ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮುರಿದು ಕಟ್ಟೋಣ... ಮನೋಮಿತಿಯನ್ನು

ಸಂಕಷ್ಟದ ಸಮಯದಲ್ಲಷ್ಟೇ ಪುಟಿದೇಳುವ ಮಾನವೀಯತೆಯು ಇನ್ನುಳಿದ ಅವಧಿಯಲ್ಲೂ ಜೀವಂತವಾಗಿರಲಿ
Last Updated 4 ಜೂನ್ 2021, 18:11 IST
ಅಕ್ಷರ ಗಾತ್ರ

‘ನನ್ನದು ದೇಶ, ನನ್ನದು ನಾಡು ಎನ್ನದ ಮಾನವನೆದೆ ಸುಡುಗಾಡು’ ಅಂದವರು ಕುವೆಂಪು. ಪ್ರತಿಯೊಬ್ಬರೂ ತನ್ನ ನಾಡು, ನುಡಿ, ನೆಲ, ಜಲ, ಜನ, ಸಂಸ್ಕೃತಿ ಬಗ್ಗೆ ಅಭಿಮಾನ, ಹೆಮ್ಮೆಯ ಭಾವ ಹೊಂದುವುದು ಅವಶ್ಯಕ. ರಾಷ್ಟ್ರಾಭಿಮಾನ ಮೆರೆಯುವುದು, ಸಮಾಜದ ಸ್ವಾಸ್ಥ್ಯಕ್ಕಾಗಿ ದುಡಿಯುವುದು, ಮನುಷ್ಯತ್ವವನ್ನು ಎಲ್ಲ ಕಾಲದ ಆದ್ಯತೆಯನ್ನಾಗಿ ಪರಿಗಣಿಸುವುದು ಕೂಡ ಅಗತ್ಯವೇ.

ಅತಿಯಾದಾಗ ಅಮೃತವೂ ವಿಷವಾಗುವಂತೆ, ಜನ್ಮಗುಣದಂತೆ ತನ್ನದನ್ನು ಪ್ರೀತಿಸುವುದರಾಚೆಗೆ ತಾನಷ್ಟೇ ಎಂಬಂತಹ ಅತಿರೇಕದ ವರ್ತನೆಗಳ ಉತ್ಪನ್ನಗಳಾಗಿ ಹೊರಹೊಮ್ಮುವ ಸಂಕುಚಿತತೆ, ದುರಭಿಮಾನ, ಶ್ರೇಷ್ಠತೆಯ ವ್ಯಸನ, ಹುಸಿ ದೇಶಭಕ್ತಿಗಳೆಲ್ಲವೂ ಸಾಮರಸ್ಯ ಕದಡುತ್ತವಲ್ಲದೆ ರಾಷ್ಟ್ರವೊಂದರ ಸಮಗ್ರತೆ, ಏಕತೆ ಮತ್ತು ಔನ್ನತ್ಯಕ್ಕಿರುವ ತೊಡರುಗಾಲುಗಳು. ಮಾನವೀಯತೆಯ ಪರಿಧಿಯ ವಿಸ್ತೃತತೆಯ ಭಾಗವಾಗಿ ಕುವೆಂಪು ಅವರದೇ ‘ವಿಶ್ವಮಾನವ’ ಪರಿಕಲ್ಪನೆಯು ‘ವಸುಧೈವ ಕುಟುಂಬಕಂ’ ಮೂಲತತ್ವವನ್ನು ಎತ್ತಿಹಿಡಿದಿತ್ತು. ಇಡೀ ಮಾನವಕುಲವೇ ಒಂದು, ನಾವೆಲ್ಲರೂ ಕೊನೆಗೆ ಜಗತ್ತಿಗೆ ಸೇರಿದವರೆಂಬ ದಿವ್ಯ ಸಂದೇಶವದು.

ಕಾಲಯಾನದಲ್ಲಿ ಜನಾಂಗಗಳನ್ನು ಬೆಸೆಯುವ, ಎಲ್ಲರನ್ನೂ ಒಳಗೊಳ್ಳುವ ಹಂಬಲದಲ್ಲಿ ಜನ್ಮತಳೆದ ಮತಧರ್ಮಗಳು ಬರಬರುತ್ತಾ ಮನುಕುಲದ ವಿಭಜಕ ಹತಾರಗಳಾಗಿ ಬದಲಾಗಿರುವುದರ ಅನಿಷ್ಟ ಚಿತ್ರಣಗಳು ಕಣ್ಣೆದುರಿಗಿವೆ. ಮನುಷ್ಯ ತಾನು ಅಲ್ಪಾಯುಷಿಯಾಗಿಯೂ ಪ್ರೀತಿ-ಸಹಕಾರಗಳ ಬಲದಿಂದ ಮಹತ್ತರ ವಾದುದನ್ನು ಸಾಧಿಸಬಲ್ಲ ಸಾಧ್ಯತೆಗಳನ್ನು ಅರ್ಥೈಸಿಕೊಳ್ಳುವುದರಲ್ಲಿ ಸೋತು, ಕೇವಲ ಹಣ, ಬಣ್ಣ, ರೂಪ, ಜಾತಿ, ಧರ್ಮ, ದೇಶ, ಭಾಷೆ ಗಡಿಗಳ ಗೋಡೆ ಕಟ್ಟಿಕೊಳ್ಳುತ್ತಾ ಜನಮನವನ್ನು ಪ್ರತ್ಯೇಕಿಸುತ್ತಿದ್ದಾನೆ. ಹಿಂಸೆ-ಕ್ರೌರ್ಯವನ್ನು ಸಂಭ್ರಮಿಸುತ್ತಾನೆ.

ವಿವಿಧ ಕಾಲಘಟ್ಟದ ಜಾಗತಿಕ ಸಂದರ್ಭಗಳಲ್ಲಿ ತೀವ್ರ ರಾಷ್ಟ್ರೀಯವಾದವು ಮುನ್ನೆಲೆಗೆ ಬರುತ್ತಿದ್ದಂತೆ, ಹಲವಾರು ರಾಷ್ಟ್ರಗಳಲ್ಲಿ ಬಲಾಢ್ಯರ ಸ್ವಾರ್ಥ, ಅಧಿಕಾರದಾಹಕ್ಕೆ ಆಹಾರವಾಗಿ ಬಹುಸಂಖ್ಯಾತ ಬಡ, ಕೆಳಮಧ್ಯಮ ವರ್ಗಗಳಲ್ಲಿ ಧರ್ಮಾಂಧತೆ ಮತ್ತು ಹಗೆದ್ವೇಷಗಳನ್ನು ಬಿತ್ತುವುದು, ಹಿಂಸಾಚಾರಗಳಿಗೆ ಪ್ರಚೋದಿಸುವುದರ ಮೂಲಕ ರಾಷ್ಟ್ರದ ಒಟ್ಟಾರೆ ಅಭಿವೃದ್ಧಿಯ ನೊಗವನ್ನು ಹಿಂದಕ್ಕೆ ಜಗ್ಗುತ್ತಿರುವ ಉದಾಹರಣೆಗಳು ಹತ್ತಾರು. ಸರ್ವಜನಾಂಗದ ಸಮಷ್ಟಿಪ್ರಜ್ಞೆಯ, ಶಾಂತಿಪ್ರಿಯ ರಾಷ್ಟ್ರಗಳ ತುಲನೆ ಯಲ್ಲಿ ಸಂಕುಚಿತತೆ ಮತ್ತು ಧರ್ಮಾಂಧತೆಯನ್ನು ಉಸಿರಾಡುವ ದೇಶಗಳು ಅಭಿವೃದ್ಧಿಯ ಮಾನದಂಡ ಮಾತ್ರವಲ್ಲ ಸಂತುಷ್ಟಿಯ ಸೂಚ್ಯಂಕದಲ್ಲಿಯೂ ತೀರಾ ಕೆಳಮಟ್ಟದಲ್ಲಿವೆ!

ಪ್ರಕೃತಿಯಲ್ಲಿ ಅಜೈವಿಕ, ಜೈವಿಕಾಂಶಗಳಲ್ಲಿ ಪರಸ್ಪರ ಚಲನೆಯಿದೆ, ಅವಲಂಬನೆಯಿದೆ. ಜೀವಿಜೀವಿಗಳ ನಡುವಿನಲ್ಲೊಂದು ಮುದ್ದಾದ ಸಂಬಂಧವಿದೆ. ಒಂದಕ್ಕೊಂದು ಪೂರಕವಾದ ಹೊಂದಾಣಿಕೆಯ ಜೀವನವಿಧಾನವೇ ಅಲ್ಲಿಯ ಸಂವಿಧಾನ. ಕಾಲಾಂತರ ದಿಂದ ಮನುಕುಲದೊಳಗೂ ಪರಸ್ಪರ ಪ್ರೀತಿ, ಸಹಕಾರ, ಅವಲಂಬನೆಯುಳ್ಳ ಭಾವೈಕ್ಯ ಬಂಧವಿದೆ. ಅದು ಆರ್ದ್ರತೆಯ ಸೆಲೆಯೂ ಹೌದು, ಬದುಕುವ ಕಲೆಯೂ... ಅದರರ್ಥ ಸ್ಪಷ್ಟ. ಬದುಕು ನೂಕಲು ಎಲ್ಲರಿಗೆ ಎಲ್ಲರೂ ಬೇಕು. ಪರಸ್ಪರರ ನೆರವಿಗೆ ಒದಗಲೇಬೇಕು. ದೇಶದೇಶಗಳ ನಡುವೆಯೂ ಅಂಥದ್ದೇ ಸೌಹಾರ್ದ ಸಂಬಂಧವೊಂದರ ಅನಿವಾರ್ಯವನ್ನು ಕೊರೊನಾದಂತಹ ಕಷ್ಟಕಾಲಗಳು ತೋರಿಸಿಕೊಟ್ಟಿವೆ. ವಿಶ್ವ ಸಮುದಾಯವು ಪ್ರತಿಷ್ಠೆ ಮರೆತು ಸಂಕಟದಲ್ಲಿ ಒಂದಾಗಿದೆ. ಅಹಂಕಾರ, ತಾರ ತಮ್ಯ, ಹಿಂಸೆ, ಯುದ್ಧೋನ್ಮಾದಗಳಲ್ಲಿ ಸರ್ವಾಧಿಕಾರ ವನ್ನು ಮೆರೆವ ರಾಷ್ಟ್ರಗಳೂ ಯುದ್ಧ ಅಥವಾ ನೈಸರ್ಗಿಕ ವಿಕೋಪಗಳಂತಹ ದುರಿತ ಕಾಲದಲ್ಲಿ ಸಹಾಯಕ್ಕಾಗಿ ಮತ್ತೊಬ್ಬರತ್ತ ಕೈಚಾಚಿವೆ. ಕಷ್ಟಕಾಲದಲ್ಲಿ ಸಂತ್ರಸ್ತದೇಶಗಳ ನೋವಿಗೆ ಸ್ಪಂದಿಸಿವೆ, ಸಹಾಯಕ್ಕೆ ಕೈಜೋಡಿಸಿವೆ!

ವಿಶ್ವಗುರುವಾಗುವ ಕನಸು ಕಂಡಿದ್ದ ಭಾರತವನ್ನೂ ಇದೀಗ ಕೊರೊನಾಮಾರಿ ಉಸಿರುಗಟ್ಟಿಸುತ್ತಿದೆ. ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿದಂತೆ ಜಗತ್ತಿನ ಸುಮಾರು ನಲವತ್ತು ದೇಶಗಳು ವೈರಾಣು ತಂದಿಟ್ಟ ಸಂಕಟದಿಂದ ಪಾರಾಗಲು ನಮ್ಮ ನೆರವಿಗೆ ಧಾವಿಸುತ್ತಿವೆ. ಪಾಕಿಸ್ತಾನ ಮಾತ್ರವಲ್ಲ, ಕೊಲ್ಲಿ ರಾಷ್ಟ್ರಗಳಾದ ಯುಎಇ, ಸೌದಿ ಅರೇಬಿಯಾ, ಕತಾರ್, ಬಹ್ರೇನ್ ಮೊದಲಾದವುಗಳೂ ಸ್ವಯಂಪ್ರೇರಣೆಯಲ್ಲಿ ಭಾರತದೆಡೆಗೆ ಸಹಾಯಹಸ್ತ ಚಾಚಿವೆ. ಪರಸ್ಪರ ಕತ್ತಿ ಮಸೆಯುವ, ಯುದ್ಧದಾಹಿ ಜಗತ್ತಿನಲ್ಲಿ ಇಂಥದ್ದೂ ಸಾಧ್ಯವಿದೆ!

ಹುಳುಕುಗಳನ್ನು ಕಡೆಗಣಿಸಿ ಆಪತ್ಕಾಲದಲ್ಲಿ ಜನಹಿತಕ್ಕೆ ಒದಗುವ ಆಪತ್ಬಾಂಧವರು ಎಲ್ಲ ಕಾಲದಲ್ಲಿಯೂ ಹೀಗೇ ಕೈಜೋಡಿಸಿದರೆ ಎಷ್ಟು ಚೆನ್ನ. ಪರಸ್ಪರ ಪೂರಕವಾಗಿ ಬೆಳೆದು ನಿಂತರಲ್ಲವೇ ಎಲ್ಲರಿಗೂ ಕ್ಷೇಮ. ಚಾರಿತ್ರಿಕ ಮತ್ತು ಸೈದ್ಧಾಂತಿಕ ಇತಿಮಿತಿಗಳನ್ನರಿತು, ನಮ್ಮ ಅಪಾಯಕಾರಿ ಧೋರಣೆಗಳನ್ನೂ ನೀತಿ- ನಿಲುವುಗಳನ್ನೂ ಮುರಿದು ಕಟ್ಟಿಕೊಳ್ಳಲು ಇದಕ್ಕಿಂತ ಸೂಕ್ತ ಸಮಯ ಇನ್ಯಾವುದಿದೆ?

ನಮ್ಮಿಂದ ಬಹಳಷ್ಟನ್ನು ಕಿತ್ತುಕೊಳ್ಳುತ್ತಿರುವ ಕೊರೊನಾದಿಂದ ಕೆಲವಷ್ಟನ್ನಾದರೂ ಪಡೆದುಕೊಳ್ಳಬೇಕಾದ ಸಂದರ್ಭವಿದು. ಸ್ವಾರ್ಥ, ಧನದಾಹ, ಭೇದಭಾವ, ಹಗೆದ್ವೇಷಗಳ ಕೊಳೆಯನ್ನು ತೊಳೆದು ಕೊಂಡು ಮನುಷ್ಯಪ್ರೀತಿಯನ್ನು ಸಾಕಿಕೊಳ್ಳುವಂತಾಗ ಬೇಕು. ಸಂಕಷ್ಟದ ಸಮಯದಲ್ಲಷ್ಟೇ ಪುಟಿದೇಳುವ ಮಾನವೀಯತೆಯು ಇನ್ನುಳಿದ ಅವಧಿಯಲ್ಲೂ ಜೀವಂತವಾಗಿರಲಿ. ಮನುಷ್ಯಜಗತ್ತು ತನಗಿಂತ ಮೊದಲು ಮನುಷ್ಯತ್ವವನ್ನು ಸಾಯಗೊಡದೆ ತಾನಿರುವಷ್ಟು ಕಾಲವೂ ಜೀವಕಾರುಣ್ಯವನ್ನೇ ಹೊರಸೂಸುತಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT