ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ – ಯಾರ ಕನ್ನಡ ಯಾವುದು?

ಕೆಲವರ ಹಟಕ್ಕಾಗಿ ಭಾಷೆಯನ್ನೇ ತಿದ್ದಲು ಹೊರಡುವುದು ವಿತಂಡವಾದ
Last Updated 6 ಜನವರಿ 2022, 19:31 IST
ಅಕ್ಷರ ಗಾತ್ರ

‘ಎಲ್ಲರ ಕನ್ನಡ: ಸಾಧ್ಯತೆ, ಸವಾಲು’ ಎಂಬ ಡಾ. ಟಿ.ಎನ್.ವಾಸುದೇವಮೂರ್ತಿ ಅವರ ಲೇಖನದ (ಪ್ರ.ವಾ., ಜ. 5) ಮುಂದುವರಿಕೆಯಾಗಿ ಒಂದು ಪ್ರತಿಕ್ರಿಯೆ. ಭಾಷೆಯ ವಿಷಯದಲ್ಲಿ, ಮುಂದುವರಿದ ಸಂಗತಿಗಳನ್ನು ಹಿಂದಕ್ಕೆ ತಳ್ಳಿ ಮತ್ತೆ ಪ್ರೋಟೋ- ದ್ರವಿಡಿಯನ್ ಕಾಲಕ್ಕೆ ತೆಗೆದುಕೊಂಡು ಹೋಗುವ ಯತ್ನ ‘ಎಲ್ಲರ ಕನ್ನಡ’ ಅಭಿಯಾನ. ಇದು ಯಾವುದೇ ರೀತಿಯಲ್ಲೂ ಭಾಷೆಗೆ ನೆರವಾಗುವ ಸಂಗತಿಯಲ್ಲ.

ಹತ್ತಾರು ಭಾಷೆಗಳಿಂದ ಎರವಲು ಪಡೆದ ಇಂಗ್ಲಿಷನ್ನು ಈವತ್ತು ಮತ್ತೆ ಮೊದಲಿನ ಸ್ವರೂಪಕ್ಕೆ ತೆಗೆದುಕೊಂಡು ಹೋಗುತ್ತೇವೆ ಅನ್ನುವುದು ಎಷ್ಟು ಮೂರ್ಖತನವೋ ಅಷ್ಟೇ ಅಸಂಬದ್ಧ ಈ ಪ್ರಯತ್ನ. ಏಕೆಂದರೆ ಬಳಸುವವರಿಗೆ ಆಯ್ಕೆಯ ಸ್ವಾತಂತ್ರ್ಯ ಈಗಾಗಲೇ ಇರುವಾಗ ಅದನ್ನು ಕಿತ್ತುಕೊಳ್ಳುವ ಹಟ ಯಾಕೆ? ಅಂದರೆ ಆಡುನುಡಿಯಲ್ಲೇ ಬರೆಯಲು ಇಷ್ಟ ಇರುವವರು ಅದನ್ನು ಈಗಾಗಲೇ ಬರೆಯುತ್ತಿದ್ದಾರೆ.
ದೇವನೂರ ಮಹಾದೇವ ಅವರಿಗೆ ‘ಕುಸುಮಬಾಲೆ’ಯನ್ನು ಆ ಶೈಲಿಯಲ್ಲಿ ಬರೆಯಬೇಡಿ ಎಂದು ಯಾರೂ ಹೇಳಲಿಲ್ಲ. ಕಥೆ, ಕಾದಂಬರಿಗಳಲ್ಲಿ ಸಂಭಾಷಣೆಗಳನ್ನು ಆಯಾ ಆಡುನುಡಿಯಲ್ಲೇ ಎಲ್ಲರೂ ಬರೆಯುತ್ತಿರುವುದು. ಯಾರೂ ಪಾತ್ರಕ್ಕೆ ಒಗ್ಗದ ಗ್ರಾಂಥಿಕ ಕನ್ನಡದಲ್ಲಿ ಸಂಭಾಷಣೆಯನ್ನು ಬರೆಯುವುದಿಲ್ಲ.

ವರ್ಣಮಾಲೆಯಲ್ಲಿ ಮಹಾಪ್ರಾಣಗಳು ಇರಲಿ, ಇಷ್ಟವಿಲ್ಲದವರು ಬಳಸಬೇಡಿ, ಅಷ್ಟೇ. ಕೀಬೋರ್ಡಿ‌ನಲ್ಲಿ ಮಹಾಪ್ರಾಣ ಬಿಟ್ಟು ಬರೆಯಲು ಅನುಕೂಲ ಇದೆಯಲ್ಲ. ಅದನ್ನೇ ತಿದ್ದಿಬಿಟ್ಟರೆ, ನಾನು ಮಹಾಪ್ರಾಣ ಬಳಸಬೇಕಿದ್ದರೆ ಏನು ಮಾಡುವುದು? ಹುಟ್ಟಿದಾಗಿನಿಂದ ನಾವು ಕಲಿತ ಕನ್ನಡವನ್ನು ಬಳಸದಂತೆ ಬೇರೆಯವರು ಒತ್ತಾಯ ಹೇರಿಕೆ ತರುವುದು ಸರಿಯೇ? ಯಾವತ್ತೂ ‘ಐತೆ ಪೈತೆ’ ಭಾಷೆ ಮಾತನಾಡದವರನ್ನು ಬಲವಂತವಾಗಿ ಹಾಗೆ ಮಾತನಾಡುವಂತೆ ಒತ್ತಾಯಿಸುವುದು ಮತಾಂತರದಷ್ಟೇ ಹೀನ. ಕೆಲವರ ಹಟಕ್ಕಾಗಿ ಭಾಷೆಯನ್ನೇ ತಿದ್ದಲು ಹೊರಡುವುದು ಸಂವಿಧಾನ ತಿದ್ದುವ ಮಾತಿನಷ್ಟೇ ವಿತಂಡವಾದ.

ಕುಂದಾಪ್ರ, ಹುಬ್ಬಳ್ಳಿ ಧಾರವಾಡದ ಕನ್ನಡ, ಬಿಜಾಪುರ ಕನ್ನಡ, ಬ್ಯಾರಿ ಕನ್ನಡ ಮುಂತಾದ ಹಲವು ಕನ್ನಡಗಳಿವೆ. ಹಾಗೆ ನೋಡಿದರೆ ಬಹುಭಾಷಿಕತೆಯನ್ನು ಹೊಡೆದು ಹಾಕಿ ಏಕಭಾಷೆಯ ಸೂತ್ರವನ್ನು ತರುವ ಪ್ರಯತ್ನ ಯಾವತ್ತೂ ಒಳ್ಳೆಯದಲ್ಲ. ಅದಕ್ಕೆ ಅಲ್ಲವೇ
ನಾವು ಹಿಂದಿ ಹೇರಿಕೆಯನ್ನು ವಿರೋಧಿಸುತ್ತಿರುವುದು?

ಇದು, ಭಾಷಾ ವಿಜ್ಞಾನದ ದೃಷ್ಟಿಯಿಂದ ಪರಿಶೀಲಿಸಿದರೆ ಸಾಮಾಜಿಕ- ರಾಜಕೀಯ ಕಾರಣಗಳಿಂದ ಬಲವಂತವಾಗಿ ಭಾಷೆಯಲ್ಲಿ ಬದಲಾವಣೆ ತರುವ ವ್ಯರ್ಥ ಸಾಹಸ ಎನ್ನುವುದು ಗೊತ್ತಾಗುತ್ತದೆ. ಯಾವುದೇ ಭಾಷೆಯಲ್ಲಿ ಬದಲಾವಣೆ ಎನ್ನುವುದು ಕಾಲಕ್ರಮೇಣ ಆಗುತ್ತದೆ. ವಕಾರವು ಬಕಾರಕ್ಕೆ ತಿರುಗಲು, ಪಕಾರವು ಹಕಾರಕ್ಕೆ ಬದಲಾಗಲು ಸುಮಾರು ಇನ್ನೂರು ವರ್ಷಗಳು ಬೇಕಾಯಿತು. ಈಗ ವರ್ಣಮಾಲೆಯನ್ನೇ ತಿದ್ದಿಬಿಟ್ಟರೆ ನಮ್ಮ ಸಕಲ ಸಾಹಿತ್ಯ ರಾಶಿಯನ್ನು ಮತ್ತೆ ಈ ಹೊಸ ‘ಭಾಷೆ’ಯಲ್ಲಿ ತಿದ್ದಿ ಬರೆಯಲಾಗುತ್ತದೆಯೇ? ಮುಂದಿನ ಪೀಳಿಗೆ ಕನ್ನಡ ಸಾಹಿತ್ಯವನ್ನು ಹೇಗೆ ಓದಬೇಕು? ಈಗ ಹಳಗನ್ನಡವನ್ನು ನಾವು ಹೊಸಗನ್ನಡಕ್ಕೆ ತಿದ್ದಿಕೊಂಡು ಓದುತ್ತೇವೆಯೇ? ಅರ್ಥಮಾಡಿಕೊಳ್ಳುವ ಸಲುವಾಗಿ ಅವನ್ನು ‘ಸರಳ ಕನ್ನಡ’ದಲ್ಲಿ ಬರೆದು ಪ್ರಕಟಿಸುತ್ತೇವೆ. ಬೇಕಿದ್ದರೆ ‘ಎಲ್ಲರ ಕನ್ನಡ’ ಅಭಿಯಾನದವರು ಎಲ್ಲಾ ಸಾಹಿತ್ಯ ಕೃತಿಗಳನ್ನು ‘ಅವರ’ ಕನ್ನಡದಲ್ಲಿ ಬರೆದು ಓದಿಕೊಳ್ಳಲಿ.

ಡಿಜಿಟಲ್ ಯುಗದಲ್ಲಿ ಕನ್ನಡವೂ ಹೊಸ ಸವಾಲುಗಳನ್ನು ಎದುರಿಸಿ ಗೆದ್ದು ತಾಂತ್ರಿಕವಾಗಿ ಮುನ್ನುಗ್ಗುತ್ತಿರುವಾಗ, ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಕ್ಷಣಾರ್ಧದಲ್ಲಿ ಆ್ಯಕ್ಸೆಸ್ ಮಾಡಿಕೊಳ್ಳುವ ಸಾಧ್ಯತೆಯನ್ನು ಪಡೆದುಕೊಂಡಿರುವಾಗ ಅದನ್ನು ಒಡೆದುಹಾಕಿ ಮತ್ತೆ ವರ್ಣಮಾಲೆಯನ್ನು ‘ತಿದ್ದಲು’ ಹೊರಟಿರುವುದು ನಿಜಕ್ಕೂ ಗಾಬರಿ ಉಂಟುಮಾಡುವ ಸಂಗತಿ.

ಜಗತ್ತಿನಾದ್ಯಂತ ಇಂಗ್ಲಿಷಿನಲ್ಲಿ ಇರುವಷ್ಟು ಡಯಲೆಕ್ಟ್‌ಗಳು ಕನ್ನಡದಲ್ಲಿ ಇಲ್ಲ. ಆದರೂ ಇಂಗ್ಲಿಷ್ ವರ್ಣಮಾಲೆಯನ್ನು ಯಾರಾದರೂ ತಿದ್ದಲು ಹೊರಟಿದ್ದರೆ ಅದಕ್ಕೆ ಎಂತೆಂತಹ ಪ್ರತಿಕ್ರಿಯೆಗಳು ಬರುತ್ತಿದ್ದವು ಊಹಿಸಿ. ಕನ್ನಡದ ವರ್ಣಮಾಲೆ ಸದ್ಯಕ್ಕೆ ಯಾವುದೇ ಆಡುನುಡಿಯನ್ನು ಹೇಗೆ ಉಚ್ಚರಿಸುತ್ತೇವೆಯೋ ಹಾಗೆಯೇ ಬರೆಯಲು ಸಾಧ್ಯವಾಗಿಸಿದೆ. ಅದನ್ನು ಬಿಟ್ಟುಕೊಟ್ಟು, ಅನವಶ್ಯಕ, ಒತ್ತಾಯಪೂರ್ವಕ ಬದಲಾವಣೆ ತರಲು ಯತ್ನಿಸುವುದು ಆಕ್ಷೇಪಾರ್ಹ.

ಈಗ ನಿಜವಾಗಿ ಭಾಷೆಗಳ ಮಿಶ್ರಣ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಕೋಡ್ ಗ್ಲೈಡಿಂಗ್ ಅನ್ನುತ್ತಾರೆ ಅದನ್ನು. ಯಾವುದೇ ಮಡಿವಂತಿಕೆ ಇಲ್ಲದೇ ನಾವು ಸುಲಭವಾಗಿ ಬೇರೆ ಭಾಷೆಯನ್ನೂ ಕನ್ನಡದೊಳಗೆ ಮಿಶ್ರಮಾಡಿ ಬಿಡಬಹುದು. ಅದಕ್ಕೆ ಯಾರ ಅಪ್ಪಣೆಯೂ ಬೇಕಾಗಿಲ್ಲ. ಸದ್ಯದ ಮಾಧ್ಯಮದ ಭಾಷೆಯಾಗಲೀ ಚಲನಚಿತ್ರಗಳ ಹಾಡುಗಳ ಭಾಷೆಯಾಗಲೀ ಯಾರಲ್ಲೂ ಗೊಂದಲವನ್ನಾಗಲೀ ಅಸಹಿಷ್ಣುತೆಯನ್ನಾಗಲೀ ಉಂಟುಮಾಡಿಲ್ಲ. ಸುದೀಪ್ ಕನ್ನಡದ ಬಗ್ಗೆಯೇ ಹಾಡುತ್ತಾ ‘ಜೀನಾ ಜೀನಾ ಯಹಾ ಮರ್ನ ಮರ್ನ ಯಹಾ, ಲೈಫು ಎಂಜಾಯ್ ಮಾಡು...’ ಅಂದರೆ ಯಾರೂ ತಲೆ ಕೆಡಿಸಿಕೊಂಡಿಲ್ಲ.

ಉತ್ತರ ಕರ್ನಾಟಕದ ಜನರ ಭಾಷೆಗಳ ಚಿತ್ರಗಳನ್ನೇ ಮಾಡದೆ ಅವರ ಮೇಲೂ ಇದನ್ನೇ ಹೇರುತ್ತಿರುವಾಗ ಅದರ ಬಗ್ಗೆ ಚಿಂತಿಸದೇ ಅಲ್ಪಪ್ರಾಣ ಮಹಾಪ್ರಾಣದ ಬಳಕೆಯನ್ನೇ ಸಂಸ್ಕೃತಿಯ ವ್ಯಾಖ್ಯಾನ ಎಂದು ವಾದ ಮಾಡುತ್ತಾ ವರ್ಣಮಾಲೆಯನ್ನು ಬದಲಿಸುತ್ತೇವೆ ಅನ್ನುವುದು ಯಾಕೋ ನೆಗಡಿಗೆ ಮೂಗನ್ನೇ ಕತ್ತರಿಸುವ ಭಂಡತನವನ್ನು ನೆನಪಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT