ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಕೋಲ್ಕತ್ತ: ಬಾಗಿಲು ಎತ್ತ ತೆರೆಯಲಿದೆ?

ಚುನಾವಣೆ ಎದುರಾಗುತ್ತಿರುವ ಪಶ್ಚಿಮ ಬಂಗಾಳದಲ್ಲಿ ಏಳುತ್ತಿರುವ ರಾಜಕೀಯ ಗಾಳಿ– ದೂಳಿನಲ್ಲಿ ಸಾಮಾಜಿಕ ತರಂಗಗಳಿವೆಯೇ?
Last Updated 22 ಡಿಸೆಂಬರ್ 2020, 20:24 IST
ಅಕ್ಷರ ಗಾತ್ರ

ಜಾತಿ ಆಧಾರಿತ ಸಾಮಾಜಿಕ ತಲ್ಲಣಗಳಿಂದ ದೂರವಿರುವ ಪಶ್ಚಿಮ ಬಂಗಾಳದಲ್ಲಿ ಜಾತಿ ಲೆಕ್ಕಾಚಾರಗಳು ಅಪ್ರಸ್ತುತ. ಇದರಲ್ಲಿ ಸ್ವಾತಂತ್ರ್ಯಪೂರ್ವದ ಸಮಾಜ ಸುಧಾರಕರದ್ದು, ಕಮ್ಯುನಿಸ್ಟ್‌ ಆಳ್ವಿಕೆಯಲ್ಲಿ ನಡೆದ ಭೂ ಹಂಚಿಕೆಯದ್ದು ದೊಡ್ಡ ಪಾತ್ರ. ಮಂಡಲ್ ಚಳವಳಿಯ ಬಿಸಿಯೂ ಪಶ್ಚಿಮ ಬಂಗಾಳಕ್ಕೆ ತಟ್ಟಲಿಲ್ಲ. ಹಾಗಾಗಿಯೇ, ಅಂದು ಮುಖ್ಯಮಂತ್ರಿಯಾಗಿದ್ದ ಜ್ಯೋತಿಬಸು ‘ಭೂ ಸುಧಾರಣೆ ಕಾಯ್ದೆಯ ಪರಿಣಾಮಕಾರಿ ಜಾರಿಯ ನಂತರ ರಾಜ್ಯದಲ್ಲಿ ಜಾತಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ’ ಎಂದಿದ್ದರು. ನಿಜವೇ, ಆದರೆ ಈ ಜಾತಿರಹಿತ ಸಮಾಜದ ಪ್ರಮುಖ ರಾಜಕೀಯ ಫಲಾನುಭವಿಗಳಾರು?

ಬ್ರಾಹ್ಮಣ, ವೈದ್ಯ, ಕಾಯಸ್ಥ (ಕ್ಷತ್ರಿಯ) ಜಾತಿಗಳ ಕೂಟಕ್ಕೆ ಈಗೀಗ ಬಂಗಾಳದಲ್ಲಿ ‘ಭದ್ರಲೋಕ್’ ಎಂದು ಕರೆಯುವ ಪರಿಪಾಟವಿದೆ. ಈವರೆಗಿನ ಮುಖ್ಯಮಂತ್ರಿಗಳ ಪಟ್ಟಿ ನೋಡಿ, ಡಾ. ಬಿ.ಸಿ.ರಾಯ್‌ರಿಂದ ಹಿಡಿದು ಜ್ಯೋತಿಬಸು, ಬುದ್ಧದೇವ್, ಮಮತಾರವರೆಗೆ ಎಲ್ಲರೂ ‘ಭದ್ರಲೋಕ’ದವರೆ. ಬಂಗಾಳವನ್ನು ಮೊದಲ 25 ವರ್ಷ ಆಳಿದ್ದು ಕಾಂಗ್ರೆಸ್ಸು. ಆಗೆಲ್ಲ ಒಟ್ಟು ಶಾಸಕರಲ್ಲಿ 105ರಿಂದ 115ರಷ್ಟು ಮಂದಿ ಈ ಮೂರು ಜಾತಿಯವರೇ ಇರುತ್ತಿದ್ದರು. ನಂತರದ 34 ವರ್ಷಗಳ ಕಮ್ಯುನಿಸ್ಟರ ಆಡಳಿತದಲ್ಲಿ ಭದ್ರಲೋಕಿಗರ ಪ್ರಾತಿನಿಧ್ಯ 144ರವರೆಗೆ ಹೋಯಿತು. ಈ ಜಾತಿಗಳ ಒಟ್ಟು ಜನಸಂಖ್ಯೆ ಶೇ 15ರ ಆಸುಪಾಸು. ಆದರೂ ಮಂತ್ರಿಮಂಡಲದಲ್ಲಿ ಶೇ 60ರಿಂದ ಶೇ 70ರಷ್ಟು ಪಾಲು.

ಮಮತಾ ಬ್ಯಾನರ್ಜಿ ಸಂಪುಟದ 44 ಮಂತ್ರಿಗಳಲ್ಲಿ 30 ಮಂದಿ ಭದ್ರಲೋಕದವರು. ಭದ್ರಲೋಕದ ಆಚೆಯವರಿಗೆಲ್ಲ ಸಣ್ಣಪುಟ್ಟ ಖಾತೆಗಳು ಎಂಬುದು ಬಂಗಾಳದಲ್ಲಿ ಸಹಜಸೂತ್ರವೇ ಆಗಿಬಿಟ್ಟಿದೆ. ಆಡಳಿತ ಸೂತ್ರ ಹಿಡಿದವರು ಜಾತಿ ರಾಜಕಾರಣ ಮಾಡಿರಲಾರರು ಎಂಬುದು ನಿಜವೇ ಆದರೂ ಪ್ರಜಾಪ್ರಭುತ್ವದ ಮೂಲ ಆಶಯ ಇದಿಷ್ಟೇ ಆಗಿರಲಿಲ್ಲವಲ್ಲ?

ಸ್ವಾತಂತ್ರ್ಯದೊಂದಿಗೆ ವಿಭಜನೆಯ ಹೊಡೆತವನ್ನೂ ಅನುಭವಿಸಿದ್ದು ಬಂಗಾಳ. ಬಿಟ್ಟುಹೋದ ಪೂರ್ವ ಬಂಗಾಳದ ದಲಿತ ನಾಯಕ ಜೋಗೇಂದ್ರನಾಥ್ ಮೊಂಡಲ್ ಪಾಕಿಸ್ತಾನದ ಮೊದಲ ಕಾನೂನು ಸಚಿವರಾಗಿದ್ದರು. ಪಶ್ಚಿಮ ಬಂಗಾಳದ ಜಾತಿರಹಿತ ಸಮಾಜದೊಳಗೆ ಮತ್ತೊಬ್ಬ ಮೊಂಡಲ್ ಏಕೆ ರೂಪುಗೊಳ್ಳಲಿಲ್ಲ?- ಈ ಪ್ರಶ್ನೆಗೆ ಮಹತ್ವ ಬಂದಿದ್ದು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತೋಳೇರಿಸಿ ನಿಂತಾಗ. ಆಗ ಸಿಎಎ ಕಾಯ್ದೆಯ ಕಾವು ಜೋರಾಗಿಯೇ ಇತ್ತು. ಮೊಂಡಲ್ ಚರ್ಚೆಯ ಕೇಂದ್ರಬಿಂದುವಾದರು.

ಬಂಗಾಳದಲ್ಲಿ ಪರಿಶಿಷ್ಟ ಜಾತಿಗಳ ಜನಸಂಖ್ಯೆ ಶೇ 23, ಪರಿಶಿಷ್ಟ ಬುಡಕಟ್ಟುಗಳದ್ದು ಶೇ 6. ರಾಜಬಂಶಿ, ಚಮ್ಮಾರ, ನಾಮಶೂದ್ರ (ಮೂಲದಲ್ಲಿ ಚಾಂಡಾಲರು), ಪೌಂಡ್ರ, ಬವರಿ- ಪರಿಶಿಷ್ಟ ಜಾತಿಗಳಲ್ಲಿ ಈ ಐದು ದಲಿತ ಜಾತಿಗಳದ್ದೇ ಶೇ 80ರಷ್ಟು ಜನಸಂಖ್ಯೆ. ನಾಮಶೂದ್ರ ಸಮುದಾಯದಿಂದ ಬಂದ ದಲಿತ ನಾಯಕ ಜೋಗೇಂದ್ರನಾಥ್ ಬಂಗಾಳಕ್ಕೆ ನಿರಾಶ್ರಿತರಾಗಿ ಓಡಿಬರಬೇಕಾಯಿತು. ತಳವರ್ಗಗಳ ಲಕ್ಷಾಂತರ ಕುಟುಂಬಗಳದ್ದು ಇದೇ ದುರಂತ ಕಥೆ. ಇವರಿಗೆ ಬಾಂಗ್ಲಾ ಮುಸ್ಲಿಮರಿಂದ ಆದ ಅನ್ಯಾಯಕ್ಕೆ ಧ್ವನಿ ಸಿಕ್ಕಿರಲಿಲ್ಲ. ಹುಸಿ ಜಾತ್ಯತೀತ ನೀತಿ ಇದಕ್ಕೆ ಅವಕಾಶ ಕೊಟ್ಟಿರಲಿಲ್ಲ.

ಬಂಗಾಳದ 42 ಲೋಕಸಭಾ ಕ್ಷೇತ್ರಗಳಲ್ಲಿ 18 ಬಿಜೆಪಿಯ ಪಾಲಾಗುವಲ್ಲಿ ತಳವರ್ಗದ್ದೇ ದೊಡ್ಡಪಾಲು. ದೇಶದಲ್ಲೇ ಅತ್ಯಂತ ಹೆಚ್ಚು ದಲಿತರಿರುವ ಕೂಚ್‌ಬಿಹಾರ್ ಸೇರಿದಂತೆ 12ರಲ್ಲಿ 8 ಮೀಸಲು ಲೋಕಸಭಾ ಕ್ಷೇತ್ರಗಳು ಬಿಜೆಪಿ ತೆಕ್ಕೆಗೆ ಬಂದವು. ಲೋಕಸಭೆ ಚುನಾವಣೆಯಲ್ಲಿ ಟಿಎಂಸಿಗೆ 163 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಿಕ್ಕರೆ, ಬಿಜೆಪಿಗೆ 122 ಕಡೆಗಳಲ್ಲಿ ಮುನ್ನಡೆ ದಕ್ಕಿತು. ನೆಲಕಚ್ಚಿದ ಎಡಪಕ್ಷಗಳಿಗೆ ಒಂದು ವಿಧಾನಸಭಾ ಕ್ಷೇತ್ರದಲ್ಲೂ ಮುನ್ನಡೆ ಸಿಗಲಿಲ್ಲ. ಇದೆಲ್ಲದರ ಪರಿಣಾಮ, ಬಿಜೆಪಿಯಲ್ಲಿ ತಳವರ್ಗದ ನಾಯಕತ್ವವನ್ನು ಹುಟ್ಟುಹಾಕಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ‘ಸಡ್ಗೋಪೆ’ ಎಂಬ ಪಶುಪಾಲನಾ ಸಮುದಾಯದವರು. ಕಳೆದವಾರ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರಿದವರಲ್ಲಿ ಬಹುತೇಕರು ತಳವರ್ಗದವರು. ಬಿಜೆಪಿ ಸೇರಿದ ಎಡಪಕ್ಷಗಳ ಮೂವರು ಹಾಲಿ ಶಾಸಕರಲ್ಲಿ ಇಬ್ಬರು ದಲಿತರು. ಟಿಎಂಸಿಯ ಹಾಲಿ ದಲಿತ ಸಂಸದ ಸುನೀಲಕುಮಾರ್ ಮೊಂಡಲ್, ಆದಿವಾಸಿ ನಾಯಕ ದಶರಥ ಟಿರ್ಕಿ ಬಿಜೆಪಿ ಸೇರಿದ್ದಾರೆ. ತಳವರ್ಗಗಳ ಈ ವಲಸೆಯ ಹಿಂದೆ ಮುಸ್ಲಿಮರನ್ನು ಓಲೈಸುವ ರಾಜಕಾರಣದ ಪಾತ್ರವಿದೆ. ಪಶ್ಚಿಮ ಬಂಗಾಳದಲ್ಲಿ 1951ರಲ್ಲಿ ಶೇ 18ರಷ್ಟಿದ್ದ ಮುಸ್ಲಿಂ ಜನಸಂಖ್ಯೆ ಈಗ ಶೇ 27 ದಾಟಿದೆ. ಅದೇ ಹಿಂದೂಗಳ ಸಂಖ್ಯೆ ಶೇ 79ರಿಂದ 70ಕ್ಕೆ ಕುಸಿದಿದೆ.

ಅಕ್ರಮ ನುಸುಳುಕೋರರಿಗೆ ಮಣೆಹಾಕಿದ ಜ್ಯೋತಿಬಸು ನೇತೃತ್ವದ ಸರ್ಕಾರ ಗಡಿಪಾರು ಶಿಕ್ಷೆಗೆ ಒಳಗಾದ ಬಾಂಗ್ಲಾ ಲೇಖಕಿ ತಸ್ಲಿಮಾ ನಸ್ರೀನ್‌ ಅವರಿಗೆ ನೆಲೆ ಕೊಡಲಿಲ್ಲ. ಈಗ ಮಮತಾರದ್ದು ಕಾಂಗ್ರೆಸ್‌, ಕಮ್ಯುನಿಸ್ಟರನ್ನು ಮೀರಿಸಿದ ಓಲೈಕೆ ರಾಜಕಾರಣ. ಇದೆಲ್ಲದರ ನೇರ ಹೊಡೆತ ತಿನ್ನುತ್ತಿರುವ ಕೆಳವರ್ಗಗಳಿಗೆ ಬಿಜೆಪಿ ಹೊಸ ಧ್ವನಿಯಾಗಿದೆ.

ಬಿಹಾರದ ಪಟ್ನಾ, ತೆಲಂಗಾಣದ ಹೈದರಾಬಾದ್ ತರುವಾಯ ಚುನಾವಣಾ ರಣಾಂಗಣದ ಮುಂದಿನ ನಿಲ್ದಾಣ ಕೋಲ್ಕತ್ತ. ಬಾಗಿಲುಗಳು ಎತ್ತ ತೆರೆಯುತ್ತವೆ ಎಂಬುದು ಮುಖ್ಯವಾದ ಪ್ರಶ್ನೆಯೇ. ಆದರೆ ಅದಕ್ಕಿಂತ ಮುಖ್ಯವಾದ ಪ್ರಶ್ನೆ, ಬಾಗಿಲುಗಳು ಯಾರಿಂದ ತೆರೆಯುತ್ತವೆ ಎಂಬುದು. ಮೊದಲ ಬಾರಿಗೆ ಬಂಗಾಳಿ ಭದ್ರಲೋಕ ಅಭದ್ರತೆಯಲ್ಲಿದೆ ಎಂಬುದು ಚುನಾವಣೆಗೂ ಮೊದಲೇ ಸ್ಪಷ್ಟವಾಗಿರುವ ಫಲಿತಾಂಶ.

ಲೇಖಕ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT