ಲಿಂಗಾಯತ: ಜಾಗೃತಿಯ ಹೋರಾಟ

7
ಈ ಹೋರಾಟಕ್ಕೆ ರಾಜಕೀಯವನ್ನು ತಳಕು ಹಾಕುವ ಅಗತ್ಯವಿಲ್ಲ. ಇದನ್ನು ರಾಜಕೀಯಗೊಳಿಸಿದರೆ ಶರಣರ ವಿಚಾರಗಳಿಗೇ ಅಪಚಾರವೆಸಗಿದಂತಾಗುತ್ತದೆ

ಲಿಂಗಾಯತ: ಜಾಗೃತಿಯ ಹೋರಾಟ

Published:
Updated:

ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ಮಾರ್ಗದರ್ಶನದಲ್ಲಿ ಶರಣರು ನಡೆಸಿದ ಅಪೂರ್ವ ಸಮಾಜೋ-ಧಾರ್ಮಿಕ ಆಂದೋಲನ ಅಂದಿನ ಜನಸಮುದಾಯದಲ್ಲಿ ಮೂಡಿಸಿದ ನವಜಾಗೃತಿ ಲೋಕವಿದಿತ. ಆ ಜಾಗೃತಿ ಪಟ್ಟಭದ್ರ ಹಿತಾಸಕ್ತಿಯ ಸಂಪ್ರದಾಯವಾದಿಗಳಲ್ಲಿ ನಡುಕ ಹುಟ್ಟಿಸಿದ್ದು, ಆ ಆಂದೋಲನವನ್ನು ಅಡಗಿಸಲು ನಡೆದ ಒಳಸಂಚು, ಆಂದೋಲನದ ಅಂತಃಶಕ್ತಿಯಾಗಿದ್ದ ವಚನ ಸಾಹಿತ್ಯವನ್ನು ನಾಶಪಡಿಸಲು ಮಾಡಿದ ಪ್ರಯತ್ನ, ಚಾಡಿ ಮಾತುಗಳಿಂದಾಗಿ ಅರಸನಿಂದ ಶರಣರು ಅನುಭವಿಸಿದ ಹಿಂಸೆ, ಜೊತೆಗೆ ನಡೆದ ದುರಂತ ಘಟನೆಗಳು, ಅಳಿದುಳಿದ ವಚನ ಸಾಹಿತ್ಯದ ಸಂರಕ್ಷಣೆಗಾಗಿ ಶರಣರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕಲ್ಯಾಣ ಬಿಟ್ಟು ಚದುರಿ ಹೋದದ್ದು, ಆನಂತರ ವೈದಿಕ ಹಿನ್ನೆಲೆಯ ಸಂಪ್ರದಾಯವಾದಿಗಳು
ತಲೆ ಎತ್ತಿ, ‘ಶರಣರು ಹೇಳಿದ ಲಿಂಗಾಯತ ಸಿದ್ಧಾಂತಗಳೆಲ್ಲ ಬಸವ ಪೂರ್ವದಲ್ಲೇ ಇದ್ದ ವೀರಶೈವ ಸಿದ್ಧಾಂತಗಳೇ ಆಗಿವೆ’ ಎಂದು ಸಾರತೊಡಗಿದ್ದು, ಮಠ ವ್ಯವಸ್ಥೆಯಲ್ಲಿ ಗುರು-ವಿರಕ್ತ ಭೇದ ಮೂಡಿಸಿದ್ದು, ವಚನ ಸಾಹಿತ್ಯವನ್ನು ಪ್ರಕ್ಷಿಪ್ತಗೊಳಿಸಿದ್ದು... ಇವೆಲ್ಲವನ್ನೂ ಇತಿಹಾಸ ದಾಖಲಿಸಿದೆ.

ಶರಣರು ಹುಟ್ಟು ಹಾಕಿದ ಪರ್ಯಾಯ ಸಂಸ್ಕೃತಿಯ ಲಿಂಗಾಯತ ಧರ್ಮವು ಎಲ್ಲ ಆಘಾತಗಳನ್ನು ಸಹಿಸಿಕೊಂಡೂ ಈಗಲೂ ಜೀವಂತವಾಗಿ ಉಳಿದುಕೊಂಡು ಬಂದಿದ್ದು, ಅದೀಗ ತನ್ನ ಸ್ವತಂತ್ರ ಅಸ್ತಿತ್ವಕ್ಕಾಗಿ ದನಿ ಎತ್ತಿರುವುದು ಸಮರ್ಥನೀಯವಾಗಿದೆ. ಲಿಂಗಾಯತರು ನಡೆಸಿರುವ ಹೋರಾಟ ವಸ್ತುಸ್ಥಿತಿಯ ಬಗೆಗೆ ಉಂಟಾಗಿರುವ ಜಾಗೃತಿಯಲ್ಲದೆ ಬೇರೆಯಲ್ಲ. ಈ ಜಾಗೃತಿಗೆ ಬಸವಾದಿ ಶರಣರ ಪ್ರಗತಿಪರ ವಿಚಾರಧಾರೆಯೇ ಮೂಲ ಆಧಾರ. ಶೈವ ಮತ್ತು ಆಗಮ ಸಿದ್ಧಾಂತಗಳನ್ನು ಅವಲಂಬಿಸಿರುವ ‘ವೀರಶೈವ’ವು ವೈಚಾರಿಕ ಒರೆಗಲ್ಲಿಗೆ ನಿಲ್ಲದಿರುವ ಕಾರಣದಿಂದಲೇ ‘ಲಿಂಗಾಯತ’ ಪ್ರತ್ಯೇಕ ಮತ್ತು ಸ್ವತಂತ್ರ ಧರ್ಮ ಎನ್ನುವುದು ಸ್ಪಷ್ಟವಾಗುತ್ತದೆ.

‘ಅತ್ಯಂತ ಪ್ರಾಚೀನ’ ಎನ್ನಲಾಗುತ್ತಿರುವ ವೀರಶೈವವೂ ಸೇರಿದಂತೆ, ಹಿಂದೂ ಧರ್ಮ ಮಾತ್ರವಲ್ಲ, ವಿಶ್ವದಯಾವುದೇ ಧರ್ಮಕ್ಕಿಂತ ಭಿನ್ನವಾದ ವೈಚಾರಿಕ ಧರ್ಮ ಲಿಂಗಾಯತ ಧರ್ಮ. ಯಾವುದೇ ಸಂಪ್ರದಾಯದ ಅಥವಾ ಸನಾತನ ಶಾಸ್ತ್ರಾಚರಣೆಗಳ ಕಟ್ಟುಪಾಡುಗಳಿಗೆ ಒಳಗಾಗದೆ, ಕೇವಲ ಮಾನವ ಘನತೆ ಮತ್ತು ಸಮಾನತೆಗಳನ್ನೇ ಮುಖ್ಯ ಸಿದ್ಧಾಂತವನ್ನಾಗಿಟ್ಟುಕೊಂಡಿರುವ ಸಾರ್ವಕಾಲಿಕ ಅನ್ವಯದ ಅನನ್ಯತೆ ಇರುವ ಕಾರಣದಿಂದ ಲಿಂಗಾಯತ ಸ್ವತಂತ್ರ ಧರ್ಮದ ಮನ್ನಣೆ ಪಡೆಯಲು ಅಗತ್ಯವಾದ ಎಲ್ಲ ಅರ್ಹತೆಗಳನ್ನೂ ಪಡೆದಿದೆ.

ಭಾರತದ ಸಂವಿಧಾನದಲ್ಲಿ ಹೇಳಿರುವ ಎಲ್ಲ ಮೂಲ ತತ್ತ್ವಗಳಿಗೂ ಅನ್ವಯವಾಗುವ ಲಿಂಗಾಯತ ಧರ್ಮವನ್ನು ಅರ್ಥಮಾಡಿಕೊಂಡು ಅನುಸರಿಸುವ ಎಲ್ಲರೂ ಲಿಂಗಾಯತರೇ. ಈ ಹಿನ್ನೆಲೆಯಲ್ಲಿ ‘ಶೈವ’ ಹೆಸರಿನೊಂದಿಗೆ ಅಂಟಿಕೊಂಡಿರುವ ವೀರಶೈವರು, ಇನ್ನಾದರೂ ಆ ಹಂಗು ತೊರೆದು ಮುಕ್ತ ಮನಸ್ಸಿನಿಂದ ‘ನಾವು ಲಿಂಗಾಯತರು’ ಎಂದು ಹೇಳಿಕೊಳ್ಳಬೇಕಾದ ಸಂದರ್ಭವಿದು.

ವೀರಶೈವ ಧರ್ಮ ಶೈವಧರ್ಮದ ಕವಲಾಗಿದ್ದು, ಅದುಹಿಂದಿನ ಶೈವ ಮತ್ತು ಆಗಮಗಳನ್ನು ಅಪ್ಪಿಕೊಂಡೇ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಇದಕ್ಕೆ ಕಾರಣ, ಕೆಲವು ಸ್ವಹಿತಾಸಕ್ತ ಪೀಠಾಚಾರ್ಯರ ಪ್ರಭಾವದಿಂದ ಪ್ರೇರಿತರಾಗಿ ಕೆಲವು ಪೀಠಭಕ್ತ ಪಂಡಿತರು ಲಿಂಗಾಯತ ಧರ್ಮದ ಪರ್ಯಾಯ ಸಂಸ್ಕೃತಿಯನ್ನು ಸಹಿಸಲಾಗದೆ ತಮ್ಮ ನಂಬಿಕೆಗೆ ಹೊಂದಿಕೊಳ್ಳುವಂತೆ ಶಾಸ್ತ್ರ ಪುರಾಣಗಳನ್ನು ಸೃಷ್ಟಿಸಿ, ‘ವೀರಶೈವವು ಪ್ರಾಚೀನ ಧರ್ಮ’ ಎಂದು ಪ್ರಚುರಗೊಳಿಸುವ ಕೆಲಸ 15ನೆಯ ಶತಮಾನದಿಂದ ಈಚೆಗೆ ನಡೆದದ್ದೆಂಬುದನ್ನು ಅನೇಕ ಆಧುನಿಕ ಅಧ್ಯಯನಕಾರರು ಮತ್ತು ಸಂಶೋಧಕರು ಸ್ಪಷ್ಟವಾಗಿ ತಿಳಿಸಿದ್ದಾರೆ.

ಇದು ವೈಚಾರಿಕ ಕಾಲಮಾನ; ವೈಜ್ಞಾನಿಕ ಕಾಲಮಾನ.ಇಂದಿನ ಯುವಜನಾಂಗ ಯಾವುದನ್ನೂ ಪ್ರಶ್ನಿಸದೆ, ತಮ್ಮ ಪ್ರಶ್ನೆಗಳಿಗೆ ಸಮರ್ಥ ಉತ್ತರ ದೊರಕದೆ ಒಪ್ಪಿಕೊಳ್ಳುವುದಿಲ್ಲ. ಹಾಗಾಗಿ, ಕರ್ಮಠತನದ ಬಂಧನಗಳಿಂದ ಮುಕ್ತವಾದ, ಸರ್ವ ಸಮಾನತೆಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಶರಣ ಸಿದ್ಧಾಂತ ಅವರಿಗೆ ಸಹಜವಾಗಿಯೇ ಒಪ್ಪಿಗೆಯಾಗುತ್ತದೆ. ಆಧುನಿಕ ವಿಚಾರವಾದಿಗಳೆಲ್ಲ ಯಾವುದೇ ಜಾತಿ-ಮತ, ಪಂಥ-ಪಂಗಡಗಳ ಭೇದವಿಲ್ಲದೆ ವಚನ ಸಾಹಿತ್ಯವನ್ನು ತೆರೆದ ಹೃದಯದಿಂದ ಒಪ್ಪಿಕೊಂಡಿರುವುದೇ ಇದಕ್ಕೆ ಸಾಕ್ಷಿ.

ಸಂಪ್ರದಾಯ- ಅಸಂಪ್ರದಾಯ, ಸನಾತನ- ವಿನೂತನ, ಪ್ರತಿಗಾಮಿ- ಪ್ರಗತಿಗಾಮಿ, ಅಂಧಶ್ರದ್ಧೆ-ವೈಚಾರಿಕ ಇತ್ಯಾದಿ ದ್ವಂದ್ವಗಳ ಮಧ್ಯೆ ಸಂಘರ್ಷ ಇದ್ದದ್ದೇ. ಆದರೆ ಧರ್ಮ ಮತ್ತು ಸಮಾಜಗಳನ್ನು ಪೂರ್ಣ ಮಾನವೀಯತೆಯ ಆಧಾರದ ಮೇಲೆ, ನೈತಿಕ ನೆಲಗಟ್ಟಿನ ಮೇಲೆ ನಿಲ್ಲಿಸಿದ ಬಸವಣ್ಣನವರ ವಿಚಾರಧಾರೆ ಅಂತಹ ಸಂಘರ್ಷಕ್ಕೆ ಒಳಗಾಗಬೇಕಾಗಿಲ್ಲ. ಆ ವಿಚಾರಧಾರೆಯಲ್ಲಿ ಅರಳಿದ ಶರಣ (ಲಿಂಗಾಯತ) ಧರ್ಮದ ಬಗೆಗೂ ಸಂಘರ್ಷದ ಅಗತ್ಯವಿಲ್ಲವೆಂದೇ ನಾನು ತಿಳಿದಿದ್ದೇನೆ. ಏಕೆಂದರೆ ಲೋಕದ ಜನ ಸಮುದಾಯವನ್ನು ಇಂದು ಕಾಡುತ್ತಿರುವ ಅನೇಕ ದ್ವಂದ್ವಗಳಿಗೆ ಲಿಂಗಾಯತ ಧರ್ಮ, ಸಿದ್ಧಾಂತ ಕಾರ್ಯಸಾಧ್ಯ ಉತ್ತರವಾಗುತ್ತವೆ.

ಈ ಭೂಮಿಕೆಯಲ್ಲಿ ಇಂದಿನ ಮತ್ತು ಮುಂದೆಂದಿನ ಕಾಲಮಾನಕ್ಕೆ ಸಮುಚಿತವಾಗಿ ಸಲ್ಲುವ ಲಿಂಗಾಯತ ಧರ್ಮಕ್ಕೆ ಸಂವಿಧಾನಾತ್ಮಕ ಮನ್ನಣೆ ದೊರಕಬೇಕು ಎಂದು ನಡೆಸುವ ಹೋರಾಟ ನ್ಯಾಯವಾಗೇ ಇದೆ. ಈ ಹೋರಾಟಕ್ಕೆ ರಾಜಕೀಯವನ್ನು ತಳಕು ಹಾಕುವ ಅಗತ್ಯವಿಲ್ಲ. ಇದನ್ನು ರಾಜಕೀಯಗೊಳಿಸಿದರೆ ಶರಣರ ವಿಚಾರಗಳಿಗೇ ಅಪಚಾರವೆಸಗಿದಂತಾಗುತ್ತದೆ.

ಯಾವುದೇ ದೇಶದಲ್ಲಿ ಅಲ್ಲಿನ ಸಂವಿಧಾನಕ್ಕೆ ಅಲ್ಲಿನ ಪ್ರತಿಯೊಬ್ಬ ಪ್ರಜೆಯೂ ಬದ್ಧವಾಗಿರಬೇಕು. ಭಾರತದ ಸಂವಿಧಾನವು ಪ್ರಜಾಪ್ರಭುತ್ವವನ್ನು ಅಂಗೀಕರಿಸಿರುವ ಸಂವಿಧಾನ. ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯಕ್ಕೆ
ಮನ್ನಣೆ. ಅದರಂತೆ ಈಗ ನಡೆಯುತ್ತಿರುವ ಲಿಂಗಾಯತರ ಹೋರಾಟವೂ ಜನಾಭಿಪ್ರಾಯದ್ದೇ ಆಗಿದೆ ಮತ್ತು ಪ್ರಜಾಸತ್ತಾತ್ಮಕವಾಗಿದೆ.

ಇದುವರೆಗೆ ಆದುದು ಆಯಿತು. ಈಗ ಜನ ಜಾಗೃತವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತ ಹೋರಾಟಕ್ಕೆ ಸಮಸ್ತರೂ ಬೆಂಬಲ ನೀಡಬೇಕು. ಈ ಹೋರಾಟ ಕೇವಲ ಅಂಗದ ಮೇಲೆ ಲಿಂಗವಿದ್ದವರಿಗಾಗಿ ಎಂದಲ್ಲ. ಶರಣ ಸಿದ್ಧಾಂತದಂತೆ ಶ್ರಮದ ದುಡಿಮೆ, ಸಮಾನ ಹಂಚಿಕೆ, ಅಂತರಂಗದ ಚಿಂತನೆ (ಕಾಯಕ-ದಾಸೋಹ-ಅನುಭವ) ಈ ವಿಚಾರಧಾರೆಯನ್ನು ಒಪ್ಪಿ ಅನುಸರಿಸುತ್ತಿರುವ ಸಕಲ ದೀನ-ದಲಿತರ ಪರವಾದ ಹೋರಾಟವೂ ಹೌದು.

ನಮ್ಮ ಪ್ರಜಾಪ್ರಭುತ್ವ ನ್ಯಾಯಬದ್ಧವಾದ ಈ ಜನದನಿಗೆ ಮನ್ನಣೆ ನೀಡುವುದೆಂಬ ವಿಶ್ವಾಸ ನನಗಿದೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 1

  Frustrated
 • 5

  Angry

Comments:

0 comments

Write the first review for this !