ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಟಲಲ್ಲಿ ಋಣದ ಕಡುಬು?

ಚುನಾವಣಾ ಉಮೇದಿನಲ್ಲಿರುವ ನೇತಾರರು ಜನರಿಗೆ ಅಮಲಿನ ಗುಳಿಗೆ ನುಂಗಿಸಿ, ಅವರು ನೆಲದ ಸಮಸ್ಯೆಗಳನ್ನು ಮರೆಯುವಂತೆ ಮಾಡಿದ್ದಾರೆ!
Last Updated 21 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ರಾಜ್ಯದ ದಕ್ಷಿಣ ಭಾಗದ 14 ಕ್ಷೇತ್ರಗಳಲ್ಲಿ ಮತದಾನ ಮುಗಿದಿದೆ. ಚುನಾವಣೆಯ ಎಲ್ಲ ಕಾವು ಉತ್ತರ ಕರ್ನಾಟಕದಲ್ಲಿ ತಾರಕಕ್ಕೇರಿದೆ. ಟಿ.ವಿ. ವಾಹಿನಿಯೊಂದು ಹುಬ್ಬಳ್ಳಿಯ ಬಸ್ ನಿಲ್ದಾಣದಲ್ಲಿ ಇತ್ತೀಚೆಗೆ ಜನರ ಒಲವು ನಿಲುವು ಅರಿಯಲು ‘ನೀವು ಯಾರಿಗೆ ವೋಟ್ ಹಾಕ್ತೀರಿ, ಮೋದಿಗೋ ರಾಹುಲ್‌ ಗಾಂಧಿಗೋ’ ಎಂದು ಕೇಳುತ್ತಿತ್ತು. ಮಂದಿ ತಮಗೆ ಅನ್ನಿಸಿದ್ದನ್ನು ಹೇಳುತ್ತಿದ್ದರು. ಒಬ್ಬ ವಯೋವೃದ್ಧ ರೈತ ತಲೆ ಕೆರೆದುಕೊಳ್ಳುತ್ತ, ‘ಗುಳಿಗಿ ತಗೊಂಡಿನಿ ಬಿಡ್ರಿ, ಏನೂ ತಿಳಿಯಂಗಿಲ್ಲ’ ಎಂದು ಉತ್ತರಿಸಿದ.

ಅಜ್ಜನ ಮಾತು ತಕ್ಷಣಕ್ಕೆ ತಮಾಷೆ ಅನ್ನಿಸಿದರೂ ಒಂದು ರೂಪಕದಂತೆ ತೋರುತ್ತದೆ. ಏಕೆಂದರೆ ಇಂದು ಯಾವ ಪಕ್ಷದ ಯಾವ ನೇತಾರರೂ ನೆಲದ ವಾಸ್ತವ ಸಮಸ್ಯೆಗಳ ಕುರಿತು ಮಾತನಾಡುತ್ತಿಲ್ಲ. ಅವರು ಜನರಿಗೆ, ಅದರಲ್ಲೂ ಯುವಜನರಿಗೆ ಧರ್ಮ, ಜಾತಿ, ರಾಷ್ಟ್ರೀಯತೆ, ಪಾಕಿಸ್ತಾನ ಮುಂತಾದ ಅಮಲಿನ ಗುಳಿಗೆಗಳನ್ನು ನೀಡಿದ್ದಾರೆ. ಆ ಅಮಲಿನಲ್ಲಿಯೇ ಅವರು ಮೈಮರೆಯುವಂತೆ ಮಾಡಿ, ಜನರ ಸಾಮಾಜಿಕ ಬದುಕಿನ ನೈಜ ಸಮಸ್ಯೆಗಳ ಕುರಿತು ದನಿ ಯೆತ್ತದಂತೆ ಮಾಡಲಾಗಿದೆ. ರಾಜ್ಯದ ಬಹುತೇಕ ಭಾಗ ಗಳಲ್ಲಿ ಭೀಕರ ಬರ ಆವರಿಸಿದೆ. ಕುಡಿಯಲು ನೀರಿಲ್ಲ. ಜಾನುವಾರುಗಳಿಗೆ ಮೇವಿಲ್ಲ. ಬೆಳೆದ ಅಲ್ಪ ಬೆಳೆಗಳಿಗೂ ಬೆಲೆಯಿಲ್ಲ. ವಿಪರ್ಯಾಸವೆಂದರೆ, ಇವ್ಯಾವುವೂ ಚುನಾವಣಾ ವಿಷಯಗಳಾಗಿಲ್ಲ.

ಪ್ರತಿದಿನ ಬೆಳ್ಳಂಬೆಳಿಗ್ಗೆ ಇದೇ ಹುಬ್ಬಳ್ಳಿ– ಧಾರವಾಡದ ಮುಖ್ಯ ವೃತ್ತಗಳಿಗೆ ಬಂದು ನೋಡಿದರೆ, ಹಿಂಡು ಹಿಂಡಾಗಿ ಸುತ್ತಮುತ್ತಲ ಹಳ್ಳಿಯ ರೈತರು, ಕೂಲಿ ಕಾರ್ಮಿಕರು ಒಂದು ಕೈಯಲ್ಲಿ ಬುತ್ತಿ, ಇನ್ನೊಂದು ಕೈಯಲ್ಲಿ ಗುದ್ದಲಿ, ಸಲಿಕೆ ಹಿಡಿದು ಕಾಯುತ್ತಿರುತ್ತಾರೆ. ಮೇಸ್ತ್ರಿಯೋ, ಕಂಟ್ರಾಕ್ಟರೋ ಬಂದು ಅವರೊಡನೆ ಚೌಕಾಶಿ ಮಾಡಿ ಕೂಲಿ ಕೆಲಸಕ್ಕೆ ಕರೆದೊಯ್ಯುತ್ತಾರೆ. ಕೂಲಿ ಸಿಗದ ದಿನ, ಅದೇ ಬುತ್ತಿ ಊಟ ಮಾಡಿ ಮನೆಯ ದಾರಿ ಹಿಡಿಯುತ್ತಾರೆ. ಇವರೆಲ್ಲ ತಮ್ಮೂರಿಗೆ ಮಹದಾಯಿ ನದಿ ನೀರು ತರಲು ಹೋರಾಟ ಮಾಡಿದವರು. ರಾಜಕೀಯ ನೇತಾರರ ಇಚ್ಛಾಶಕ್ತಿಯಿಂದ ನೀರು ಬಂದಿದ್ದರೆ, ತಮ್ಮ ಹೊಲದಲ್ಲೇ ಬೆಳೆ ಬೆಳೆದು ಸ್ವಾಭಿಮಾನದ ಬದುಕು ಕಾಣುತ್ತಿದ್ದರೇ ವಿನಾ ಹೀಗೆ ದೈನೇಸಿಯಾಗಿ ನಗರಗಳ ರಸ್ತೆಯಲ್ಲಿ ನರಳುತ್ತಿರಲಿಲ್ಲ.

ಆಶ್ಚರ್ಯವೆಂದರೆ, ವರ್ಷದ ಹಿಂದಷ್ಟೇ ಹಾಟ್‌ಕೇಕ್ ಆಗಿದ್ದ ಮಹದಾಯಿ ವಿವಾದವನ್ನು ಕಾಂಗ್ರೆಸ್, ಬಿಜೆಪಿ ಸಹಿತ ಯಾವ ಪಕ್ಷವೂ ತಮ್ಮ ಚುನಾವಣಾ ರ‍್ಯಾಲಿಗಳಲ್ಲಿ ಪ್ರಸ್ತಾಪಿಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಬಹಳ ಹೆಮ್ಮೆಯಿಂದ ಘೋಷಿಸಿದ ನೋಟು ರದ್ದತಿ, ಜಿಎಸ್‌ಟಿ, ರಫೇಲ್ ಯುದ್ಧ ವಿಮಾನ ಖರೀದಿ, ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾಗಳ ಬಗ್ಗೆ ಎಲ್ಲಿಯೂ ಅಪ್ಪಿತಪ್ಪಿಯೂ ಪ್ರಸ್ತಾಪಿಸುತ್ತಿಲ್ಲ. ಏಕೆಂದರೆ ಅವೆಲ್ಲ ವಿಫಲ ಯೋಜನೆಗಳಾಗಿವೆಯೆಂದು ಅವರಿಗೆ ಚೆನ್ನಾಗಿ ತಿಳಿದಿದೆ. ಫಸಲ್ ಬಿಮಾ ಯೋಜನೆಯಲ್ಲಿ ವಿಮಾ ಕಂಪನಿಗಳ ತಿಜೋರಿ ತುಂಬಿದೆ. ನಿರುದ್ಯೋಗದ ಪ್ರಮಾಣ ಕಳೆದ 45 ವರ್ಷಗಳಲ್ಲೇ ಅಧಿಕವಾಗಿದೆ.

ಹಗ್ಗ ಕೊಟ್ಟು ಕೈ ಕಟ್ಟಿಸಿಕೊಳ್ಳುವುದು ಬೇಡವೆಂದು, ‘ಭಯೋತ್ಪಾದನೆಯ ಎದೆಗೆ ಒದ್ದು ಉತ್ತರ’ ಎಂದು ಮುಖಪುಟದಲ್ಲಿ ಜಾಹೀರಾತು ಕೊಟ್ಟು ಬಾಲಾಕೋಟ್ ದಾಳಿಯ ಶ್ರೇಯವನ್ನು ಪದಕದಂತೆ ಎದೆಗೆ ಹೊರಲು ನೋಡುತ್ತಿದ್ದಾರೆ. ಪುಲ್ವಾಮಾ ನರಮೇಧದ ಭದ್ರತಾ ವೈಫಲ್ಯಕ್ಕೆ ಜಾಣ ಕುರುಡುತನ ತೋರಿದ್ದಾರೆ. ‘ಪಾಕಿಸ್ತಾನಕ್ಕೆ ದಿಟ್ಟ ಉತ್ತರ ಕೊಟ್ಟವನು ಚೌಕೀದಾರ ಮಾತ್ರ’ ಎಂದು ಪ್ರತೀ ಚುನಾವಣಾ ಭಾಷಣದಲ್ಲಿ ಘೋಷಿಸಿಕೊಳ್ಳುತ್ತಿದ್ದಾರೆ. ಆದರೆ ವ್ಯಂಗ್ಯವೆಂದರೆ, ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್, ಮೋದಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಒಳ್ಳೆಯದು ಎಂದಿರುವುದು; ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್ ‘ಬಾಲಾಕೋಟ್‌ನಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ’ ಎಂದು ಸ್ಪಷ್ಟಪಡಿಸಿರುವುದು ಮೋದಿಯವರ ಮಾತಿನ ಮೊನಚನ್ನು ಮೊಂಡಾಗಿಸಿದೆ.

ಇನ್ನು ಕರ್ನಾಟಕದಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್– ಜೆಡಿಎಸ್ ಮಿತ್ರ ಪಕ್ಷಗಳಲ್ಲಿ ನಿಜವಾದ ಕಾಳಜಿಯಿದೆಯೇ ಎಂದು ಹುಡುಕಿದರೆ ನಿರಾಸೆಯಾಗುತ್ತದೆ. ಬಹಳ ಉಮೇದಿನಿಂದ ಘೋಷಿಸಿದ ರೈತರ ಸಾಲ ಮನ್ನಾದ ಅನುಷ್ಠಾನವಿನ್ನೂ ಆಗಿಲ್ಲ. ಚುನಾವಣಾ ನೀತಿ ಸಂಹಿತೆಯ ನೆಪವೊಡ್ಡಿ ಅದನ್ನು ಮುಂದಕ್ಕೆ ಹಾಕಲಾಗುತ್ತಿದೆ. ಪ್ರಧಾನಮಂತ್ರಿ ರೈತ ಸಮ್ಮಾನ ಯೋಜನೆಗೆ ನೀತಿ ಸಂಹಿತೆಯ ತೊಂದರೆಯಿಲ್ಲವೆಂದರೆ ಸಾಲ ಮನ್ನಾಕ್ಕೇನು ಅಡ್ಡಿ?

ಪ್ರಧಾನಿ ಇತ್ತೀಚೆಗೆ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಭಾಷಣ ಮಾಡಿದರು. ಈ ಜಿಲ್ಲೆಗಳ ಪ್ರಮುಖ ಬೆಳೆ ಕಬ್ಬು. ಕಬ್ಬು ಬೆಳೆಗಾರರು ಕಾರ್ಖಾನೆಗಳಿಗೆ ಕಬ್ಬು ಕಳುಹಿಸಿ ತಿಂಗಳುಗಳೇ ಕಳೆದರೂ ಬಿಲ್ ಪಾವತಿಯಾಗಿಲ್ಲ. ದರವೂ ನಿಗದಿಯಾಗಿಲ್ಲ. ಒಂದೊಂದು ಕಾರ್ಖಾನೆ ಒಂದೊಂದು ರೀತಿ ದರ ಕೊಡುತ್ತಿದೆ. ಕಾರ್ಖಾನೆಗಳ ಮಾಲೀಕರು ಎರಡೂ ಪಕ್ಷಗಳಲ್ಲಿದ್ದಾರೆ. ಮುರುಗೇಶ ನಿರಾಣಿ, ಶಾಮನೂರು ಶಿವಶಂಕರಪ್ಪ, ಜಾರಕಿಹೊಳಿ ಸಹೋದರರು, ಕತ್ತಿ ಸಹೋದರರು ಸಕ್ಕರೆ ಸಾಮ್ರಾಜ್ಯವನ್ನು ಆಳುತ್ತಿದ್ದಾರೆ. ಪ್ರಧಾನಿಗೆ ಇದು ಸಮಸ್ಯೆಯೇ ಅಲ್ಲ. ದನಿಯೆತ್ತಬೇಕಾದ ರೈತ ಮುಖಂಡರ ಗಂಟಲಲ್ಲಿ ಯಾರ ಋಣದ ಕಡುಬಿದೆಯೋ ಗೊತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT