ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಪ್ರಕೃತಿ ಹಬ್ಬದಲ್ಲಿ ಭಾಗಿಯಾಗೋಣ

ಪ್ರಕೃತಿಯ ಸಂಪನ್ಮೂಲಗಳನ್ನು ಎಗ್ಗಿಲ್ಲದೆ ಬಳಸಿದರೆ ಎಡವಟ್ಟು ಕಟ್ಟಿಟ್ಟ ಬುತ್ತಿ
Last Updated 27 ಜುಲೈ 2022, 18:53 IST
ಅಕ್ಷರ ಗಾತ್ರ

ನಮ್ಮ ಹೊಲ, ಗದ್ದೆಗಳು ನಮ್ಮವೇ ಸರಿ. ಆದರೆ ಅಲ್ಲಿನ ಮರ, ಕೊಳ, ಬಂಡೆ, ನಿಧಿ– ನಿಕ್ಷೇಪ, ಸೂಕ್ಷ್ಮಜೀವಿಗಳು, ಶಿಲೀಂಧ್ರ, ಪ್ರಾಣಿ- ಪಕ್ಷಿಗಳಿಗೆ ನಾವು ವಾರಸುದಾರರಲ್ಲ! ಪ್ರಕೃತಿಯು ಬಗೆದು ಬಾಚಿಕೊಳ್ಳುವ ಸ್ಥಿರ ಸ್ವತ್ತಲ್ಲ. ಪ್ರಕೃತಿಯ ಮಾಲೀಕ ಪ್ರಕೃತಿಯೇ.

ಭೂಮಿ ನಮ್ಮದಲ್ಲ. 1972ರಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್‌, ವ್ಯಾಜ್ಯವೊಂದನ್ನು ಇತ್ಯರ್ಥಪಡಿಸುವಾಗ ‘ಪ್ರಕೃತಿಯ ಹಕ್ಕುಗಳನ್ನು ಯಾವುದೇ ಕಾರಣಕ್ಕೂ ಕಸಿಯುವಂತಿಲ್ಲ, ಅದಕ್ಕೇ ಹಿಂತಿರುಗಿಸಿ ಬಿಡಬೇಕು’ ಎಂದು ಅಭಿಪ್ರಾಯಪಟ್ಟ ಬೆನ್ನಲ್ಲೇ. ‘ಪ್ರಕೃತಿಯ ಹಕ್ಕುಗಳು’ ವಿಶ್ವಮಾನ್ಯ ಕಾನೂನಾತ್ಮಕ ಪರಿಕಲ್ಪನೆಯಾಗಿ ಮೈದಳೆದವು. ಪ್ರಕೃತಿಯ ಹಕ್ಕುಗಳಿರದೆ ಮಾನವ ಹಕ್ಕುಗಳಿಲ್ಲ. ಈ ದಿಸೆಯ ಹಕ್ಕುಗಳ ರೂಪುರೇಷೆಗಳನ್ನು ರಚಿಸುವಲ್ಲಿ ಆಯಾ ನದಿ, ಸರೋವರ, ಕಣಿವೆ, ಬೆಟ್ಟ, ಗುಡ್ಡ, ಕಾಡುಗಳ ಆಸುಪಾಸಿನ ಸ್ಥಳೀಕರ ನಿಲುವುಗಳಂತೂ ಅಕ್ಷರಶಃ ನಿರ್ಣಾಯಕ, ಮೌಲಿಕ. ಆ ಜನರಲ್ಲಿ ಪಾರಂಪರಿಕ ಪರಿಸರ ಜ್ಞಾನ ಭಂಡಾರವೇ ಇದ್ದೀತು.

ಭೂಮಿಯನ್ನು ಪ್ರೀತಿಸಬೇಕು. ಆದರೆ ಅದರ ಸಂಪನ್ಮೂಲಗಳನ್ನು ಎಗ್ಗಿಲ್ಲದೆ ಬಳಸಿದರೆ ಎಡವಟ್ಟು ಕಟ್ಟಿಟ್ಟ ಬುತ್ತಿ. ಅವುಗಳ ಯದ್ವಾತದ್ವ ವ್ಯಯದ ದುಷ್ಪರಿಣಾಮಗಳು ಒಂದೆರಡಲ್ಲ. ವಾತಾವರಣದ ವ್ಯತ್ಯಯದಿಂದ ಈಗಾಗಲೇ ಪ್ರಾಣಿ ಪ್ರಭೇದಗಳಲ್ಲಿ ಕೆಲವು ಅವನತಿಯಾಗಿವೆ. ಜಗತ್ತಿನ ಅತಿ ಉದ್ದದ ನದಿಗಳ ಪೈಕಿ ಮೂರನೇ ಎರಡರಷ್ಟು ನದಿಗಳು ಹರಿಯಲು ನಿತ್ರಾಣಗೊಂಡಿವೆ. ಸಣ್ಣಪುಟ್ಟ ದ್ವೀಪಗಳು ಮುಳುಗುತ್ತಿವೆ. ಸಮುದ್ರಗಳಲ್ಲಿ ಅರ್ಧದಷ್ಟು ಮೀನುಗಳು ನಾಪತ್ತೆ. ವನ್ಯಜೀವಿಗಳ ಪೈಕಿ ಶೇ 68ರಷ್ಟು ನಾಶ. ಇನ್ನು 70 ವರ್ಷಗಳಲ್ಲಿ ಸಮುದ್ರದ ಮಟ್ಟ ಎರಡು ಮೀಟರ್ ಹೆಚ್ಚುವಷ್ಟು ಜಾಗತಿಕ ತಾ‍ಪಮಾನದ ಏರಿಕೆ. ಪ್ರತಿವರ್ಷ 36,000 ಚದರ ಕಿ.ಮೀ. ಅರಣ್ಯ ನಾಶವಾಗುತ್ತಿದೆ. ಸೊರಗುತ್ತಿರುವುದು ಪ್ರಕೃತಿಯಲ್ಲ, ಅದರೊಂದಿಗಿನ ಮನುಷ್ಯ ಸಂಬಂಧ. ಮರ, ಗಿಡಗಳ ನಡುವೆ ಶಿಲೀಂಧ್ರಗಳದ್ದು ಮಹತ್ತರ ಪಾತ್ರ. ಅವು ಯಾವ್ಯಾವ ಮರ, ಗಿಡಕ್ಕೆ ಎಷ್ಟು ಇಂಗಾಲ, ನೀರು, ಪೋಷಕಾಂಶಗಳ ಕೊರತೆಯಿದೆ ಎಂದು ನಿರ್ಧರಿಸಿ ಬೇರುಗಳ ಮೂಲಕ ಒದಗಿಸಿ ಸರಿದೂಗಿಸುತ್ತವೆ.

ಒಂದು ಮರ ನಾಶವಾದರೆ ಒಂದು ಗಾಳಿಯ ಶೋಧಕ, ಒಂದು ಪುಟ್ಟ ನೀರಿನ ಕುಂಟೆ, ಔಷಧಿಗಳ ಕಪಾಟು ಇರುವ ಸಂಕೀರ್ಣವೊಂದು ಧ್ವಂಸವಾದಂತೆ. ಮರ ಆಮ್ಲಜನಕದ ಆಕರವಾದ್ದ ರಿಂದ ಗಿಡ ಬೆಳೆಸುವುದರಿಂದ ನಮ್ಮ ಬದುಕಿನ ಗುಣಮಟ್ಟ ಹೆಚ್ಚುವುದು. ಪ್ರಕೃತಿ ಆರೋಗ್ಯವಾಗಿದ್ದರೆ ಮನುಷ್ಯ ರನ್ನೊಳಗೊಂಡಂತೆ ಸಕಲ ಜೀವವೈವಿಧ್ಯಗಳೂ ಆರೋಗ್ಯವಾಗಿರುತ್ತವೆ. ಸಂಸ್ಕೃತಿಗೂ ಜೀವ
ವೈವಿಧ್ಯಕ್ಕೂ ಅವಿನಾಭಾವ ನಂಟು. ಮನುಷ್ಯ ನಿರ್ವಿಘ್ನವಾಗಿ ಪರಿಸರದ ವಿದ್ಯಮಾನಗಳನ್ನು ಸಾಗ ಗೊಡುವುದರ ಮೂಲಕ ಅವುಗಳನ್ನು ಪುನರ್‌ ರೂಪಿಸಬೇಕಿದೆ. ಇದರಿಂದ ಪ್ರಕೃತಿಯ ಅಂತರ್ಜಾತ ಹಕ್ಕುಗಳು ಮರುಸ್ಥಾಪಿತವಾಗುವುವು. ನದಿಗಳು ಹರಿದು ಸಾಗರಗಳನ್ನು ಸೇರಲೇಬೇಕು. ಪರ್ವತಗಳ ಶಿಖರಗಳು ಹಿಮದಿಂದ ಆವರಿಸಲೇಬೇಕು. ಮೀನು, ತಿಮಿಂಗಿಲಗಳಾದಿಯಾಗಿ ಸಕಲ ಜಲಚರಗಳು ಸ್ವಚ್ಛ ಸಾಗರಗಳಲ್ಲಿ ಈಜಬೇಕು. ಪ್ರಕೃತಿಯನ್ನೇ ಒಂದು ಘನ ವ್ಯಕ್ತಿತ್ವವಾಗಿ ಪರಿಭಾವಿಸಿ ಅದಕ್ಕೆ ನ್ಯಾಯ ಒದಗಿಸುವುದು ಧ್ಯೇಯವಾಗಬೇಕಿದೆ.

ಮನುಷ್ಯ ಎಲ್ಲ ಪ್ರಾಣಿಗಳಿಗಿಂತಲೂ ಶ್ರೇಷ್ಠ, ಬುದ್ಧಿಶಾಲಿ ಎಂಬ ವಿಶೇಷಣಗಳಿಗೆ ಭಾಜನನಾಗಿ ದ್ದಾನೆ. ಅವುಗಳ ಸಾರ್ಥಕ್ಯವು ಆತ ಪ್ರಕೃತಿಯ ಅಭಿಜಾತ ‘ಕೃತಿಸ್ವಾಮ್ಯ’ವನ್ನು ಗೌರವಿಸಿದಾಗ ಮಾತ್ರವೇ. ಪಂಚಭೂತಗಳಾದ ಭೂಮಿ, ಅಗ್ನಿ, ಆಗಸ, ನೀರು, ಗಾಳಿ ನಿಸರ್ಗದ ಬಳುವಳಿಗಳೆಂದು ಭಾರತೀಯ ಪರಂಪರೆಯಲ್ಲಿ ಹೇಳಲಾಗಿದೆ. ಈ ಪೈಕಿ ಹೆಚ್ಚಿನವು ಮನುಷ್ಯಕೃತ ಚಟುವಟಿಕೆಗಳಿಂದ ಮಾಲಿನ್ಯಕ್ಕೆ ಗುರಿಯಾಗಿವೆ. ಈ ತನಕ ಇಕ್ವೆಡಾರ್, ಬೊಲಿವಿಯಾ, ಅರ್ಜೆಂಟೀನಾ- ಈ ಮೂರೇ ದೇಶಗಳು ಮಾತ್ರ ಪ್ರಕೃತಿಯ ಹಕ್ಕುಗಳನ್ನು ಗಂಭೀರವಾಗಿ ಕಾರ್ಯರೂಪಕ್ಕೆ ತಂದಿವೆ. ಸಾಂಕೇತಿಕವಾಗಿ ಭಾರತದ ಗಂಗಾ ನದಿ ಹಾಗೂ ನ್ಯೂಜಿಲೆಂಡ್‌ನ ದಕ್ಷಿಣ ದ್ವೀಪದ ವಾನ್ಗಾನ್ಯು ನದಿಗೆ ಹಕ್ಕುಗಳನ್ನು ಮಾನ್ಯ ಮಾಡಲಾಗಿದೆ. ಪ್ರಕೃತಿಯ ಅಗತ್ಯಗಳನ್ನು ಮನುಷ್ಯನ ಮುಂದಿಡಬೇಕು. ಮನುಷ್ಯನ ಅಗತ್ಯಗಳನ್ನು ಪ್ರಕೃತಿಯ ಇತಿಮಿತಿಗಳಲ್ಲಿ ಆಗಿಂದಾಗ್ಗೆ ಪರಿಷ್ಕರಿಸಬೇಕು. ಪ್ರಕೃತಿಯಿಂದ ನಮಗೆ ಬೇಕಾಗುವಷ್ಟನ್ನು ಮಾತ್ರ ತೆಗೆದುಕೊಂಡು ಪೋಲಾಗಿಸದೆ ಉಪಯೋಗಿಸಬೇಕು.

‘ಪ್ರಕೃತಿ ಎದುರು ಮನುಷ್ಯ ಅಲ್ಲ, ಪ್ರಕೃತಿಯೊಂದಿಗೆ ಮನುಷ್ಯ’. ಅಷ್ಟಕ್ಕೂ ಮನುಷ್ಯ ಅಖಂಡ ಪ್ರಕೃತಿಯ ಒಂದು ಭಾಗವಷ್ಟೆ. ಪ್ರತಿವರ್ಷ ಜುಲೈ 28ರಂದು ಅಮೆರಿಕ ಉತ್ತೇಜಿತ ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟವು ‘ವಿಶ್ವ ಪ್ರಕೃತಿ ಸಂರಕ್ಷಣಾ ದಿನ’ ವನ್ನು ವಿಶ್ವದಾದ್ಯಂತ ಆಚರಿಸುತ್ತದೆ. ‘ಭೂಗ್ರಹದಂಥ ಒಳ್ಳೆಯ ನೆಲೆ ವಿರಳಾತಿ ವಿರಳ. ಅದನ್ನು ಉತ್ತಮವಾಗಿ ಸೋಣ’ ಎಂಬ ಅಭಿಯಾನದೊಂದಿಗೆ ಈ ಬಾರಿ ಪ್ರಕೃತಿಯ ಸಡಗರ. ಆಹಾರ, ನೀರು, ಮಣ್ಣು ಅಥವಾ ಖನಿಜ, ಇಂಧನ... ಹೀಗೆ ಭೂಮಿಯಲ್ಲಿ ಯಾವ ಸಂಪನ್ಮೂಲವೂ ಅಕ್ಷಯವಲ್ಲ. ಸಂಪನ್ಮೂಲಗಳನ್ನು ಮಿತವಾಗಿ ಬಳಸಿ ಭಾವಿ ಪೀಳಿಗೆಗಳಿಗೂ ಅವು ಲಭಿಸುವಂತೆ ನಾವು ನಿಗಾ ವಹಿಸಬೇಕಿದೆ. ಪ್ರಕೃತಿ ದಿನದ ಆಚರಣೆಯ ಉದ್ದೇಶ ಆ ಕುರಿತ ಜಾಗೃತಿ. ಗಾಸಿ ಗೊಂಡ ನೆಲಹರವನ್ನು ರವಷ್ಟು ಸ್ವಚ್ಛಗೊಳಿಸಿದರೂ ಆಯಿತು. ಪ್ರಕೃತಿ ಹಬ್ಬದಲ್ಲಿ ಭಾಗಿಯಾದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT