ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ: ಇವೆ ಹತ್ತಾರು ಪ್ರಶ್ನೆ

Last Updated 10 ಏಪ್ರಿಲ್ 2019, 18:30 IST
ಅಕ್ಷರ ಗಾತ್ರ

ಮತ್ತೆ ಚುನಾವಣೆ ಬಂದಿದೆ. ಅದರಲ್ಲೇನೂ ವಿಶೇಷವಿಲ್ಲ. ಆದರೆ, 1951ರಿಂದ ಇಲ್ಲಿಯವರೆಗೂ ಚುನಾವಣಾ ಕ್ರಮ ಸಾಕಷ್ಟು ಸುಧಾರಿಸಿದೆ. ಪ್ರತಿ ಬಾರಿಯೂ ಚುನಾವಣೆ ಏನಾದರೊಂದು ಹೊಸತನವನ್ನು ಹೊತ್ತುಕೊಂಡೇ ಬಂದಿರುತ್ತದೆ. ಆದರೆ, ಅವುಗಳ ಮಧ್ಯೆ ಹತ್ತಾರು ಪ್ರಶ್ನೆಗಳು ಉತ್ತರಕ್ಕಾಗಿ ಕಾಯುತ್ತಿವೆ! ಯಾಕೋ ಚುನಾವಣಾ ಆಯೋಗ ಅತ್ತ ಗಂಭೀರವಾಗಿ ನೋಡಿಯೇ ಇಲ್ಲವೇನೋ.

ಹಲವು ವರ್ಷಗಳಿಂದ ಮತದಾನ ಮಾಡಿಸುವ ಸಿಬ್ಬಂದಿಯಾಗಿ ಕೆಲಸ ಮಾಡಿದ್ದರಿಂದ, ನಿಜಕ್ಕೂ ಕೆಲವು ವಿಚಾರಗಳು ಮತಾಂಗಣದಲ್ಲಿ ಎಷ್ಟೊಂದು ಸವಾಲಿನವು ಎಂಬುದು ಅರಿವಾಗುತ್ತದೆ. ಇತ್ತೀಚೆಗೆ ಕೆಲವು ಮತದಾರರನ್ನು ಗುರುತಿಸುವುದೇ ಕಷ್ಟವಾಗುತ್ತಿದೆ. ಮತದಾರನಿಗೆ ನೀಡಿದ ಗುರುತಿನ ಚೀಟಿ ಯಾವ ಕಾಲದ್ದೋ ಆಗಿರುತ್ತದೆ. ಅವನು ಹದಿನೆಂಟನೇ ವಯಸ್ಸಿನಲ್ಲಿ ಪಡೆದುಕೊಂಡ ಮತದಾರರ ಗುರುತಿನ ಚೀಟಿಯನ್ನು ಮೂವತ್ತನೇ ವಯಸ್ಸಿನಲ್ಲಿ ಮತದಾನ ಮಾಡಲು ತಂದಿರುತ್ತಾನೆ. ಆ ಕಪ್ಪು ಬಿಳುಪು ಬಣ್ಣ, ಅವಸರದಲ್ಲಿ ತೆಗೆದ ಚಿತ್ರ ಮತ್ತು ಮೂವತ್ತನೇ ವಯಸ್ಸಿಗೆ ಅಷ್ಟೋ ಇಷ್ಟೋ ಬದಲಾದ ಮುಖವನ್ನು ಗುರುತಿಸುವುದು ನಿಜಕ್ಕೂ ಸವಾಲು.

ಏಜೆಂಟರ ಸಹಾಯ ಪಡೆಯಿರಿ ಅನ್ನುತ್ತದೆ ಆಯೋಗ. ಒಬ್ಬ ಏಜೆಂಟ್ ‘ಅವನೇ ಇವನು’ ಅಂದರೆ, ಮತ್ತೊಬ್ಬ ‘ಅವನಲ್ಲ ಇವನು’ ಅನ್ನುತ್ತಾನೆ. ಅದನ್ನು ಸಾಬೀತುಪಡಿಸಲು ನಿಯಮಗಳೇನೋ ಇವೆ. ಆದರೆ, ಅವನ್ನು ಎಷ್ಟು ಜನಕ್ಕೆ ಎಂದು ಅನುಸರಿಸುತ್ತಾ ಕೂರುವುದು? ಅದರ ನಡುವೆ ಕಳ್ಳ ಮತದಾರನೊಬ್ಬ ಯಾರದೋ ಹೆಸರಿನಲ್ಲಿರುವ ವೋಟನ್ನು ಹೀಗೆ ಕಣ್ತಪ್ಪಿಸಿ ಬಂದು ಹಾಕಿ ಹೋಗಿರುತ್ತಾನೆ. (ಹಳೆ ಫೋಟೊ,ಅಧಿಕಾರಿಗೆ ಮತದಾರನ ಪರಿಚಯ ಇಲ್ಲದಿರುವುದು, ಏಜೆಂಟರ ಮೌನ, 20 ನಮೂನೆಯ ಗುರುತಿನ ಚೀಟಿಗಳು ಅದನ್ನು ಸುಲಭಗೊಳಿಸುತ್ತವೆ). ಮೂಲ ಮತದಾರಬಂದಾಗ ಅವನಿಗೆ ಟೆಂಡರ್ ವೋಟಿನ ಅವಕಾಶವಿದೆ. ಆದರೆ ಆತ ಟೆಂಡರ್ ವೋಟು ಮಾಡಲು ಒಪ್ಪದಿದ್ದರೆ ಮತಗಟ್ಟೆ ಅಧಿಕಾರಿಗೆ ಪೀಕಲಾಟ.

1993ರಲ್ಲಿ ಶುರುವಾದ ಮತದಾರರ ಗುರುತಿನ ಚೀಟಿಗೆ ಇಂದಿಗೂ ಅಂತಹ ದೊಡ್ಡ ಕಾಯಕಲ್ಪ ಸಿಕ್ಕಿಲ್ಲ ಅನಿಸುತ್ತದೆ. ಕಾಲಕಾಲಕ್ಕೆ ಅಪ್‌ಡೇಟ್‌ ಮಾಡುವ, ಅದಕ್ಕೆ ಆಧಾರ್‌ ಜೋಡಿಸಿ ಅದರ ಮೂಲಕವೇ ಮತದಾರರನ್ನು ಗುರುತಿಸುವ ಕಾರ್ಯವಾಗಬೇಕು. ಎರಡು–ಮೂರು ಕಡೆ ಮತಪಟ್ಟಿಯಲ್ಲಿ ಹೆಸರು, ಎರಡು–ಮೂರು ಕಾರ್ಡ್ ಇರುವವರು ಇರುವಾಗ ಸ್ವಚ್ಛ ಚುನಾವಣೆಯ ನಿರೀಕ್ಷೆಯಾದರೂ ಹೇಗೆ?

ಕುಡಿದು ವಾಹನ ಚಲಾಯಿಸಿದರೆ ಅವರ ಮೇಲೆ ಕೇಸು ದಾಖಲಾಗುತ್ತದೆ. ಆದರೆ ನಮ್ಮನ್ನು ಆಳುವವರನ್ನು ಆಯ್ಕೆ ಮಾಡುವಾಗ ಈ ತರಹದ ಒಂದು ನಿಯಮ ಏಕಿಲ್ಲ? ಒಂದು ಬೂತ್ ಮಟ್ಟದಲ್ಲಿ ಕನಿಷ್ಠವೆಂದರೆ ಹತ್ತಾರು ಮಂದಿ ಕುಡಿದು ಮತ ಚಲಾಯಿಸಲು ಬರುತ್ತಾರೆ (ನಿಷೇಧಾಜ್ಞೆ ಇದ್ದರೂ ಅವರಿಗೆ ಅದ್ಹೇಗೆ ಸಿಗುತ್ತದೋ?) ಅಂತಹವರಿಗೂ ಮತ ಚಲಾವಣೆಯ ಅವಕಾಶ ನಿರಾಕರಿಸುವಂತಿಲ್ಲ. ಕುಡಿದವನ ಮನಃಸ್ಥಿತಿ ಹೇಗಿರುತ್ತದೆ? ಅವನ ಆಯ್ಕೆಯಲ್ಲಿನ ಗುಣಮಟ್ಟದ ಖಾತರಿಯೇನು? ಕುಡಿದ ಮತ್ತಿನಲ್ಲೂ ಜನಪ್ರತಿನಿಧಿಯನ್ನು ಆಯ್ಕೆ ಮಾಡುವಂತಹ ಅವಕಾಶವಿರುವುದು ಮಾತ್ರ ಬೇಸರದ ಸಂಗತಿ.

ತೀರಾ ದುರ್ಬಲರಾದ ಮತದಾರರಿಗೆ ಸಹಾಯಕರನ್ನು ನೇಮಿಸಿಕೊಳ್ಳಲು ಅವಕಾಶವಿದೆ. ಅದಕ್ಕೆ ಸ್ಪಷ್ಟ ಮಾನದಂಡಗಳಿವೆ. ಆದರೆ, ಇಲ್ಲಿ ಪ್ರಶ್ನೆ ಇರುವುದು ಗೋಪ್ಯತೆ ಮತ್ತು ಅದರ ದುರ್ಬಳಕೆಯದು. ವೋಟು ಮಾಡುವ ಕಂಪಾರ್ಟ್‌ಮೆಂಟ್‌ನಲ್ಲಿ ಆ ಇಬ್ಬರೂ ಇರುತ್ತಾರೆ. ಸಹಾಯಕರೇ ವೋಟು ಮಾಡಿದರೂ ಮತಗಟ್ಟೆ ಅಧಿಕಾರಿಗೆ ಅದು ಕಾಣಿಸುವುದಿಲ್ಲ. ಚೆನ್ನಾಗಿ ಇರುವವರನ್ನು ದುರ್ಬಲರೆಂದು ಕರೆತಂದು ಅದರ ಲಾಭ ಪಡೆಯುವ ಚಾಲಾಕಿಗಳೂ ನಮ್ಮಲ್ಲಿದ್ದಾರೆ. ಮತಗಟ್ಟೆ ಅಧಿಕಾರಿಯು ಅವನು ದುರ್ಬಲನೋ ಸಬಲನೋ ಎಂದು ಪೂರ್ಣ ಖಾತರಿಪಡಿಸಿಕೊಳ್ಳಲು ಸಾಧ್ಯವಾಗುವುದೇ? ಈ ವಿಚಾರವನ್ನು ಆಯೋಗ ಯಾಕೆ ತುಂಬಾ ಗಂಭೀರವಾಗಿ ಯೋಚಿಸಿಲ್ಲ?

ಪ್ರಾಕ್ಸಿ ವೋಟ್ (ಬದಲಿ ಮತದಾನ) ಎಂಬುದು ಒಂದಿದೆ ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ಸೈನಿಕರ ಪರವಾಗಿ ಅವರ ಕುಟುಂಬಸ್ಥರು ಮತ ಚಲಾಯಿಸಬಹುದು. ಆದರೆ ಸೈನಿಕ ಹೇಳಿದವರಿಗೇ ಕುಟುಂಬದವರು ಆತನ ಪರವಾಗಿ ವೋಟು ಮಾಡಿದ್ದಾರೆ ಎಂಬುದಕ್ಕೆ ಗ್ಯಾರಂಟಿ ಏನು? ಅಷ್ಟಕ್ಕೂ ಮತದಾನದ ಗೋಪ್ಯತೆಯು ಯಾರೊಂದಿಗೂ ಹಂಚಿಕೊಳ್ಳಬಾರದಂತಹದ್ದು! ಕಾಲ ಇಷ್ಟೊಂದು ಮುಂದುವರಿದ ಈ ಹೊತ್ತಿನಲ್ಲಿ, ಸೈನಿಕರಿಗೆ ಆನ್‌ಲೈನ್‌ ವೋಟಿಂಗ್ ಅಥವಾ ಇನ್ಯಾವುದಾದರೂ ರೂಪದಲ್ಲಿ ಮತದಾನಕ್ಕೆ ಸಂಪೂರ್ಣ ಅವಕಾಶ ಕೊಡಬಾರದೇಕೆ? ಹೀಗೆ ಲೋಪಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಬ್ಯಾನರ್ ಕಟ್ಟುವಂತಿಲ್ಲ, ಪೋಸ್ಟರ್ ಅಂಟಿಸುವಂತಿಲ್ಲ, ಧ್ವನಿವರ್ಧಕಕ್ಕೆ ಮಿತಿ, ಅಭ್ಯರ್ಥಿಗಳ ಪ್ರತಿ ಮಾತಿನ ಮೇಲೆ ನಿಗಾ, ಅವರ ಖರ್ಚು-ವೆಚ್ಚದ ಮೇಲೆ ಕಣ್ಣು, ಮತದಾನ ಯಂತ್ರ, ವಿವಿಪ್ಯಾಟ್ ಹೀಗೆ ಸಾಕಷ್ಟು ಆರೋಗ್ಯಯುತ ಬದಲಾವಣೆ ತಂದಿರುವ ಆಯೋಗದ ಕ್ರಮ ಸ್ವಾಗತಾರ್ಹ. ಆದರೆ, ಇದರ ನಡುವೆಯೂ ಇರುವಕೆಲವು ಲೋಪಗಳ ಬಗ್ಗೆ ಆಯೋಗ ಗಂಭೀರವಾಗಿ ಚಿಂತಿಸಬೇಕಾಗಿದೆ. ಪ್ರತಿ ಮತವೂ ಅಮೂಲ್ಯ, ಪವಿತ್ರ. ಅದನ್ನು ಹಾಗೆಯೇ ಉಳಿಸಿಕೊಳ್ಳಬೇಕಿದೆ.

ಲೇಖಕ: ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ದೊಡ್ಡಬೊಮ್ಮನಹಳ್ಳಿ, ಚಿಂತಾಮಣಿ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT