ಮಲೆನಾಡ ಕೃಷಿ ಸಮಸ್ಯೆ

7
ಅಡವಿ ಹರಣ ಕಲ್ಪಿಸಿಕೊಂಡರೆ, ಅರಣ್ಯ ಕಡಿದು ಟೀ, ಕಾಫಿ ಹೀರುವ ಮನುಷ್ಯನ ಮನೋವಿನ್ಯಾಸಕ್ಕೆ ಅಯ್ಯೋ ಎನಿಸುತ್ತದೆ

ಮಲೆನಾಡ ಕೃಷಿ ಸಮಸ್ಯೆ

Published:
Updated:
Deccan Herald

ಏಲಕ್ಕಿ, ಮೆಣಸು, ಕಾಫಿ, ಶ್ರೀಗಂಧ… ಈ ಯಾವುವೂ ಹೊಟ್ಟೆಯ ಹಸಿವು ತುಂಬಿಸುವ ಬೆಳೆಗಳಲ್ಲ. ಇವು ಸಹ್ಯಾದ್ರಿ ಕರ್ನಾಟಕದ ಅಡವಿ ಬೆಳೆಯಾಗಿದ್ದವು. ಪರಂಗಿಯವರು ಈ ಸಂಬಾರ ಪದಾರ್ಥದ ಗಮಲಕ್ಕೆ ಬಂದರು. ಬ್ರಿಟಿಷರು ಕಾಫಿ ತಂದು ‘ಬೆಟ್ಟದಿಂದ ಬಟ್ಟಲಿಗೆ’ ಇಳಿಸಿದರು. ಕಾಫಿ ಗಮಲಕ್ಕೆ ಮಲೆನಾಡಿಗರು ಬೆರಗಾದರು. ಅಲ್ಲಿಗೆ ಅಡವಿ ಅರ್ಧ–ಮುಕ್ಕಾಲು ಬಯಲಾಗಿ ಕಾಫಿ ಗಿಡಕ್ಕೆ ಛತ್ರಿ ಹಿಡಿಯಿತು.

ಅವರಪ್ಪನದೇನು ಹೋಗಬೇಕು! ಅಡವಿ, ಆ ಸರ್ಕಾರದಿಂದ ಮಂಜೂರಾಗುತ್ತಾ ಕೊಡಗು, ಚಿಕ್ಕಮಗಳೂರು, ಹಾಸನ... ಮಲೆನಾಡು ಹರಿದ ಅಂಗಿಯಾಗಿ ಬುಡದಲ್ಲಿ ಕಾಫಿ ಕೆಂಪಗೆ ಹಣ್ಣಾದ್ದನ್ನು ಬೆಳೆಗಾರರು ನೋಡಿ ಹಸಿರು ಗುತ್ತಿಗೆ ಅಂಟಿ ಕೂತರು. ಟೀ ಬೆಳೆಯದು ಇದಕ್ಕಿಂತ ಘೋರ ನೀತಿ. ಅರಣ್ಯ ಹರಣ ಮನುಷ್ಯನ ಸನಿಹ ಮರಣ. ಮುನ್ನಾರ್, ಸಕಲೇಶಪುರದ ಕಾಡುಮನೆ, ಜಯಪುರ ಟೀ ಎಸ್ಟೇಟ್‍ಗಳು ಅದರ ಹಿಂದಿನ ಅಡವಿ ಹರಣ ಕಲ್ಪಿಸಿಕೊಂಡರೆ ಮನುಷ್ಯ ಅಡವಿ ಕಡಿದು ಟೀ, ಕಾಫಿ ಹೀರುವ ಮನೋವಿನ್ಯಾಸಕ್ಕೆ ಅಯ್ಯೋ ಎನಿಸುತ್ತದೆ.

ಏಲಕ್ಕಿಯು ಕೊಡಗು, ಹಾಸನ, ಚಿಕ್ಕಮಗಳೂರು ದಟ್ಟ ಮಲೆನಾಡಿನ ಬೆಳೆಯಾಗಿ ಪರಿವರ್ತನೆಯಾಗಿತ್ತು. ಅದಕ್ಕೆ ಕಟ್ಟೆ ರೋಗ ತಗುಲಿತು. ದರವೂ ಇಲ್ಲವಾಯ್ತು. ಈ ವರ್ಷ ನೋಡಿದರೆ ಕಡೆಯ ಗುಣಮಟ್ಟದ ಏಲಕ್ಕಿಗೆ ಕೆ.ಜಿಗೆ ₹ 1000. ಮೊದಲ ಗುಣಮಟ್ಟದಕ್ಕೆ ₹ 2000 ದರ ಬಂತು. ಆದರೇನು ಅದರದು ಚದುರಂಗದಾಟ. ಆ ಬೆಳೆ, ಹೇಳಿದ ಮಾತು ಕೇಳುತ್ತಿಲ್ಲ. ಇದಲ್ಲದೆ ಏಲಕ್ಕಿ ಕಿತ್ತು ಕಾಫಿ ಹಾಕಿದ ಬೆಳೆಗಾರನಿಗೆ ನಿಗದಿಯಾದ ದರವಿಲ್ಲ. ಸರ್ಕಾರಗಳು ಬೆಲೆ ನಿಗದಿಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈ ದೇಶದ ರೈತನಿಗೆ ಅತಂತ್ರ ಸ್ಥಿತಿ.

‘ಮೆಣಸು ರಾಣಿ’ ಎಂದು ಅಬ್ಬಕ್ಕನಿಗೆ ಹೆಸರಿತ್ತಲ್ಲವೇ! ಅಂತೆಯೇ ಇತ್ತೀಚೆಗೆ ರಾಣಿಯಂತೆ ಮೆಣಸು, ಕಾಫಿ ಬೆಳೆಗಾರರನ್ನು ಉಳಿಸಿಕೊಂಡಿತ್ತು. ಕೆ.ಜಿಗೆ ₹ 600 ವರೆಗಿತ್ತು. ದೇಶ ಆಳುವ ಪಕ್ಷದ ಅಧ್ಯಕ್ಷರ ಪುತ್ರ ವ್ಯಾಪಾರಿ. ವಿಯಟ್ನಾಂ ಕಡೆಯಿಂದ ಆಮದು ಮಾಡಿಕೊಂಡಾಗ ಬೆಳೆಗಾರರು ಕಂಗಾಲಾಗಿದ್ದಾರೆ. ₹ 300ಕ್ಕೆ ಇಳಿದಿದೆ. ಈ ವರ್ಷದ ಮಳೆಯಲ್ಲಿ ಬೆಳೆಯೂ ಇಲ್ಲ. ದರವೂ ಇಲ್ಲ. ಇಂದು ರೈತನ ಗೋಳು ಕೇಳುವವರೇ ಇಲ್ಲ. ಕಾಫಿ ನೆರಳಿನ ಮರಗಳಲ್ಲಿ ಹಬ್ಬಿರುವ ಮೆಣಸು ಬಳ್ಳಿ ಸಾಯುತ್ತಿವೆ. ಇದರ ಪರಿಣಾಮವೆಂದರೆ ಕಾಫಿ ತೋಟಗಳು ಹಾಳು ಬೀಳುತ್ತಿವೆ.

ಕಾಫಿ ಬೆಳೆಯನ್ನು ಸರ್ಕಾರದ ಪರ ಕಾಫಿ ಬೋರ್ಡಿಗೇ ಕೊಡಬೇಕಾಗಿತ್ತು. ಬ್ರೆಜಿಲ್ ಕಾಫಿ ಅಲ್ಲಿ ಉದುರಿದರೆ ಇಲ್ಲಿ ಬೆಳೆಗಾರರಿಗೆ ಆಗೊಮ್ಮೆ ಈಗೊಮ್ಮೆ ಬೆಲೆ ಸಿಗುತ್ತಿತ್ತು. ಈ ನಡುವೆ ತೆರೆದ ಮಾರುಕಟ್ಟೆಗಾಗಿ ಬೆಳೆಗಾರರು ಹೋರಾಡಿದರು. ಪೂರ್ಣಚಂದ್ರ ತೇಜಸ್ವಿ ಮುಂಚೂಣಿ ಹೋರಾಟದಲ್ಲಿದ್ದುದ್ದುಂಟು. 50 ಕೆ.ಜಿ ಮೂಟೆಗೆ ₹ 1000 ಸಿಗುತ್ತಿದುದು ₹ 8000ದವರೆಗೆ ತೆರೆದ ಮಾರುಕಟ್ಟೆಯಲ್ಲಿ ದರ ಸಿಕ್ಕಿ ಪ್ಲಾಂಟರ್‌ಗಳ ಮನೆಗಳು ಬಂಗಲೆಗಳಾದವು. ವಿದೇಶಿ ಕಾರುಗಳು ಬಂದವು.

ಮೂರ್ನಾಲ್ಕು ವರ್ಷಗಳಲ್ಲಿ ಮಧ್ಯವರ್ತಿಗಳ ಕೈಗೆ ಸಿಕ್ಕಿದ ಕಾಫಿ ದರ 25 ವರ್ಷ ಕಳೆದರೂ ಆಗಿನ ಅರ್ಧ ದರದಲ್ಲಿದೆ. ಕೂಲಿನಾಲಿ ನಾಲ್ಕಾರು ಪಟ್ಟು ಜಾಸ್ತಿಯಾಯ್ತು. ಬೆಳೆಯೂ ಇಲ್ಲ, ದರವೂ ಇಲ್ಲ. ಕಾಫಿ ತೋಟ ಮಾರುವಂತಿಲ್ಲ. ಕೊಳ್ಳುವವರೂ ಇಲ್ಲ. ಕಾರು-ಬಾರುಗಳಲ್ಲಿ ಅಡ್ಡಾಡುತ್ತಿದ್ದವರು ಸಾರ್ವಜನಿಕ ಕ್ಯಾಬ್‍ಗಳಲ್ಲಿ ಮುಖ ಮರೆಸಿಕೊಂಡು ಆಳುಕಾಳುಗಳ ಜೊತೆ ಕೂರುವ ಸ್ಥಿತಿ. ಕೆಲವೇ ವರ್ಷಗಳಲ್ಲಿ ಕಾಫಿ ನಾಡು ಬಯಲು ನಾಡಾಗುವ ಎಲ್ಲಾ ಸೂಚನೆ ಕಾಣುತ್ತಿದೆ. ಅರಬ್‌ ದೊರೆಗಳಂತಿದ್ದ ಮಲೆನಾಡ ಬೆಳೆಗಾರರು ಪ್ರಕೃತಿಯೊಡನೆ ಬೆಳೆದವರು. ಸಾಲ ಮಾಡಿಯಾದರೂ ತುಪ್ಪ ತಿನ್ನುತ್ತಾರೆ. ಎಲ್ಲಾ ಬ್ಯಾಂಕ್, ಸೊಸೈಟಿಗೆ ಎಡೆಬಿಡದೆ ಹೋಗಿ ಕೂರುತ್ತಾರೆ. ಸಾಲ ದೊರೆತ ಮೇಲೆ ಅತ್ತ ತಿರುಗಿ ನೋಡದಷ್ಟು ಮೊಂಡು ಬೀಳುತ್ತಾರೆಯೇ ವಿನಾ ವಿಪರೀತಕ್ಕೆ ಹೋಗುವುದಿಲ್ಲ ಎಂಬುದು ಮೆಚ್ಚತಕ್ಕ ವಿಚಾರವೇ ಹೌದು.

ಅರೆಮಲೆನಾಡಿನ ಸಹ್ಯಾದ್ರಿಯು ಶ್ರೀಗಂಧಕ್ಕೆ ಹೇಳಿ ಮಾಡಿದಂತಹ ಜಾಗವಾಗಿತ್ತು. ಈಗ ಕಳ್ಳಸಾಗಾಣಿಕೆ ಮುಗಿದು ಮೂಸಿ ನೋಡಲು ಕನ್ನಡನಾಡಿನ ಶ್ರೀಗಂಧದ ಬೇರು ಅಲ್ಲಿ ಇಲ್ಲ. ಅರೆಮಲೆನಾಡಿನಲ್ಲಿ ಶ್ರೀಗಂಧ ಕೃಷಿ ಮಾಡಬಹುದೆಂಬ ಆಸೆ ಜನಕ್ಕಿದೆ. ‘ಹಾಕಿ ನೋಡೋಣ, ಹೇಗೆ ಉಳಿಸಿಕೊಳ್ಳುತ್ತೀರಿ’ ಎಂಬ ಸವಾಲು ಶ್ರೀಗಂಧ ಚೋರರದು. ಈ ನಡುವೆ ಉತ್ತರ ಕರ್ನಾಟಕದ, ಕೋಲಾರದ ಧೈರ್ಯದ ರೈತರು ಶ್ರೀಗಂಧ ಬೆಳೆಯಲಾರಂಭಿಸಿದ್ದಾರೆ. ಎಕರೆಗೆ ಮುನ್ನೂರರಂತೆ ಮರಕ್ಕೆ 15 ವರ್ಷವಾದರೆ ತಲಾ ಲಕ್ಷ ರೂಪಾಯಿಯಂತೆ ಮೂರು ಕೋಟಿ ರೂಪಾಯಿ ಬರುತ್ತದೆಂಬುದು ಲೆಕ್ಕಾಚಾರ.

ಅಂತೂ ಶ್ರೀಗಂಧ ಬೆಳೆವ ರೈತರು ಅರಬ್‌ ಎಣ್ಣೆ ಸರದಾರರನ್ನು ಮೀರಿಸುವ ತವಕದಲ್ಲಿದ್ದಾರೆ. ರೈತನ ಆರೈಕೆಯಲ್ಲಿ ಪ್ರಕೃತಿದತ್ತವಾಗಿ ಚೇಗು ಬರದಿರಬಹುದು. ಅರಣ್ಯ ಇಲಾಖೆಯು ಆರು ಲಕ್ಷ ಸಸಿ ವಿತರಿಸಿದೆಯಂತೆ. ಕಾನೂನಿನಂತೆ ಅರಣ್ಯ ಇಲಾಖೆ ಕೊಳ್ಳುತ್ತಿದೆ. ಆದರೆ ಬೆಳೆ ಅತಿಯಾದರೆ ಕೈ ಎತ್ತಬಹುದು. ತೆರೆದ ಮಾರುಕಟ್ಟೆ ಸೃಷ್ಟಿಯಾಗಲೂಬಹುದು. ಮಧ್ಯವರ್ತಿಗಳಿಂದ ದರ ಬಿದ್ದು ಹೋಗಲೂಬಹುದು. ಉದಾಹರಣೆಯಾಗಿ ವೆನಿಲಾ, ಕೋಕೋ ಬೆಳೆ ನಮ್ಮ ಮುಂದಿವೆ.

ಏನಾದರಾಗಲೀ ಅಡವಿ ಬೆಳೆಸಿದ ನೆಮ್ಮದಿಯಾದರೂ ದೊರೆಯಿತಲ್ಲಾ ಎಂದು ಬೆಳೆಯುತ್ತಿರುವ ರೈತರು ಮಾನಸಿಕವಾಗಿ ತಯಾರಾಗಿರಲೇಬೇಕು. ಏಕೆಂದರೆ ರೈತರ ಪರ ಯಾವಾಗಲೂ ಈ ದೇಶದ ಸರ್ಕಾರಗಳು ಇಲ್ಲವೇ ಇಲ್ಲ. ಕೊಡಗು ಮುಳುಗಿದರೂ ಕೇಳುವವರಿಲ್ಲ. ಹರಿವ ಹೊಳೆಗಳು ನಿಂತರೂ ಲೆಕ್ಕಕ್ಕಿಲ್ಲ. ಮೇಲಿನ ಬೆಳೆಗಳೆಲ್ಲವೂ ನಾಗರಿಕತೆಯ ಅಮಲಿನವು. ‘ನಾಗರಿಕತೆ ಕಣ್ಣಿಗೆ ಕಾಣದ ಕ್ಷಯರೋಗವಿದ್ದಂತೆ’ ಎಂದು ಗಾಂಧೀಜಿ ಹೇಳಿದ್ದಾರಲ್ಲವೆ! ಅದು ನೆನಪಿನಲ್ಲಿರಬೇಕು.

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !