ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಕೆಜಿಎಫ್: ಎಲ್ಲಿದ್ದಾರೆ ದನಿಯಾಗುವವರು?

‘ಕೆಜಿಎಫ್‌’ ಹೆಸರಿನ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಆದರೆ ಕೆಜಿಎಫ್‌ ಗಣಿಗಳಲ್ಲಿ ಕಾರ್ಮಿಕರಾಗಿ ದುಡಿದವರ ಬವಣೆ ಕೇಳುವವರೇ ಇಲ್ಲದಂತಾಗಿದೆ
Last Updated 3 ಮೇ 2022, 19:31 IST
ಅಕ್ಷರ ಗಾತ್ರ

2018ರಲ್ಲಿ ಬಿಡುಗಡೆಯಾದ ಕೆಜಿಎಫ್-1 ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿತು. ಹಾಗೆಯೇ ಇತ್ತೀಚೆಗೆ ಬಿಡುಗಡೆಯಾಗಿರುವ ಕೆಜಿಎಫ್-2 ಗಳಿಕೆಯಲ್ಲಿ ದಾಖಲೆ ಮಾಡುತ್ತಿದೆ. ಕನ್ನಡ ಸಿನಿಮಾವೊಂದು ದೇಶದಾದ್ಯಂತ ಸಂಚಲನ ಸೃಷ್ಟಿಸುತ್ತ ಅದ್ಭುತ ಯಶಸ್ಸು ಕಂಡಿದೆ.

ಸಿನಿಮಾದಲ್ಲಿ ಗಣಿತ್ಯಾಜ್ಯ, ಸೈನೈಡ್ ಗುಡ್ಡಗಳು ಪದೇಪದೇ ಕಾಣಿಸಿಕೊಳ್ಳುತ್ತವೆ. ಅವು ಹೇಗೆ ಕಾಣಿಸುತ್ತವೆ ಎಂದರೆ, ಲಕ್ಷಾಂತರ ವರ್ಷಗಳ ಕಾಲ ಭೂಕಂಪ-ಸುನಾಮಿ, ಚಂಡಮಾರುತ ಭೂಮಿಯ ಮೇಲೆ ದಾಳಿ ಮಾಡಿದಂತೆ ಅಥವಾ ನೂರಾರು ಕ್ಷುದ್ರಗ್ರಹಗಳು ಭೂಮಿಗೆ ಬಡಿದು ಅದರ ಮುಖವನ್ನೇ ಛಿದ್ರಗೊಳಿಸಿದಂತೆ ಕಾಣಿಸುತ್ತವೆ. ಗಣಿಗಳ ಯಶೋಗಾಥೆ, ಮಾನವ ಇತಿಹಾಸದ ಭೀಕರತೆ ಎರಡನ್ನೂ ಸಾರುವ ಈ ಗುಡ್ಡಗಳು ಮತ್ತು ‘ಕೆಜಿಎಫ್’ ಎಂಬ ಹೆಸರು ಸಿನಿಮಾ ಯಶಸ್ಸಿಗೆ ಸ್ವಲ್ಪಮಟ್ಟಿಗೆ ಕಾರಣವಾಗಿರಬೇಕು!

2,500 ವರ್ಷಗಳ ಹಿಂದೆಯೇ ಇಲ್ಲಿನ ಚಿನ್ನವು ಹರಪ್ಪ- ಮೊಹೆಂಜೊದಾರೊ ತಲುಪಿರುವ ದಾಖಲೆಗಳಿವೆ. ಬ್ರಿಟಿಷರು 1880ರಲ್ಲಿ ಮತ್ತೆ ಈ ಗಣಿಗಳನ್ನು ಪ್ರಾರಂಭಿಸಿ, ಅವು ನಿರಂತರವಾಗಿ 12 ದಶಕಗಳ ಕಾಲ ನಡೆದು 2001ರಲ್ಲಿ ಸ್ಥಗಿತಗೊಂಡವು. 8 ಕಿ.ಮೀ. ಉದ್ದ, 1.5 ಕಿ.ಮೀ. ಅಗಲ, 3.30 ಕಿ.ಮೀ. ಆಳದವರೆಗೂ ಗಣಿಗಳನ್ನು ತೋಡಿ, 1,000 ಟನ್ನುಗಳಷ್ಟು ಚಿನ್ನವನ್ನು ಉತ್ಪಾದಿಸಲಾಯಿತು. ಕೇಂದ್ರ ಸರ್ಕಾರವು 2001ರ ಫೆಬ್ರುವರಿ 28ರಂದು ಎಲ್ಲಾ ಗಣಿಗಳನ್ನು ದಿಢೀರನೆ ಸ್ಥಗಿತಗೊಳಿಸಿಬಿಟ್ಟಿತು.

ಗಣಿಗಳ ಸುತ್ತಲೂ ಇದ್ದ ಸುಮಾರು 200 ಗಣಿ ಕಾಲೊನಿಗಳಲ್ಲಿ ಸಾವಿರಾರು ಕಾರ್ಮಿಕರು ಮತ್ತು ಅವರ ಕುಟುಂಬಗಳು ಬದುಕು ನಡೆಸುತ್ತಿದ್ದವು. ಅದೇ ದಿನ ವಿದ್ಯುತ್ ಕಡಿತಗೊಳಿಸಿದ್ದಲ್ಲದೆ ಕಾಲೊನಿಗಳಿಗೆ ಸರಬರಾಜಾಗುತ್ತಿದ್ದ ಕುಡಿಯುವ ನೀರು, ಸ್ಯಾನಿಟರಿ ಮತ್ತು ಬೀದಿಗಳನ್ನು ಸ್ವಚ್ಛ ಮಾಡುವ ಕೆಲಸವನ್ನೂ ನಿಲ್ಲಿಸಲಾಯಿತು. ಗಣಿ ಕಾರ್ಮಿಕರಿಗೆ ಕೊಡುತ್ತಿದ್ದ ಪಡಿತರ, ಕೊನೆಗೆ ಗಣಿ ಆಸ್ಪತ್ರೆಯ ಸೇವೆಯನ್ನು ಸಹ ನಿಲ್ಲಿಸಲಾಯಿತು.

ಕಾರ್ಮಿಕರು ಮತ್ತು ಅವರ ಕುಟುಂಬಗಳು ರಾತ್ರೋರಾತ್ರಿ ಅಕ್ಷರಶಃ ಬೀದಿಗೆ ಬಿದ್ದವು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಾರಂಭದಿಂದಲೂ ಈ ಕಾರ್ಮಿಕರನ್ನು ಮಲತಾಯಿ ಧೋರಣೆಯಿಂದಲೇ ನಡೆಸಿಕೊಂಡು ಬಂದಿವೆ. ಇವರಲ್ಲಿ ಹೆಚ್ಚಿನವರು ಪರಿಶಿಷ್ಟ ಸಮುದಾಯಕ್ಕೆ ಸೇರಿದವರು ಮತ್ತು ತಮಿಳುನಾಡಿನಿಂದ ವಲಸೆ ಬಂದವರು. 1983ರಲ್ಲಿ ವೇತನ ಪರಿಷ್ಕರಣೆ ಕಂಡಿದ್ದ ಗಣಿ ಕಾರ್ಮಿಕರು ಗಣಿಗಳನ್ನು ಮುಚ್ಚುವವರೆಗೂ ಮತ್ತೆ ಯಾವುದೇ ವೇತನ ಪರಿಷ್ಕರಣೆಯನ್ನು ಕಾಣಲಿಲ್ಲ. ಗಣಿಗಳನ್ನು ಮುಚ್ಚಿದಾಗ ಸುಮಾರು 4,000 ಕಾರ್ಮಿಕರು ಉಳಿದುಕೊಂಡಿದ್ದರು, ಉಳಿದ ಕಾರ್ಮಿಕರು ಕೇಂದ್ರ ಸರ್ಕಾರ ಕೊಟ್ಟ ಅಲ್ಪಸ್ವಲ್ಪ ಹಣ ತೆಗೆದುಕೊಂಡು ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರು. ಆಗ ಕಾರ್ಮಿಕರಿಗೆ ತಿಂಗಳಿಗೆ ದೊರಕುತ್ತಿದ್ದ ಸರಾಸರಿ ಸಂಬಳ ಕೇವಲ ₹ 4,000.

1920- 1950ರ ದಶಕಗಳಲ್ಲಿ 75 ಗಣಿಗಳಲ್ಲಿ ಒಟ್ಟು 35,000 ಕಾರ್ಮಿಕರು ದುಡಿಯುತ್ತಿದ್ದರು. ಗಣಿಗಳಲ್ಲಿ ಬರುತ್ತಿದ್ದ ಲಾಭದಲ್ಲಿ ಅಂದಿನ ಮೈಸೂರು ಸರ್ಕಾರಕ್ಕೆ ಬಹಳಷ್ಟು ಹಣ ಸಂದಾಯವಾಗುತ್ತಿತ್ತು. ಮೈಸೂರು ರಾಜ್ಯವನ್ನು ‘ಮಾದರಿ ರಾಜ್ಯ’ ಎಂದು ಕರೆಯ
ಲಾಗುತ್ತಿತ್ತು. ಒಂದು ಕಾಲದಲ್ಲಿ ಮೈಸೂರು ರಾಜ್ಯವೊಂದರಿಂದಲೇ ಕೇಂದ್ರ ಸರ್ಕಾರಕ್ಕೆ ಶೇ 40ರಷ್ಟು ಹಣ ಹೋಗುತ್ತಿದ್ದರೆ, ದೇಶದ ಇತರ ಎಲ್ಲಾ ರಾಜ್ಯಗಳಿಂದ ಸೇರಿ ಶೇ 60ರಷ್ಟು ಹಣ ಹೋಗುತ್ತಿತ್ತು ಎನ್ನಲಾಗಿದೆ. ಮೊದಲ ಮತ್ತು ಎರಡನೇ ಮಹಾಯುದ್ಧಗಳು ಮುಗಿದ ನಂತರ ಬೆಂಗಳೂರಿನಲ್ಲಿ ಪ್ರಾರಂಭವಾದ ಅನೇಕ ಬೃಹತ್ ಕಾರ್ಖಾನೆಗಳಲ್ಲಿ ಕೆಲಸಕ್ಕೆ ಸೇರಿಕೊಂಡ ಮೊದಲ ತಲೆಮಾರಿನ ಕಾರ್ಮಿಕರು ಇದೇ ಚಿನ್ನದ ಗಣಿಗಳಿಗೆ ಸೇರಿದವರು.

ಗಣಿಗಳನ್ನು ಮುಚ್ಚಿದಾಗ ಉಳಿದುಕೊಂಡ 4,000 ಕಾರ್ಮಿಕರಲ್ಲಿ ಹೆಚ್ಚಿನವರು ಯುವಕರು. ಅವರಿಗೆ ಬರಬೇಕಿದ್ದ ಒಟ್ಟು ₹ 104 ಕೋಟಿ ಮೊತ್ತದ ನಿವೃತ್ತಿ ವೇತನ ಪ್ರಯೋಜನಗಳ ಬಾಕಿ ಉಳಿದುಕೊಂಡಿತ್ತು. ಇದರಲ್ಲಿ ₹ 52 ಕೋಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿ, ಉಳಿದ ಹಣವನ್ನು ಚಿನ್ನದ ಗಣಿಗಳನ್ನು ಪ್ರಾರಂಭಿಸಲು ಟೆಂಡರ್ ಪಡೆದುಕೊಳ್ಳುವ ಕಂಪನಿಯಿಂದ ಪಡೆಯುವಂತೆ ಆದೇಶ ನೀಡಿತು. ಆದರೆ ಇದುವರೆಗೂ ಯಾವುದೇ ಕಂಪನಿ ಅದನ್ನು ನೀಡಲು ಮುಂದೆ ಬಂದಿಲ್ಲ. ಕಳೆದ ಎರಡು ದಶಕಗಳಲ್ಲಿ ಸುಮಾರು 900 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಉಳಿದವರು ಇನ್ನೂ ಹಣಕ್ಕಾಗಿ ಕಾಯುತ್ತಿದ್ದಾರೆ ಎಂಬ ಮಾಹಿತಿ ಇದೆ. ಕೇಂದ್ರ ಸರ್ಕಾರ ಈಗಲಾದರೂ ಇವರ ಕಡೆ ಗಮನಹರಿಸಬೇಕಿದೆ.

ಯಾವುದೇ ಗಣಿಯನ್ನು ಪ್ರಾರಂಭಿಸಿ ಮುಚ್ಚುವಾಗ ಒಂದು ನಿಗದಿತ ಯೋಜನೆ ಇರುತ್ತದೆ. ಅಂದರೆ ಗಣಿಗಾರಿಕೆ ಸ್ಥಗಿತಗೊಂಡ ಮೇಲೆ 10-20 ವರ್ಷಗಳಲ್ಲಿ ಹಿಂದಿನ ಪರಿಸರವನ್ನು ಮರುಸೃಷ್ಟಿ ಮಾಡಬೇಕು. ಪರಿಸರ ಪುನಃಸ್ಥಾಪನೆಯು ಪ್ರಕೃತಿಯನ್ನು ಶ್ರೀಮಂತಗೊಳಿಸುತ್ತದೆ, ಕಾರ್ಮಿಕರ ಆರೋಗ್ಯ ಮತ್ತು ಉತ್ತಮ ಜೀವನೋಪಾಯಕ್ಕೆ ಕಾರಣವಾಗುತ್ತದೆ. ಆದರೆ ಇಲ್ಲಿ ವಿಷಯುಕ್ತ ಸೈನೈಡ್ ಗುಡ್ಡಗಳನ್ನು ಹಾಗೇ ಬಿಟ್ಟ ಕಾರಣ ಜನರ ಆರೋಗ್ಯದ ಮೇಲೆ ಅಗಾಧ ದುಷ್ಪರಿಣಾಮಗಳು ಬೀರಿದವು.

ಈ ನತದೃಷ್ಟ ಗಣಿ ಕಾರ್ಮಿಕರ ಪರವಾಗಿ ಧ್ವನಿ ಎತ್ತುವವರೇ ಇಲ್ಲದಾಗಿದೆ. ಕೆಜಿಎಫ್‌ ಚಿತ್ರದ ನಟ ಯಶ್ ಅವರು ತಮ್ಮ ಸಮಾಜಸೇವಾ ಸಂಸ್ಥೆ ‘ಯಶೋಮಾರ್ಗ’ದ ಮೂಲಕವೋ ಅಥವಾ ಕೆಜಿಎಫ್ ಸಿನಿಮಾ ತಂಡದ ಮೂಲಕವೋ ದನಿಯಿಲ್ಲದ ಕಾರ್ಮಿಕರು ಹಾಗೂ ಭಣಗುಡುವ ನಿಸರ್ಗದ ನೆರವಿಗೆ ಬರುವರೇ?

ಲೇಖಕ: ಭೂವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT