಣೆ. ಮಂಜಿನಗಡ್ಡೆಗೂ ಲಲನೆಗೂ ಹೋಲಿಕೆ ಮಾಡಿ ಹಂಸಲೇಖ ಬರೆದಿದ್ದ ಐಟಂ ಗೀತೆ ಅದು. ಎರಡು ದಶಕಗಳಲ್ಲಿ ಯೋಗರಾಜ ಭಟ್ಟರು ಅನೇಕ ಐಟಂ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ‘ನಾ ಬೋರ್ಡು ಇರದ ಬಸ್ಸನು ಹತ್ತಿಬಂದ ಚೋಕರಿ’ ಆಗಲಿ, ‘ಶೇಕ್ ಇಟ್ ಪುಷ್ಪವತಿ’ ಆಗಲಿ ಆರೋಗ್ಯಕರ ವಿಟ್ಗೆ ರಸಿಕತೆ ಬೆರೆಸಿದಂತಹ ಸಾಲುಗಳನ್ನು ಒಳಗೊಂಡಿದ್ದವು. ಅವುಗಳು ಅಶ್ಲೀಲ ಎನ್ನುವ ಮಟ್ಟಕ್ಕೆ ಇಳಿದಿರಲಿಲ್ಲ.

ಹೀಗೆ ಮೂರು ಕಾಲಮಾನಗಳಲ್ಲಿ ಆರೋಗ್ಯಕರವಾದ ತುಂಟ ಗೀತೆಗಳನ್ನು ಕೇಳುತ್ತಾ ಬಂದ ನಾವು ಆಗಾಗ ಹದ ತಪ್ಪಿದ, ಘನತೆಯ ಚೌಕಟ್ಟು ದಾಟಿದ ಗೀತಸಾಹಿತ್ಯವನ್ನೂ ನೋಡುತ್ತಾ ಬಂದಿದ್ದೇವೆ. ಕೇಳುತ್ತಾ ಕಿವಿ ಮುಚ್ಚಿಕೊಂಡಿದ್ದೇವೆ. ಈಗ ಹಾಗೆ ಕಿವಿ ಮುಚ್ಚಿಕೊಳ್ಳುವಂತಹ ಸಾಹಿತ್ಯ ಬಂದಿದೆ ಎಂದೇ ಸಾಮಾಜಿಕ ಮಾಧ್ಯಮದಲ್ಲಿ ಗಂಭೀರ ಚರ್ಚೆ ನಡೆದಿದೆ.

ನಿರ್ದೇಶಕ ಪ್ರೇಮ್ ತಮ್ಮ ‘ಕೆ.ಡಿ.’ ಚಿತ್ರಕ್ಕೆ ‘ಸರಿಸೆ ನಿನ್ನ ಸೆರಗ’ ಎಂಬ ಹಾಡನ್ನು ಬರೆದಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ತಮ್ಮ ನೃತ್ಯ ಲಾಲಿತ್ಯದಿಂದ ಗಮನಸೆಳೆದಿರುವ ನೋರಾ ಫತೇಹಿ ಹಾಗೂ ಸಂಜಯ್ ದತ್ ನೃತ್ಯದ ಮೇಲೆ ಆ ಹಾಡಿನ ಚಿತ್ರೀಕರಣ ನಡೆದಿದೆ. ಬಹುಶಃ ಆ ಇಬ್ಬರಿಗೂ ಸಾಹಿತ್ಯದ ಹೂರಣದ ಅರಿವು ಪೂರ್ಣವಾಗಿ ಇರಲಾರದು. ‘ಸೆರಗ ಸರಿಸೆ’ ಎನ್ನುವ ಕೋರಿಕೆಯನ್ನೇ ಪಲ್ಲವಿ ಮಾಡುವ ಮೂಲಕವೇ ಅದನ್ನು ಬರೆದಿರುವ ಪ್ರೇಮ್ ಅವರು ತಮ್ಮ ಉದ್ದೇಶವನ್ನು ಅನಾವರಣಗೊಳಿಸಿದ್ದಾರೆ. ಮುಂದೆ ಚರಣಗಳಲ್ಲಿನ ಸಾಹಿತ್ಯ ಅಶ್ಲೀಲ ಎನ್ನುವುದು ನಿಸ್ಸಂಶಯ. ಕೆಲವು ದಶಕಗಳ ಹಿಂದೆ ಡಬ್ಬಲ್ ಮೀನಿಂಗ್ ಎಂಬ ಪ್ರಭೇದ ಇತ್ತು. ಈಗ ಅದೂ ಇಲ್ಲವಾದ ಕಾಲದಲ್ಲಿ ಪ್ರೇಮ್ ಸಾಹಿತ್ಯ ನೇರವಾಗಿ ಸುರತದ ಕಚ್ಚಾ ಹಾಗೂ ವಾಚ್ಯ ಹಲುಬುವಿಕೆಯಂತೆ ಕೇಳುತ್ತಿದೆ.

ಸಿನಿಮಾ ಸಾಹಿತ್ಯವನ್ನು ಆಕರ್ಷಿಸುವಂತೆ ರಚಿಸುವ ಭರದಲ್ಲಿ ಅವಸರದಲ್ಲಿಯೇ ಪದಗಳ ಪೋಣಿಸುವುದು ಸಹಜವೇ ಇರಬಹುದು. ಆದರೆ, ಅಭಿರುಚಿಯೊಂದು ಗುಪ್ತಗಾಮಿನಿಯಾಗಿ ಕೆಲಸ ಮಾಡುತ್ತಿರುತ್ತದೆ. ‘ಈ ಶತಮಾನದ ವೀರ ಮದಕರಿ’ ಕನ್ನಡ ಸಿನಿಮಾದಲ್ಲಿ ‘ಜಿಂತಾತ’ ಎಂಬ ಹಾಡೊಂದು ಇದೆ. ಅದರಲ್ಲಿನ ಚರಣವೊಂದರಲ್ಲಿ ‘ಟೆನ್ನಿಸ್ಸು ಸಾನಿಯಾ/ ಇವಳೇನು ಕಮ್ಮಿಯಾ/ ಬಗ್ಗಿ ಶಾಟು ಹೊಡೆದರೆ ಗ್ರೌಂಡೆಲ್ಲ
ಕ್ಯಾಬರೆ’ ಎಂಬ ಸಾಲುಗಳಿವೆ. ಆಟವನ್ನು ಆಸ್ವಾದಿಸುವ ಮನಸ್ಸುಗಳಿಗೆ ಈ ಸಾಲುಗಳನ್ನು ಕೇಳಿ ಕಸಿವಿಸಿಯಾಗಬಹುದು. ಆದರೆ, ಅದು ಜನಪ್ರಿಯವಾಗಿದ್ದ ಹಾಡೊಂದರ ಸಾಲು. ಪಡ್ಡೆಗಳು ಅದನ್ನು ಗುನುಗುವಂತಹ ಹೆಚ್ಚು ಸಂದರ್ಭಗಳು ಸಹಜವಾಗಿ ಸೃಷ್ಟಿಯಾಗುತ್ತವೆ ಎಂಬ ಅಂದಾಜಿನಿಂದಲೇ ಗೀತರಚನೆಕಾರ ಕವಿರಾಜ್ ಅವರು ಸನ್ನಿವೇಶವನ್ನಷ್ಟೇ ದೃಷ್ಟಿಯಲ್ಲಿ ಇಟ್ಟುಕೊಂಡು ಆ ಸಾಲುಗಳನ್ನು ಬರೆದಿರಬಹುದು. ಸ್ವತಃ ಕ್ರೀಡಾಪ್ರೇಮಿಯಾದ ಸುದೀಪ್ ಅವರಿಗೂ ತಮ್ಮ ಸಿನಿಮಾ ಹಾಡಿನ ಈ ಸಾಲುಗಳ ಕುರಿತು ತುಸುವೂ ಸಂಕೋಚ ಮೂಡದೆಹೋದದ್ದು ಅಚ್ಚರಿ. ಆ ಕಾಲಘಟ್ಟದಲ್ಲಿ ಸಾನಿಯಾ ಮಿರ್ಜಾ ಭಾರತದ ಟೆನಿಸ್ಗೆ ಹಲವು ಗರಿಗಳನ್ನು ಮೂಡಿಸಿದವರು. ಹಾಡಿನಲ್ಲಿ ಅವರ ಹೆಸರನ್ನು ತೇಲಿಬಿಟ್ಟು, ‘ಬಗ್ಗಿ ಶಾಟು ಹೊಡೆದರೆ ಗ್ರೌಂಡೆಲ್ಲ ಕ್ಯಾಬರೆ’ ಎಂದು ಬರೆಯುವುದು ಒಳ್ಳೆಯ ಅಭಿರುಚಿಯಂತೂ ಅಲ್ಲ.

ಈಗೀಗ ಪ್ರೇಮ್ ಅವರಿಗೆ ಸಭ್ಯತೆಯ ಚೌಕಟ್ಟನ್ನು ಮುರಿದು ನುಗ್ಗುವುದು ಚಾಳಿಯೇ ಆಗುತ್ತಿದೆ. ‘ಇವಳು ದೇವರು ಕೊಟ್ಟ ವರದಾನ/ ಮೈಯೇ ಒಂದು ಮೈದಾನ/ ಆಡ್ಕಳ್ಳಿ ಆಡ್ಕಳ್ಳಿ ಅಂತಾಳೆ’ ಎಂಬ ಸಾಲುಗಳನ್ನು ಅವರು ‘ಪ್ರೇಮ್ ಅಡ್ಡಾ’ ಸಿನಿಮಾದಲ್ಲಿ ಬರೆದಿದ್ದರು. ಅದಕ್ಕೂ ಟೀಕೆಗಳು ವ್ಯಕ್ತವಾಗಿದ್ದವು. ಈಗ ‘ಸರಿಸೆ ನಿನ್ನ...’ ಎಂಬ ಹಾಡನ್ನು ಬರೆದಿದ್ದಾರೆ. ಅದರಲ್ಲಿನ ಚರಣದ ಸಾಹಿತ್ಯವನ್ನು ಮುಕ್ತವಾಗಿ ಸಾರ್ವಜನಿಕ ಸ್ಥಳದಲ್ಲಿ ಹಾಡಿದರೆ ಯಾರಿಂದಲಾದರೂ ತಪರಾಕಿ ಬೀಳುವುದು ಗ್ಯಾರಂಟಿ.

ಉತ್ತರ ಕರ್ನಾಟಕದ ಕೆಲವು ಯೂಟ್ಯೂಬರ್ಗಳು ಅಶ್ಲೀಲ ಸಾಹಿತ್ಯ ಬರೆಯುತ್ತಿದ್ದಾರೆ ಎಂದು ಅದನ್ನು ಟೀಕಿಸಿ ಶೀಲಾ ಪಾಟೀಲ ಎಂಬ ಹೆಣ್ಣುಮಗಳೊಬ್ಬರು ಇತ್ತೀಚೆಗೆ ಹಾವೇರಿಯಲ್ಲಿ ಸುದ್ದಿಗೋಷ್ಠಿ ಮಾಡಿದ್ದರು. ದೂರು ಕೊಡುವ ಎಚ್ಚರಿಕೆಯನ್ನೂ ಅವರು ನೀಡಿದ್ದರು. ಈಗ ಪ್ರೇಮ್, ಜನ ಮಾತಾಡಿಕೊಳ್ಳಲಿ ಎಂಬ ಭಂಡತನದಿಂದಲೋ ಏನೋ ಅಗ್ಗದ ಸಾಹಿತ್ಯ ಬರೆದು ಬಯಲಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.