ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೀಠ ಬಿಟ್ಟಿಳಿಯಬೇಕಾದ ಪೀಠಸ್ಥರು!

ವಿಶ್ವವಿದ್ಯಾಲಯಗಳಲ್ಲಿ ನಿರ್ಜೀವವಾಗಿರುವ ಅಧ್ಯಯನ ಪೀಠಗಳ ರಿಪೇರಿ ಕಷ್ಟವೇನಲ್ಲ
Last Updated 31 ಡಿಸೆಂಬರ್ 2019, 19:46 IST
ಅಕ್ಷರ ಗಾತ್ರ

ಗಣ್ಯ ವ್ಯಕ್ತಿಗಳ ಹೆಸರಿನಲ್ಲಿ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸಲಾದ ಅಧ್ಯಯನ ಪೀಠಗಳ ಸ್ಥಗಿತತೆ, ಜಡತೆ, ಪತನ ಕುರಿತು ‘ಒಳನೋಟ’ದ ಲೇಖನ (ಪ್ರ.ವಾ., ಡಿ.29), ಈ ಪೀಠಗಳನ್ನು ಮರುಜೀವಗೊಳಿಸಲೇಬೇಕಾದ ತುರ್ತಿನ ಬಗ್ಗೆ ಅತ್ಯಗತ್ಯವಾದ ಚರ್ಚೆಯನ್ನು ಹುಟ್ಟುಹಾಕಿದೆ.

ಈ ಲೇಖನ ಪ್ರಕಟವಾದ ದಿನ ಕುವೆಂಪು ಜನ್ಮದಿನ. ಅವತ್ತು ಕುವೆಂಪು ವ್ಯಕ್ತಿತ್ವ, ಅವರ ಬರಹಗಳು ಹಾಗೂ ನಿರ್ವಹಿಸಿದ ಜವಾಬ್ದಾರಿಗಳನ್ನು ನೆನೆಯುತ್ತಿರುವಾಗ, ವಿಶ್ವವಿದ್ಯಾಲಯ, ಪ್ರಸಾರಾಂಗ ಮುಂತಾದ ಸಂಸ್ಥೆಗಳನ್ನು ಕುವೆಂಪು ಅರ್ಥಪೂರ್ಣವಾಗಿ ರೂಪಿಸಿದ ರೀತಿಗಳು ನೆನಪಾದವು. ಮೈಸೂರು ವಿಶ್ವವಿದ್ಯಾಲಯಕ್ಕೆ ‘ಮಾನಸಗಂಗೋತ್ರಿ’ ಎಂದು ಹೆಸರಿಟ್ಟ ಕುವೆಂಪು, ಒಂದು ವಿಶ್ವವಿದ್ಯಾಲಯ ಹೇಗಿರಬೇಕೆಂಬ ಆದರ್ಶ ಕನಸನ್ನು ‘ಇಕ್ಷುಗಂಗೋತ್ರಿ’ ಪದ್ಯದಲ್ಲಿ ಮಂಡಿಸುತ್ತಾರೆ: ವಿಶ್ವವಿದ್ಯಾಲಯಕ್ಕೆ ಅಡಿಯಿಡುವ ಎಲ್ಲರನ್ನೂ ಕುರಿತು ‘ಇದೊ ಗಂಗೋತ್ರಿ, ಹೇ ಮಾನಸ ಯಾತ್ರಿ!’ ಎಂದು ಸಂಬೋಧಿಸುವ ಈ ಪದ್ಯ, ವಿಶ್ವವಿದ್ಯಾಲಯ ಎನ್ನುವುದು ‘ಎಲ್ಲ ತತ್ವಗಳ ಮೂಲ ನಿಧಿ, ಎಲ್ಲ ಚಿಂತನದ ವಾರಿನಿಧಿ’ ಎಂದು ಬಣ್ಣಿಸುತ್ತದೆ.

‘ಯಮುನಾ, ಗಂಗಾ, ಕೃಷ್ಣಾ, ತುಂಗಾ, ಮಿಸಿಸಿಪಿ, ಅಮೆಜಾನ್, ಥೇಮ್ಸ್ ಡಾನ್, ಎಲ್ಲ ನದಿಗಳಿಗೂ ಇಲ್ಲಿಯೆ ಉಗಮ; ಎಲ್ಲ ಸಮುದ್ರಗಳೆಲ್ಲ ಶಿಖರಗಳಿಲ್ಲಿಯೆ ಸಂಗಮ’ ಎನ್ನುವ ಕುವೆಂಪು ಅವರ ವಿಶಾಲ ಆಶಯವನ್ನು ಇವತ್ತು ವಿಶ್ವವಿದ್ಯಾಲಯಗಳಲ್ಲಿ ಮರಗಟ್ಟಿರುವವರು ನೆನಪಿಸಿಕೊಳ್ಳಬೇಕು. ಆಗ ವಿಶ್ವವಿದ್ಯಾಲಯಗಳಿಗೆ, ಅಲ್ಲಿನ ಅಧ್ಯಯನ ಪೀಠಗಳಿಗೆ ಮರುಜೀವ ಮೂಡುತ್ತದೆ.

ಈ ಹಿನ್ನೆಲೆಯಲ್ಲಿ, ಹಿಂದೊಮ್ಮೆ ಕನ್ನಡ ವಿಶ್ವವಿದ್ಯಾಲಯದ ಲೋಹಿಯಾ ಅಧ್ಯಯನ ಪೀಠವು ವಿಶಾಲವಾದ ಹಾದಿಯಲ್ಲಿ ಕೆಲಸ ಮಾಡಿದ್ದು ನೆನಪಾಗುತ್ತದೆ. ಲೋಹಿಯಾರ ಸಮಾಜವಾದಿ ಆಶಯಗಳನ್ನು ಬಿಂಬಿಸಿದ ಕರ್ನಾಟಕದ ಚಳವಳಿಗಳನ್ನು ಸಮಕಾಲೀನ ನೆಲೆಯಲ್ಲಿ ಅಧ್ಯಯನ ಮಾಡಿ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಯುವ ಲೇಖಕರು ಬರೆದ ಅಮೂಲ್ಯ ಪುಸ್ತಕಗಳನ್ನು ಪೀಠ ಹೊರತಂದಿದೆ; ಸಮಾಜವಾದಿಗಳನ್ನು ಕುರಿತ ಬರಹಗಳು, ಪುಸ್ತಕಗಳು ಬಂದಿವೆ. ಚಿಂತನ ಶಿಬಿರಗಳು ನಡೆದಿವೆ. ಇಂಥ ಜವಾಬ್ದಾರಿಯುತ ಕೆಲಸಗಳು ಆಯಾ ಪೀಠದಲ್ಲಿರುವ ವ್ಯಕ್ತಿಗಳ ಬದ್ಧತೆಯಿಂದ ನಡೆಯುತ್ತಿರುತ್ತವೆಯೇ ಹೊರತು, ಈ ಪೀಠಗಳು ವ್ಯವಸ್ಥಿತವಾಗಿ ಕೆಲಸ ಮಾಡಲೇಬೇಕಾದ ಒತ್ತಡ ವಿಶ್ವವಿದ್ಯಾಲಯಗಳಲ್ಲಿ ಇಲ್ಲ. ಪೀಠಸ್ಥರು ಆಯಾ ಪೀಠ ಸ್ಥಾಪನೆಯ ವಿಶಾಲ ಉದ್ದೇಶಗಳನ್ನು ಗ್ರಹಿಸದಿರುವುದರಿಂದ ಇವು ನಿರ್ಜೀವವಾಗಿವೆ. ಆದ್ದರಿಂದ ಈ ಪೀಠಗಳಿಗೆ ಆಯಾ ಕ್ಷೇತ್ರಗಳಲ್ಲಿ ಗಂಭೀರ ಕೆಲಸ ಮಾಡಿರುವ ಅಧ್ಯಾಪಕ, ಅಧ್ಯಾಪಕಿಯರ ಜೊತೆಗೆ ಸಂಶೋಧಕರನ್ನು, ಈ ವಲಯಗಳ ಬಗ್ಗೆ ಕಾಳಜಿಯಿರುವ ವಿದ್ಯಾರ್ಥಿಗಳನ್ನು ನೇಮಿಸುವ ಅಗತ್ಯವಿದೆ.

ಈ ಪೀಠಗಳು ಯಾರ ಹೆಸರಿನಲ್ಲಿವೆಯೋ ಅವರ ಕೊಡುಗೆ, ಆಶಯಗಳನ್ನು ಕುರಿತು ಕೆಲಸ ಮಾಡಿರುವವರನ್ನು, ಮಾಡುತ್ತಿರುವವರನ್ನು, ಇತರ ಆಸಕ್ತರನ್ನು ಆಹ್ವಾನಿಸಬೇಕು. ಈ ಪೀಠಗಳು ಕಾಲೇಜುಗಳ ಜೊತೆಗೂಡಿಯೂ ಕೆಲಸ ಮಾಡಬಹುದು; ವಿದ್ಯಾರ್ಥಿ
ಗಳಿಗೆ, ಸಾರ್ವಜನಿಕರಿಗೆ ಕಮ್ಮಟ ಮಾಡಬಹುದು. ದೇವರಾಜ ಅರಸು ಪೀಠವು ಹಲಬಗೆಯ ಸಾಮಾಜಿಕ ನ್ಯಾಯ ಹಾಗೂ ಹಿಂದುಳಿದ ವರ್ಗಗಳ ಚಲನೆ ಕುರಿತ ಕಮ್ಮಟಗಳನ್ನು ನಡೆಸಿದರೆ, ಎಂ.ಡಿ. ನಂಜುಂಡಸ್ವಾಮಿ ಪೀಠವು ರೈತರ ಸ್ಥಿತಿಗತಿ ಕುರಿತು ರೈತ ನಾಯಕರ ಜೊತೆಗೂಡಿ ಸಂವಾದ ನಡೆಸಿ, ರೈತ ಚಳವಳಿಗೆ ಬೌದ್ಧಿಕ ನೋಟಗಳನ್ನು ಕೊಡಬಹುದು.

ಬಸವಣ್ಣ, ಅಕ್ಕಮಹಾದೇವಿಯವರಂಥ ಕವಿಗಳ ಹೆಸರಿನಲ್ಲಿರುವ ಪೀಠಗಳು ಏಕಕಾಲಕ್ಕೆ ಇವರ ವಚನಗಳನ್ನು ಹೊಸ ರೀತಿಯಲ್ಲಿ ಓದುವ ಕಮ್ಮಟಗಳನ್ನು ವಿದ್ಯಾರ್ಥಿಗಳಿಗಾಗಿ ನಡೆಸಬಹುದು; ವಚನ ಚಳವಳಿಯ ಸಾಮಾಜಿಕ ಆಶಯಗಳನ್ನು ವ್ಯಾಪಕವಾಗಿ ತಲುಪಿಸಬಹುದು. ಹೀಗೆ ಅಧ್ಯಯನ ಪೀಠಗಳು ತಮ್ಮ ಆಶಯಗಳನ್ನು ಸದಾ ವಿಸ್ತರಿಸಿಕೊಳ್ಳುವ ಅಗತ್ಯವಿದೆ. ಮಂಗಳೂರು ವಿಶ್ವವಿದ್ಯಾಲಯದ ‘ಕನಕ ಸಂಶೋಧನಾ ಪೀಠ’ ಕನಕ ಸಾಹಿತ್ಯದ ಆಶಯಗಳ ಸಮಕಾಲೀನ ವ್ಯಾಖ್ಯಾನಗಳನ್ನು ಆಧರಿಸಿದ ಸಂಕಿರಣ, ಸಂವಾದ, ಪ್ರಕಟಣೆ, ವಿದ್ಯಾರ್ಥಿ ಕಮ್ಮಟ- ಈ ನಾಲ್ಕೂ ದಿಕ್ಕಿನಲ್ಲಿ ಎಲ್ಲ ಪೀಠಗಳಿಗೂ ಮಾದರಿಯಾಗುವಂತೆ ಕೆಲಸ ನಿರ್ವಹಿಸಿದೆ.

ಈ ಪೀಠಗಳ ಹಿನ್ನಡೆಗೆ ವಿಶ್ವವಿದ್ಯಾಲಯಗಳ ಆರ್ಥಿಕ ಇಲಾಖೆಗಳ ಜಡತೆಯೂ ಕಾರಣ. ಸರ್ಕಾರಗಳು ನಿತ್ಯ ಇ-ಆಡಳಿತದ ಶಂಖ ಬಾರಿಸುತ್ತಿದ್ದರೂ ಒಂದು ಕಮ್ಮಟದ ವೆಚ್ಚಕ್ಕಾಗಿ ಅಧ್ಯಾಪಕರು ಫೈಲುಗಳ ಹಿಂದೆ ಸುತ್ತಬೇಕಾದ ಹೀನಾಯ ಸ್ಥಿತಿಯಿದೆ. ಬೇಡಿಕೆ, ಮಂಜೂರು, ಲೆಕ್ಕಪತ್ರ- ಇವೆಲ್ಲ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕವೇ ನಡೆದರೆ, ಪೀಠಗಳು ಚುರುಕಾಗಬಲ್ಲವು. ಅನೇಕ ಸಂಸ್ಥೆಗಳಂತೆ ವಿಶ್ವವಿದ್ಯಾಲಯಗಳೂ ಅವುಗಳ ಸಂಸ್ಥೆಗಳೂ ಕೆಟ್ಟಿವೆ, ನಿಜ; ಆದರೆ ಬದ್ಧ ವ್ಯಕ್ತಿಗಳಿದ್ದರೆ ಅವುಗಳ ರಿಪೇರಿ ಕಷ್ಟವಲ್ಲ.

ಈ ಪೀಠಗಳನ್ನು ನಿರ್ವಹಿಸಲು ಹಿರಿಯ-ಕಿರಿಯ ಎಂಬ ಅಧ್ಯಾಪಕ ಶ್ರೇಣೀಕರಣದ ಜಾತಿ ಪದ್ಧತಿ ಮೊದಲು ತೊಲಗಬೇಕು. ಉತ್ಸಾಹ, ಕಾಳಜಿಯಿರುವ ಯಾವ ಅಧ್ಯಾಪಕ- ಅಧ್ಯಾಪಕಿಯಾದರೂ ಈ ಕೆಲಸ ಮಾಡಲು ಅವಕಾಶವಿರಬೇಕು. ಮುಖ್ಯವಾಗಿ, ಈ ಪೀಠಗಳನ್ನು ನಡೆಸುವವರು ಪೀಠದಿಂದ ಕೊಂಚ ಕೆಳಗಿಳಿದು, ವಿದ್ಯಾರ್ಥಿ ಸಮುದಾಯದ ಜೊತೆ, ಜನರ ಜೊತೆ ಕೆಲಸ ಮಾಡಲು ತಯಾರಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT