ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಅಸ್ಮಿತೆ ಮತ್ತು ಕ್ರಿಯಾಶೀಲ ಪ್ರಯತ್ನ

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಉನ್ನತ ಅಧ್ಯಯನಗಳಿಗೆ ಸಂಬಂಧಿಸಿದಂತೆ ಕ್ರಿಯಾಯೋಜನೆ ರೂಪಿಸಿ, ಕನ್ನಡವನ್ನು ‘ವಿಶ್ವ ಕನ್ನಡ’ವಾಗಿಸಲು ಪ್ರಯತ್ನಿಸಬೇಕಿದೆ
Last Updated 18 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಕರ್ನಾಟಕ ಸರ್ಕಾರದ ‘ಕನ್ನಡ ಅಭಿವೃದ್ಧಿ ಪ್ರಾಧಿಕಾರ’ವು ರಾಜ್ಯದ ಒಳಗೆ ಮತ್ತು ಹೊರಗೆ ಕನ್ನಡಿಗರನ್ನು ಒಗ್ಗೂಡಿಸುವ, ಎಚ್ಚರಗೊಳಿಸುವ, ಕನ್ನಡದ ಅಸ್ಮಿತೆಗೆ ಕಂಟಕ ಒದಗಿದಾಗ ತಾತ್ವಿಕ ಹೋರಾಟಗಳನ್ನು ಸಂಘಟಿಸುವ ಕೆಲಸ ಮಾಡುತ್ತಾ ಬಂದಿದೆ. ಅದಕ್ಕೆ ಪೂರಕವಾಗಿ ಕನ್ನಡ ಭಾಷೆ, ಸಂಸ್ಕೃತಿಯ ಶೋಧನ, ಬೋಧನ, ‍ಪ್ರಸರಣಗಳ ಜತೆಗೆ ಉನ್ನತ ಅಧ್ಯಯನಗಳಿಗೆ ಸಂಬಂಧಿಸಿದಂತೆ ಕೆಲವೊಂದು ಕ್ರಿಯಾ ಯೋಜನೆಗಳನ್ನು ರೂಪಿಸಿ, ಆ ಮೂಲಕ ಕನ್ನಡವನ್ನು ‘ವಿಶ್ವ ಕನ್ನಡ’ವಾಗಿಸುವ ಪ್ರಯತ್ನದಲ್ಲಿ ಪ್ರಾಧಿಕಾರವು ಕ್ರಿಯಾಶೀಲ ಆಗಬೇಕಾಗಿದೆ. ಈ ಸಂಬಂಧವಾಗಿ ಆಗಬೇಕಾದ ಕೆಲವು ಕೆಲಸಗಳು ಹೀಗಿವೆ:

ವಾರಾಣಸಿಯ ಬನಾರಸ್ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಮುಚ್ಚಿಹೋಗಿ ಹಲವು ದಶಕಗಳೇ ಸಂದಿವೆ. ಒಂದು ಕಾಲಕ್ಕೆ ಡಾ. ಪ್ರಭುಶಂಕರ, ಡಾ. ಶಿವಾನಂದ ಅವರಂತಹ ಹಿರಿಯ ಪ್ರಾಧ್ಯಾಪಕರು ತಮ್ಮ ಅಧ್ಯಯನ, ಅಧ್ಯಾಪನಗಳಿಂದ ಅಲ್ಲಿ ಕನ್ನಡವನ್ನು, ಕನ್ನಡತನವನ್ನು ಎತ್ತಿ ಹಿಡಿದಿದ್ದರು. ಗಟ್ಟಿಮುಟ್ಟಾದ ಅನೇಕ ಕನ್ನಡಪರ ಚಿಂತನೆಗಳು ಅಲ್ಲಿಂದ ಮೂಡಿ ಬಂದಿದ್ದವು. ಅಲ್ಲಿ ಮತ್ತೆ ಕನ್ನಡ ಎಂ.ಎ. ತರಗತಿಗಳನ್ನು ಆರಂಭಿಸುವ ಬದಲು, ಹಿರಿಯ ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ಉತ್ತರ ಭಾರತದ ಭಾಷೆಗಳೊಂದಿಗಿನ ಕನ್ನಡ ಭಾಷೆಯ ನಂಟನ್ನು ಗೊತ್ತು ಮಾಡುವ ಪ್ರಯತ್ನವನ್ನು ಮಾಡಬಹುದು. ಡಾ.ಚಿದಾನಂದಮೂರ್ತಿಯವರ ‘ಸಾಂಸ್ಕೃತಿಕ ಬೃಹದ್ಭಾರತ’ದ ಕಲ್ಪನೆಯನ್ನು ಸೂಕ್ಷ್ಮ ಅಧ್ಯಯನದ ಮೂಲಕ ಸಾಕಾರಗೊಳಿಸಬಹುದು.

ದೆಹಲಿ ವಿಶ್ವವಿದ್ಯಾಲಯದ ‘ಭಾರತೀಯ ಭಾಷೆಗಳ ಅಧ್ಯಯನ ವಿಭಾಗ’ದಲ್ಲಿ ಕನ್ನಡ ಪ್ರಾಧ್ಯಾಪಕ ಹುದ್ದೆ ರಿಕ್ತವಾಗಿದೆ. ಅನೇಕ ಹಿರಿಯ ಕನ್ನಡ ಪ್ರಾಧ್ಯಾಪಕರು ಆ ವಿಭಾಗದ ಮೂಲಕ ಭಾರತೀಯ ಭಾಷೆಗಳು ಹಾಗೂ ಅವುಗಳೊಂದಿಗೆ ಕನ್ನಡದ ನಂಟನ್ನು ಕುರಿತು ನಿಡುಗಾಲದಿಂದ ಅಧ್ಯಯನ ಮಾಡುತ್ತಾ ಬಂದಿದ್ದರು. ಆದರೆ ಈಗ ಸುಮಾರು ಹತ್ತು ವರ್ಷಗಳಿಂದ ಆ ಸ್ಥಾನವನ್ನು ತುಂಬುವ ಪ್ರಯತ್ನವನ್ನು ದೆಹಲಿ
ವಿಶ್ವವಿದ್ಯಾಲಯವು ಮಾಡಿಲ್ಲ.

ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ವಿಶ್ವವಿದ್ಯಾಲಯಗಳ ಪದವಿ ತರಗತಿ
ಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಓದುವುದಕ್ಕೆ ಅವಕಾಶವಿಲ್ಲ. ಮದರಾಸು ವಿಶ್ವವಿದ್ಯಾಲಯದಲ್ಲಿ ಏಕೀಕರಣಕ್ಕೆ ಮುನ್ನ ‘ಕನ್ನಡ ವಿದ್ವಾನ್’ ಪದವಿ ಅಧ್ಯಯನಕ್ಕೆ ಆಸ್ಪದವಿತ್ತು. ಅನೇಕ ಮಂದಿ ಕನ್ನಡ, ಸಂಸ್ಕೃತಿ ವಿದ್ವಾನ್ ಪದವಿ ಪಡೆದು, ಕನ್ನಡ ಪಂಡಿತ ಪರಂಪರೆಯೊಂದು ರೂಪುಗೊಂಡಿತ್ತು. ಈಗ ಹೊರನಾಡ ವಿಶ್ವವಿದ್ಯಾಲಯಗಳ ಪದವಿ ತರಗತಿಗಳಲ್ಲಿ ತಮಿಳು, ತೆಲುಗು, ಮಲಯಾಳಂ ಭಾಷೆಗಳನ್ನು ಬೋಧಿಸಲಾಗುತ್ತಿದೆ. ಆದರೆ, ಕನ್ನಡಕ್ಕೆ ಈ ಅವಕಾಶ ಇಲ್ಲ. ಮುಂಬೈನಲ್ಲಿ ಅಂಗನವಾಡಿಯಿಂದ ತೊಡಗಿ ಪದವಿಪೂರ್ವ ತರಗತಿಯತನಕ ಕನ್ನಡವನ್ನು ಬೋಧಿಸಲಾಗುತ್ತಿದ್ದರೂ ಪದವಿ ತರಗತಿಗಳಲ್ಲಿ ಕನ್ನಡದ ಬೋಧನೆಗೆ ಅವಕಾಶವಿಲ್ಲ.

ಕರ್ನಾಟಕದ ಹೊರಗಿನ ಚೆನ್ನೈ, ಮದುರೆ, ಮುಂಬೈ, ಹೈದರಾಬಾದ್, ಕಾಸರಗೋಡು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಎಂ.ಎ. ತರಗತಿಗಳು ನಡೆಯುತ್ತಿವೆ. ಅಲ್ಲಿ ಕನ್ನಡ ಬೋಧಕರ ಕೊರತೆ ತೀವ್ರವಾಗಿ ಬಾಧಿಸುತ್ತಿದೆ ಎನ್ನಲಾಗಿದೆ. ಕರ್ನಾಟಕ ಸರ್ಕಾರ ನೀಡುವ ಮಾಸಿಕ ವಿದ್ಯಾರ್ಥಿ ವೇತನದಿಂದಾಗಿ ಪ್ರತಿ ಕೇಂದ್ರದಲ್ಲೂ ಹತ್ತಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಹೊರನಾಡ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳು ಏಕೋಪಾಧ್ಯಾಯ ಶಾಲೆಗಳಂತೆಯೇ (ಕೆಲವೆಡೆ ಅತಿಥಿ ಉಪನ್ಯಾಸಕರು ಮಾತ್ರ) ಇವೆ. ಈ ಹಿನ್ನೆಲೆಯಲ್ಲಿ, ಅಂತಹ ಹೊರನಾಡ ವಿಶ್ವವಿದ್ಯಾಲಯಗಳಿಗೆ ಕನ್ನಡದ ಹಿರಿಯ (ವಿಶ್ರಾಂತ) ಪ್ರಾಧ್ಯಾಪಕರನ್ನು ವಿಶೇಷೋಪನ್ಯಾಸ (ಕನಿಷ್ಠ ನಾಲ್ಕು ದಿನ) ನೀಡಲು ಆಹ್ವಾನಿಸಿ ಕಳುಹಿಸಿಕೊಡುವ ಕೆಲಸವನ್ನು ಪ್ರಾಧಿಕಾರ ಕೈಗೊಳ್ಳಬಹುದು. ಈ ಪ್ರಾಧ್ಯಾಪಕರು ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸುವ ಮೂಲಕ ಅವರಿಗೆ ಹೊಸ ಒಳನೋಟವನ್ನು ಒದಗಿಸಬಹುದು.

ಕರ್ನಾಟಕಕ್ಕೆ ಕೀರ್ತಿ ತಂದ, ನಮ್ಮ ಸ್ವಾಭಿಮಾನಕ್ಕೆ ರೂಪಕವಾಗಿರುವ ವೀರರಾಣಿ ಅಬ್ಬಕ್ಕ, ಚೆನ್ನಭೈರಾದೇವಿಯವರ ಕುರಿತು ನಮಗೆ ತಿಳಿದಿರುವ ಚರಿತ್ರೆ ಒಪ್ಪಾಲು, ತಿಳಿಯಬೇಕಾಗಿರುವ ಚರಿತ್ರೆ ಮುಪ್ಪಾಲು. 1961ರಲ್ಲಿ ಭಾರತದೊಂದಿಗೆ ಗೋವಾ ವಿಲೀನಗೊಂಡ ಸಂದರ್ಭದಲ್ಲಿ, ಗೋವಾ ಬಂದರಿನಿಂದ ಪೋರ್ಚುಗಲ್‌ನ ಲಿಸ್ಬನ್‌ಗೆ ದೊಡ್ಡ ಪ್ರಮಾಣದ ಲಿಖಿತ ದಾಖಲೆಗಳು ರವಾನೆಯಾಗಿವೆ. ಪೋರ್ಚುಗೀಸ್ ಭಾಷೆಯಲ್ಲಿ (ಹಳೆಯ) ಬರೆದಿರುವ ದಾಖಲೆಗಳು ಗೋವಾ ವಿಶ್ವವಿದ್ಯಾಲಯದಲ್ಲಿ ಇನ್ನೂ ಇವೆಯಂತೆ. ಕರ್ನಾಟಕದ ಪರಿಣತ ಚರಿತ್ರೆ ಪಂಡಿತರನ್ನು ಲಿಸ್ಬನ್‌ಗೆ ಕಳುಹಿಸಿ, ಅಲ್ಲಿರುವ ಅಪೂರ್ವ ಮಾಹಿತಿಗಳನ್ನು ಸಂಗ್ರಹಿಸುವ ಮೂಲಕ ಅಬ್ಬಕ್ಕರಾಣಿ, ಚೆನ್ನಭೈರಾದೇವಿ (ಕಾಳುಮೆಣಸಿನ ರಾಣಿ) ಅವರ ಕುರಿತು ‘ನಿಜ’ದ ಚರಿತ್ರೆ ಕಟ್ಟಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT