ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಡ’ ಹೋರಾಟ ಮತ್ತು ಅಸ್ತಿತ್ವದ ಪ್ರಶ್ನೆ

ಎಡಪಕ್ಷಗಳಿಗೆ ಮಿತಿಗಳಿವೆ. ಅದರರ್ಥ ಅವು ಅಸ್ತಿತ್ವ ಕಳೆದುಕೊಳ್ಳುತ್ತಿವೆ ಎಂದಲ್ಲ
ಅಕ್ಷರ ಗಾತ್ರ

ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ಸಂಪುಟ ಕಾರ್ಯದರ್ಶಿಯಾಗಿದ್ದ ಟಿ.ಎಸ್.ಆರ್ ಸುಬ್ರಮಣಿಯನ್‌ ಅವರು ಒಮ್ಮೆ ರೈಲಿನಲ್ಲಿ ಪ್ರಯಾಣಿಸು ವಾಗ, ಎ.ಸಿ. ಬೋಗಿಯ ಕಿಟಕಿಯಿಂದ ಕಾಣುತ್ತಿದ್ದ ‘ಬಡವರ ಭಾರತ’ವನ್ನು ಕಂಡು ಮರುಗುತ್ತಾರೆ. ರೈಲ್ವೆ ಇಲಾಖೆಯ ತಮ್ಮ ಮಿತ್ರರೊಂದಿಗೆ ತಮಗಾದ ಈ ಅನುಭವವನ್ನು ಬೇಸರದಿಂದ ಹಂಚಿಕೊಳ್ಳುತ್ತಾರೆ. ಆದಕ್ಕೆ ಆ ಮಿತ್ರ ‘ನೋಡಿ, ನೀವು ಅದನ್ನು ನೋಡ ದೆಯೂ ಪ್ರಯಾಣ ಮಾಡಬಹುದಾಗಿತ್ತು... ಏಕೆ, ನಿಮ್ಮ ಬೋಗಿಯ ಕಿಟಕಿಗಳಿಗೆ ಪರದೆಗಳು ಇರಲಿಲ್ಲವೇ’ ಎಂದು ಕೇಳುತ್ತಾರೆ! ಈ ವಿಷಯವನ್ನು ಸ್ವತಃ ಸುಬ್ರಮಣಿಯನ್ ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ.

ಇಂದು ಚುನಾವಣಾ ರಾಜಕೀಯದ ಫಲಿತಗಳನ್ನು ಆಧರಿಸಿ, ಭಾರತದಲ್ಲಿ ಎಡಪಕ್ಷಗಳು ಪೂರ್ತಿ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆ ಎನ್ನುತ್ತಿರುವ ಮಂದಿ, ನನಗೆ ಸುಬ್ರಮಣಿಯನ್ ಅವರ ಸ್ನೇಹಿತರಂತೆ ತೋರುತ್ತಿದ್ದಾರೆ. ಇದು ಅವರ ತಪ್ಪಲ್ಲ. 1990ರ ನಂತರ ಭಾರತದಲ್ಲಿ ಜಾರಿಯಾದ ನವಉದಾರವಾದಿ ಆರ್ಥಿಕತೆ ಆಧರಿಸಿ ರೂಪುಗೊಂಡ ಮೌಲ್ಯಗಳು, ಬಡವರು ಅನುಭವಿಸುತ್ತಿರುವ ಅಸಮಾನತೆ, ಶೋಷಣೆ ಕುರಿತು ಮಧ್ಯಮ ವರ್ಗದಲ್ಲಿ ಸಿನಿಕತೆಯೊಂದನ್ನು ಸೃಷ್ಟಿಸಿವೆ. ಹಾಗಾಗಿಯೇ ಅವರು, ಬಡವರು, ಕಾರ್ಮಿಕರು, ರೈತರು ಹಾಗೂ ಮುಖ್ಯವಾಗಿ ಮಹಿಳೆಯರ ಅಸ್ತಿತ್ವಕ್ಕಾಗಿ ದಿನನಿತ್ಯ ನಡೆಯುತ್ತಿರುವ ಎಡಪಕ್ಷಗಳ ಹೋರಾಟಗಳನ್ನು ಕಂಡೂ ಕಾಣದಂತೆ ವರ್ತಿಸುತ್ತಾ, ಚಲಿಸುವ ತಮ್ಮ ಕಾರಿನ ಕಿಟಕಿಯ ಪರದೆಗಳನ್ನು ಎಳೆದುಕೊಳ್ಳುತ್ತಾರೆ. ರಾಷ್ಟ್ರೀಯತೆ, ಅಭಿವೃದ್ಧಿ, ಹಿಂದುತ್ವಭಾರತ ಎಂಬ ಪದಪುಂಜಗಳನ್ನು ಬಳಸಿ ಭವ್ಯ ಭಾರತದ ಕುರಿತು ಮಾತನಾಡುತ್ತಾರೆ. ಇದೊಂದು ರೀತಿ ಕಲ್ಪಿತ ಕೇಳುಗರೊಂದಿಗೆ ಮಾತನಾಡುವ ಮನದ ಮಾತಿದ್ದಂತೆ.

ವಾಸ್ತವ ಏನೆಂದರೆ, ನವಉದಾರವಾದಿ ಆರ್ಥಿಕ ನಿರೂಪಣೆ ಇಂದು ದೇಶದಾದ್ಯಂತ ಸಾಂಕೇತಿಕ ಸ್ವಾತಂತ್ರ್ಯದಲ್ಲಿ ಬಂದಿಯಾಗಿರುವ ಮಧ್ಯಮ ವರ್ಗವನ್ನು ಸೃಷ್ಟಿಸಿದೆ. ಮಾರುಕಟ್ಟೆಯಲ್ಲಿ ಕೊಳ್ಳುವ ಸಾಮರ್ಥ್ಯವನ್ನೇ ಸ್ವಾತಂತ್ರ್ಯ ಎಂದು ನಂಬುವ ಈ ವರ್ಗ ಇಂದು ಬಂಡವಾಳಶಾಹಿಗೆ ಷರತ್ತುರಹಿತ ಬೆಂಬಲ ನೀಡಿ, ನಿಜವಾದ ಜನಚಳವಳಿಯನ್ನು ಗುರುತಿಸಲು ಸಾಧ್ಯವಾಗದ ಸ್ಥಿತಿಗೆ ಸಮಾಜವನ್ನು ತಲುಪಿಸಿದೆ. ಆ ಕಾರಣಕ್ಕೆ, ಪ್ರಜಾಪ್ರಭುತ್ವದ ಹರಿಕಾರ ಎಂದು ಕರೆದುಕೊಳ್ಳುವ ಅಮೆರಿಕದಲ್ಲಿ ಕೋಳಿ ಮಾಂಸ ಸಂಸ್ಕರಣಾ ಕಂಪನಿಯೊಂದು 8 ತಾಸು ದುಡಿಮೆಯ ಮಧ್ಯದಲ್ಲಿ ಶೌಚಕ್ಕೂ ಸಮಯ ನೀಡದೆ, ಅಲ್ಲಿನ ಮಹಿಳಾ ನೌಕರರಿಗೆ ಡೈಪರ್ ಒದಗಿಸುವುದು ಇವರಿಗೆ ಸಮರ್ಥನೀಯ ಅನ್ನಿಸುತ್ತದೆ. ನಮ್ಮದೇ ನಗರಗಳ ಮಾಲ್‍ಗಳಲ್ಲಿ ಆಗ ತಾನೇ ಪದವಿ ಮುಗಿಸಿದ ಹಳ್ಳಿ ಮತ್ತು ನಗರಗಳ ಬಡ ಮಕ್ಕಳು ದಿನದ ಸುಮಾರು 10 ಗಂಟೆಗಳ ಕಾಲ ನಿಂತುಕೊಂಡೇ ದುಡಿಯುವ, ಹಳ್ಳಿಗಳಿಂದ ನಗರಗಳ ಗಾರ್ಮೆಂಟ್ಸ್‌ಗೆ ಕನಿಷ್ಠ ಕೂಲಿಗೆ ಹೆಣ್ಣುಮಕ್ಕಳನ್ನು ಕುರಿಗಳಂತೆ ತುಂಬಿಕೊಂಡು ಬರುವ ಸಂಗತಿಯು ಮನುಷ್ಯ ಗೌರವಕ್ಕೆ ಧಕ್ಕೆ ಅನ್ನಿಸುವುದಿಲ್ಲ. ಕೊನೆಗೆ, ದೇವಸ್ಥಾನದ ಸಾಲಿನಲ್ಲಿ ದುಡ್ಡಿರುವ ಮಂದಿಗೆ ಶೀಘ್ರ ದರ್ಶನ ಎಂಬಂತಹ ನೈತಿಕವಲ್ಲದ ನಿಯಮಗಳನ್ನು ನಿರ್ಭಿಡೆಯಿಂದ ಪ್ರದರ್ಶಿಸುವುದೂ ಇವರಿಗೆ ಸಹ್ಯವಾಗಿಬಿಡುತ್ತದೆ.

ಈ ಮನಃಸ್ಥಿತಿಯು ಇಂದು ಜಾಗತೀಕರಣ, ಖಾಸಗೀಕರಣವು ಉದ್ಯೋಗಗಳನ್ನು ಸೃಷ್ಟಿಸಿದೆ ಎಂಬ ಸಂಗತಿಯನ್ನು ಅಬ್ಬರದಿಂದ ಪ್ರಚಾರ ಮಾಡುತ್ತದೆ. ಆದರೆ ಖಾಸಗೀಕರಣ ಸೃಷ್ಟಿಸಿರುವ ಉದ್ಯೋಗಗಳ ಮೌಲ್ಯ ಮತ್ತು ಗುಣಮಟ್ಟದ ಕುರಿತು ಚರ್ಚೆ ನಡೆಸುವುದಿಲ್ಲ. ಜಗತ್ತಿನ ಎಡಚಳವಳಿ ಇಂಥ ಪ್ರಶ್ನೆಗಳನ್ನು ಕೇಳುತ್ತಿದೆ. ಲೋಹಿಯಾ, ಗಾಂಧಿ, ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಈ ಪ್ರಶ್ನೆಗಳನ್ನು ಕೇಳಿದ್ದಾರೆ. ಇವರೆಲ್ಲರೂ ಕಾರ್ಲ್‌ಮಾರ್ಕ್ಸ್‌ ಆಲೋಚನೆಗಳನ್ನು ಭಾರತಕ್ಕೆ ಅನ್ವಯಿಸುವ ಕುರಿತು ರಾಜಕೀಯ ತಾತ್ವಿಕತೆಯನ್ನು ಬೆಳೆಸಿದ್ದಾರೆ. ಸ್ವತಃ ಅಂಬೇಡ್ಕರ್ ಅವರು ಭಾರತದ ಮಾರ್ಕ್ಸ್‌ವಾದಿ ಪಕ್ಷಧೋರಣೆಯ ಕುರಿತು ಕಟು ವಿಮರ್ಶೆಗಳನ್ನು ದಾಖಲಿಸಿದ್ದಾರೆ. ಅಷ್ಟರ ಮಟ್ಟಿಗೆ ಭಾರತದ ಎಡಚಿಂತನೆಯು ವಿಮರ್ಶೆಗಳಿಗೆ ತೆರೆದುಕೊಳ್ಳುವ ವಸ್ತುನಿಷ್ಠತೆಯನ್ನು ಉಳಿಸಿಕೊಂಡಿದೆ, ಮೂಲತಃ ಪ್ರಜಾತಾಂತ್ರಿಕ ಚಳವಳಿಯಾಗಿದೆ.

ಜಾಗತಿಕ ಮಾರ್ಕ್ಸ್‌ವಾದಿ ಚರ್ಚೆಯು ಒಟ್ಟು ಸಮಾಜವನ್ನು ತಳಮಟ್ಟದಿಂದ ಪರಿವರ್ತಿಸುವ ಆಶಯವನ್ನು ಹೊಂದಿದೆಯೇ ವಿನಾ ಕೇವಲ ಚುನಾವಣಾ ರಾಜಕೀಯದಲ್ಲಿನ ಸೋಲು, ಗೆಲುವುಗಳನ್ನಲ್ಲ. ಹೀಗಾಗಿ, ಇಂದು ಎಡಪಂಥೀಯ ಹೋರಾಟ ಎಂದರೆ ‘ಮಾರುಕಟ್ಟೆಯ ಮೇಲೆ ಪ್ರಜಾಪ್ರಭುತ್ವದ ನಿಯಂತ್ರಣ’ಕ್ಕೆ ಹಕ್ಕೊತ್ತಾಯ ಎಂಬ ವಿನೂತನ ವಿಶ್ಲೇಷಣೆಗಳು ಚರ್ಚೆಯಲ್ಲಿವೆ.

ಹೌದು, ಭಾರತದಲ್ಲಿರುವ ಎಡಪಕ್ಷಗಳು ಬಹಳಷ್ಟು ಮಿತಿಗಳನ್ನು ಹೊಂದಿವೆ, ಅವು ಇಲ್ಲಿನ ಜನರೊಂದಿಗೆ ಸಂವಾದಿಸಲು ಬೇಕಾದ ಭಾಷೆಯನ್ನೇ ರೂಪಿಸಿಕೊಂಡಿಲ್ಲ, ಇಂದಿಗೂ ಯುರೋಪ್ ಕೇಂದ್ರಿತ ಸಾಂಪ್ರದಾಯಿಕ ತಿಳಿವನ್ನು ಭಾರತಕ್ಕೆ ಅನ್ವಯಿಸಲಾಗುತ್ತಿದೆ, ರೆವಲ್ಯೂಷನರಿ ಭಾಷೆಗೆ ಬದಲು ರಿಫಾರ್ಮಿಸ್ಟ್ ಧೋರಣೆಗಳನ್ನು ಹೊಂದಿವೆ ಎಂಬಂಥ ವಿಮರ್ಶೆಗಳೆಲ್ಲವೂ ಸತ್ಯವೇ. ಇದರ ಅರ್ಥ, ಭಾರತದಲ್ಲಿ ಎಡಪಕ್ಷಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆಎಂಬುದಲ್ಲ. ಬದಲಾಗಿ, ಅವುಗಳಿಗೆ ಈ ಸಮಾಜದ ಕುರಿತ ತಮ್ಮ ಗ್ರಹಿಕೆಗಳನ್ನು ಮರುಶೋಧಿಸುವ ಅವಕಾಶವನ್ನು ಈ ಸೋಲು ಸೃಜಿಸಿದೆ ಎಂಬುದು. ಏಕೆಂದರೆ, ಎಲ್ಲಿಯವರೆಗೂ ಜಾಗತಿಕ ಬಂಡವಾಳಶಾಹಿ ಇರುತ್ತದೆಯೋ ಅಲ್ಲಿಯವರೆಗೆ ಕಮ್ಯುನಿಸಂ ಇರುತ್ತದೆ, ಎಲ್ಲಿಯವರೆಗೆ ಕಮ್ಯುನಿಸಂ ಇರುತ್ತದೆಯೋ ಅಲ್ಲಿಯವರೆಗೆ ಕಮ್ಯುನಿಸ್ಟರು ಇರುತ್ತಾರೆ ಎನ್ನುವುದು ಅಳಿಸಲಾಗದ ಜಾಗತಿಕ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT