ಕೊಡಗು: ಧರೆ ಮುನಿದರೆ ಕಾಯ್ವರಾರು?

7

ಕೊಡಗು: ಧರೆ ಮುನಿದರೆ ಕಾಯ್ವರಾರು?

Published:
Updated:

ಜುಲೈ ತಿಂಗಳ 9ನೇ ತಾರೀಕು ಮಧ್ಯಾಹ್ನವಿರಬೇಕು. ಮಡಿಕೇರಿಯಲ್ಲಿ ನೆಲದಾಳದಿಂದ ದೊಡ್ಡದೊಂದು ಸ್ಫೋಟದಂತಹ ಶಬ್ದ. ಭೂಮಿಯ ಒಳಭಾಗದಲ್ಲಿ ಏನೋ ನಡೆದುದಕ್ಕೆ ಅದು ಮೊದಲ ಸಾಕ್ಷಿ. ಇದಾದ ಎರಡು ವಾರಗಳ ನಂತರದಲ್ಲಿ ನಾಯಿಗಳ ವಿಕಾರ ಕೂಗುವಿಕೆ, ಹಟ್ಟಿಯಲ್ಲಿ ದನಗಳ ಚಡಪಡಿಕೆ ಭೂ ಕುಸಿತದ ಸ್ಥಳಗಳಲ್ಲಿ ವಾಸಿಸುತ್ತಿದ್ದ ಜನರ ಅರಿವಿಗೂ ಬಂದಿದ್ದು, ಏನೋ ಘಟಿಸುತ್ತಿರುವುದರ ಮುನ್ಸೂಚನೆಯಂತಿತ್ತು. ಜನ ಗಾಬರಿಗೊಂಡಿದ್ದರು. ಆದರೇನು? ಏನಾಯಿತೆಂದು ಅರಿಯುವ ಮೊದಲೇ ಭಯಾನಕ ಜಲಸ್ಫೋಟಕ್ಕೆ ಬೆಟ್ಟಗಳೇ ಚಲಿಸಿ ಇನ್ನಿಲ್ಲದಂತೆ ಜನರ ಬದುಕನ್ನೇ ಹೊಸಕಿಹಾಕಿತು. ಭೂಗರ್ಭದಿಂದ ಚಿಮ್ಮಿಎದ್ದ ನೀರು ಎಕರೆಗಟ್ಟಲೆ ಮೇಲ್ಮಣ್ಣನ್ನು ಎತ್ತಿ ಜಾರಿಸಿ ದೊಡ್ಡದೊಡ್ಡ ಬಂಡೆ ಕಲ್ಲುಗಳನ್ನು ಬೃಹತ್ ಮರಗಳನ್ನು ತನ್ನೊಡನೆ ಎಳೆದು ಚಾಪೆಯಂತೆ ಉರುಳುರುಳಿಸಿ ತಂದ ಪರಿಗೆ ಮರಗಳ ಕೊಂಬೆಗಳೆಲ್ಲ ಹಾರಿಹೋಗಿ ದಪ್ಪನೆಯ ಸಿಪ್ಪೆ ಜಾರಿಸಿಕೊಂಡು ಕಾಂಡಗಳು ಬೆಲ್ಲದಗಾಣಕ್ಕೆ ಕೊಟ್ಟ ಕಬ್ಬಿನಂತಾದವು. ಕೆಂಪು ಮಣ್ಣು ಮಿಶ್ರಿತ ಮಡ್ಡಿಯಾದ ಪಯಸ್ವಿನಿ ನೀರಲ್ಲಿ ತೇಲುತ್ತಿದ್ದ ಜಲಚರಗಳ ಹೆಣಗಳು, ನೋಡು ನೋಡುತ್ತಿದ್ದಂತೆ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಹಲವು ಭಾಗಗಳು ಮಸಣ ಸೇರಿದವು.

ಮಲೆನಾಡಿನ ಈ ಭಾಗಗಳಲ್ಲಿ ಭಯಾನಕ ಸನ್ನಿವೇಶವೊಂದು ನಿರ್ಮಾಣವಾಗಿದೆ. ಇಂತಹದೊಂದು ನಡೆಯಬಹುದೆಂಬ ಕಲ್ಪನೆಯೇ ಜನಸಾಮಾನ್ಯರಿಗೆ ಇರಲಿಲ್ಲವೇನೋ. ಇಲ್ಲಿಯ ಅನೇಕ ಭಾಗಗಳು ಮತ್ತೆ ಜನವಾಸಕ್ಕೆ ಯೋಗ್ಯವೇ ಎಂಬ ಪ್ರಶ್ನೆ ಎಲ್ಲರ ಮುಂದಿದೆ. ಪ್ರಕೃತಿ ಮತ್ತೆಹತ್ತಾರು ವರುಷಗಳಲ್ಲಿ ಇಲ್ಲಿ ಏನೂ ನಡೆದೇ ಇಲ್ಲವೆಂಬಂತೆ ಹಸುರು ಮರಗಿಡಗಳ ಹೊದ್ದು ಮೇಲೇಳಲಿದೆ. ಸರಿ, ಆದರೆ ಸಂತ್ರಸ್ತ ಜನರ ಪಾಡು ಮುಂದೇನು? ಕೂಲಿ ನೆಚ್ಚಿ ಬದುಕಿದ್ದವರು, ಶಾಲೆಗೆ ಹೋಗುತ್ತಿದ್ದ ಮಕ್ಕಳು, ಉನ್ನತ ವ್ಯಾಸಂಗಗಳಲ್ಲಿ ದೂರದ ನಗರಗಳಲ್ಲಿ ತೊಡಗಿಕೊಂಡಿರುವವರು, ಸಾಲ ಸೋಲ ಮಾಡಿಕೊಂಡು ಈಗಷ್ಟೆ ಹೊಸ ಮನೆಗಳ ಕಟ್ಟಿಸಿಕೊಂಡವರು, ಹಣವೋ, ಚಿನ್ನವೋ, ಆಸ್ತಿ ಪಾಸ್ತಿ ದಾಖಲೆಗಳ ಇಲ್ಲದಾಗಿಸಿಕೊಂಡವರ ಸಂಕಟಗಳು ಒಂದೇ ಎರಡೇ…

ಧರೆ ಮುನಿದು ಎಲ್ಲವನ್ನೂ ನೊಣೆಚಿ ಹಾಕಿದೆ. ಕಳೆದ ಐದು ದಶಕಗಳಲ್ಲಿ ಅಭಿವೃದ್ಧಿ ಹೆಸರಲ್ಲಿ ನಾವು ಇಲ್ಲಿಯ ನೆಲದ ಮೇಲೆ ಏನೇನು ಅನಗತ್ಯ ಹಸ್ತಕ್ಷೇಪ ನಡೆಸಿದ್ದೇವೆ ಎಂಬ ಬಗ್ಗೆ ಈ ಹೊತ್ತಲ್ಲಿ ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಕಾಫಿ, ಚಹಾ, ಏಲಕ್ಕಿ, ರಬ್ಬರು, ಗೇರು ಎಲ್ಲವನ್ನೂ ಬೆಟ್ಟಗಳ ತುದಿಗಳಿಗೆ ವಿಸ್ತರಿಸಿದ್ದೇವೆ. ಗುಡ್ಡಗಳ ತಲೆತರಿದು ಸಮತಟ್ಟಾಗಿಸಿ, ಕಾಡು ಝರಿಗಳೆಲ್ಲವ ಬಗೆದು ಕಂಪನಿಗಳೋ, ದೊಡ್ಡ ದೊಡ್ಡ ಮರಗಳ ಕಡಿದು ಬಂಡೆಗಳನ್ನೆಲ್ಲ ಡೈನಮೈಟ್ ಇರಿಸಿ ಸಿಡಿಸಿ ಬೃಹತ್ ಯಂತ್ರಗಳ ನುಗ್ಗಿಸಿ ಎಲ್ಲೆಂದರಲ್ಲಿ ರಸ್ತೆಗಳೋ, ಹೈವೆಗಳೋ ಸಮೃದ್ಧ ಕಾಡುಗಳ ಮಧ್ಯೆ ಹಾದು ಹೋಗುವಂತೆ ಮಾಡಿದ್ದೇವೆ. ಈ ಭೂಮಿ ಮೇಲಿನ ನಮ್ಮ ದೌರ್ಜನ್ಯ, ದುರಾಚಾರಗಳು ಮಿತಿ ಮೀರಿದವೇ.

ಮಳೆಗಾಲ ಆರಂಭ ಆಗುತ್ತಲೇ ಮನೆಯ ಸುತ್ತಮುತ್ತ ನೀರ ಹೊಂಡಗಳಿಂದ ಕಿವಿಯ ತಮ್ಮಟೆಗಳೇ ಹರಿದು ಹೋಗುವಷ್ಟು ವಟಗುಟ್ಟುತ್ತಿದ್ದ ಕಪ್ಪೆಗಳು, ಹೊಳೆ ತೋಡುಗಳಲ್ಲಿ ಈಜಾಡುತ್ತಿದ್ದ ಹತ್ತಾರು ತರಹದ ಜಲಚರಗಳು, ನೆಲದ ಮೇಲಿನ ಬಣ್ಣ ಬಣ್ಣ ಚಿಟ್ಟೆಗಳು, ಮುಂಜಾನೆ ಶಿಳ್ಳೆ ಹಾಕಿ ಎಚ್ಚರಿಸುತಿದ್ದ ಕಾಜಾಣ ಹಕ್ಕಿಗಳು, ಕತ್ತಲಾಗುತ್ತಿದ್ದಂತೆ ಗುಂಗುಂ... ಎನ್ನುತ್ತಿದ್ದ ಗೂಬೆಗಳು, ತೋಟಗಳ ದಾರಿಯ ಹುಲ್ಲುಹಾಸಿನಲ್ಲಿ ಭಯ ಹುಟ್ಟಿಸುವಷ್ಟು ಸಂಖ್ಯೆಯಲ್ಲಿರುತ್ತಿದ್ದ ಹಾವು, ಚೇಳುಗಳು, ನೆಲಕ್ಕೆ ಹಾರೆ ಹಾಕಿ ಹಿಡಿ ಮಣ್ಣು ಎತ್ತಿದಾಗ ಇರುತ್ತಿದ್ದ ಹತ್ತಾರು ಎರೆಹುಳುಗಳು ಯಾರಿಗೂ ಹೇಳದೆ ಎಲ್ಲಿ ಮಾಯವಾದವೋ. ದೂರದ ಊರುಗಳಿಂದ ಮಿತ್ರರ ಮೊಬೈಲು ಕರೆಗಳು ಬರುತ್ತಿವೆ. ಏನಾಯಿತು? ಏನಾದರೂ ಸಹಾಯ ಬೇಕಿತ್ತೇ? ಕೇಳುತ್ತಾರೆ. ಎದೆ ಭಾರವಾಗುತ್ತದೆ. ಆಡುವ ಮಾತು ಗಂಟಲಲ್ಲೇ ಕಟ್ಟಿ ಅರಿವಿಲ್ಲದಂತೆ ಕಣ್ಣಿಂದ ನೀರ ಹನಿಗಳು ಜಾರುತ್ತವೆ. ಆ ರೆಡ್ ಇಂಡಿಯನ್ ಎಂತಹ ಸತ್ಯ ಹೇಳಿದ. ಹೌದು ನಾವು ಮಲಗಿರುವ ಹಾಸಿಗೆಯನ್ನೇ ಹೊಲಸು ಮಾಡಿ
ಕೊಂಡಿದ್ದೇವೆ. ಮುಂದೊಂದು ದಿನ ಅದೇ ನಮ್ಮನ್ನು ಉಸಿರುಗಟ್ಟಿಸುತ್ತದೆ. ಅಲ್ಲ ಈಗ ಆಗಿರುವುದು ಏನು?

ಸ್ವಲ್ಪ ಕೇಳಿ... ಪಶ್ಚಿಮ ಘಟ್ಟಗಳು ಅತೀ ಸೂಕ್ಷ್ಮ ವಲಯಗಳಾಗಿವೆ. ಮಾನವನ ಅತಿಯಾದ ಹಸ್ತಕ್ಷೇಪಗಳನ್ನು ಅಲ್ಲಿ ನಿರ್ಬಂಧಿಸಿ ಎಂದು ಹೇಳಿದ್ದ ಮಾಧವ ಗಾಡ್ಗೀಳ್‌, ಕಸ್ತೂರಿ ರಂಗನ್ ವರದಿಗಳನ್ನು ಸಾರಾಸಗಟಾಗಿ ತಿರಸ್ಕರಿಸಿದೆವು. ಯುನೆಸ್ಕೊ ವಿಶ್ವ ಪರಂಪರೆಯ ತಾಣವಾಗಿ ಪಶ್ಚಿಮ ಘಟ್ಟಗಳನ್ನು ಘೋಷಿಸಲೆತ್ನಿಸಿದಾಗ ತಡೆದೆವು. ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳ ಗ್ರಾಮ ಪಂಚಾಯ್ತಿಗಳು, ಜಿಲ್ಲಾ ಪಂಚಾಯ್ತಿಗಳು ಕೂಡ ಇಲ್ಲಿನ ನೆಲಜಲಗಳ ಬಗೆಗಿನ ಅತೀವ ಕಾಳಜಿಯುಕ್ತ ವರದಿಗಳ ವಿರುದ್ಧ ತಳಮ
ಟ್ಟದಲ್ಲೇ ನಿರ್ಣಯಗಳನ್ನು ತೆಗೆದುಕೊಂಡವು. ‘ವರದಿಗಳಿಗೆ ಕಿವಿಗೊಡಿ’ ಎಂದು ಭಾಷಣಗಳ ಮಾಡಿದ, ಸ್ಥಳೀಯ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದವರನ್ನು ಬೆದರಿಸಲಾಯ್ತು, ಮೂದಲಿಕೆಯ ಮಾತುಗಳಿಂದ ಅವಮಾನ ಮಾಡಲಾಯ್ತು. ಎಲ್ಲದಕ್ಕಿಂತಲೂ ನೋವಿನ ಸಂಗತಿಯೆಂದರೆ ಕೆಲವು ಪತ್ರಿಕೆಗಳು ಪರಿಸರವಾದಿಗಳನ್ನು ‘ಅಭಿವೃದ್ಧಿ ವಿರೋಧಿಗಳು, ಡೋಂಗಿ ಪರಿಸರವಾದಿಗಳು, ಪರಿಸರವ್ಯಾಧಿಗಳು’ ಎಂದು ಚಿತ್ರಿಸುತ್ತಲೇ ಇದ್ದವು. ಹಾಗಾಗಿ ಕೊಡಗಿನ ಈ ಭಾಗದಲ್ಲಿ ಪ್ರಬಲ ಪರಿಸರ ಹೋರಾಟವೊಂದು ರೂಪುಗೊಳ್ಳಲೇ ಇಲ್ಲ.

ಇಷ್ಟೆಲ್ಲ ಆದ ಮೇಲೆಯೂ ಕೆಲ ಸಂಘ ಸಂಸ್ಥೆಗಳು, ರಾಜಕಾರಣಿಗಳು ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುವುದಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ವರದಿಯನ್ನು ತಿರಸ್ಕರಿಸುವುದಕ್ಕೂ ಪುರಸ್ಕರಿಸುವುದಕ್ಕೂ ಇನ್ನು ಉಳಿದಿರುವುದಾದರೂ ಏನು? ನಮ್ಮ ದುರಹಂಕಾರಗಳಿಗೂ ಮಿತಿ ಬೇಡವೇ. ಇಂದಿನ ಅವಾಂತರಗಳಿಗೆ ಯಾರು ಹೊಣೆ? ಜನಪ್ರತಿನಿಧಿಗಳೇ, ರೆವೆನ್ಯೂ ಇಲಾಖೆಗಳೇ? ಅರಣ್ಯ ಇಲಾಖೆಗಳೇ? ಅಥವಾ ಸ್ವತಃ ಜನಸಾಮಾನ್ಯರೇ? ಬೇಕಾಬಿಟ್ಟಿ ನಾವು ಮಾಡುತ್ತಿರುವ ಅವೈಜ್ಞಾನಿಕ ಅಭಿವೃದ್ಧಿ ಚಟುವಟಿಕೆಗಳು, ಐಷಾರಾಮದ ಗೀಳು ಎಲ್ಲವನ್ನೂ ಚಟ್ಟಕ್ಕೇರಿಸಿದೆ. ವಿಜ್ಞಾನಿಗಳು, ಪರಿಸರ ತಜ್ಞರು ಆಡಿದ ಮಾತುಗಳು ನಮಗೆ ಅಪಥ್ಯವಾದವು. ಪರಿಣಾಮ ಲಕ್ಷಾಂತರ ವರ್ಷಗಳಿಂದ ತನ್ನಷ್ಟಕ್ಕೆ ಬೆಳೆದು ಮಾನವ ಸೇರಿದಂತೆ ಜೀವಕೋಟಿಗಳ ಕಾಪಿಟ್ಟ ಹಸಿರಿನ ಕೋಟೆಗಳು ಉರುಳಿದವು. ಜನ ಇನ್ನಿಲ್ಲದಷ್ಟು ಸಂಕಟಗಳಿಗೆ ಬಲಿಯಾದರು.

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !