ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮತದಾನ ಬಹಿಷ್ಕಾರ ಜಾಣ್ಮೆಯಲ್ಲ

Published 9 ಮೇ 2023, 19:31 IST
Last Updated 9 ಮೇ 2023, 19:31 IST
ಅಕ್ಷರ ಗಾತ್ರ

ರಾಜಕೀಯ ಸ್ವಾತಂತ್ರ್ಯದ ದ್ಯೋತಕವಾದ ಚುನಾವಣೆಯ ಮೌಲ್ಯವನ್ನು ಪ್ರಜೆಗಳು ಮನಗಾಣಬೇಕು. ಅಧಿಕ ಸಂಖ್ಯೆಯಲ್ಲಿ ಅವರು ಮತ ಚಲಾಯಿಸಲು ಮುಂದಾಗಬೇಕು. ಯಾವುದೇ ದೇಶದಲ್ಲೂ ಪ್ರಜಾಪ್ರಭುತ್ವ ಇಂದಿಗೂ ಪರಿಪೂರ್ಣ ಯಶಸ್ಸು ಕಂಡಿಲ್ಲ, ಪ್ರಾಯೋಗಿಕ ಹಂತದಲ್ಲೇ ಇದೆ. ಯಾವುದೇ ರಾಷ್ಟ್ರ ತನ್ನದು ಪರಿಪಕ್ವ ಪ್ರಜಾಸತ್ತೆ ಎಂದು ಬೀಗುವಂತಿಲ್ಲ. ಸ್ವಯಂಚಾಲಿತ ಪ್ರಜಾಪ್ರಭುತ್ವ ಎನ್ನುವುದಿಲ್ಲ. ಉತ್ತು ಬಿತ್ತರೇನೆ ಹೊಲ ಎನ್ನುವಂತೆ, ಜನರ ಸಕ್ರಿಯ ಸಹಭಾಗಿತ್ವವಿಲ್ಲದೆ ಪ್ರಜಾಸತ್ತೆ ಎಂಬ ದೋಣಿ ಸಾಗದು.

ಜನತಾಂತ್ರಿಕ ವ್ಯವಸ್ಥೆ ಜನರ ಸಹಯೋಗಕ್ಕೆ ಸಂಬಂಧಿಸಿದ್ದೇ ವಿನಾ ವ್ಯವಸ್ಥಿತ ಬಹಿಷ್ಕಾರಕ್ಕಲ್ಲ. ಬೆಲ್ಜಿಯಂ, ಬ್ರೆಜಿಲ್, ಈಕ್ವೆಡಾರ್, ಸಿಂಗಪುರದಂತಹ ದೇಶಗಳಲ್ಲಿ ಮತದಾನವನ್ನು ಪೌರರ ನ್ಯಾಯಸಮ್ಮತ ಅಗತ್ಯ ಎಂದು ಘೋಷಿಸಲಾಗಿದೆ. ತೈವಾನ್, ಸಿಪ್ರಸ್, ಹಾಂಕಾಂಗ್‍ನಲ್ಲಂತೂ ಚುನಾವಣೆಯನ್ನು ಹಬ್ಬದಂತೆಯೇ ಸಡಗರಿಸಲಾಗುತ್ತದೆ. ಕುಂದುಕೊರತೆಗಳನ್ನೇ ಕಾರಣವಾಗಿಟ್ಟುಕೊಂಡು ಮತದಾನ ಬಹಿಷ್ಕರಿಸುವುದು ಬಾಲಿಶ. ಮತದಾನ ಸದ್ಯ ಇರುವ ಆಡಳಿತಕ್ಕಿಂತ ಉತ್ತಮ ಆಡಳಿತ ತರುವ ಅವಕಾಶವನ್ನು ಒದಗಿಸುತ್ತದೆ.

ನಮಗೆ ಈ ಪವಿತ್ರ ಹಕ್ಕು ಪ್ರಾಪ್ತವಾಗಲು ಅದೆಷ್ಟು ಜನ ಹೋರಾಡಿದ್ದಾರೆ, ತ್ಯಾಗ ಮತ್ತು ಬಲಿದಾನವಾಗಿದೆ, ಸ್ವದೇಶದಲ್ಲೇ ನಿರಾಶ್ರಿತರಾಗಿ ಅನ್ನ, ನೀರಿಲ್ಲದೆ ಬಳಲಿದ್ದಾರೆ, ಜೈಲು ಸೇರಿ ದೈಹಿಕ ಮತ್ತು ಮಾನಸಿಕ ಯಾತನೆಗೆ ಗುರಿಯಾಗಿದ್ದಾರೆ, ಬಂಧುಮಿತ್ರರನ್ನು ಕಳೆದುಕೊಂಡಿದ್ದಾರೆ. ಈ ದಿಸೆಯಲ್ಲಿ ಯೋಚಿಸಿದರೆ ಮನಸ್ಸು ಭಾರವಾಗುತ್ತದೆ. ನಮ್ಮ ಪಾಲಿಗೆ ಉತ್ತಮ ನೇತಾರರ ಆಯ್ಕೆಯ ಅವಕಾಶವೇ ಸ್ವಯಂ ಶಿಕ್ಷೆಯಾಗಬೇಕೆ? ತಪ್ಪದೇ ಮತಗಟ್ಟೆಗೆ ಹೋಗಿ ಮತ ಹಾಕಿ. ನೀವು ಮತದಾನ ನಿರಾಕರಿಸಿದಿರಿ ಅನ್ನಿ, ಆಗ ಇತರರು ನಮ್ಮ ಸರ್ಕಾರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ!

ಮತದಾನ ಬಹಿಷ್ಕಾರಕ್ಕೆ ಕಾರಣಗಳ ಸರಮಾಲೆಯನ್ನೇ ಕಟ್ಟಬಹುದು. ಬಡಾವಣೆಗೆ ಸಮರ್ಪಕ ರಸ್ತೆಯಿಲ್ಲ, ಒಳಚರಂಡಿ ಕಾಮಗಾರಿ ಅರ್ಧಕ್ಕೇ ಸ್ಥಗಿತವಾಗಿದೆ, ನೀರು ಮತ್ತು ವಿದ್ಯುತ್ ಸರಬರಾಜು ಸರಿಯಿಲ್ಲ, ನಾಯಿಗಳ ಉಪಟಳವಿದೆ, ಶಾಲೆಯ ಕುಸಿದ ಚಾವಣಿ ದುರಸ್ತಿಗೆ ಕಾದಿದೆ, ದವಾಖಾನೆಯ ಕಟ್ಟಡ ವಿಸ್ತರಿಸಬೇಕಿದೆ... ಒಂದೇ? ಎರಡೇ? ಬಾಧೆ, ನ್ಯೂನತೆಗಳು ಮತದಾನದಿಂದ ಹಿಂದೆ ಸರಿಯುವುದನ್ನು ಸಮರ್ಥಿಸವು. ಚುನಾವಣೆಯ ಬಹಿಷ್ಕಾರ ನಮ್ಮ ಪ್ರತಿರೋಧದ ಅತ್ಯಂತ ದುರ್ಬಲ ರೂಪ. ಅರ್ಹತೆಯಿದ್ದೂ ವೋಟು ಮಾಡದ ಉದ್ದೇಶಪೂರ್ವಕ ಔದಾಸೀನ್ಯದಿಂದ ಮುಂದಿನ ಪೀಳಿಗೆಗಳಿಗೂ ಅಹಿತ ಸಂದೇಶ ರವಾನೆಯಾಗುವುದು.

ಜನತಂತ್ರ ವ್ಯವಸ್ಥೆಯನ್ನು ಸರಿಯಾಗಿ ಗ್ರಹಿಸದಿದ್ದರೆ ಒಬ್ಬರ ಅಜ್ಞಾನ ಎಲ್ಲರ ಭದ್ರತೆಗೆ ಸಂಚಕಾರ ತರುತ್ತದೆ ಎಂದರು ಅಮೆರಿಕದ ಅಧ್ಯಕ್ಷರಾಗಿದ್ದ ಜಾನ್ ಎಫ್. ಕೆನಡಿ. ತನ್ನೊಂದು ವೋಟಿನಿಂದ ಏನಾಗಬೇಕಿದೆ ಎನ್ನುವುದಕ್ಕೆ ಬದಲಾಗಿ ಏನೆಲ್ಲ ಸಾಧ್ಯವೆನ್ನುವ ಸಕಾರಾತ್ಮಕ ಧೋರಣೆ ಮೇಲುಗೈ ಸಾಧಿಸಬೇಕಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಯತ್ತ ತೆರಳುವ ಇಂಗಿತ ಜನಕ್ಕಿದ್ದರೆ ಚುನಾವಣಾ ಪ್ರಚಾರದ ವಿನ್ಯಾಸವೇ ಬದಲಾಗುವುದು. ಉಮೇದುವಾರರ ಚಿತ್ತ ಮತದಾರರನ್ನೂ ಮೀರಿ ಜನರ ಬವಣೆ, ಪ್ರಲಾಪಗಳತ್ತ ಹರಿಯುತ್ತದೆ.

ದುರ್ದೈವವೆಂದರೆ, ಚುನಾವಣೆಗಳು ರಾಜಕೀಯದ ಪಳೆಯುಳಿಕೆಗಳಾಗಿಬಿಟ್ಟಿವೆ. ಪ್ರಜಾಪ್ರಭುತ್ವ ಎಂದರೆ ಜನಪ್ರತಿನಿಧಿಗಳ ಆಯ್ಕೆ ಎನ್ನುವ ಸೀಮಿತ ಅರ್ಥ ಬಂದಿದೆ. ಮುಂದಿನ ಚುನಾವಣೆಯಲ್ಲಿ ಮತ್ತೆ ಗೆಲ್ಲುವುದರತ್ತಲೇ ಅಧಿಕಾರಸ್ಥರ ಯೋಜನೆಯೇ ವಿನಾ ತಾವಿತ್ತ ಭರವಸೆಗಳ ಈಡೇರಿಕೆ ಮೇಲಲ್ಲ. ರಾಜಕೀಯವು ಅರ್ಥವಾಗದ ಗೌಜು, ಗೊಂದಲಗಳ ಬೀಡು, ರಾಜಕಾರಣಿಗಳದು ಪೂರ್ವನಿಯೋಜಿತ ಅಧಿಕಾರದ ಅನುಭೋಗ ಎಂದು ಭಾವಿಸುವ ಯುವವರ್ಗವಿದೆ. ಅವರ ನಿಲುವು ವಾಸ್ತವಕ್ಕಿಂತ ತೀರಾ ಭಿನ್ನವೇನಲ್ಲ. ಇನ್ನು ಯಾವ ಶ್ರದ್ಧೆಯಿಂದ ಮತ ಚಲಾಯಿಸಲು ಅವರು ಮತಗಟ್ಟಗೆ ಹೋದಾರು?

ಇದು ನಮ್ಮ ದೇಶ, ನಮ್ಮ ಚುನಾವಣೆ, ನಮ್ಮ ಮತದಾನ ಎಂಬ ಭಾವ ಪ್ರಜೆತನದ ಅಭೇದ್ಯ ಅಂಗ. ಮತಗಟ್ಟೆಗೆ ಹೋಗೆವು ಎಂದು ಹಟ ಹಿಡಿದಿರುವವರನ್ನು ಶತಾಯ ಗತಾಯ ಮನವೊಲಿಸಬೇಕಿದೆ. ವಿಶೇಷವಾಗಿ ಯುವಕರಿಗೆ ಮಾರ್ಗದರ್ಶನದ ಅಗತ್ಯವಿದೆ. ಏಕೆಂದರೆ ಚುನಾವಣೆಯೆಂದರೆ ಮೂಗುಮುರಿಯುವ ಯುವಕರ ಸಂಖ್ಯೆ ದೊಡ್ಡದೇ ಇದೆ. ಅವರು ಎಂದಿಗೂ ರಾಜಕೀಯ ಸಂಪರ್ಕವನ್ನು ಕಡಿತಗೊಳಿಸಿಕೊಳ್ಳಬಾರದು. ಮತಪೆಟ್ಟಿಗೆಯ ಶಕ್ತಿಯನ್ನು ಅರಿಯಬೇಕು, ಅವರು ಅದರ ಹೊಳಪಾಗಬೇಕು. ಒಂದು ಅರ್ಥದಲ್ಲಿ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿರುವವರೇ ದಕ್ಷ ಸರ್ಕಾರ ತರುವ ಸಮರ್ಥರಾಗಬಲ್ಲರು!

ಚುನಾವಣೆಗೆ ನಿಂತ ಉಮೇದುವಾರ ತನಗೆ ಅಥವಾ ತನ್ನ ಸಹ ಉಮೇದುವಾರರಿಗೆ ಮತ ಹಾಕಬೇಡಿ ಎಂದರೂ ಮತದ ಹಕ್ಕನ್ನು ಅಪಮಾನಿಸಿದಂತೆ. ಚೆನ್ನಾಗಿ ಆಲೋಚಿಸಿಯೇ ಮತ ಹಾಕಿ. ಸ್ಪರ್ಧಿಸಿದವರಲ್ಲಿ ಎಲ್ಲರೂ ಅನರ್ಹರೆನ್ನಿಸಿದರೆ ಎರಡು ಆಯ್ಕೆಗಳಿದ್ದೇ ಇವೆ. ಒಂದು, ಕಡಿಮೆ ಅನರ್ಹರೆನ್ನಿಸಿದವರಿಗೆ ಮತ ನೀಡಬಹುದು, ಇನ್ನೊಂದು ‘ಸ್ಪರ್ಧಿಸಿರುವವರ ಪೈಕಿ ಯಾರೂ ಅರ್ಹರಲ್ಲ’ (ನೋಟಾ) ಎಂಬ ಅಭಿಪ್ರಾಯ ಚಲಾಯಿಸಬಹುದು. ಅಂತೂ ನಮ್ಮ ಪ್ರಜಾಪ್ರಭುತ್ವದಲ್ಲಿ ಪಾಲ್ಗೊಂಡಂತಾಯ್ತಲ್ಲ, ಅದು ಮುಖ್ಯ.

ಎರಡು ನಿದರ್ಶನಗಳು ಉಲ್ಲೇಖನೀಯ. 1989ರಲ್ಲಿ ಪೋಲೆಂಡ್‍ನಲ್ಲಿ ಹಾಗೂ 1991ರಲ್ಲಿ ರಷ್ಯಾದಲ್ಲಿ ಸರ್ಕಾರಗಳ ಬದಲಾವಣೆಗೆ ‘ನೋಟಾ’ ಮತದಾನ ನಿರ್ಣಾಯಕ ಪಾತ್ರ ವಹಿಸಿತ್ತು. ನಾಳೆ ಸರ್ಕಾರ ರಚನೆಗೊಂಡು ಏನಾದರೊಂದು ಅನನುಕೂಲ, ಲೋಪ ಗಮನಿಸಿ ‘ಅಯ್ಯೋ, ನಾನು ಮತ್ತು ನನ್ನಂಥವರು ವೋಟು ಹಾಕಿದ್ದರೆ ಹೀಗಾಗುತ್ತಿರಲಿಲ್ಲ’ ಎನ್ನುವ ಪರಿತಾಪ ತಪ್ಪುತ್ತದೆ. ಅದಕ್ಕಾಗಿಯಾದರೂ ಮತದಾನ ಬಹಿಷ್ಕರಿಸಬಾರದು, ನಮ್ಮ ಅಸ್ಮಿತೆಯನ್ನು ಅಲಕ್ಷಿಸಬಾರದು, ನೈತಿಕ ಬದ್ಧತೆಯನ್ನು ನಿರ್ವಹಿಸಬೇಕು. ರಾಜಕೀಯ ವಿಜ್ಞಾನ ಬರೀ ತರಗತಿಗಳಲ್ಲಿ, ಸಂಶೋಧನಾ ಪ್ರಬಂಧಗಳಲ್ಲಿ ಇರದೆ ಪ್ರಜೆಗಳ ಕಣ್ಣು ತೆರೆಸುತ್ತಿರಬೇಕು.

‘ಗ್ಯಾಸ್ ಇಲ್ಲ... ವೋಟಿಲ್ಲ’, ‘ಗೊಬ್ಬರವಿಲ್ಲ... ವೋಟಿಲ್ಲ’, ‘ಸೇತುವೆಯಿಲ್ಲ... ವೋಟಿಲ್ಲ’ ಎಂಬಂತಹ ಗೊಣಗಾಟಗಳು ಮತಗಟ್ಟೆಗೆ ಹೋಗುವುದನ್ನು ತಪ್ಪಿಸಬಾರದು. ಚುನಾವಣೆಯು ದೇಶದ ಸಮಗ್ರತೆಯ ಸಾಕಾರ. ಮತದಾನವು ಅಧಿಕಾರ ಹಿಡಿದ ರಾಜಕೀಯ ನಾಯಕರ ಮೇಲೆ ನಿಗಾ ಇಡಬಲ್ಲ ಶಾಂತಿಯುತ ಮತ್ತು ಪರಿಣಾಮಕಾರಿ ಅಸ್ತ್ರ. ತಾವೆಲ್ಲಿ ಮತ್ತೆ ಆರಿಸಿಬರುವುದಿಲ್ಲವೋ ಎನ್ನುವ ಆತಂಕ ಕುರ್ಚಿ ಹಿಡಿದವರನ್ನು ಕಾಡುವುದು. ಅವರು ಪ್ರಮಾದ ಎಸಗುವುದರಿಂದ ಸ್ವಲ್ಪಮಟ್ಟಿಗಾದರೂ ದೂರವಿದ್ದಾರು.

ಮತ ಚಲಾವಣೆಗೆ ನಾವು ಒಮ್ಮನಸ್ಸಿನಿಂದ ಕಾರ್ಯಪ್ರವೃತ್ತರಾದರೆ ಯಾವುದೇ ಆಮಿಷ, ದುರ್ಬೋಧೆ ನಮ್ಮನ್ನು ತಡೆಯದು.

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT