ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಉಡುಗೊರೆ ಎಂಬ ಹಂಗಿನ ಬಲೆ

ಉಡುಗೊರೆಯ ‘ಹಂಗು’ ಕಳಚಿಕೊಳ್ಳಲು ಮುಂದಾಗುವ ನಮ್ಮ ಜನರ ಸ್ವಭಾವವೇ ಈಗ ರಾಜಕಾರಣಿಗಳಿಗೆ ವರದಾನವಾಗತೊಡಗಿದೆ
Last Updated 8 ಮಾರ್ಚ್ 2023, 19:30 IST
ಅಕ್ಷರ ಗಾತ್ರ

‘ಕಥಾಸಂಗಮ’ ಎಂಬ ಹೆಸರಿನಲ್ಲಿ ಚಲನಚಿತ್ರವಾಗಿರುವ ಸಾಹಿತಿ ಗಿರಡ್ಡಿ ಗೋವಿಂದರಾಜ ಅವರ ಪ್ರಸಿದ್ಧ ‘ಹಂಗು’ ಕಥೆಯ ಕಥಾನಾಯಕನಾದ ಶ್ರೀಮಂತ ಗುತ್ತಿಗೆದಾರ ತನ್ನ ಮಗನಿಗೆ ಹೆಚ್ಚು ಅಂಕ ನೀಡಲು ಅಧ್ಯಾಪಕನಿಗೆ ದುಂಬಾಲು ಬೀಳುತ್ತಾನೆ. ಅಧ್ಯಾಪಕ ದಿಟ್ಟತನದಿಂದ ನಿರಾಕರಿಸುತ್ತಾನೆ.

ಅಧ್ಯಾಪಕನ ಮಗ ಅನಾರೋಗ್ಯದಿಂದ ಬಳಲುತ್ತಿರುತ್ತಾನೆ. ಒಂದು ರಾತ್ರಿ ಅವನ ರೋಗ ಉಲ್ಬಣಗೊಳ್ಳುತ್ತದೆ. ಆಸ್ಪತ್ರೆಗೆ ತೆರಳಲು ವಾಹನ ವ್ಯವಸ್ಥೆ ಇಲ್ಲದೆ ಅಧ್ಯಾಪಕ ಚಡಪಡಿಸುವುದು ಗೊತ್ತಾಗಿ ಗುತ್ತಿಗೆದಾರ ಕಾರು ತಂದು ನಿಲ್ಲಿಸಿ, ಆಗ್ರಹಪೂರ್ವಕವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾನೆ. ವೈದ್ಯರ ತಂಡ ಕರೆದು ಉಪಚಾರಕ್ಕೆ ವ್ಯವಸ್ಥೆ ಮಾಡುತ್ತಾನೆ. ಮಗುವಿನ ಆರೋಗ್ಯ ಸುಧಾರಿಸುತ್ತದೆ. ಅಧ್ಯಾಪಕ ಆಸ್ಪತ್ರೆಯ ಬಿಲ್ ಪಾವತಿಸಲು ಹೋದಾಗ, ಗುತ್ತಿಗೆದಾರ ಕೆಂಚಪ್ಪನವರೇ ಪೂರ್ಣ ಹಣ ತುಂಬಿರುವುದಾಗಿ ವೈದ್ಯರು ಹೇಳುತ್ತಾರೆ.

‘ಕಂಟ್ರಾಕ್ಟರ್ ಅವರಿಂದ ಬಹಳ ಉಪಕಾರವಾಗಿದೆ. ಅವರ ಮಗನಿಗೆ ಒಂದಿಷ್ಟು ಹೆಚ್ಚಿಗೆ ಅಂಕ ಕೊಡಿ’ ಎಂದು ಅಧ್ಯಾಪಕನಿಗೆ ಪತ್ನಿ ಹೇಳುತ್ತಾಳೆ. ಗುತ್ತಿಗೆದಾರನ ಮಗ ಹೆಚ್ಚು ಅಂಕ ಪಡೆದು ಮೆಡಿಕಲ್ ಓದಿಗೆ ಸೇರಿಕೊಳ್ಳುತ್ತಾನೆ.

ವಿಧಾನಸಭೆಯ ಚುನಾವಣೆ ಹೊಸ್ತಿಲಲ್ಲಿ ನಿಂತಿರುವ ರಾಜಕಾರಣಿಗಳು ತಮ್ಮ ಮತದಾರರಿಗೆ ಸೀರೆ, ಹಣ, ಫ್ರಿಜ್‌ನಂತಹ ವಸ್ತುಗಳನ್ನು ಹಂಚುವುದನ್ನು ನೋಡಿದಾಗ ‘ಹಂಗು’ ಕಥೆ ನೆನಪಾಗುತ್ತದೆ.

ಇನ್ನೊಬ್ಬರಿಂದ ಉಚಿತವಾಗಿ ಪಡೆದು ಉಪಭೋಗಿಸುವುದರಿಂದ ಮನುಷ್ಯರು ದಾಕ್ಷಿಣ್ಯಕ್ಕೆ ಒಳಗಾಗಬೇಕಾಗುತ್ತದೆ. ಇದನ್ನು ಗ್ರಾಮೀಣ ಜನರು ‘ಹಂಗು’ ಎಂದು ಕರೆಯುತ್ತಾರೆ. ಹಂಗಿನ ಅರಮನೆಗಿಂತ ನಮ್ಮ ಗುಡಿಸಲೇ ಲೇಸು ಎಂಬ ಬಡವರ ಸ್ವಾಭಿಮಾನದ ಮಾತು ಈ ಹಿನ್ನೆಲೆಯಲ್ಲಿ ರೂಪುಗೊಂಡಿದೆ.

ಬಿಂಬಸಾರ ದೊರೆ ಬುದ್ಧದೇವನ ಬಳಿ ಬಂದು, ಪ್ರಜೆಗಳು ನೆಮ್ಮದಿಯಿಂದ ಇರಲಿ ಎಂದು ಧಾರಾಳವಾಗಿ ದಾನ ಮಾಡುತ್ತಿರುವುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ‘ಅನ್ಯಾಯದ ಗಳಿಕೆ ದಾನ ಮಾಡುವುದಕ್ಕೆ ಪ್ರಚೋದನೆ ಆಗುತ್ತದೆ. ನಿನ್ನದು ನ್ಯಾಯದ ಗಳಿಕೆ ಅಲ್ಲ ಎಂಬುದು ಪ್ರಜೆಗಳಿಗೆ ಗೊತ್ತಿದೆ. ಅವರು ಅರಸೊತ್ತಿಗೆ ವಿರುದ್ಧ ಬಂಡೇಳುವುದನ್ನು ಆಮಿಷದ ಮೂಲಕ ತಡೆಯುತ್ತಿರುವುದು ಅವರಿಗೆ ತಿಳಿದಿದೆ. ಇದನ್ನೆಲ್ಲ ಬಿಟ್ಟು ಅವರಿಗೆ ಕೆಲಸ ಕೊಡು, ದುಡಿದು ಬದುಕುವ ಛಲವನ್ನು ಬೆಳೆಸು’ ಎಂದು ಸೂಚಿಸುತ್ತಾನೆ. ಇದು ರಾಜಕೀಯದಲ್ಲಿರುವ ನಾಯಕರು ಅರ್ಥ ಮಾಡಿಕೊಳ್ಳಬೇಕಾದ ಮಹತ್ವದ ಮಾತಾಗಿದೆ.

ಪೂಜೆ, ಹುಟ್ಟುಹಬ್ಬ, ಮದುವೆಯವಾರ್ಷಿಕೋತ್ಸವದ ನೆಪ ಮಾಡಿಕೊಂಡು ರಾಜಕಾರಣಿಗಳು ಮತದಾರರ ಮನೆ ಮನೆಗೆ ತೆರಳಿ ಗಿಫ್ಟ್ ಕೊಡುವುದು ಬಹಳಷ್ಟು ಮತಕ್ಷೇತ್ರಗಳಲ್ಲಿ ಬಹಿರಂಗವಾಗಿ ನಡೆಯುತ್ತಿದೆ. ಕೊಡುವ ವಸ್ತುಗಳು ಬೇರೆ ಬೇರೆ ಆಗಿರಬಹುದು, ಕೊಡುವ ವಿಧಾನ ಕೂಡ ಭಿನ್ನವಾಗಿರಬಹುದು, ಆದರೆ ಉದ್ದೇಶ ಮಾತ್ರ ಒಂದೇ ಆಗಿದೆ. ಒಬ್ಬರು ₹ 1,000 ಬೆಲೆಯ ಸೀರೆ ಕೊಟ್ಟರೆ ಅದೇ ಕ್ಷೇತ್ರದ ಇನ್ನೊಬ್ಬ ಸ್ಪರ್ಧಿ ₹ 3,000 ಬೆಲೆಯ ಇಳಕಲ್ ಸೀರೆ ವಿತರಿಸುತ್ತಾರೆ. ಗಿಫ್ಟ್ ಕೊಡುವುದರಲ್ಲಿಯೂ ಮೇಲಾಟ ನಡೆದಿರುವುದು ಕಾಣಿಸುತ್ತದೆ.

ಸಕ್ರಿಯ ರಾಜಕಾರಣ ಇಂದು ಎಲ್ಲ ತಾತ್ವಿಕ ನಿಲುವುಗಳನ್ನೂ ಕಳಚಿಕೊಂಡು ಶುದ್ಧ ವ್ಯಾವಹಾರಿಕ ರಾಜಕೀಯದತ್ತ ಸರಿಯತೊಡಗಿದೆ. ರಾಜಕಾರಣ ಎಂಬುದು ಕೇವಲ ಚುನಾವಣೆಯ ವ್ಯವಹಾರ ಆಗತೊಡಗಿದೆ. ಪ್ರಜಾಪ್ರಭುತ್ವದ ಶಕ್ತಿಯಾಗಬೇಕಾಗಿದ್ದ ಮತದಾನವು ವ್ಯವಹಾರೀಕರಣ ಆಗುತ್ತಿರುವುದು ಬಹುದೊಡ್ಡ ಆತಂಕಕಾರಿ ಬೆಳವಣಿಗೆಯಾಗಿದೆ.

ನನಗೆ ಪರಿಚಿತರಾಗಿರುವ ಮಹಿಳಾ ಕಾಲೇಜೊಂದರ ಪ್ರಾಚಾರ್ಯರು ನನ್ನೆದುರು ತಮ್ಮ ಅಳಲು ತೋಡಿಕೊಂಡರು. ‘ರಾಜಕೀಯ ನಾಯಕ ಮನೆಗೆ ಬಂದು ಫ್ರಿಜ್ ಕೊಡುವಾಗ ಬೇಡ ಎಂದು ಹೇಳುವುದು ಕಷ್ಟದ ಸಂಗತಿ. ಹಾಗೆ ಹೇಳಿದರೆ ಅವರು ನಮ್ಮನ್ನು ವಿರೋಧಿಗಳೆಂದು ಭಾವಿಸುತ್ತಾರೆ. ಅವರ ಕೊಡುಗೆ ಸ್ವೀಕರಿಸುವುದು ಆತ್ಮವಂಚನೆಯಾಗಿ ಕಾಡುತ್ತದೆ. ಮಕ್ಕಳು ನಿನಗೇನು ಕಡಿಮೆಯಾಗಿದೆ, ಅವರ ಉಚಿತ ಕೊಡುಗೆ ಯಾಕೆ ಪಡೆದುಕೊಂಡೆ ಎಂದು ಪ್ರಶ್ನಿಸುತ್ತಾರೆ. ಅವರಿಗೆ ವಿವರಿಸುವುದು ಸಾಧ್ಯವಾಗುತ್ತಿಲ್ಲ’ ಎಂದು ಅವರು ಬೇಸರಪಟ್ಟರು.

ಭಾರತೀಯರು ಈ ಹಂಗಿನ ವಿಚಾರದಲ್ಲಿ ಹೆಚ್ಚು ಭಾವನಾತ್ಮಕರು. ಅದು ನಮ್ಮ ಸಂಸ್ಕೃತಿಯ ಬೇರುಗಳಲ್ಲಿದೆ. ಪಡೆದ ಉಡುಗೊರೆಯನ್ನು ಇನ್ನೊಂದು ಸಮಾರಂಭದಲ್ಲಿ ಮತ್ತೊಂದು ವಸ್ತುವನ್ನು ನೀಡಿ ಹಂಗು ಕಳೆದುಕೊಳ್ಳುತ್ತೇವೆ. ನಮ್ಮ ಜನರ ಈ ಸ್ವಭಾವವೇ ಈಗ ರಾಜಕಾರಣಿಗಳಿಗೆ ವರದಾನವಾಗತೊಡಗಿದೆ. ಜನರ ಮೇಲೆ ಹಂಗಿನ ಭಾರ ಹೇರಿ ಕೂಡಿಸುತ್ತಾರೆ. ಪ್ರಜೆ ಅದನ್ನು ತೀರಿಸುವ ಒತ್ತಡದಲ್ಲಿರುತ್ತಾನೆ. ರಾಜಕಾರಣಿಗಳು ತಾವೇ ಅವರ ಮನೆ ಬಾಗಿಲಿಗೆ ಹೋಗಿ ದೊಡ್ಡ ಉಡುಗೊರೆಗಳನ್ನು ಕೊಟ್ಟು ಋಣಕ್ಕೆ ಬೀಳಿಸುತ್ತಾರೆ. ಪ್ರಜೆಗಳು ಮತ ಕೊಡುವ ಮೂಲಕ ಋಣ ಮರಳಿಸುತ್ತಾರೆ. ಪ್ರಜೆಗಳು ಮತ ಕೊಟ್ಟು ಹಗುರಾಗುತ್ತಾರೆ. ನಾಯಕ ಪಡೆದುಕೊಂಡು ಬೀಗುತ್ತಾನೆ. ‘ನಾನು ವಸ್ತುಗಳನ್ನು ಕೊಟ್ಟೆ, ಜನರು ವೋಟು ಕೊಟ್ಟರು’ ಎಂದು ನಾಯಕ ಷರಾ ಬರೆದು ಲೆಕ್ಕಾಚಾರದ ಪುಸ್ತಕ ಮುಚ್ಚುತ್ತಾನೆ.

ಬೆಳಗಾವಿ, ಕಲಬುರಗಿ ಜಿಲ್ಲೆಗಳ ಮಹಿಳಾ ಸಂಘಟನೆಗಳ ಸದಸ್ಯರು ಸಾಮೂಹಿಕವಾಗಿ ಗಿಫ್ಟ್ ನಿರಾಕರಿಸುವ ಮೂಲಕ ಸ್ವಾಭಿಮಾನ ಮೆರೆದಿದ್ದಾರೆ. ಗಿಫ್ಟ್ ಬೇಡ, ಚೆನ್ನಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿ ಎಂದು ಆಕಾಂಕ್ಷಿಗಳಿಗೆ ಹೇಳಿ ಕಳಿಸಿದ್ದಾರೆ. ಇಂಥ ಮನೋಭಾವ ಎಲ್ಲ ಕಡೆ ಬೆಳೆಯುವುದು ಅವಶ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT