ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಿ ಎತ್ತ ಕಾಳಿಂಗ... ಬಿಳಿ ಎತ್ತ..

Last Updated 28 ಜೂನ್ 2019, 20:00 IST
ಅಕ್ಷರ ಗಾತ್ರ

ಕಾರ ಹುಣ್ವಿ ದಿನ ಸಂಜೀ ಮುಂದ ಕಿಲ್ಲಾದಾಗಿನ ಅಗಸಿ ಒಳಗ್‌ ಕರಿ ಹರಿಯೋದನ್ನ ನೋಡಾಕ್‌ ಓಣ್ಯಾಗಿನ ಚೆಡ್ಡಿ ಗೆಳ್ಯಾರ ಪಟಾಲಂ ಕಟ್ಕೊಂಡು ಹೋಗಿದ್ದೆ. ಸಿಂಗಾರಗೊಂಡಿದ್ದ ಎತ್ತುಗಳ ಕೊರಳಲ್ಲಿದ್ದ ಗೆಜ್ಜೆ ಸಪ್ಪಳ, ಎತ್ತು ಓಡಿಸಲು ಬಂದವರ ಹುರುಪು, ಓಡುವ ಎತ್ತುಗಳನ್ನು ಹುರಿದುಂಬಿಸಲು ಬಂದವರ ಉತ್ಸಾಹ ಕೇಕೆ, ಶಿಳ್ಳೆಗಳೇ ಕೇಳಿ ಬರಾಕತ್ತಿದ್ವು. ರುಮಾಲು ಸುತ್ಕೊಂಡಿದ್ದ ರೈತರು ಸಿಂಗರಿಸಿದ್ದ ತಮ್ಮ ಎತ್ತುಗಳೊಂದಿಗೆ ಕರಿ ಹರ‍್ಯಾಕ್‌ ಬಂದಿದ್ರು. ಊರ ಗೌಡ್ರು ಬಂದು ಕರಿ ಹರಿದು ಎತ್ತುಗಳ ಓಟಕ್ಕೆ ಚಾಲನೆ ನೀಡುತ್ತಿದ್ದಂತೆ ಅಗಸಿ ತುಂಬ ಹೋ ಎನ್ನುವ ಸದ್ದು ಪ್ರತಿಧ್ವನಿಸಿತು.

‘ಅಲ್ನೋಡು ಬಿಳಿ ಎತ್ತ ಮುಂದ ಅದಲೇ, ಅದs ಗುರಿ ಮುಟ್ಟೋದು ಗ್ಯಾರಂಟಿ’ ಅಂತ ಒಬ್ಬಾಂವ ಹೇಳಿದ್ರ, ‘ಕರಿ ಎತ್ತ ಅದಲೇ ಕಣ್ ಕಿಸಿದು ನೋಡ್‌’ ಅಂತ ಇನ್ನೊಬ್ಬ ಜೋರ್‌ ಮಾಡುತ್ತಿದ್ದ. ಅಷ್ಟರಾಗ್‌ ಕರಿ, ಬಿಳಿ ಎತ್ತುಗಳನ್ನ ಹಿಂದಿಕ್ಕಿದ ಕಂದು ಬಣ್ಣದ ಎತ್ತು ಮುಂದ ಓಡಾಕತ್ತಿತ್ತು.

‘ಹೆಂಗ್‌ ಓಡಾಕತ್ತಾವ್‌ ನೋಡ್‌. ಮೋದಿ ಮಾಂವಾ ಮರಳಿ ಬಂದಿರುವುದರಿಂದ ತಮ್ಮ ಹಣೆಬರಹವೂ ಬದಲಾಗುವ ಖುಷ್ಯಾಗ್‌ ಭರ್ಜರಿಯಾಗಿ ಓಡಾಕತ್ತಾವ್‌’ ಎಂದ ಪ್ರಭ್ಯಾ.

‘ಲೇ, ಕಾರ್‌ ಹುಣ್ವಿಯ ಎತ್ತುಗಳ ಹುಮ್ಮಸಕ್ಕೂ, ಮೋದಿ ಹವಾನ ಕಾರ‍್ಣಾ ಅಂತ ಬಡ್ಕೊಬ್ಯಾಡ. ಯೋಗಿ ರಾಜ್ಯದಾಗ ಬೀಡಾಡಿ ದನಗಳ ಸಂಖ್ಯೆ ಜಾಸ್ತಿ ಆಗಿ ಕೊಂಡವಾಡಕ್ಕೂ ಹಾಕಲಾರ್ದ ಸಾಕೋದs ದೊಡ್ಡ ಸಮಸ್ಯೆಯಾಗೇದ್‌. ಕಂಡವರ ಹೊಲಕ್ಕ ನುಗ್ಗಿ ಬೆಳಿ ಹಾಳ್‌ ಮಾಡಾಕತ್ತಾವ್‌. ನಮ್ಮಲ್ಲಿನ್ನೂ ಅಂಥಾ ಪರಿಸ್ಥಿತಿ ಬಂದಿಲ್ಲಂತ ಇವು ಖುಷ್ಯಾಗ್‌ ಓಡಾಕತ್ತಾವ್‌ ಬಿಡು’ ಎಂದೆ.

ಕೇಸರಿ ವಸ್ತ್ರ– ಬಣ್ಣದಾಗ ಮುಳುಗಿ ಎದ್ದಿದ್ದ ಎತ್ತೊಂದು ಮುನ್ನುಗ್ಗುತ್ತಿದ್ದಂತೆ, ಪ್ರಭ್ಯಾ ‘ಶಬಾಸ್‌, ಎಂಥಾ ಜೋಷ್‌ ಅದ ನೋಡ್‌. ಭಲೆ, ಭಲೆ’ ಎಂದು ಕೂಗಿದ. ಅವನ ಮಾತ್‌ ಕೇಳಿದ ಕೆಲ ಹುಡುಗರು, ಮೋದಿ, ಮೋದಿ ಎಂದು ಕೂಗಾಕ್‌ ಹತ್ತಿದ್ರು.

‘ಲೇ, ತಿರುಬೋಕಿ, ಜೋಷ್‌ ಬಿಟ್ಟು ಸ್ವಲ್ಪ ಹೋಷ್‌ದಾಗ್‌ ಬಾ. ಮೈಮ್ಯಾಲೆ ಗ್ಯಾನಾ ಇಟ್ಕೊಂಡ್‌ ಮಾತಾಡ್‌. ಇಲ್ಲಿ ಕರಿ ಹರ‍್ಯಾಕತ್ತಾರ್‌. ಜನಾ ರಾಜ್ಕೀಯ ಮಾಡಾಕ್‌ ಬಂದಿಲ್ಲ’ ಎಂದೆ.

ನಮ್ಮಿಬ್ಬರ ಮಾತಿನ ಮಧ್ಯೆ ಅಡ್ಡಬಾಯಿ ಹಾಕಿದ ಮಲ್ಲಣಗೌಡ, ‘ಎತ್ಗೋಳ್‌ ಓಟದಾಗ್‌ ಬಿಳಿ ಎತ್ತ ಮುಂದ ಬಂದ್ರ, ಬಿಳಿ ಸಫಾರಿ ಸೂಟ್‌ನಂವಾ ಮುಖ್ಯಮಂತ್ರಿ ಆಗ್ತಾನ್‌. ಕಂದು ಬಣ್ಣದ ಎತ್ತ ಮುಂದ ಬಂದ್ರ ಕುಮಾರಣ್ಣನ ಮುಂದುವರಿತಾನ್‌. ಅಡ್‌ಸೋಂಗ್‌ ಥರಾ, ನಾನೇ ಯಜಮಾನ ಅಂತ ಹೇಳ್ಕೊಂಡ್‌ ತಿರುಗೋ, ನೀನs ನಮ್ಮ ಸಿಎಂ ಅಂತ ಭಟ್ಟಂಗಿಗಳಿಂದ ಕರೆಯಿಸಿಕೊಳ್ಳೊ ಯಾವ್ದರ್‌ ಅಡ್ನಾಡಿ ಎತ್ತು ಅಕಸ್ಮಾತ್ತಾಗಿ ಮುಂದ ಬಂದ್ರ ಸಿದ್ರಾಮಣ್ಣ ಹೊಸಾ ಮುಖ್ಯಮಂತ್ರಿ ಆಗ್ತಾನ್‌. ನೋಡ್‌ ಬೇಕಾದ್ರ ಬರ‍್ಕೊ ಅಂತ’ ಬಾಜಿ ಕಟ್ಟಿದ.

‘ಇಲ್ನೋಡ್ರೊ, ಈ ಗೌಡಾ ಕರಿ ಹರಿಯೋದಕ್ಕೂ ಸಮ್ಮಿಶ್ರ ಸರ್ಕಾರಕ್ಕೂ ತಳಕು ಹಾಕಾಕ್ ಹೊಂಟಾನ್‌. ಸ್ವಲ್ಪ ಕಿವಿಗೊಟ್ಟು ಕೇಳ್ರೊ’ ಅಂತ ದನಿ ಎತ್ತರಿಸಿ ಹೇಳ್ದೆ.

‘ಇಂವಾ ಯಾವ ಊರ್‌ ಗೌಡಾ. ಅಂವಾ ಅಸಲಿ ಗೌಡ ಅಲ್ಲಲೆ. ಊರ್ಫ್‌ ಗೌಡ. ಗೌಡ ಅಂತ ಉಪನಾಮ ಸೇರ್ಕೊಂಡ ಮ್ಯಾಲೇನ ತನ್ನ ನಸೀಬು ತೆರ್ದದ ಅಂತ ಗೌಡನೊಬ್ಬ ಹೇಳ್ಕೊಂಡಾನಲ್ಲ, ಇವ್ನೂ ಹಂಗs. ಚೇಲಾಗಳಿಗೆ ರೊಕ್ಕಾ ಕೊಟ್ಟು ಗೌಡಾ ಅಂತ ಹೊಸದಾಗಿ ಕರೆಸಿಕೊಳ್ಳಾಕತ್ತಾನ್‌. ಉಪನಾಮ ಗೌಡ ನೋಡಿ ವೋಟ್‌ ಹಾಕಿಲ್ಲ. ‘ನಮೋ’ ಹೆಸರ್‌ನ್ಯಾಗ್‌ ವೋಟ್‌ ಹಾಕ್ಯಾರ್‌ ಅಂತ ಜನಾ ಹಿಗ್ಗಾಮುಗ್ಗಾ ಬಯ್ಯಾಕತ್ತಾರ್‌’ ಎಂದ ಮೋನ್ಯಾ.

ಇದ್ಯಾಕೊ ತನ್ನ ಬುಡಕ್ಕs ಬರ‍್ತದ ಅಂತ ಅನ್ಕೊಂಡ ಪ್ರಭ್ಯಾ, ‘ಅಗಸ ಏನ್‌ ದೂಳು ಅದನೋ ಮಾರಾಯಾ. ಮಾರಿ ತುಂಬ ದೂಳು ತುಂಬೇದ’ ಎಂದೆನ್ನುತ್ತ ಮಾತಿನ ಬಂಡಿಯ ದಾರಿ ಬದಲಿಸಿದ.

ಮೋದಿ ಸಾಹೇಬ್ರು ಮೊನ್ನೆ ರಾಜ್ಯಸಭೆ ಒಳ್ಗ, ಮಿರ್ಜಾ ಗಾಲಿಬ್‌ನ ಶಾಯರಿ ತಪ್ಪು ತಪ್ಪಾಗಿ ಹೇಳ್ದಂಗ, ‘ನೀನೂ ಮಾರಿ ಮ್ಯಾಗ್‌ ದೂಳು ತುಂಬ್ಕೊಂಡು ಜೀವನಾಪೂರ್ತಿ ಕನ್ನಡಿ ಸ್ವಚ್ಛ ಮಾಡಾಕ್ ಹೋಗಬ್ಯಾಡ. ಮೊದ್ಲು ಮಾರಿ ಒರಿಸ್ಕೊ.ಇಲ್ಲಂದ ಜೀವಮಾನ ಪೂರ್ತಿ ಇದೇ ತಪ್‌ ಮಾಡ್ತಿ. ನಿನ್ನ ಮಾರಿಮ್ಯಾಗ್‌ ಇರೋದು ದೂಳು ಅಲ್ಲಲೆ. ಪೌಡರ್‌ ಮೆತ್ಗೊಂಡ್‌ ಬಂದಿ. ಮನ್ಯಾಗ್‌ ಹೆಂಡ್ತಿಗಿಷ್ಟು ಉಳ್ಸಿ ಇಲ್ಲ’ ಎಂದು ಛೇಡಿಸಿದೆ.

ಪ್ರಭ್ಯಾನ ಮುಖ ಹರಳೆಣ್ಣೆ ಕುಡಿದ್ಹಂಗಾಗಿದ್ದನ್ನು ಮರಸಾಕ್‌ ಅಡ್ಡಬಾಯಿ ಹಾಕ್ದ ಜಾನಿ, ‘ಕರಿ ಹರಿಯೋ ಓಟದಾಗ್‌ ಮುಂದ ಬಂದ ಎತ್ತಿನ ಪ್ರತಿಮೆಯನ್ನ ಅಗಸಿ ಬಾಗಲ್ದಾಗ್‌ ನಿಲ್ಲಿಸಬೇಕ್‌’ ಅಂತ್‌ ಸಲಹೆ ಕೊಟ್ಟ.

‘ಈಗೇನಿದ್ರೂ ಜೋಡೆತ್ತು, ಕಳ್ಳೆತ್ತುಗಳ ಕಾಲ. ತೆಲಂಗಾಣದ ರೈತನೊಬ್ಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ನ ಪ್ರತಿಮೆ ಸ್ಥಾಪನೆ ಮಾಡಿದ್ಹಂಗ್‌, ವಿಧಾನಸೌಧದ ಮುಂದ ಸಮ್ಮಿಶ್ರ ಸರ್ಕಾರದ ಜೋಡೆತ್ತುಗಳ ಪ್ರತಿಮೆ ನಿಲ್ಸಬೇಕು. ಆಪರೇಷನ್‌ ಮಾಡಾಕ್‌ ಹೊಂಟಿರೋ ಎತ್ತುಗಳು, ತಮ್ದೂ ಪ್ರತಿಮೆ ಇರಬೇಕಂತ ಹಟಾ ಹಿಡಿದ್ರ ಫಜೀತಿ ಆಗ್ತದ. ಅಭಿವೃದ್ಧಿಗೆ ನಾವ್‌ ಬೇಕ್‌, ಘೋಷಣೆ ಕೂಗಾಕ್‌ ಮೋದಿ ಬೇಕೇನ್‌, ಲಾಠಿ ಚಾರ್ಜ್‌ ಮಾಡಿಸ್ಲೇನ್‌’ ಅಂತ ಪ್ರತಿಮೆಗಳ ಕೆಳಗ್‌ ಬರಸ್‌ಬೇಕ್‌ ನೋಡ್‌’ ಎಂದೆ.

ಅಷ್ಟೊತ್ತಿಗೆ ರೇಡಿಯೊದಾಗ್‌ ಪ್ರದೇಶ್‌ ಸಮಾಚಾರ ಮುಗ್ದು ಕೃಷಿರಂಗದ ಹಾಡು ‘... ಕರಿ ಎತ್ತ ಕಾಳಿಂಗ್‌, ಬಿಳಿ ಎತ್ತ ಮಾಲಿಂಗ್. ಸರ್ಕಾರದ ಎತ್ತು ಸಾರಂಗೊ... ಹಳಿವುದೋ ’ ಹಾಡು ಕೇಳಿ ಬಂತು. ಹೊತ್ತಾತು ನಡಿರೋ ಎಂದು ಎಲ್ಲರನ್ನೂ ಕರ್ಕೊಂಡು ಅಗಸಿ ಬಾಗಿಲಿನಿಂದ ಹೊರ ಬಿದ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT