ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಅರಿಯುವ ಮುನ್ನ... ಕಲಿಸುವುದೇನನ್ನ?

ಅಧ್ಯಾಪಕರು ಸಂಶೋಧನಾ ಪ್ರಬಂಧಗಳ ಪ್ರಕಟಣೆಗೆ ತೋರುವ ಆಸಕ್ತಿಯನ್ನು ವಿದ್ಯಾರ್ಥಿಗಳನ್ನು ಅರಿಯಲೂ ತೋರುವಂತೆ ಮಾಡುವುದು ಈ ಹೊತ್ತಿನ ಅನಿವಾರ್ಯ
Last Updated 22 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಎಂಜಿನಿಯರಿಂಗ್ ಕಾಲೇಜೊಂದರ ವಾಹನ ನಿಲುಗಡೆ ತಾಣದಲ್ಲಿ ಮೂರ್ನಾಲ್ಕು ಮಂದಿ ಪ್ರಾಧ್ಯಾಪಕರು ಮಾತುಕತೆ ನಡೆಸುತ್ತಿದ್ದರು. ಒಬ್ಬರು, ‘ಈ ದಡ್ಡರಿಗೆ ಹೇಗೆ ಪಾಠ ಮಾಡಿದ್ರೂ ಅರ್ಥ ಆಗಲ್ಲ. ಇವುಕ್ಕೆ ಹೇಗೆ ಹೇಳ್ಕೊಡೋದೊ ನಂಗಂತೂ ಗೊತ್ತಿಲ್ಲ’ ಅಂತ ವಿದ್ಯಾರ್ಥಿಗಳ ಮೇಲೆ ತಮ್ಮ ಅಸಮಾಧಾನ ಹೊರಹಾಕತೊಡಗಿದರು. ಆ ಸಂದರ್ಭದಲ್ಲಿ ಅವರ ಸಮೀಪವೇ ಹಾದುಹೋದ ವಿದ್ಯಾರ್ಥಿನಿಯೊಬ್ಬಳು ತನ್ನ ಮುಖಭಾವದಲ್ಲೇ ಈ ಪ್ರಾಧ್ಯಾಪಕರ ಕುರಿತು ಅಸಮಾಧಾನ ಹೊರಹಾಕಿದಳು.

ಶಿಕ್ಷಕರಿಗೆ ತಮ್ಮ ವಿದ್ಯಾರ್ಥಿಗಳು ದಡ್ಡರಾಗಿಯೂ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಕರು ಕಲಿಸಲು ಅಸಮರ್ಥ ರಾಗಿಯೂ ತೋರತೊಡಗಿದರೆ ಕಲಿಕೆ ಎಂಬುದು ಮರೀಚಿಕೆಯಾಗುವುದರಲ್ಲಿ ಅನುಮಾನವಿದೆಯೇ? ತಪ್ಪನ್ನು ಮತ್ತೊಬ್ಬರ ಮೇಲೆ ಹೇರುವ ಮನೋಭಾವ ಗಾಢವಾಗಿ ಬೇರೂರಿರುವ ಸಮಾಜದ ಭಾಗವೇ ಆಗಿ ರುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕೂಡ ಪರಸ್ಪರ ದೂರುವ ಪೈಪೋಟಿಯಲ್ಲಿ ನಿರತರಾಗಿರುವುದು ಪದವಿ ಹಂತದ ಕಾಲೇಜುಗಳಲ್ಲಿ ಸರ್ವೇಸಾಮಾನ್ಯವಾಗಿದೆ.

ಎಸ್‍ಎಸ್‍ಎಲ್‍ಸಿ ಹಾಗೂ ಪಿಯು ಹಂತದಲ್ಲಿ ಹೇಗಾದರೂ ಸರಿ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸುವಂತೆ ನೋಡಿಕೊಳ್ಳುವಲ್ಲಿ ತಮ್ಮ ಹಿತ ಅಡಗಿದೆ ಎನ್ನುವ ಧೋರಣೆಗೆ ಶಿಕ್ಷಕರು ಶರಣಾಗಿರುತ್ತಾರೆ. ಅಂತಹವರು ವಿದ್ಯಾರ್ಥಿಗಳ ಮೇಲೆ ಅತಿಯಾದ ಒತ್ತಡ ಹೇರಿ, ಅವರು ಅತ್ಯಧಿಕ ಅಂಕಗಳನ್ನು ಪಡೆಯುವ ರೀತಿಯಲ್ಲಿ ತಯಾರು ಮಾಡುತ್ತಿರುವುದು ಗುಟ್ಟಿನ ವಿಷಯವೇನಲ್ಲ. ಎಸ್‍ಎಸ್‍ಎಲ್‍ಸಿ ಹಾಗೂ ಪಿಯುವಿನಲ್ಲಿ ಉನ್ನತ ಶ್ರೇಣಿ ಪಡೆಯುವ ಎಷ್ಟೋ ವಿದ್ಯಾರ್ಥಿಗಳು ಪದವಿಯಲ್ಲಿ ಪಾಸಾಗಲು ಕೂಡ ಪರದಾಡುತ್ತಿದ್ದಾರೆ.

ಎಸ್‍ಎಸ್‍ಎಲ್‍ಸಿಯಿಂದ ಪಿಯುವರೆಗಿನ ಹಂತದಲ್ಲಿ ಸಹಜ ಕಲಿಕೆಗೆ ಬೆನ್ನು ತೋರಿ ಅಂಕಗಳು ಹಾಗೂ ಪ್ರವೇಶ ಪರೀಕ್ಷೆಗಳ ರ‍್ಯಾಂಕುಗಳ ಹಿಂದೆ ಬೀಳುವ ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವ ಮತ್ತು ಅಸಲಿಗೂ ಕಲಿಕೆ ಎಂದರೆ ಏನು ಮತ್ತು ಅದು ಸಾಧ್ಯವಾಗುವುದು ಹೇಗೆ ಎಂದು ಮನದಟ್ಟು ಮಾಡಿಸುವ ಗುರುತರ ಜವಾಬ್ದಾರಿ ಪದವಿ ಹಂತದ ಶಿಕ್ಷಕರ ಹೆಗಲೇರಿದೆ. ‘ಪಾಠ ಮಾಡುವುದು ನಮ್ಮ ಜವಾಬ್ದಾರಿ. ಕಲಿಯುವುದು ಬಿಡುವುದು ಅವರಿಗೆ ಬಿಟ್ಟಿದ್ದು. ಪದವಿ ಹಂತ ತಲುಪಿದರೂ ಓದಿನೆಡೆಗೆ ಆಸಕ್ತಿ ಇಲ್ಲ ಅಂದ್ರೆ ನಾವೇನು ಮಾಡೋಕಾಗುತ್ತೆ’ ಎಂಬ ಮನೋಭಾವ ಬದಲಿಸಿಕೊಳ್ಳಲು ಎಷ್ಟೋ ಪ್ರಾಧ್ಯಾಪಕರು ತಯಾರಿಲ್ಲ. ಅಂತಹವರು ‘ಈ ದಡ್ಡರಿಗೆ ಕಲ್ಸೋಕೆ ನಮ್ಮಿಂದಂತೂ ಸಾಧ್ಯವಿಲ್ಲ’ ಎನ್ನುವ ಹೊಣೆಗೇಡಿ ನಿಲುವಿಗೆ ಜೋತುಬೀಳತೊಡಗಿದ್ದಾರೆ.

ಕಲಿಕೆಯ ಗುಣಮಟ್ಟ ಸುಧಾರಣೆಗೆ ಶಿಕ್ಷಕರು ಅಳವಡಿಸಿಕೊಳ್ಳಬೇಕಿರುವ ಬೋಧನಾ ವಿಧಾನ ಮತ್ತು ನಡೆಸಬೇಕಿರುವ ಪೂರ್ವತಯಾರಿ ಕುರಿತ ತರಬೇತಿಗೆ ಮುಕ್ತ ಮನಸ್ಸಿನಿಂದ ತಮ್ಮನ್ನು ಒಡ್ಡಿ ಕೊಳ್ಳಲು ಸಹ ಬಹಳಷ್ಟು ಪ್ರಾಧ್ಯಾಪಕರು ಸಿದ್ಧರಿಲ್ಲ. ಬೋಧಿಸಲು ವಿಷಯಜ್ಞಾನ ಮತ್ತು ತಕ್ಕಮಟ್ಟಿನ ಸಂವಹನ ಕೌಶಲವಷ್ಟೇ ಇದ್ದರೆ ಸಾಕು, ಉಳಿದದ್ದೆಲ್ಲವೂ ಕೆಲಸಕ್ಕೆ ಬಾರದ ಕಸರತ್ತು ಎನ್ನುವ ಧೋರಣೆಗೆ ಜೋತು ಬಿದ್ದಿದ್ದಾರೆ.

‘ವಿದ್ಯಾರ್ಥಿಗಳನ್ನು ಅರಿಯಲು ಸಾಧ್ಯವಾಗದಿದ್ದರೆ, ಅವರಿಗೆ ಪರಿಣಾಮಕಾರಿಯಾಗಿ ಕಲಿಸಲೂ ಸಾಧ್ಯವಾಗದು. ಶಿಕ್ಷಕನಾದವನು ತನ್ನ ವಿದ್ಯಾರ್ಥಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು’ ಎಂಬ ಪಾಠ ಶಿಕ್ಷಕರ ತರಬೇತಿ ಕಾರ್ಯಾಗಾರಗಳಲ್ಲಿ ಮೇಲಿಂದ ಮೇಲೆ ಕಿವಿಗೆ ಬಿದ್ದರೂ ಅದನ್ನು ನಮ್ಮ ಪದವಿ ಹಂತದ ಶಿಕ್ಷಣ ಸಂಸ್ಥೆಗಳಲ್ಲಿನ ಪ್ರಾಧ್ಯಾಪಕರು ಎಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬುದು ಪ್ರಶ್ನಾರ್ಹ.

ಶಿಕ್ಷಕರ ಕುರಿತ ಚರ್ಚೆಗಳು ಬಹುತೇಕ ಸಂದರ್ಭಗಳಲ್ಲಿ ನೌಕರಿಯ ಕಾಯಮಾತಿ, ವೇತನ ತಾರತಮ್ಯದ ಕುರಿತೇ ಕೇಂದ್ರಿತವಾಗಿರುತ್ತವೆಯೇ ವಿನಾ ಗುಣಮಟ್ಟದ ಶಿಕ್ಷಕರನ್ನು ರೂಪಿಸಲು ನಮ್ಮ ಶೈಕ್ಷಣಿಕ ವ್ಯವಸ್ಥೆಗೆ ಸಾಧ್ಯವಾಗುತ್ತಿದೆಯೇ ಎಂಬ ಪ್ರಶ್ನೆ ಸಮಾಜವನ್ನು ಬಾಧಿಸುತ್ತಿರುವಂತೆ ತೋರುತ್ತಿಲ್ಲ. ವಿದ್ಯಾರ್ಥಿಗಳಿಗೆ ದಡ್ಡರ ಹಣೆಪಟ್ಟಿ ಅಂಟಿಸಿ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಪ್ರಾಧ್ಯಾಪಕರಿಗೆ ಮೊದಲು ಬೋಧನೆ-ಕಲಿಕೆಯ ಪ್ರಾಥಮಿಕ ಪಾಠಗಳನ್ನು ಬೋಧಿಸುವುದು ಆದ್ಯತೆಯಾಗ ಬೇಕಲ್ಲವೇ? ಬೋಧನೆಯ ಜೊತೆಗೆ ಸಂಶೋಧನಾ ಚಟುವಟಿಕೆಗಳಲ್ಲೂ ಹೆಚ್ಚಾಗಿ ತೊಡಗಿಸಿಕೊಳ್ಳಬೇಕಿರುವ ಬಾಹ್ಯ ಒತ್ತಡಕ್ಕೆ ಒಳಗಾಗುತ್ತಿರುವ ಅಧ್ಯಾಪಕರು, ವೃತ್ತಿ ಬದುಕಿನಲ್ಲಿ ಮೇಲೇರಲು ಅಗತ್ಯವಿರುವ ಸಂಶೋ ಧನಾ ಪ್ರಬಂಧಗಳ ಪ್ರಕಟಣೆಗೆ ತೋರುವ ಆಸಕ್ತಿಯನ್ನು ವಿದ್ಯಾರ್ಥಿಗಳನ್ನು ಅರಿಯಲೂ ತೋರುವಂತೆ ಮಾಡುವುದು ಈ ಹೊತ್ತಿನ ಅನಿವಾರ್ಯವೂ ಹೌದು.

ಕೊರೊನಾ ಕಾರಣಕ್ಕೆ ಎರಡು ವರ್ಷಗಳಿಂದ ಸರಿಯಾಗಿ ಶಾಲಾ-ಕಾಲೇಜುಗಳಿಗೆ ಹಾಜರಾಗದಿದ್ದ ವಿದ್ಯಾರ್ಥಿಗಳು ಇತ್ತೀಚೆಗಿನ ಹಿಜಾಬ್ ವಿವಾದದಿಂದ ಮತ್ತಷ್ಟು ದಿಕ್ಕು ತಪ್ಪಿದ್ದಾರೆ. ಕಲಿಕೆಗೆ ಬೆನ್ನು ತೋರಲು ವಿದ್ಯಾರ್ಥಿಗಳನ್ನು ಪ್ರಚೋದಿಸುವ ಅಂಶಗಳೇ ಸಮಾಜದಲ್ಲಿ ಬೇರೂರಿವೆ. ಆರ್ಥಿಕ, ಸಾಮಾಜಿಕ, ಕೌಟುಂಬಿಕ, ಮಾನಸಿಕ ಸಮಸ್ಯೆಗಳೆಲ್ಲವೂ ತೀವ್ರವಾಗಿರುವ ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿ ಗಳು ಮುಕ್ತ ಮನಸ್ಸಿನಿಂದ ಕಲಿಕೆಯಲ್ಲಿ ತೊಡಗಿಕೊಳ್ಳು ವುದು ಹೇಗೆ ಸಾಧ್ಯ?

ಈ ಸವಾಲು ಮೆಟ್ಟಿ ನಿಲ್ಲುವ ಬದ್ಧತೆ ಮತ್ತು ಸಿದ್ಧತೆ ನಮ್ಮ ಶಿಕ್ಷಕರ ವಲಯದಲ್ಲಿ ಇದೆಯೇ? ಕಣ್ಣೆದುರಿನ ವಾಸ್ತವವು ನಿರಾಶೆಯ ನೆರಳನ್ನೇ ಹೊದಿಸುತ್ತಿಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT