ಸೋಮವಾರ, ಆಗಸ್ಟ್ 2, 2021
21 °C
ವಿಧವೆಯರ ಸ್ವಾವಲಂಬನೆಗೆ ನೆರವಾಗುವ ಕೆಲಸ ತೀವ್ರಗತಿಯಲ್ಲಿ ಆಗಬೇಕಿದೆ

ಸಂಗತ | ‘ಅವಳ’ ಹಾದಿ ಮುಕ್ತವಾಗಲಿ

ಡಾ. ಜ್ಯೋತಿ Updated:

ಅಕ್ಷರ ಗಾತ್ರ : | |

Prajavani

ಗಂಡನನ್ನು ಕಳೆದುಕೊಂಡ ಹೆಣ್ಣನ್ನು ನಿಕೃಷ್ಟವಾಗಿ ಕಾಣುವ ಪರಿಪಾಟ ಇನ್ನೂ ಉಳಿದಿರುವುದು ವಿಷಾದದ ಸಂಗತಿ. ಯಾಕೆಂದರೆ, ಸಂಗಾತಿಯನ್ನು ಕಳೆದುಕೊಂಡ ಗಂಡು ಬಾಹ್ಯ ಜಗತ್ತಿನ ಯಾವುದೇ ಕಟ್ಟುಪಾಡುಗಳಿಲ್ಲದೆ ಪುನಃ ಹಸೆಮಣೆ ಏರಿದರೆ, ಹೆಣ್ಣು ಮಾತ್ರ ಸಾಮಾಜಿಕ ಕಟ್ಟುಪಾಡುಗಳಲ್ಲಿ ಬಂದಿಯಾಗಿ ನಲುಗುತ್ತಾಳೆ.

2020ರಲ್ಲಿ ಪ್ರಕಟವಾದ ವರದಿಯೊಂದರ ಪ್ರಕಾರ, ಭಾರತದಲ್ಲಿ ಸದ್ಯಕ್ಕೆ 5.5 ಕೋಟಿ ವಿಧವೆ ಯರಿದ್ದಾರೆ. ‘ವಿಧ್’ ಎನ್ನುವ ಸಂಸ್ಕೃತ ಪದದ ಅರ್ಥ ‘ನಿರ್ಗತಿಕ’. ಭಾರತದಲ್ಲಿ ವಿಧವೆಯರನ್ನು ಹೆಚ್ಚುಕಡಿಮೆ ಹಾಗೆಯೇ ನಡೆಸಿಕೊಳ್ಳಲಾಗುತ್ತಿದೆ. ಪ್ರತಿವರ್ಷ, ಜೂನ್ 23 ಅನ್ನು ‘ಅಂತರರಾಷ್ಟ್ರೀಯ ವಿಧವೆಯರ ದಿನ’ ಎಂದು ಪರಿಗಣಿಸಲ್ಪಟ್ಟ ಕಾರಣ, ವರ್ತಮಾನದ ಜಗತ್ತಿನಲ್ಲಿ ವಿಧವೆಯರ ಸ್ಥಿತಿಗತಿಯ ಕುರಿತು ಮರುನೋಟ ಹರಿಸಬೇಕಾಗಿದೆ.

ವೈಧವ್ಯದ ಐತಿಹಾಸಿಕ ಪರಂಪರೆಯತ್ತ ದೃಷ್ಟಿ ಹಾಯಿಸಿದರೆ, ‘ಸ್ವಯಂವರ’ದ ಮೂಲಕ ಬಾಳಸಂಗಾತಿಯನ್ನು ಆಯ್ಕೆ ಮಾಡುತ್ತಿದ್ದ ಅಥವಾ ‘ನಿಯೋಗ’ದಿಂದ ಮಗುವನ್ನು ಪಡೆಯುವ ಅವಕಾಶವಿದ್ದ ಹೆಣ್ಣು, ಕ್ರಮೇಣ ‘ಸತಿ ಸಹಗಮನ’ದ ಹಂತ ತಲುಪಿದಳು ಎನ್ನುವ ಅಂಶವೇ ಒಂದು ವಿಪರ್ಯಾಸ. ಅಂತೂ ಸಹಗಮನವು ವಿಧವೆಯನ್ನು ಅವಳ ಗಂಡನ ಚಿತೆಯೊಂದಿಗೆ ಜೀವಂತವಾಗಿ ಸುಟ್ಟರೆ, ಇದರಿಂದ ಹೊರಗುಳಿದ ವಿಧವೆಯರ ಬಾಳೇನೂ ಸಂತೋಷದಾಯಕವಾಗಿರಲಿಲ್ಲ. ಬದಲಾಗಿ ದೈನಂದಿನ ಬದುಕು ಮಾನಸಿಕ ಹಿಂಸೆಯಾಗಿತ್ತು.

ವೈಧವ್ಯ ಅವಳ ಪಾಪದ ಫಲವೆಂದು ನಂಬಿದ್ದ ರಿಂದ, ಅವಳನ್ನು ಎಲ್ಲಾ ಶುಭ ಸಮಾರಂಭಗಳಿಂದ ದೂರವಿಟ್ಟು ಅಸ್ಪೃಶ್ಯಳಂತೆ ನಡೆಸಿಕೊಳ್ಳಲಾಯಿತು. ಗಂಡಸರು ವಿಧವೆಯತ್ತ ಆಕರ್ಷಿತರಾಗಬಾರದೆಂದು, ಅವಳ ತಲೆ ಬೋಳಿಸಿ, ನಿರಾಭರಣಗೊಳಿಸಿ, ಸ್ವನಿಗ್ರಹದ ಪಾಠ ಹೇಳಲಾಯಿತು. ಇವುಗಳ ನಡುವೆಯೂ ಅಕಸ್ಮಾತ್ ಅವಳ ಮನ ಜಾರಿಯೋ ಅಥವಾ ಬಲವಂತವಾಗಿ ಪುರುಷನ ಕಾಮತೃಷೆಗೆ ಸಿಕ್ಕಿಯೋ ಗರ್ಭಿಣಿಯಾದರೆ ಅವಳನ್ನು ಬಹಿಷ್ಕರಿಸಲಾಗುತ್ತಿತ್ತು. ಮುಂದೆ ಅವಳು ಮತ್ತು ಅವಳಿಗೆ ಹುಟ್ಟಿದ ಮಗು ಜೀವನಪರ್ಯಂತ ಅಸ್ಪೃಶ್ಯರಂತೆ ಬದುಕಬೇಕಿತ್ತು. ಹೀಗೆ, ಹೆಣ್ಣಿನ ಅಸ್ತಿತ್ವವು ಗಂಡನ ಉಳಿವು ಅಳಿವಿನ ಪರಿಧಿಯೊಳಗೆ ಕಟ್ಟಲ್ಪಟ್ಟಿತ್ತು.

ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಸತಿಪದ್ಧತಿಯನ್ನು ನಿಷೇಧಿಸಲಾಯಿತಾದರೂ ವಿಧವೆಯರ ಜೀವನ ಶೋಚನೀಯವಾಗಿಯೇ ಮುಂದುವರಿಯಿತು. ಬಡತನ, ಕೌಟುಂಬಿಕ ಬೆಂಬಲದ ಕೊರತೆ, ಒಂಟಿತನ, ಮದುವೆಯಾಗಲು ಸಿದ್ಧವಿಲ್ಲದ ಆದರೆ ಕಾಮತೃಷೆಗೆ ಬಳಸಿಕೊಳ್ಳುವ ಪುರುಷ ವರ್ಗದಿಂದ ದೌರ್ಜನ್ಯಕ್ಕೆ ಒಳಗಾಗುವ ವಿಧವೆಯರು, ಬದುಕಿನ ಬಗ್ಗೆ ನಿರಾಶರಾಗುವ ಸಂಭವ ಹೆಚ್ಚಿಗೆ ಇತ್ತು.

ಉತ್ತರಪ್ರದೇಶದ ಮಥುರಾದ ಬೃಂದಾವನದಲ್ಲಿ ವಿಧವೆಯರನ್ನು ಬಿಟ್ಟು ಹೋಗುವ ಸಂಪ್ರದಾಯ ಇಂದಿಗೂ ಚಾಲ್ತಿಯಲ್ಲಿದೆ. ಅದನ್ನು ‘ವಿಧವೆಯರ ನಗರ’ವೆಂದೇ ಕರೆಯುತ್ತಾರೆ. ಮನೆಯಿಂದ ಪರಿತ್ಯಕ್ತ ರಾದವರು ಅಲ್ಲಿ ಜೀವನೋಪಾಯಕ್ಕಾಗಿ ಭಿಕ್ಷಾ ಟನೆ, ವೇಶ್ಯಾವಾಟಿಕೆಯಂತಹ ಮಾರ್ಗಗಳನ್ನು ಕಂಡುಕೊಂಡು ಕೃಷ್ಣನ ಆರಾಧನೆಯಲ್ಲಿ ತಮ್ಮ ಜೀವನದ ಉಳಿದ ದಿನಗಳನ್ನು ಕಳೆಯುತ್ತಾರೆ. ಇವರಲ್ಲಿ ಬಹಳಷ್ಟು ಬಾಲವಿಧವೆಯರೂ ಇದ್ದಾರೆ.

ಈ ಹಿನ್ನೆಲೆಯಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾದುದು, ವೈಧವ್ಯ ಎನ್ನುವುದು ಯಾವುದೇ ಮಹಿಳೆಯ ಸ್ವಆಯ್ಕೆಯಲ್ಲ. ಅದೊಂದು ಜೀವನದ ಆಕಸ್ಮಿಕ ಭಾಗವಷ್ಟೇ. ವಿಪರ್ಯಾಸವೆಂದರೆ, ಸಂಗಾತಿಯನ್ನು ಕಳೆದುಕೊಂಡ ಮಹಿಳೆಗೆ ಅಗತ್ಯವಾಗಿ ಬೇಕಾಗಿರುವ ಆಸರೆ ಮತ್ತು ಸಾಂತ್ವನ ನೀಡುವ ಬದಲಾಗಿ, ಸಮಾಜ ಅವಳ ಭವಿಷ್ಯದ ಹಾದಿಯನ್ನು ಇನ್ನಷ್ಟು ಕಠಿಣಗೊಳಿಸಿ, ಬದುಕುವ ಇಚ್ಛಾಶಕ್ತಿಯನ್ನು ಕಸಿದುಕೊಳ್ಳುತ್ತದೆ.

ವಿಧವೆಯರ ಮರುವಿವಾಹದ ಸಾಧ್ಯತೆ ಇಂದಿಗೂ ಕಠಿಣವಾಗಿಯೇ ಉಳಿದಿದೆ. ಹೆಣ್ಣು ಗಂಡನ ಮನೆಯ ಸ್ವತ್ತು ಎಂದು ಪರಿಗಣಿಸಲ್ಪಟ್ಟಿರುವುದರಿಂದ, ಆಕೆಯ ಮರುಮದುವೆಗೆ ಮೃತ ಗಂಡನ ಮನೆಯವರ ಅನುಮೋದನೆ ಬೇಕಾಗುತ್ತದೆ. ಜೊತೆಗೆ, ತವರು ಮನೆಯವರ ಬೆಂಬಲವೂ ಅಗತ್ಯವಾಗುತ್ತದೆ. ಒಂದು ವೇಳೆ ಎರಡೂ ಕಡೆಯಿಂದ ಸಹಮತವಿದ್ದರೂ ಅಕಸ್ಮಾತ್ ಅವಳಿಗೆ ಮಕ್ಕಳೇನಾದರೂ ಇದ್ದಲ್ಲಿ, ಹೆಚ್ಚಿನ ಸಂದರ್ಭಗಳಲ್ಲಿ ಎರಡನೇ ಗಂಡ ಅವರನ್ನು ಸ್ವೀಕರಿಸದ ಕಾರಣ, ಮಕ್ಕಳ ಭವಿಷ್ಯದ ಕುರಿತಾಗಿಯೂ ಯೋಚಿಸಬೇಕಾಗುತ್ತದೆ.

ಈ ಎಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು, ಸಾಮಾಜಿಕ ಕಳಂಕಗಳನ್ನು ಮೆಟ್ಟಿ ನಿಲ್ಲುವುದು ಅಷ್ಟು ಸುಲಭವಲ್ಲ, ಪರಿವರ್ತನೆಗೆ ಬಹಳಷ್ಟು ಸಮಯ ತಗಲುತ್ತದೆ ಮತ್ತು ಮದುವೆಯೊಂದೇ ಹೆಣ್ಣಿನ ಅಸ್ತಿತ್ವವಲ್ಲ ಎನ್ನುವ ಕಾರಣದಿಂದಾಗಿ, ಸರ್ಕಾರ ಮತ್ತು ಸಂಘ ಸಂಸ್ಥೆಗಳು ವಿಧವೆಯರ ಸ್ವಾವಲಂಬನೆಗೆ ನೆರವಾಗುವ ಕೆಲಸವನ್ನು ತೀವ್ರಗತಿಯಲ್ಲಿ ಮಾಡಬೇಕಿದೆ. ಇವರಲ್ಲಿ ಹೆಚ್ಚಿನವರಿಗೆ ವಿದ್ಯಾಭ್ಯಾಸ ಮತ್ತು ತರಬೇತಿಯ ಕೊರತೆ ಇರುವುದರಿಂದ, ಈ ದಿಸೆಯಲ್ಲಿ ಸೂಕ್ತ ಕ್ರಮಗಳ ಅಗತ್ಯವಿದೆ. ಶಿಕ್ಷಣ ಮುಂದುವರಿಸಲು ಉಚಿತ ಸವಲತ್ತುಗಳು, ಸ್ವ-ಸಹಾಯ ಸಂಘಟನೆಗಳಿಂದ ಸಾಮುದಾಯಿಕ ಬೆಂಬಲ, ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ, ಜೊತೆಗೆ ಅವರಿಗಾಗಿ ಆಶ್ರಯತಾಣಗಳನ್ನು ನಿರ್ಮಿಸಲು ಸರ್ಕಾರದ ಸಹಯೋಗದೊಂದಿಗೆ ಸಂಘ ಸಂಸ್ಥೆಗಳು ಮುಂದೆ ಬರಬೇಕಾಗಿದೆ.

ವಿಧವೆಯರಿಗೆ ಅನುಕಂಪದ ಬದಲಾಗಿ, ಅವರಿಷ್ಟದಂತೆ ಬದುಕು ಕಟ್ಟಿಕೊಳ್ಳುವ ಮುಕ್ತ ವಾತಾವರಣ ಕಲ್ಪಿಸಬೇಕಿದೆ. ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕ ಈ ದಿಸೆಯಲ್ಲಿ ನೆರವಿನಹಸ್ತ ಚಾಚಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.