ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹಳಷ್ಟು ಸಾಧಿಸಿದ್ದೇವೆ: ಆದರೆ...?

ನಮ್ಮ ಇಷ್ಟು ವರ್ಷದ ಸಾಧನೆಗಳು ನಮಗೆ ಖುಷಿ ಕೊಡುತ್ತಿವೆಯೇ ಎಂಬ ಬಗ್ಗೆ ಆತ್ಮಾವಲೋಕನ ಅಗತ್ಯ
Last Updated 15 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ನಾವು ‘ನಾವಷ್ಟೇ’ ಆಗಿ ಏಳು ದಶಕಗಳು ಕಳೆದು ಹೋದವು. 73ನೇ ಸ್ವಾತಂತ್ರ್ಯೋತ್ಸವವನ್ನು ಗುರುವಾರ ಆಚರಿಸಿದ್ದೇವೆ. ಇನ್ನೆರಡು ವರ್ಷ ಕಳೆದರೆ 75. ಸರ್ಕಾರಗಳು ಅಲ್ಲಿಂದ ನವಭಾರತ ಎಂದು ವ್ಯಾಖ್ಯಾನಿಸುತ್ತವೆ. ನಾವು ಕೂಡ ಭರಪೂರ ಆಚರಣೆಯಲ್ಲಿ ತೊಡಗುತ್ತೇವೆ. ಹೌದು, ಇಷ್ಟು ವರ್ಷಗಳಲ್ಲಿ ಎಷ್ಟೆಲ್ಲಾ ಸಾಧಿಸಿಬಿಟ್ಟೆವಲ್ಲ ಅನಿಸುತ್ತದೆ. ಊಟವೇ ಇಲ್ಲದ ಆ ದಿನಗಳೆಲ್ಲಿ? ಬಹುಪಾಲು ಮಂದಿಯ ಹೊಟ್ಟೆ ತುಂಬುವ ಈ ದಿನಗಳೆಲ್ಲಿ? ಖಾಲಿ ಆಕಾಶವನ್ನು ನೋಡುತ್ತಿದ್ದ ನಾವು ಮಂಗಳನಲ್ಲಿಗೆ, ಚಂದ್ರನಲ್ಲಿಗೆ ಹೋಗುವುದು ಎಂದರೇನು? ಆರ್ಥಿಕವಾಗಿ ಜಗತ್ತಿನ ಪ್ರಮುಖ ದೇಶಗಳ ಸಾಲಿನಲ್ಲಿ ನಿಲ್ಲುವುದು ಎಂದರೇನು? ಜಿಡಿಪಿ ಏರುವುದು ಎಂದರೇನು? ಎಷ್ಟೊಂದು ಸಾಧಿಸಿ ಬಿಟ್ಟೆವಲ್ಲ!

ಮಂಗಳಗ್ರಹ ಮುಟ್ಟಿದ ಯಶೋಗಾಥೆಯ ಕೆಳಗೆ, ಮೃತ ಪತ್ನಿಯ ಹೆಣ ಹೊತ್ತುಕೊಂಡು ಬೀದಿಯಲ್ಲಿ ಹತ್ತಾರು ಕಿಲೊಮೀಟರ್ ನಡೆದು ಮನೆ ಸೇರಿದ ಕೆಳಜಾತಿಯವರ ಘಟನೆ ಇರುತ್ತದೆ. ಜಿಡಿಪಿ ಏರಿದ ಪತ್ರಿಕಾ ವರದಿಯ ಮಗ್ಗುಲಲ್ಲೇ, ನ್ಯಾಯ ಕೇಳಲು ನಾಯಕಿ
ಯೊಬ್ಬಳು ಕೂತಿದ್ದ ಜಾಗವನ್ನು ಜಾತಿಯ ಹೆಸರಿನಲ್ಲಿ ಸ್ವಚ್ಛ ಮಾಡಿದ ಸುದ್ದಿ ಪ್ರಕಟವಾಗುತ್ತದೆ. ಮರ್ಯಾದೆಗೇಡು ಹತ್ಯೆಗಳು ಪತ್ರಿಕೆಯ ಮುಖಪುಟ ಸೇರುತ್ತವೆ.

ಹಳದಿ ಬಸ್ಸಿನಲ್ಲಿ ಠಾಕುಠೀಕಾಗಿ ಬ್ಯಾಗ್ ಏರಿಸಿಕೊಂಡು ಹೋಗುವ ತನ್ನದೇ ವಯಸ್ಸಿನ ಮಗುವನ್ನು ಸರ್ಕಾರಿ ಶಾಲೆಯ ಹುಡುಗನೊಬ್ಬ ಅಚ್ಚರಿಯಿಂದ ನೋಡುತ್ತಾನೆ. ಅವನೊಂದಿಗೆ ಸ್ಪರ್ಧೆ ಈತನಿಗೆ ಕೊನೆತನಕ ಸಾಧ್ಯವಾಗುವುದೇ ಇಲ್ಲ. ಧೂಮಪಾನ ತಪ್ಪು ಎಂದು ಹೇಳುವವರೇ ಆಚೆ ಬಂದು ಜನರ ಮಧ್ಯೆ ಸೇದಿ ಸೇದಿ ಹೊಗೆ ಬಿಡುತ್ತಾರೆ. ಕಾನೂನು, ಹಾಳೆಯಲ್ಲಿ ಸುಮ್ಮನೆ ನಗುತ್ತದೆ. ಸರ್ಕಾರವೊಂದು ಸಾಮಾನ್ಯನೊಬ್ಬನಿಗೆ ಬಿಡುಗಡೆ ಮಾಡುವ ಯೋಜನೆಯ ಪ್ರತಿಫಲ, ಅವನಲ್ಲಿಗೆ ಬರುವ ಹೊತ್ತಿಗೆ ಅರ್ಧ ಸವಕಲಾ
ಗುತ್ತದೆ. ಸಾವಿರ ರೂಪಾಯಿಯು ಇನ್ನೂರು ಮುನ್ನೂರಕ್ಕೆ ಇಳಿಯಬಹುದು.

ಹೆಣ್ಣುಮಕ್ಕಳ ಪಾಲಿಗೆ ಅಂಟಿದ ಶಾಪವಂತೂ ಇನ್ನೂ ಪೂರ್ಣ ವಿಮೋಚನೆಯಾದಂತಿಲ್ಲ. ಸಮಾಜ ಅವಳನ್ನು ಅಸಹಾಯಕಳೆಂಬಂತೆಯೇ ನಡೆಸಿಕೊಂಡು ಬರುತ್ತಿದೆ. ಒಂದೆರಡು ಉದಾಹರಣೆಗಳು ಅವಳು ಬೆಳೆದಿದ್ದಾಳೆ ಎಂಬುದನ್ನು ತೋರಿಸುತ್ತವೆ. ನಮ್ಮಲ್ಲಿ ಸ್ವಚ್ಛತೆಯ ಪ್ರಜ್ಞೆ ಮೂಡಲು ಸಾಧ್ಯವೇ ಇಲ್ಲವೆಂಬಂತೆ, ಮರ್ಯಾದೆ ಬಿಟ್ಟು ಎಲ್ಲೆಂದರಲ್ಲಿ ಕಸ ಎಸೆಯುತ್ತೇವೆ. ಯಾರೋ ಒಂದಿಬ್ಬರು ಅದನ್ನು ಸ್ವಕಾಳಜಿಯಿಂದ ಎತ್ತಿ ಹಾಕಲು ಮುಂದಾದರೆ, ಅದನ್ನು ನೋಡಿ ನಗುತ್ತೇವೆ. ಪ್ರಾಮಾಣಿಕತೆಯನ್ನಂತೂ ಕೇಳುವಂತೆಯೇ ಇಲ್ಲ. ಒಂದು ಸಣ್ಣ ಅವಕಾಶ ಸಿಕ್ಕರೆ ಸಾಕು, ಸಿಕ್ಕಿದ್ದೆಲ್ಲವನ್ನೂ ನುಂಗಿಹಾಕಿ ಬಿಡುವ ತಜ್ಞರಾಗಿದ್ದೇವೆ. ಸರ್ಕಾರಿ ಕಚೇರಿ
ಗಳ ಯಾವುದೇ ಫೈಲು, ನೋಟನ್ನು ತಾಕಿಸದೆ ಮುಂದೆ ಹೋಗುವುದಿಲ್ಲ. ಎಷ್ಟೋ ಊರುಗಳಿಗೆ ಬಸ್ಸುಗಳು ಸಕಾಲಕ್ಕೆ ಹೋಗುವುದೇ ಇಲ್ಲ. ಸೋರುವ ಬಸ್ಸುಗಳು, ಸೋರುವ ಸರ್ಕಾರಿ ಶಾಲೆಗಳು ಸಾಮಾನ್ಯ. ಆದರೆ ದಾಖಲೆಯಲ್ಲಿ ಮಾತ್ರ ಅವು ಸುಸ್ಥಿತಿಯನ್ನು ಸಾರುತ್ತವೆ.

ನಲ್ಲಿಯಲ್ಲಿ ನೀರು ಹರಿಯುತ್ತಿದ್ದರೆ ಅದನ್ನು ನೋಡಿಯೂ ಸುಮ್ಮನೆ ಹೋಗುತ್ತೇವೆ. ರಸ್ತೆ ಬದಿಯಲ್ಲಿರುವ ಹಗಲು ಕಂಡ ಒಂದೊಳ್ಳೆ ಮರವು ರಾತ್ರಿ ಹೊತ್ತಿಗೆ ಇಲ್ಲವಾಗಿರುತ್ತದೆ (ಮರ ಇರಬೇಕು ಎನ್ನುವ ಒಳ್ಳೆ ಪ್ರಜ್ಞೆಯ ನಡುವೆಯೂ). ಕೇವಲ ಒಂದಷ್ಟು ಹಣಕ್ಕೆ ನಮ್ಮ ಮತಗಳು ಸಲೀಸಾಗಿ ಮಾರಾಟವಾಗುತ್ತವೆ. ನಮ್ಮ ಮುಂದೆಯೇ ನಮಗೆ ಆಗುವ ಅನ್ಯಾಯವನ್ನು ಒಂದು ಸಿನಿಮಾ ಎಂಬಂತೆ ನೋಡುತ್ತಿರುತ್ತೇವೆ. ಮೂಢನಂಬಿಕೆ ಹೆಸರಿನಲ್ಲಿ ಹಣ ಮಾಡುವವನನ್ನು ದೇವರಂತೆ ಕಾಣುತ್ತೇವೆ. ಜಾತಿ-ಧರ್ಮವನ್ನು ಮತ್ತು ಅದರೊಳಗಿನ ಜಿಡ್ಡನ್ನು ಮೊದಲಿಗಿಂತಲೂ ಹೆಚ್ಚು ಜೀವಂತವಾಗಿ ಇಟ್ಟಿದ್ದೇವೆ. ಮನೆಯಲ್ಲಿ ಶೌಚಾಲಯ ಇದ್ದರೂ ಬಯಲಲ್ಲಿ ಶೌಚಕ್ಕೆ ಹೋಗುತ್ತೇವೆ. ನಾವೆಷ್ಟು ಒಳ್ಳೆಯವರು‌!

ಪಾಪ, ಪ್ರಜಾಪ್ರಭುತ್ವದ ಕತ್ತು ಹಿಸುಕಲು ಇಲ್ಲಿ ನೂಕುನುಗ್ಗಲು. ಹಣ ಮತ್ತು ಜಾತಿ ಬಲ ಇದ್ದರೆ ಇಲ್ಲಿ ಯಾರು ಬೇಕಾದರೂ ನಾಯಕ. ಯಾರಿಗೆ ಬೇಕಾದರೂ ಅಧಿಕಾರ. ಅರ್ಹತೆಯನ್ನು ಕೊನೆಯ ಸಾಲಿನಲ್ಲಿ ಕೂರಿಸಲಾಗಿದೆ. ಅಧಿಕಾರ ಹಿಡಿದವರು ಪ್ರಜಾ
ಪ್ರಭುತ್ವವನ್ನು ತಮಗೆ ತೋಚಿದಂತೆ ವ್ಯಾಖ್ಯಾನಿಸುತ್ತಾರೆ. ಪ್ರಜಾಪ್ರಭುತ್ವದ ಯಶಸ್ಸಿನ ಮೂಲವೇ ಆದ ಸಾಕ್ಷರತೆಯನ್ನು ವಿಚಿತ್ರ ದಿಕ್ಕಿನೆಡೆಗೆ ಕಳುಹಿಸಿ ಕೊಡುತ್ತಿದ್ದೇವೆ. ಶಿಕ್ಷಣವು ತರಬೇಕಾದ ಬದಲಾವಣೆ ಇರಲಿ, ಶಿಕ್ಷಣದ ರೂಪವನ್ನೇ ಬದಲಾಯಿಸಿ ನಿಲ್ಲಿಸಿದ್ದೇವೆ. ಅದು ಎಷ್ಟರಮಟ್ಟಿಗೆ ಎಂದರೆ, ಓದದವನಿಗಿಂತ ಓದಿದವನೇ ಹೆಚ್ಚು ಅಪಾಯಕಾರಿ ಅನ್ನಿಸಿಬಿಡುವಷ್ಟು.

ಈ ತರಹ ಸಣ್ಣಪುಟ್ಟದ್ದು ಎಲ್ಲ ದೇಶಗಳಲ್ಲೂ, ಎಲ್ಲ ಕಾಲದಲ್ಲೂ ಇದ್ದದ್ದೇ. 1947ರಿಂದ ಇಲ್ಲಿಯವರೆಗೂ ಎಷ್ಟೊಂದು ಬದಲಾಗಿದ್ದೇವೆ ಎಂಬ ಮಾತನ್ನು ಒಪ‍್ಪಬಹುದು. ಆದರೆ, ಒಬ್ಬ ಮನುಷ್ಯನನ್ನು ಮನುಷ್ಯನಂತೆ ಕಾಣಲು ನಮಗಿನ್ನೂ ಸಾಧ್ಯವಾಗಿಲ್ಲ. ಒಂದು ಸಂಸ್ಕಾರಯುತ ಸಮಾಜ ರೂಪುಗೊಳ್ಳಲು ಸಾಧ್ಯವಾಗಿಲ್ಲ. ಎಲ್ಲರಿಗೂ ಎಲ್ಲವೂ ದಕ್ಕುವುದು ಅಷ್ಟು ಸುಲಭವಿಲ್ಲ. ಮುಖ್ಯವಾಗಿ ಹೇಳಬೇಕಾದರೆ, ಈ ದೇಶದ ಮನಸ್ಸುಗಳು ಬದಲಾಗಿಲ್ಲ. ಮೊದಲು ನಮ್ಮ ಮನಸ್ಸುಗಳು ಸ್ವಚ್ಛಗೊಳ್ಳಬೇಕಿದೆ. ಈ ಎಲ್ಲದರ ಮಧ್ಯೆ, ಇಷ್ಟು ವರ್ಷದ ಸಾಧನೆಗಳು ಯಾಕೋ ಖುಷಿ ಎನಿಸುವುದಿಲ್ಲ. ಭಾರತ ಬದಲಾಗುವುದೇ? ಗೊತ್ತಿಲ್ಲ. ಉತ್ತರ ಸುಲಭವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT