ನೈರುತ್ಯ ಮುಂಗಾರು ಕರ್ನಾಟಕದಲ್ಲಿ ಕೃಷಿ ಚಟುವಟಿಕೆಗಳಿಗೆ ಪುನಶ್ಚೇತನ ನೀಡುವ ಕಾಲ. ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ಮಲೆನಾಡು ಸೇರಿದಂತೆ ದಕ್ಷಿಣ ಭಾರತದ ಹಲವೆಡೆ ಇದೇ ಅವಧಿಯಲ್ಲಿ ‘ಸಂಚಾರಿ ಗುತ್ತಿಗೆ ಕೃಷಿ’ ಎಂಬ ಆತಂಕಕಾರಿ ವಿದ್ಯಮಾನ ಆರಂಭವಾಗುತ್ತಿದೆ. ಸಣ್ಣ ಹಿಡುವಳಿದಾರರಿಂದ ಭೂಮಿಯನ್ನು ಅಲ್ಪಾವಧಿಗೆ ಗುತ್ತಿಗೆ ಪಡೆಯುವ ಕೆಲವು ಕೃಷಿಕರು, ಅತಿ ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ ಗಳಿಸಲು ಮಣ್ಣಿಗೆ ವಿಪರೀತ ರಾಸಾಯನಿಕಗಳನ್ನು ಸುರಿದು ಅಕ್ಷರಶಃ ಆಕ್ರಮಣ ನಡೆಸುತ್ತಿದ್ದಾರೆ. ಇದು ಯಾವುದೋ ಒಂದು ಊರಿನ ವಿದ್ಯಮಾನ ಅಥವಾ ಸಣ್ಣ ಸಮಸ್ಯೆ ಅಲ್ಲ. ಮಣ್ಣಿನ ಸತ್ತ್ವವನ್ನೇ ಹೀರುವ ‘ಹಿಂಡುವ ಕೃಷಿ’ಯ (Extractive Agriculture) ಹೊಸ ಮಾದರಿ. ಕಟಾವಿನ ನಂತರ ಗುತ್ತಿಗೆದಾರರು ಬಿಟ್ಟು ಹೋಗುವ ಭೂಮಿಗೆ ಸತ್ತ್ವವೇ ಇರುವುದಿಲ್ಲ. ಮಾಲೀಕರ ಭವಿಷ್ಯವೇ ಅನಿಶ್ಚಿತವಾಗಿರುತ್ತದೆ.

ಅಲ್ಪಾವಧಿ ಗುತ್ತಿಗೆ ಕೃಷಿಯ ಈ ಮಾದರಿಯಲ್ಲಿ ಶುಂಠಿ, ಅರಿಸಿನ ಹಾಗೂ ತರಕಾರಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಉದಾಹರಣೆಗೆ, ಶುಂಠಿ ಬೆಳೆಗೆ ಹೆಕ್ಟೇರ್ಗೆ 10ರಿಂದ 12 ಲಕ್ಷ ರೂಪಾಯಿ ಹೂಡಿಕೆ ಬೇಕಾಗುತ್ತದೆ. ಈ ಬಂಡವಾಳದ ಮೇಲೆ ಖಚಿತ ಲಾಭ ಪಡೆಯಲು ಗುತ್ತಿಗೆದಾರರು ಮಿತಿ ಮೀರಿದ ಗೊಬ್ಬರ, ಕೀಟನಾಶಕ ಮತ್ತು ಶಿಲೀಂಧ್ರನಾಶಕಗಳನ್ನು ಬಳಸುತ್ತಾರೆ. ಮಣ್ಣಿನ ಆರೋಗ್ಯ ಕಾಪಾಡುವ ಕಾಳಜಿಯು ಅವರ ಆದ್ಯತೆ ಆಗಿರುವುದಿಲ್ಲ. ಬೆಳೆ ಕೊಯ್ಲು ಮುಗಿಸಿದ ಮೇಲೆ ಲಾಭದೊಂದಿಗೆ ಇವರು ನಿರ್ಗಮಿಸಿದಾಗ, ನಿಸ್ತೇಜ ಮಣ್ಣು ಹಿಂದೆ ಉಳಿಯುತ್ತದೆ. ಅತಿಯಾದ ರಾಸಾಯನಿಕ ಬಳಕೆಯಿಂದ ಮಣ್ಣಿನಲ್ಲಿರುವ ಸಾವಯವ ಅಂಶ ಕುಸಿಯುತ್ತದೆ, ಸೂಕ್ಷ್ಮಾಣುಗಳು ನಾಶ ಆಗುತ್ತವೆ ಮತ್ತು ಮಣ್ಣಿನ ಪಿಎಚ್ ಸಾರ ಅಸ್ತವ್ಯಸ್ತಗೊಳ್ಳುತ್ತದೆ. ಪಶ್ಚಿಮ ಘಟ್ಟಗಳಂತಹ ಅಧಿಕ ಮಳೆಯ ಪ್ರದೇಶಗಳಲ್ಲಿ ಈ ರಾಸಾಯನಿಕಗಳು ಜಲಮೂಲಗಳನ್ನು ಸೇರಿ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತಿವೆ.

ಗುತ್ತಿಗೆದಾರರು ಹೋದ ಮೇಲೆ ಆ ಭೂಮಿಯಲ್ಲಿ ಮತ್ತೆ ಕೃಷಿ ಮಾಡಲು ಸಾಧ್ಯವಾಗದಷ್ಟು ಪ್ರಮಾಣದಲ್ಲಿ ಮಣ್ಣು ಬಂಜರಾಗಿರುತ್ತದೆ. ರೈತರಿಗೆ ಸಿಗುವ ತಕ್ಷಣದ ನಗದು ಹಣದ ಆಸೆ ಭೂಮಿಯ ದೀರ್ಘಕಾಲದ ಅವನತಿಗೆ ದಾರಿ
ಆಗುತ್ತಿದೆ. ಅಲ್ಲದೆ, ಇಂತಹ ಪದ್ಧತಿಯಲ್ಲಿ ಬೆಳೆದ ಆಹಾರ ಪದಾರ್ಥಗಳಲ್ಲಿ ಅಪಾಯಕಾರಿ ರಾಸಾಯನಿಕ ಅವಶೇಷಗಳು ಉಳಿಯುತ್ತಿರುವುದು ಬಳಕೆದಾರರ ಆರೋಗ್ಯದ ದೃಷ್ಟಿಯಿಂದಲೂ ಆತಂಕಕಾರಿ.

ಭೂಮಿಯ ಶೋಷಣೆಗೆ ಬರೀ ರೈತರನ್ನು ದೂಷಿಸಿ ಪ್ರಯೋಜನವಿಲ್ಲ. ಕೃಷಿ ವಿಸ್ತರಣಾ ಸೇವೆಗಳ ಕೊರತೆ ಮತ್ತು ಮಾರುಕಟ್ಟೆಯ ತಂತ್ರಗಳು ರೈತರನ್ನು ಇತ್ತ ತಳ್ಳುತ್ತಿವೆ. ವಾಸ್ತವವಾಗಿ, ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಮಣ್ಣಿನ ಪುನಶ್ಚೇತನಕ್ಕೆ ಪೂರಕವಾದ ಜೈವಿಕ ವಿಧಾನಗಳನ್ನು ಅಭಿವೃದ್ಧಿಪಡಿಸಿದೆ. ಆದರೆ, ಇವುಗಳ ಬಗ್ಗೆ ಅರಿವಿನ ಕೊರತೆ ಎದ್ದು ಕಾಣುತ್ತಿದೆ. ಈ ಗಂಭೀರ ಸಮಸ್ಯೆಯ ನಿಯಂತ್ರಣಕ್ಕೆ ಸರ್ಕಾರ ಮತ್ತು ನೀತಿ ನಿರೂಪಕರು ತುರ್ತಾಗಿ ಗಮನ
ಹರಿಸಬೇಕಿದೆ.

ಭೂಮಿಯನ್ನು ‘ಹಿಂಡುವ ಕೃಷಿ’ಗೆ ಸಂಬಂಧಿಸಿದಂತೆ ಕೆಲವು ಪರಿಹಾರದ ಹಾದಿಗಳೂ ಇವೆ. ಕೃಷಿ ಭೂಮಿಯ ಗುತ್ತಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಕಡ್ಡಾಯ ನೋಂದಣಿ ವ್ಯವಸ್ಥೆ ಜಾರಿಗೆ ಬರಬೇಕಾಗಿದೆ. ಗುತ್ತಿಗೆ ಅವಧಿ ಮುಗಿದ ನಂತರ ಮಣ್ಣಿನ ಸ್ಥಿತಿಯನ್ನು ಆಧರಿಸಿ ಹಿಂತಿರುಗಿಸುವ ‘ಠೇವಣಿ ವ್ಯವಸ್ಥೆ’ ಅಥವಾ ಕಡ್ಡಾಯ ಮಣ್ಣು ಪರೀಕ್ಷೆಯ ನಿಯಮ ರೂಪಿಸಬೇಕು. ಈ ನಿಟ್ಟಿನಲ್ಲಿ ನೀತಿ ನಿರೂಪಕರು (ಸಚಿವಾಲಯ, ಅಧಿಕಾರಿಗಳು ಮತ್ತು ಸಂಶೋಧನಾ ಸಂಸ್ಥೆಗಳು) ಸಕ್ರಿಯ ಪಾತ್ರ ನಿರ್ವಹಿಸಬೇಕು.

ಅವಶೇಷಗಳ ಮೇಲ್ವಿಚಾರಣೆ ಅತ್ಯಗತ್ಯ. ಗುತ್ತಿಗೆ ಭೂಮಿಯಲ್ಲಿ ಬೆಳೆದ ಬೆಳೆಗಳ ಗುಣಮಟ್ಟ ಮತ್ತು ರಾಸಾಯನಿಕ ಅಂಶಗಳ ತಪಾಸಣೆ ಕಟ್ಟುನಿಟ್ಟಾಗಿ ನಡೆಯ
ಬೇಕು. ಬೆಳೆಗೆ ಬಳಕೆಯಾಗುವ ಒಳಸುರಿಗಳ ನಿಯಂತ್ರಣದ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು. ಸಣ್ಣ ರೈತರಿಗೆ ತಾತ್ಕಾಲಿಕ ಲಾಭಕ್ಕಿಂತ ಮಣ್ಣಿನ ಸುಸ್ಥಿರತೆ ಅತ್ಯಂತ ಮುಖ್ಯ ಎಂಬುದನ್ನು ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ಮನವರಿಕೆ ಮಾಡಿಕೊಡುವ ಪ್ರಯತ್ನಗಳು ವ್ಯಾಪಕ ಆಗಬೇಕು.

ಗುತ್ತಿಗೆಗೆ ಭೂಮಿ ಪಡೆದವರು ಬೆಳೆಗಳಿಗೆ ಬಳಸುವ ಗೊಬ್ಬರ, ಕೀಟನಾಶಕಗಳ ವಿಚಾರದಲ್ಲಿ ಸರಿಯಾದ ಮೇಲ್ವಿಚಾರಣೆ ಬೇಕು. ಮಣ್ಣು ಎನ್ನುವುದು ಜಡ ವಸ್ತುವಲ್ಲ; ಅದೊಂದು ಜೀವಂತ ವ್ಯವಸ್ಥೆ. ಒಮ್ಮೆ ಅದರ ಫಲವತ್ತತೆ ನಾಶವಾದರೆ, ಮರಳಿ ಪಡೆಯುವುದು ದುಬಾರಿ ಮತ್ತು ಕಷ್ಟಸಾಧ್ಯ. ತಾತ್ಕಾಲಿಕ ಆರ್ಥಿಕ ಲಾಭಕ್ಕಾಗಿ ಮಣ್ಣನ್ನು ಬಲಿಕೊಡುವುದು ಆಹಾರ ಭದ್ರತೆಗೆ ಮಾಡುವ ದ್ರೋಹ.

ಮಳೆಗಾಲವು ಮಣ್ಣಿಗೆ ಹೊಸ ಜೀವ ನೀಡುವ ಅಮೃತ ಕಾಲ. ಈ ಸಮಯದಲ್ಲಿ ಭೂಮಿಗೆ ಜೀವಂತಿಕೆ ಊಡಿಸಬೇಕೇ ಹೊರತು ವಿಷ ಉಣಿಸುವಂತಾಗಬಾರದು. ತಾತ್ಕಾಲಿಕ ಲಾಭಗಳು ಶಾಶ್ವತ ನಷ್ಟಗಳಿಗೆ ಮುನ್ನುಡಿ ಆಗಬಾರದು. ಅಂಥ ಭೀಕರ ಪರಿಸ್ಥಿತಿ ತಲೆದೋರುವ ಮೊದಲು ನಮ್ಮ ಕೃಷಿ ವ್ಯವಸ್ಥೆಯು ಎಚ್ಚತ್ತುಕೊಳ್ಳಬೇಕು. ಇಲ್ಲದಿದ್ದರೆ ಸುಸ್ಥಿರ ಕೃಷಿ ಎಂಬುದು ಬರೀ ಕನಸಾಗಿಯೇ ಉಳಿಯಬಹುದು.

ಅಲ್ಪಾವಧಿ ಗುತ್ತಿಗೆ ಕೃಷಿ ಕರ್ನಾಟಕ ಮಾತ್ರವಲ್ಲದೆ ದೇಶದ ಉಳಿದ ಭಾಗಗಳಲ್ಲೂ ಇರಬಹುದು. ಇಂಥ ಲಾಭಕೋರ ಮನಃಸ್ಥಿತಿಯ ಕೃಷಿಯನ್ನು ನಿಯಂತ್ರಿಸಲು ಸಮರ್ಪಕ ನಿಯಮಗಳು ರೂಪುಗೊಳ್ಳಬೇಕು.

ಲೇಖಕ: ಫೆಲೊ, ರಾಷ್ಟ್ರೀಯ ಕೃಷಿ ವಿಜ್ಞಾನ ಮತ್ತು ಭಾರತೀಯ ಮಣ್ಣು ವಿಜ್ಞಾನ ಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.