ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಶ್ರ ಮಾಧ್ಯಮವೆಂಬ ಪರ್ಯಾಯ

Last Updated 16 ಜನವರಿ 2019, 20:00 IST
ಅಕ್ಷರ ಗಾತ್ರ

ಸರ್ಕಾರಿ ಶಾಲೆಗಳು ಏಕೆ ಉಳಿಯಬೇಕು? ಈ ಪ್ರಶ್ನೆಗೆ ಎರಡು ಭಿನ್ನ ಉತ್ತರಗಳನ್ನು ನಾವಿಂದು ನಿರೀಕ್ಷಿಸಬಹುದಾಗಿದೆ. ಕೆಲವರು ಕನ್ನಡ ಭಾಷೆಯ ಉಳಿವಿನ ಹೊಣೆಗಾರಿಕೆಯನ್ನು ಸರ್ಕಾರಿ ಶಾಲೆಗಳ ಹೆಗಲಿಗೆ ಹೊರಿಸಲು ಇನ್ನಿಲ್ಲದ ಮುತುವರ್ಜಿ ತೋರುತ್ತಿದ್ದರೆ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳ ಮಕ್ಕಳಿಗೂ ಶಿಕ್ಷಣ ನೀಡುವ ಸಲುವಾಗಿ ಸರ್ಕಾರಿ ಶಾಲೆಗಳು ಅಸ್ತಿತ್ವ ಉಳಿಸಿಕೊಳ್ಳಲೇಬೇಕೆಂಬ ನೆಲೆಗಟ್ಟಿನಲ್ಲಿ ಆಲೋಚಿಸುವವರು, ಇಂಗ್ಲಿಷ್ ಮಾಧ್ಯಮ ಶಿಕ್ಷಣ ನೀಡುವುದಾದರೂ ಸರಿಯೇ ಒಟ್ಟಾರೆ ಸರ್ಕಾರಿ ಶಾಲೆಗಳು ಉಳಿದರೆ ಸಾಕು ಎಂಬ ನಿಲುವು ತಳೆದಿದ್ದಾರೆ.

ಪ್ರಾಥಮಿಕ ಶಿಕ್ಷಣವನ್ನು ಇಂಗ್ಲಿಷ್ ಮಾಧ್ಯಮದಲ್ಲಿ ನೀಡಲು ಹೊರಡುವ ಸರ್ಕಾರದ ನಡೆ ವಿರೋಧಿಸುವ ಶಿಕ್ಷಣ ತಜ್ಞರು ಹಾಗೂ ಸಾಹಿತಿಗಳು, ತಮ್ಮ ನಿಲುವು ಸಮರ್ಥಿಸಿಕೊಳ್ಳಲು ಮನೋವೈಜ್ಞಾನಿಕ ಕಾರಣಗಳನ್ನೇ ನೀಡುತ್ತಿದ್ದಾರೆ. ಆದರೆ ಇವರು ಮುಂದಿಡುತ್ತಿರುವ, ಮಗುವಿಗೆ ತನ್ನ ಮಾತೃಭಾಷೆ ಅಥವಾ ಪರಿಸರದ ಭಾಷೆಯಲ್ಲೇ ಶಿಕ್ಷಣ ನೀಡುವುದು ಸೂಕ್ತವೆಂಬ ಜಾಗತಿಕವಾಗಿ ಮನ್ನಣೆ ಪಡೆದ ಅಂಶವನ್ನು ಮೊದಲು ಮನದಟ್ಟು ಮಾಡಿಕೊಂಡು ತಮ್ಮ ಮಕ್ಕಳನ್ನೆಲ್ಲ ಕನ್ನಡ ಮಾಧ್ಯಮ ಶಾಲೆಗಳಿಗೆ ದಾಖಲಿಸುವ ಮೂಲಕ ಈ ಸಮಾಜಕ್ಕೆ ಮೇಲ್ಪಂಕ್ತಿ ಹಾಕಿಕೊಡುವ ಹೊಣೆಗಾರಿಕೆಯನ್ನು ಯಾರು ನಿಭಾಯಿಸಬೇಕಿತ್ತು? ಸುಶಿಕ್ಷಿತರಲ್ಲವೇ? ಸಾಕಷ್ಟು ಓದಿಕೊಂಡವರೇ ಏಕೆ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ದೂಡಿದರು? ಮನೋವೈಜ್ಞಾನಿಕ ವಿಶ್ಲೇಷಣೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ತಮ್ಮ ಮಕ್ಕಳ ಕಲಿಕಾ ಮಾಧ್ಯಮ ಆರಿಸಿಕೊಳ್ಳುವ ತಿಳಿವಳಿಕೆ ಇದ್ದವರಿಗೆ ‘ಎಡವಲು’ ಅನುವು ಮಾಡಿಕೊಟ್ಟು, ‘ನಮ್ಮ ಮಕ್ಕಳಾದರೂ ಓದಿ ಉತ್ತಮ ಬದುಕು ಕಟ್ಟಿಕೊಳ್ಳಲಿ, ನಮ್ಮ ಹಾಗೆ ಕೂಲಿ ಮಾಡುವುದರಲ್ಲೇ ಜೀವನ ಸವೆಸುವುದು ಬೇಡ’ ಎಂದು ಭಾವಿಸುವ ಅಕ್ಷರವಂಚಿತ ಸಮುದಾಯಗಳ ಪೋಷಕರಿಗೆ ಮಾತೃಭಾಷಾ ಶಿಕ್ಷಣದ ಮಹತ್ವ ಕುರಿತು ಪಾಠ ಮಾಡಿದರೆ, ಅದು ಫಲ ನೀಡುವುದೇ?

ಎಲ್ಲ ವರ್ಗದ ಮಕ್ಕಳೂ ಒಂದೆಡೆ ಕಲೆತು ಬೆರೆತು ಕಲಿಯುವ ಅರಿವಿನ ಮನೆಗಳಾಗಬೇಕಿದ್ದ ಸರ್ಕಾರಿ ಶಾಲೆಗಳಿಗೆ ಇಂದು ಬಹುತೇಕ, ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳನ್ನಷ್ಟೇ ಒಳಗೊಳ್ಳಲು ಸಾಧ್ಯವಾಗುತ್ತಿರುವುದು ಕಣ್ಣೆದುರಿನ ವಾಸ್ತವವೇ ಆಗಿದೆ. ಇರುವ ಸರ್ಕಾರಿ ಶಾಲೆಗಳೂ ಮುಚ್ಚುತ್ತಿರುವ ಸಂದರ್ಭದಲ್ಲಿ ಅವುಗಳ ಮೇಲೆ ಕನ್ನಡ ಉಳಿಸುವ ಭಾರವನ್ನೂ ಹೇರುವುದು ಸೂಕ್ತವೇ ಎಂದು ಪರಿಶೀಲಿಸಬೇಕಿದೆ.

ಕನ್ನಡ ಮಾಧ್ಯಮ ಶಾಲೆಗಳು ಎಲ್ಲ ವರ್ಗದ ಪೋಷಕರ ಆಯ್ಕೆಯೂ ಆಗುವಂತಹ ಸನ್ನಿವೇಶ ನಿರ್ಮಾಣವಾಗದ ಹೊರತು, ಸರ್ಕಾರಿ ಶಾಲೆಗಳು ಕನ್ನಡ ಮಾಧ್ಯಮ ಶಿಕ್ಷಣ ನೀಡಲಿ ಎಂದು ಆಗ್ರಹಿಸುವುದು ಹೊಣೆಗೇಡಿತನವಾಗುತ್ತದೆ. ವಿದ್ಯಾರ್ಥಿಗಳು ಇಲ್ಲವೆಂಬ ಕಾರಣಕ್ಕೆ ಸರ್ಕಾರಿ ಶಾಲೆಗಳನ್ನು ಮುಚ್ಚುವಂಥ ಪರಿಸ್ಥಿತಿ ಎದುರಾಗುವುದನ್ನು ತಡೆಗಟ್ಟಲೇಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ತನ್ನ ಮುಂದೆ ಇರುವ ಮೂರನೇ ಆಯ್ಕೆಯತ್ತಲೂ ಗಮನ ಹರಿಸಬೇಕಿದೆ.

ಕನ್ನಡ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಾಗಿ ಏಕಾಏಕಿ ಮಾರ್ಪಡಿಸುವ ಬದಲು, ಕನ್ನಡ ಹಾಗೂ ಇಂಗ್ಲಿಷ್ ಎರಡೂ ಮಾಧ್ಯಮಗಳ ಆಯ್ಕೆ ಸದಾ ಕಾಲ ವಿದ್ಯಾರ್ಥಿಗಳು ಹಾಗೂ ಪೋಷಕರ ಎದುರು ಇರುವಂತೆ ನೋಡಿಕೊಳ್ಳುವ ಸಾಧ್ಯತೆಯತ್ತಲೂ ಚಿತ್ತ ಹರಿಸಬೇಕಿದೆ. ವಿದ್ಯಾರ್ಥಿಗಳಿಗೆ ಭಾಷಾ ವಿಷಯಗಳನ್ನು ಹೊರತುಪಡಿಸಿ ಉಳಿದ ವಿಷಯಗಳ ಪಠ್ಯವನ್ನು ಒಂದು ಬದಿಯಲ್ಲಿ ಕನ್ನಡ ಹಾಗೂ ಮತ್ತೊಂದು ಬದಿಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಮುದ್ರಿಸಿ, ವಿದ್ಯಾರ್ಥಿ ತನಗೆ ಅನುಕೂಲವಾಗುವ ಮಾಧ್ಯಮದಲ್ಲಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಬಹುದಾಗಿದೆ.

ನಾನು ಓದಿದ ಖಾಸಗಿ ಶಾಲೆಯೂ ಸೇರಿದಂತೆ ಹಲವು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಪ್ರಾಥಮಿಕ ಹಂತದಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಮಾಧ್ಯಮಗಳಲ್ಲಿ ಬೋಧಿಸಲಾಗುತ್ತಿದೆ. ಅದರ ಮುಂದುವರಿದ ಭಾಗವಾಗಿ, ಪರೀಕ್ಷೆ ಬರೆಯುವಾಗಲೂ ಯಾವುದಾದರೂ ಮಾಧ್ಯಮ ಆರಿಸಿಕೊಳ್ಳುವ ಅವಕಾಶವನ್ನು ನೀಡಬಹುದಾಗಿದೆ. ಇಂಗ್ಲಿಷ್ ಮಾಧ್ಯಮ ಒಗ್ಗಲಾರದು ಎಂದು ಭಾವಿಸುವ ಮಕ್ಕಳು ಮತ್ತವರ ಪೋಷಕರು ಕನ್ನಡ ಮಾಧ್ಯಮ ಆರಿಸಿಕೊಳ್ಳಲು ಈ ಮೂಲಕವಾದರೂ ಅನುವು ಮಾಡಿಕೊಡಬಹುದು. ಎರಡೂ ಭಾಷೆಯಲ್ಲಿ ಬೋಧಿಸುವುದರಿಂದ ಇಂಗ್ಲಿಷ್ ನುಡಿಗಟ್ಟುಗಳ ಪರಿಚಯವೂ ಮಕ್ಕಳಿಗಾಗುವುದು. ಜೊತೆಗೆ ತಮ್ಮದೇ ಭಾಷೆಯಲ್ಲಿ ವಿಷಯ ಗ್ರಹಿಸಲೂ ಸಾಧ್ಯವಾಗುವುದು. ಹಂತ ಹಂತವಾಗಿ ಈ ಮಿಶ್ರ ಮಾಧ್ಯಮ ಅಥವಾ ಎರಡೂ ಮಾಧ್ಯಮ ಕಲಿಕೆಯನ್ನು ವಿಜ್ಞಾನ ವಿಭಾಗವನ್ನೂ ಒಳಗೊಂಡಂತೆ ಪಿಯುಸಿಯ ಎಲ್ಲ ವಿಭಾಗಕ್ಕೂ ವಿಸ್ತರಿಸಬಹುದು.

ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುವ ಬದಲಿಗೆ ಎರಡು ಮಾಧ್ಯಮವನ್ನೂ ಒಳಗೊಳ್ಳುವ ಶಾಲೆಗಳನ್ನು ಪ್ರಾಯೋಗಿಕವಾಗಿಯಾದರೂ ಪ್ರಾರಂಭಿಸಬಹುದೇ ಎಂಬ ನಿಟ್ಟಿನಲ್ಲಿ ಶಿಕ್ಷಣ ತಜ್ಞರ ಅಭಿಪ್ರಾಯ ಪಡೆದು ಮುಂದುವರಿಯಬಹುದಾಗಿದೆ. ಕನ್ನಡ ಉಳಿಸಿಕೊಳ್ಳುವ ಕಾಳಜಿಯುಳ್ಳವರು ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಉಳಿವಿಗಾಗಿ ಹೋರಾಡುವುದಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ, ಕನ್ನಡಕ್ಕೆ ‘ಮಾರುಕಟ್ಟೆ’ ಒದಗಿಸಲು ಇರುವ ಅವಕಾಶಗಳನ್ನು ಪರಿಶೀಲಿಸಬೇಕಿದೆ. ಇಂಗ್ಲಿಷ್ ‘ವ್ಯಾಮೋಹ’ ಎನ್ನುವುದು ಆ ಭಾಷೆ ದಕ್ಕಿಸಿಕೊಂಡಿರುವ ‘ಮಾರುಕಟ್ಟೆ’ಯ ಬಳುವಳಿ ಎಂಬುದನ್ನು ಮನಗಾಣಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT