ಗುರುವಾರ , ಆಗಸ್ಟ್ 18, 2022
24 °C
ನುಡಿದಂತೆ ನಡೆಯುವ, ಬರೆದಂತೆ ಬದುಕುವ ಬದುಕು ಘನವಾದುದು

ಸಂಗತ: ಉಪದೇಶಾಮೃತ... ಆದೀತು ವಿಷ!

ಮಲ್ಲಿಕಾರ್ಜುನ ಹೆಗ್ಗಳಗಿ Updated:

ಅಕ್ಷರ ಗಾತ್ರ : | |

Prajavani

ರಷ್ಯಾದ ಮಹಾಲೇಖಕ ಲಿಯೊ ಟಾಲ್‍ಸ್ಟಾಯ್ ಅತ್ಯಂತ ಶ್ರೀಮಂತ ಜಮೀನ್ದಾರ ಕುಟುಂಬದಲ್ಲಿ ಜನಿಸಿದವರು. ಜೀತಪದ್ಧತಿ, ಊಳಿಗಮಾನ್ಯ ಪದ್ಧತಿಯ ವಿರುದ್ಧ ಬರವಣಿಗೆ ಆರಂಭಿಸುವ ಮೊದಲು, ಅವರು ತಮ್ಮ ಪಿತ್ರಾರ್ಜಿತ ಆಸ್ತಿ, ಸ್ವಯಾರ್ಜಿತ ಸಂಪತ್ತನ್ನೆಲ್ಲ ಸಾಮಾನ್ಯರಿಗೆ, ಬಡವರಿಗೆ, ಜೀತದಾಳುಗಳಿಗೆ ಹಂಚಿದರು. ಬಡವರಲ್ಲಿ ಬಡವನಾಗಿ ಬಾಳಿದರು. ಅವರು ಬದುಕಿದ ರೀತಿ ಮತ್ತು ಅವರು ಸೃಷ್ಟಿಸಿದ ಸಾಹಿತ್ಯದ ನಡುವಿನ ಸಂಬಂಧವನ್ನು ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ. ತಾವು ಬರೆದಂತೆ ಬದುಕಿ ತೋರಿಸಿದ ಕಾರಣಕ್ಕೆ ಟಾಲ್‍ಸ್ಟಾಯ್ ಸಾಹಿತ್ಯವು ಜಗತ್ತನ್ನು ಪ್ರಭಾವಿಸಿತು. ಸಾಮಾಜಿಕ ಬದಲಾವಣೆಗೆ ಪ್ರೇರಣೆಯಾಯಿತು. ಅಷ್ಟೇ ಏಕೆ ಮಹಾತ್ಮ ಗಾಂಧಿಗೂ ಅವರು ಗುರುವಾದರು!

ಮಠಾಧಿಪತಿಗಳು, ಚಿಂತಕರು, ಸಾಹಿತಿಗಳು, ವ್ಯಕ್ತಿತ್ವ ವಿಕಸನ ಗುರುಗಳು, ಸಾರ್ವಜನಿಕರಂಗದ ಗಣ್ಯರು ತಮ್ಮ ಪ್ರವಚನ, ಭಾಷಣ, ಬರಹಗಳಲ್ಲಿ ಉಪದೇಶಾಮೃತವನ್ನು ಧಾರಾಳವಾಗಿ ಹರಿಸುತ್ತಾರೆ. ಈ ಕೋವಿಡ್ ಕಾಲಘಟ್ಟದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಉಪದೇಶವಾಣಿಗಳು ಬಹಳ ಹೆಚ್ಚಾಗಿ ಕೇಳಿಸುತ್ತಿವೆ. ಆದರೆ ಅವರಲ್ಲಿ ಅನೇಕರು ಹೇಳುವ ನುಡಿಗೂ ಅವರ ಸ್ವಂತದ ಬದುಕಿಗೂ ತಾಳಮೇಳ ಇರುವುದಿಲ್ಲ.

ಉಪದೇಶ ಕೊಡುವುದು ಇಂದು ಕಾರ್ಪೊರೇಟ್ ಉದ್ಯಮವಾಗಿದೆ. ಟಿ.ವಿ. ವಾಹಿನಿಗಳಲ್ಲಿ ಗಂಟೆಗಟ್ಟಲೆ ಉಪದೇಶದ ಪ್ರವಾಹ ಹರಿದು ಬರುತ್ತದೆ. ಆದರೆ ಹಾಗೆ ಉಪದೇಶಕ್ಕೆ ನಿಂತವರಲ್ಲಿ ಹೆಚ್ಚಿನವರು ಹಣಕ್ಕಾಗಿ ಹಸಿದಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.

ಬರಹ ಬೇರೆ, ಬದುಕು ಬೇರೆ ಅಲ್ಲ. ನಡೆಯಿಲ್ಲದ ಬರೀ ಉಪದೇಶ ಜನಕ್ಕೆ ತಟ್ಟುವುದಿಲ್ಲ. ಶರಣರ ವಚನಗಳು, ದಾಸರ ಪದಗಳು, ಪ್ರವಾದಿಗಳ ಮಾತುಗಳು- ನುಡಿಗಟ್ಟುಗಳು ಸಾವಿರಾರು ವರ್ಷಗಳ ನಂತರವೂ ಉಳಿದುಕೊಂಡಿವೆ. ಅವರು ನುಡಿದಂತೆ ನಡೆದರು. ಈ ಕಾರಣಕ್ಕೆ ಅವರ ಮಾತು ದಿವ್ಯವಾಣಿಯಾಯಿತು.

ಜನರು ಉಪದೇಶವನ್ನು ಧಾರಾಳವಾಗಿ ಕೊಡುವಂತೆ ಮತ್ತೇನನ್ನೂ ಕೊಡುವುದಿಲ್ಲ ಎಂಬ ಉಕ್ತಿಯನ್ನು ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪ ತಮ್ಮ ‘ಪ್ರಪಂಚ’ ಪತ್ರಿಕೆಯಲ್ಲಿ ಪ್ರತಿವಾರ ಪ್ರಕಟಿಸುತ್ತಿದ್ದರು. ವಿಶ್ವದ ಅತ್ಯಂತ ತಮಾಷೆಯ ಮತ್ತು ಸುಲಭದ ವಿಷಯವೆಂದರೆ ಇನ್ನೊಬ್ಬರಿಗೆ ಸಲಹೆ ನೀಡುವುದು ಎಂದು ಅವರು ಹೇಳುತ್ತಿದ್ದರು.

ಸಾಹಿತಿಗಳು, ಕವಿಗಳು, ಚಿಂತಕರ ಬದುಕಿಗೂ ಅವರ ಬರಹಕ್ಕೂ ಸಂಬಂಧವೇ ಇರುವುದಿಲ್ಲ. ಸಾಹಿತ್ಯವನ್ನು ಮಾತ್ರ ನೋಡಿ, ಅವರ ಬದುಕು ನೋಡುವ ಅವಶ್ಯಕತೆಯಿಲ್ಲ, ಬರಹ ಒಂದು ಕಲೆ ಮಾತ್ರ ಎಂದು ಕೆಲವರು ಸಬೂಬು ಹೇಳಿ ದಾಟಿಕೊಳ್ಳುತ್ತಾರೆ. ಇದನ್ನು ಒಪ್ಪಲಾಗದು. ದೊಡ್ಡ ಆದರ್ಶವನ್ನು ಬರೆದು, ಭಾಷಣ ಮಾಡಿ ಸ್ವಂತಕ್ಕೆ ನಡೆ ಇಲ್ಲದಿದ್ದರೆ ಅದೊಂದು ಆತ್ಮವಂಚನೆಯಾಗುತ್ತದೆ. ಹೇಳುವುದು ಶಾಸ್ತ್ರ ತಿನ್ನುವುದು ಬದನೆಕಾಯಿ ಎಂಬ ಮಾತು ಇಂತಹವರನ್ನು ಛೇಡಿಸುವುದಕ್ಕೆಂದೇ ಹುಟ್ಟಿಕೊಂಡಿದೆ.

‘ನನ್ನ ಬದುಕೇ ನನ್ನ ಸಂದೇಶ’ ಎಂದು ಗಾಂಧೀಜಿ ಹೇಳುತ್ತಿದ್ದರು. ‘ಜಗತ್ತಿನಲ್ಲಿ ಒಳ್ಳೆಯದು, ಶ್ರೇಷ್ಠವಾದದ್ದು ಏನಿದೆಯೋ ಅದೆಲ್ಲವನ್ನೂ ಹೇಳಿಯಾಗಿದೆ. ಈಗ ನಡೆಯುವುದು ಮಾತ್ರ ಬಾಕಿ ಉಳಿದಿದೆ’ ಎಂದು ಸಾಕ್ರೆಟಿಸ್ ಹೇಳಿದ ಮಾತು ಸದಾ ಸ್ಮರಣೀಯ.

ಮಠಾಧೀಶರೊಬ್ಬರು ‘ಹಣ ಎಂದರೆ ವಿಷ. ಮುಟ್ಟಿದರೆ ಕಚ್ಚುತ್ತದೆ. ಯಾರು ಹಣಕಾಸಿನ ವಿಷಯದಲ್ಲಿ ಪರಿಶುದ್ಧರೋ ಅವರೇ ನಿಜವಾದ ಪರಿಶುದ್ಧರು’ ಎಂದು ಪ್ರವಚನ ಮಾಡುತ್ತಾರೆ. ವೇದಿಕೆಯಿಂದ ಇಳಿದಕೂಡಲೇ, ಭೇಟಿಯಾಗಲು ಬಂದ ಭಕ್ತರಿಗೆ ‘ದೇಣಿಗೆ ಕೊಡ್ರಿ’ ಎಂದು ಪೀಡಿಸುತ್ತಾರೆ. ಹಣ ಎಂದರೆ ವಿಷ ಎಂದು ಹೇಳುವ ಸ್ವಾಮೀಜಿ ಇವರೇನೇ ಎಂದು ಅನುಮಾನ ಪಡುವಂತೆ ನಿಜಜೀವನದಲ್ಲಿ ನಡೆದುಕೊಳ್ಳುತ್ತಾರೆ.

ಮಾತೆಂಬುದು ಜ್ಯೋತಿರ್ಲಿಂಗ ಎಂದು ಅಲ್ಲಮಪ್ರಭು ಹೇಳಿದ್ದಾರೆ. ಕನ್ನಡದ ಅನೇಕ ಕವಿಗಳು ಬಸವಾದಿ ಶರಣರ ಮಾದರಿಯಲ್ಲಿ ವಚನಗಳನ್ನು ರಚಿಸುತ್ತಿದ್ದಾರೆ. ಕಳೆದ ಎರಡು ದಶಕಗಳ ಅವಧಿಯಲ್ಲಿ ಬಹಳಷ್ಟು ಆಧುನಿಕ ವಚನಗಳನ್ನು ಲೇಖಕರು ಬರೆದಿದ್ದಾರೆ. ‘ಆಧುನಿಕ ಕವಿಗಳು ತಮ್ಮ ಬರಹಗಳನ್ನು ಆತ್ಮಸಾಕ್ಷಿಯ ಬೆಳಕಿನಲ್ಲಿ ಮೌಲ್ಯಮಾಪನ ಮಾಡಿಕೊಳ್ಳಬೇಕು’ ಎಂದು ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ ಹೇಳುತ್ತಿದ್ದರು.

ಸಾಹಿತಿಯು ಯೋಗಿಗಿಂತ ಬೇರೆಯಲ್ಲ. ಸಮಾಜ ಅವರ ಬಗ್ಗೆ ವಿಶೇಷ ಗೌರವ ಹೊಂದಿದೆ. ಅವರನ್ನು ಸಂಸ್ಕೃತಿಯ ಪ್ರತಿನಿಧಿಗಳು ಎಂದು ಭಾವಿಸಲಾಗುತ್ತದೆ. ಅವರ ನಡೆ-ನುಡಿ ಆದರ್ಶವಾಗಿ ಇರುವಂತೆ ಸಮಾಜ ಅಪೇಕ್ಷೆಪಡುವುದು ಸಹಜವಾಗಿದೆ. ಸಾಹಿತ್ಯಿಕ ಮೌಲ್ಯನಿಷ್ಠೆ ವೈಯಕ್ತಿಕ ಜೀವನದ ಮೌಲ್ಯನಿಷ್ಠೆಯಾಗಬೇಕು. ನಡೆ ಮತ್ತು ನುಡಿಯಲ್ಲಿ ತಾದಾತ್ಮ್ಯ ಬೇಕು ಎಂದು ಬಸವಣ್ಣ ಬಹು ಸುಂದರವಾಗಿ ಹೇಳಿದ್ದಾರೆ.

ನೂರನೋದಿ ನೂರ ಕೇಳಿದಡೇನು?
ಆಸೆ ಹರಿಯದು, ರೋಷ ಬಿಡದು
ಮಜ್ಜನಕ್ಕೆರೆದು ಫಲವೇನು? ಮಾತಿನಂತೆ ಮನವಿಲ್ಲದ ಜಾತಿ ಡೊಂಬರ ನೋಡಿ
ನಗುವ ನಮ್ಮ ಕೂಡಲಸಂಗಮದೇವ!

ಮಾತನಾಡುವ ಕೌಶಲಕ್ಕಿಂತಲೂ ನಿಯತ್ತಿನಿಂದ ಬದುಕುವ ಕೌಶಲ ದೊಡ್ಡದು. ಮಾತು ಬರೀ ಸಂವಹನ ಮಾಧ್ಯಮವಲ್ಲ, ಅದು ಸಂಸ್ಕೃತಿಯ ಜೀವಕೋಶ ಕೂಡ. ‘ಪೂರ್ಣ ಮನುಷ್ಯತ್ವ ಎಂದರೆ ನಡೆ-ನುಡಿ ಐಕ್ಯತೆ’ ಎಂದು ಹೆನ್ರಿ ಡೇವಿಡ್ ಥೋರೋ ಮಾರ್ಮಿಕವಾಗಿ ಹೇಳುತ್ತಾರೆ.

ಕೆಲವು ಸಾಹಿತಿಗಳು ತಾವು ಬರೆದಂತೆ ಬದುಕಿ ಮಾದರಿಯಾಗಿದ್ದಾರೆ. ಬರಹಕ್ಕಿಂತ ಬದುಕು ದೊಡ್ಡದು ಎಂದು ಶಿವರಾಮ ಕಾರಂತರು ಹೇಳಿದ್ದ ಮಾತು ಇಲ್ಲಿ ಮತ್ತೆ ಮತ್ತೆ ನೆನಪಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.