ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಕ್ಕೆ ಬೇಕು ಪ್ರೀತಿಯ ಆರೈಕೆ

ಕನ್ನಡದ ಉತ್ಸವವು ದಿನಂಪ್ರತಿ ನಡೆಯಬೇಕಾದ ಕಾಯಕ
Last Updated 28 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ನ್ಯಾಷನಲ್ ಜಿಯಾಗ್ರಫಿಕ್ ಸೊಸೈಟಿ ಸರ್ವೇ ಪ್ರಕಾರ, ಸದ್ಯ ಬಳಕೆಯಲ್ಲಿರುವ ಸುಮಾರು 7,000 ಭಾಷೆಗಳಲ್ಲಿ, ಎರಡು ವಾರಕ್ಕೊಮ್ಮೆ ಕನಿಷ್ಠಪಕ್ಷ ಒಂದು ಭಾಷೆ ಕಣ್ಮರೆಯಾಗುತ್ತಿದೆ. ಭಾಷೆಯೆನ್ನುವುದು ಆಯಾ ಪ್ರದೇಶದ ಜನರ ಸಂಸ್ಕೃತಿಯ ಪ್ರತೀಕ, ಅವರ ಅಭಿವ್ಯಕ್ತಿ ಮತ್ತು ಜ್ಞಾನಾರ್ಜನೆಯ ಜೀವನಾಡಿ. ಅಲ್ಲದೆ, ಭಾಷೆಯು ನೆಲದ ಸಂಸ್ಕೃತಿಯನ್ನು ಪೀಳಿಗೆಯಿಂದ ಪೀಳಿಗೆಗೆ ಕೊಂಡಿಯಂತೆ ಜೋಡಿಸಿ ವಿಸ್ತರಿಸುತ್ತದೆ. ಆದ್ದರಿಂದ ಒಂದು ಭಾಷೆಯ ಸಾವಿನೊಂದಿಗೆ, ಆ ಸ್ಥಳದ ಸಂಸ್ಕೃತಿಯೂ ಸಾಯುತ್ತದೆ.

ಈ ಪ್ರಸ್ತುತತೆಯಲ್ಲಿ, ಒಂದು ಭಾಷೆ ಸಾಯಲು ಕಾರಣಗಳೇನೆಂದು ವಿಶ್ಲೇಷಿಸಿದರೆ, ಹಲವಾರು ಕಾರಣಗಳು ಸಿಗುತ್ತವೆ. ಮೊದಲನೆಯದಾಗಿ, ಮಕ್ಕಳು ಆ ಭಾಷೆಯನ್ನು ಮನೆಮಂದಿಯೊಂದಿಗೆ ಮಾತನಾಡುವುದಕ್ಕೆ ಮಾತ್ರ ಸೀಮಿತಗೊಳಿಸಿ, ಹೊರಗೆ ಬೇರೊಂದು ಭಾಷೆಯಲ್ಲಿ ವ್ಯವಹರಿಸಿದಾಗ. ಎರಡನೆಯದಾಗಿ, ಮಕ್ಕಳಿಗೆ ಅದು ಶಿಕ್ಷಣ ಮಾಧ್ಯಮವಾಗುವುದು ನಿಂತಾಗ. ಮೂರನೆಯದಾಗಿ, ಹಳೆಯ ತಲೆಮಾರಿನವರು ಮಾತ್ರ ಅದನ್ನು ಬಳಸುವ ಸ್ಥಿತಿಗೆ ಬಂದಾಗ. ಹೀಗೆ, ಭಾಷೆಯ ಸಾವು ಕೆಲವೊಮ್ಮೆ ಸ್ವಾಭಾವಿಕವೂ ಹೌದು ಅಥವಾ ವ್ಯವಸ್ಥಿತವಾದ ‘ಭಾಷಾ ಹತ್ಯೆ’ಯೂ ಹೌದು.

ಈ ಹಿನ್ನೆಲೆಯಲ್ಲಿ, ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡದ ವಾಸ್ತವಸ್ಥಿತಿಯನ್ನು ಪರಾಮರ್ಶಿಸುವಾಗ, ನಮ್ಮ ಮುಂದೆ ಹಲವಾರು ಸವಾಲುಗಳು ಕಾಡುತ್ತವೆ. ಕನ್ನಡವನ್ನು ತಂತ್ರಜ್ಞಾನ ಯುಗದಲ್ಲಿ ಬಳಕೆಯೋಗ್ಯವಾಗಿ ಅಣಿಯಾಗಿಸಿ ಇಟ್ಟಿದ್ದೇವೆಯೇ? ಕನ್ನಡಿಗರು ತಮ್ಮ ಮಕ್ಕಳನ್ನು ಕನ್ನಡಿಗರಾಗಿ ಉಳಿಸಿಕೊಳ್ಳುವ ಹಾಗೂ ಈ ನೆಲದ ಸಂಸ್ಕೃತಿ, ಇತಿಹಾಸ, ಜ್ಞಾನಪರಂಪರೆಯು ಮಾಸದಂತೆ ಮುಂದುವರಿಸಲು ಏನಾದರೂ ಪ್ರಯತ್ನಗಳನ್ನು ಮಾಡುತ್ತಿದ್ದಾರೆಯೇ? ಕನ್ನಡ ಸಾಹಿತ್ಯದ ಕಂಪು ಅನುವಾದದ ಮೂಲಕ ಬೇರೆ ಭಾಷೆಗಳಿಗೆ ಹಾಗೂ ಬೇರೆ ಭಾಷೆಗಳ ಜ್ಞಾನವು ಕನ್ನಡಕ್ಕೆ ಸಮೃದ್ಧವಾಗಿ ಸಿಗುತ್ತಿದೆಯೇ? ಕನ್ನಡಿಗರಿಗೆ, ಕರ್ನಾಟಕದ ಸರ್ಕಾರಿ ಸಂಸ್ಥೆಗಳಲ್ಲಿ ಮತ್ತು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗದಲ್ಲಿ ಮನ್ನಣೆ ಸಿಗುತ್ತಿದೆಯೇ? ಕನ್ನಡ ಮಾಧ್ಯಮ ಶಾಲೆಗಳು ಬರೀ ಉಚಿತ ಯೋಜನೆಗಳಿಗೆ ಮೀಸಲಾಗಿವೆಯೇ ಅಥವಾ ನಿಜವಾಗಿ ನಡೆಯಬೇಕಾದ ಗುಣಮಟ್ಟದ ಅಭಿವೃದ್ಧಿ ಕೆಲಸದತ್ತ ಗಂಭೀರ ಚಿಂತನೆಗಳು ನಡೆಯುತ್ತಿವೆಯೇ ಅಥವಾ ಕನ್ನಡದ ಬಳಕೆ ಕಾಲಕಳೆದಂತೆ ಕಡಿಮೆಯಾಗುತ್ತಾ ಅದೂ ನಶಿಸುತ್ತಿರುವ ಭಾಷೆಗಳ ಪಟ್ಟಿಗೆ ಸೇರಲಿದೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕುವ ಜವಾಬ್ದಾರಿ ಕನ್ನಡಿಗರ ಮೇಲಿದೆ.

ಮೊದಲನೆಯದಾಗಿ, ನಾವು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಾದ ಅಂಶವೆಂದರೆ, ದಕ್ಷಿಣ ಭಾರತದ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪ್ರಾದೇಶಿಕ ಅಸ್ಮಿತೆಯ ಕಳಕಳಿ ಬಹಳ ಕಡಿಮೆಯೆಂದೇ ಹೇಳಬಹುದು. ಅಲ್ಲಿರುವಂತೆ ಬಲಿಷ್ಠ ಪ್ರಾದೇಶಿಕ ಪಕ್ಷಗಳಾಗಲೀ, ನಾಯಕರಲ್ಲಿ ತಮ್ಮ ಭಾಷೆಯನ್ನು ಉಳಿಸಿಕೊಳ್ಳುವ ಕಾಳಜಿಯಾಗಲೀ ಕಡಿಮೆ. ಇನ್ನು, ಕನ್ನಡ ಸಿನಿಮಾಗಳು ಹಾಗೂ ಎಫ್.ಎಂ ಚಾನೆಲ್‌ಗಳು ಬೇರೆ ಭಾಷೆಗಳೊಂದಿಗೆ ಸ್ಪರ್ಧೆ ಮಾಡಬೇಕಿದೆ. ಈ ಮಾಹಿತಿ ಕಾಲಘಟ್ಟದಲ್ಲಿ, ಅಂತರ್ಜಾಲದಲ್ಲಿ ಕನ್ನಡದ ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಸಾಮಾನ್ಯಜ್ಞಾನ ಕೈಬೆರಳಿಗೆ ಸಿಗುವ ಬದಲಾಗಿ ಹೆಣಗಾಡುವ ಪರಿಸ್ಥಿತಿಯಿದೆ.

ಈ ಎಲ್ಲ ಸಮಸ್ಯೆಗಳ ಪರಿಹಾರವಾಗಿ, ಕರ್ನಾಟಕದ ಉದ್ಯೋಗ ಕ್ಷೇತ್ರದಲ್ಲಿ ಕನ್ನಡಿಗರಿಗೆ ವಿಶೇಷ ಮನ್ನಣೆ ಸಿಗಬೇಕಿದೆ. ಅಲ್ಲದೆ, ಐಎಎಸ್ ಮುಂತಾದ ಉನ್ನತ ನಿರ್ಣಾಯಕ ಸರ್ಕಾರಿ ಹುದ್ದೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರ ನೇಮಕವಾಗುವ ಅಗತ್ಯವಿದೆ. ಅಲ್ಲಿ ಕನ್ನಡಿಗ ಮನಸ್ಸುಗಳಿದ್ದರೆ, ಈ ಮಣ್ಣಿನ ಸೇವಾಋಣ, ಕಾಳಜಿ ಮತ್ತು ಸಮಸ್ಯೆಗಳ ಅರಿವು ಹೆಚ್ಚಾಗಿರುತ್ತದೆ. ಇದಕ್ಕಾಗಿ, ಕರ್ನಾಟಕ ಸರ್ಕಾರವು ಲೋಕಸೇವಾ ಪರೀಕ್ಷಾ ತರಬೇತಿ ಕಾರ್ಯಕ್ರಮಗಳನ್ನು ಕನ್ನಡಿಗರಿಗಾಗಿ ಹೆಚ್ಚೆಚ್ಚು ಹಮ್ಮಿಕೊಂಡು, ನಿರ್ಣಾಯಕ ಹುದ್ದೆಗಳಲ್ಲಿ ಕನ್ನಡಿಗರು ಕಾಣಿಸಿಕೊಳ್ಳುವಂತೆ ಮಾಡಬೇಕಿದೆ. ಇನ್ನು, ನಮ್ಮ ರಾಜ್ಯದ ಸರ್ಕಾರಿ ಹುದ್ದೆಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಬೇಕಿದೆ. ವಿಶೇಷವಾಗಿ, ಕನ್ನಡದಲ್ಲಿ ಎಂ.ಎ. ಅಥವಾ ಪಿಎಚ್.ಡಿ ಮಾಡಿದವರಿಗೆ ಉದ್ಯೋಗ ಅವಕಾಶಗಳು ಬಹಳ ಕಡಿಮೆ.

ಎರಡನೆಯದಾಗಿ, ಕನ್ನಡ ಮಾಧ್ಯಮ ಶಾಲೆಗಳಿಗೆ ಮರಳಿ ಗೌರವ ಸಿಗಬೇಕಿದೆ. ಕೇವಲ, ಉಚಿತ ಸಮವಸ್ತ್ರ, ಪುಸ್ತಕ, ಸೈಕಲ್, ಲ್ಯಾಪ್‌ಟಾಪ್, ಊಟಕ್ಕಾಗಿ ಸರ್ಕಾರಿ ಶಾಲೆಗಳಿಗೆ ಮಕ್ಕಳು ಮುತ್ತಿಕೊಳ್ಳುವುದಿಲ್ಲ. ಮಾಧ್ಯಮವೆನ್ನುವುದು ವರ್ಗ ಸಂಘರ್ಷವಾಗದೆ, ಅಲ್ಲಿನ ಮೂಲಭೂತ ಸೌಕರ್ಯಗಳ ಗುಣಮಟ್ಟ ಹೆಚ್ಚಿಸುವುದು ಮತ್ತು ಉತ್ತಮ ದರ್ಜೆಯ ಶಿಕ್ಷಕರನ್ನು ನೇಮಕ ಮಾಡುವುದರ ಮೂಲಕ ಸುಧಾರಣೆ ಕಂಡುಕೊಳ್ಳಬೇಕಿದೆ. ಮಕ್ಕಳಿಗೆ ಕನ್ನಡ ಮಾಧ್ಯಮವು ಸ್ವಾಭಿಮಾನ ಮತ್ತು ಹೆಮ್ಮೆಯ ಸಂಕೇತವಾಗಬೇಕೇ ವಿನಾಕೀಳರಿಮೆಯದ್ದಲ್ಲ.

ಇದರೊಂದಿಗೆ, ಕನ್ನಡ ಸಾಹಿತ್ಯಕ್ಕೆ ಅನುವಾದದ ಮೂಲಕ ಮತ್ತಷ್ಟು ಜೀವ ತುಂಬಬೇಕಿದೆ. ಅನುವಾದವೆನ್ನುವುದು ಆಮ್ಲಜನಕದಂತೆಯೇ ಬೇರೆ ಭಾಷೆಗಳಿಂದ ಹೊಸ ಅರಿವು ಮತ್ತು ಜ್ಞಾನವನ್ನು ಹೀರಿ, ಭಾಷೆಯನ್ನು ಇನ್ನಷ್ಟು ಸಮೃದ್ಧವಾಗಿಸುತ್ತದೆ. ಬೇರೆ ಭಾಷೆಯಲ್ಲಿನ ಹೊಸತನ್ನು ಕನ್ನಡೀಕರಿಸುವ ಮೂಲಕ ಕನ್ನಡಿಗರು ಈ ಕೆಲಸ ಮಾಡಬೇಕಿದೆ. ಒಟ್ಟಿನಲ್ಲಿ, ನಮ್ಮ ಮಕ್ಕಳಿಗೆ ಪ್ರಪಂಚದ ಎಲ್ಲ ಜ್ಞಾನ ಕನ್ನಡದಲ್ಲಿಯೇ ಸಿಗುವಂತಾಗಬೇಕಿದೆ.

ಕೊನೆಯದಾಗಿ, ಕನ್ನಡಕ್ಕೆ ಹೋರಾಟಕ್ಕಿಂತ, ಪ್ರೀತಿಯ ಆರೈಕೆ ಅಗತ್ಯವಿದೆ. ಕನ್ನಡದ ಉತ್ಸವವು ದಿನಂಪ್ರತಿ ನಡೆಯಬೇಕಾದ ಕಾಯಕವೇ ವಿನಾ ಕೇವಲ ನವೆಂಬರ್ ಒಂದರ ಉದ್ಘೋಷವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT