ಮಂಗಳವಾರ, ನವೆಂಬರ್ 12, 2019
27 °C
ಕಸ ನಿರ್ವಹಣೆಯ ಮಾರ್ಗಗಳೇ ರೂಪುಗೊಳ್ಳದಿರುವಾಗ, ಮಾರ್ಗದರ್ಶನ ಮಾಡುವ ಪ್ರಯತ್ನ ಅಸಂಗತ ಎನಿಸದೇ?

ಪೌರಸೇನಾನಿ ಮತ್ತು ಅಸಂಗತ ನಡೆ

Published:
Updated:
Prajavani

ನಮ್ಮ ನಗರ– ಪಟ್ಟಣಗಳನ್ನು ಶುಚಿಯಾಗಿಡುತ್ತಿರುವ ‘ಪೌರಸೇನಾನಿ’ಗಳು (ಪೌರಕಾರ್ಮಿಕರು) ಇಲ್ಲದೇ ಇದ್ದಿದ್ದರೆ ಬೆಂಗಳೂರಿನಂಥ ಮಹಾನಗರಗಳ ಪರಿಸ್ಥಿತಿಯನ್ನು ಊಹಿಸುವುದೂ ಕಷ್ಟಸಾಧ್ಯ. ಅವರೇನಾದರೂ ಎರಡು ದಿನ ಮುಷ್ಕರ ನಡೆಸಿದರೆ ಗಾರ್ಡನ್ ಸಿಟಿಯು ಗಾರ್ಬೇಜ್ ಸಿಟಿ ಆಗಿಬಿಡುತ್ತದೆ. ನಗರದ ಬೀದಿಗಳು ಓಡಾಡುವುದಕ್ಕೆ ಅಸಹನೀಯ ಎನಿಸುತ್ತವೆ. ಅಷ್ಟಾದರೂ ಇವರಿಗಾಗಿ ನಾಗರಿಕ ಸಮಾಜ ಮಿಡಿಯುತ್ತಿದೆಯೇ, ಇವರ ಸಂಕಷ್ಟಕ್ಕೆ ಕನಿಷ್ಠ ಮಾನವೀಯ ಕಾಳಜಿಯನ್ನು ತೋರುತ್ತಿದೆಯೇ ಎಂಬ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ಸಿಗಲು ಸಾಧ್ಯವೇ ಇಲ್ಲ. ಆದರೆ, ಇಂಥ ವಿಚಾರಗಳ ಪ್ರಸ್ತಾಪವೇ ತಪ್ಪು ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಚುನಾವಣಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪೌರಕಾರ್ಮಿಕರ ಪಾದ ತೊಳೆದಾಗ ಆದ ಸುದ್ದಿ, ಚರ್ಚೆಗಳು ಈ ಕಷ್ಟಜೀವಿಗಳ ಸಂಕಷ್ಟಗಳ ಬಗ್ಗೆ ಆಗಿದ್ದಿದ್ದರೆ ಪುರಾತನ ಸಮಸ್ಯೆಯೊಂದರ ನಿವಾರಣೆಗೆ ಹೊಸ ಮಾರ್ಗಗಳಾದರೂ ತೆರೆದುಕೊಳ್ಳುತ್ತಿದ್ದವು.

ತಲೆಯ ಮೇಲೆ ಮಲ ಹೊರುವ ಪದ್ಧತಿ ಭಾರತದಲ್ಲಿ ಎಂಬತ್ತರ ದಶಕದ ಸುಮಾರಿಗೆ ಕಾನೂನುಬದ್ಧವಾಗಿ ನಿಷೇಧಗೊಂಡಿದೆ. ಆದರೆ ಇದರ ಅನುಷ್ಠಾನ ಎಷ್ಟರಮಟ್ಟಿಗೆ ಆಗಿದೆ ಎಂಬುದು ಆಗಾಗ ಕಾಡುವಂತಹದ್ದಾದರೂ ಈ ಅನಿಷ್ಟ ಪದ್ಧತಿಗೆ ಕಾನೂನಿನ ಅನ್ವಯ ಅವಕಾಶ ಇಲ್ಲ ಎಂಬುದೇ ಸಮಾಧಾನಕರ ಸಂಗತಿ. ಸ್ವಚ್ಛತಾ ಕಾರ್ಯವನ್ನು ಕೈಗಳಿಂದಲೇ ನಡೆಸುವುದು ಇನ್ನೂ ನಿಂತಿಲ್ಲ. ಅನ್ಯರ ಅಶುಚಿಯನ್ನು ನಮ್ಮ ನಿಮ್ಮಂಥ ಮನುಷ್ಯರೇ ಬಳಿಯುತ್ತಾರೆ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವೇ?

ಈ ಹಿನ್ನೆಲೆಯಲ್ಲಿ, ಮಲ ಸ್ವಚ್ಛ ಮಾಡಲು ಯಾಂತ್ರಿಕ ವಿಧಾನವನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳುವ ಅಗತ್ಯವಿದೆ. ಅಮೆರಿಕ, ರಷ್ಯಾದಂಥ ಮುಂದುವರಿದ ರಾಷ್ಟ್ರಗಳಲ್ಲಿ ಇಂಥ ಸಾಧನಗಳಿವೆ. ಆದರೆ ನಾವು ಭಾಷಣದಲ್ಲಿ ಮಾತ್ರ ಮುಂದುವರಿದ ರಾಷ್ಟ್ರಗಳನ್ನು ಸರಿಗಟ್ಟುತ್ತಿದ್ದೇವೆ. ದಿನನಿತ್ಯ ನಡೆಯುವ ಇಂಥ ಅನಿಷ್ಟ ಪದ್ಧತಿಗಳಿಗೆ ಕಡಿವಾಣ ಬೇಕಲ್ಲವೇ?

ದೇಶದ ಆರೋಗ್ಯ ಕಾಪಾಡುವ ಪೌರಸೇನಾನಿಗಳಿಗಿಂತ ದೊಡ್ಡ ಸಮಾಜ ಸೇವಕರು ಬೇರೆ ಇಲ್ಲ. ಸುದೀರ್ಘಕಾಲ ಇದೇ ವೃತ್ತಿ ನಡೆಸಿಕೊಂಡು ಬಂದ ಹಿರಿಯ ಪೌರ ಸೇನಾನಿಗೆ ಕೇಂದ್ರ ಸರ್ಕಾರ ‘ಭಾರತರತ್ನ’ ಪ್ರಶಸ್ತಿ ನೀಡಬೇಕು. ಇದರಿಂದ ಪ್ರಶಸ್ತಿಗೇ ತೂಕ ಬರುತ್ತದೆ. ಅದೇ ರೀತಿ ದೇಶದ ಎಲ್ಲ ರಾಜ್ಯಗಳ ವಿಧಾನಸಭೆಗಳಲ್ಲಿ, ಈ ವರ್ಗವನ್ನು ಪ್ರತಿನಿಧಿಸುವವರಿಗಾಗಿ ಒಂದು ಕ್ಷೇತ್ರವನ್ನು ಮೀಸಲಿಡಬೇಕಿದೆ. ಸಂಸತ್ತಿನಲ್ಲೂ ಅವರಿಗೆ ಅವಕಾಶ ಕಲ್ಪಿಸಬೇಕು. ಜತೆಗೆ, ಪೌರಸೇನಾನಿಗಳ ಮಕ್ಕಳಿಗೆ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿ ಅಗತ್ಯ. ನಮಗಾಗಿ ದುಡಿಯುವವರಿಗೆ ದೇಶ ಇಷ್ಟಾದರೂ ಕೃತಜ್ಞತೆ
ಸಲ್ಲಿಸಬೇಕಲ್ಲವೇ?

– ಡಾ. ಬಿ.ಎಸ್‌.ಶಿವಣ್ಣ

***

ಮಾರ್ಗವೇ ಇಲ್ಲ ಮಾರ್ಗದರ್ಶನವೆಲ್ಲಿ?!

ಪ್ರಧಾನಿಯವರು ಇತ್ತೀಚೆಗೆ ನಿಷೇಧಿತ ಪ್ಲಾಸ್ಟಿಕ್ ಚೀಲವನ್ನು ಕೈಯಲ್ಲಿ ಹಿಡಿದು ಮಹಾಬಲಿಪುರಂ ಸಮುದ್ರ ತೀರವನ್ನು ಶುಚಿಗೊಳಿಸಲು ಪ್ರಯತ್ನಿಸಿದ ಬೆನ್ನಲ್ಲೇ, ಸೂಕ್ತ ರೀತಿಯಲ್ಲಿ ಕಸ ವಿಲೇವಾರಿ ಮಾಡದಿರುವ ಬಿಬಿಎಂಪಿಯನ್ನು ಸೂಪರ್‌ಸೀಡ್ ಮಾಡಲು ಗಂಭೀರವಾಗಿ ಆಲೋಚಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ ನೀಡಿರುವುದು ಬಹುದೊಡ್ಡ ವಿಡಂಬನೆಯಾಗಿದೆ. ಕಸ ವಿಲೇವಾರಿ ವಿಷಯ
ದಲ್ಲಿ ದೇಶದ ಪ್ರಜೆಗಳಿಗೆ ಮೇಲ್ಪಂಕ್ತಿ ಹಾಕಿಕೊಡಲು ಹೊರಟಿರುವ ಪ್ರಧಾನಿಯವರ ಪ್ರಯತ್ನ ಶ್ಲಾಘನೀಯ. ಆದರೆ, ಇಲ್ಲಿ ಅವರದೇ ಪಕ್ಷವು ರಾಜ್ಯದ ಆಡಳಿತಸೂತ್ರವನ್ನು ಹಿಡಿದಿದೆ. ಪ್ರಜೆಗಳಿಗೆ ಅವರ ಹೊಣೆಗಾರಿಕೆ ಮನಗಾಣಿಸುವುದು ಸುಲಭ. ಆದರೆ ಸರ್ಕಾರಕ್ಕೆ ತನ್ನ ಹೊಣೆಗಾರಿಕೆಯತ್ತ ಕಣ್ತೆರೆಸುವುದು ದೇಶದ ಪ್ರಧಾನಿಗೇ ಆದರೂ ಸವಾಲಿನ ಕೆಲಸವಾಗಿದೆ.

ಕಸವನ್ನು ವಾರ್ಡ್ ಹಂತದಲ್ಲೇ ಸಂಸ್ಕರಿಸುವ ಬಗ್ಗೆ ಬಿಬಿಎಂಪಿ ಹಲವು ವರ್ಷಗಳಿಂದಲೂ ಆಶ್ವಾಸ
ನೆಯ ಮಾತುಗಳನ್ನಾಡುತ್ತಾ ಬಂದಿದೆ. ಈ ತನಕ ಆ ಆಶ್ವಾಸನೆ ಕಾರ್ಯರೂಪಕ್ಕೆ ಬಂದಿಲ್ಲ. ಬೆಂಗಳೂರು ದಿನೇದಿನೇ ಅನಿಯಂತ್ರಿತವಾಗಿ ಬೆಳೆಯುತ್ತಿದ್ದು ಸದ್ಯಕ್ಕೆ ಪ್ರತಿದಿನ 5,700 ಟನ್ ಘನತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಒಂದು ನಗರ ಈ ವೇಗದಲ್ಲಿ ಬೆಳೆಯುತ್ತಿದ್ದರೆ ಯಾವ ಕಾರ್ಯಯೋಜನೆಯೂ ಕಾರ್ಯಸಾಧ್ಯವಾಗದು. ಬೆಂಗಳೂರಿನ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಪಾಲಿಕೆ ಎರಡೂ ವಿಫಲವಾಗಿವೆ. ತಮ್ಮ ಭಾಷಣಗಳ ಮೂಲಕ ಬೆಂಗಳೂರಿನ ಕೀರ್ತಿಯನ್ನು ದೇಶ ವಿದೇಶಗಳಲ್ಲಿ ಪಸರಿಸುತ್ತಿರುವ ಪ್ರಧಾನಿ, ಇಲ್ಲಿನ ಕಸದ ವಿಲೇವಾರಿಗೂ ಒಂದು ಸಮರ್ಪಕವಾದ ಶಾಶ್ವತ ಮಾರ್ಗೋಪಾಯ ರೂಪಿಸಿಕೊಟ್ಟಲ್ಲಿ, ಅವರ ಹೆಮ್ಮೆಗೆ ಕಾರಣರಾದ ನಗರವಾಸಿಗಳಿಗೆ ಉಪಕಾರ ಮಾಡಿದಂತಾಗುತ್ತದೆ. ಅವರು ಒಬ್ಬ ಸಾಮಾನ್ಯ ಪ್ರಜೆಯಂತೆ ಸಮುದ್ರ ತೀರದಲ್ಲಿ ಕಸ ಆಯ್ದು ಎಲ್ಲರಿಗೂ ಮಾರ್ಗದರ್ಶನ ಮಾಡಿದರೇನೋ ಸರಿ. ಆದರೆ ಕಸವನ್ನು ಸಮರ್ಪಕವಾಗಿ ನಿರ್ವಹಿಸುವ ಮಾರ್ಗಗಳೇ ನಮ್ಮಲ್ಲಿ ಇನ್ನೂ ರೂಪುಗೊಂಡಿಲ್ಲ. ಮಾರ್ಗಗಳೇ ಇಲ್ಲದ ಮೇಲೆ, ಹೊರದಾರಿಗಳೇ ಇಲ್ಲದ ಸನ್ನಿವೇಶದಲ್ಲಿ ಮಾರ್ಗದರ್ಶನ ಮಾಡುವ, ಹೊರದಾರಿಗಳನ್ನು ತೋರಿಸುವ ಪ್ರಯತ್ನ– ಆ ಪ್ರಯತ್ನ ಯಾರದ್ದೇ ಇರಲಿ– ಅಸಂಗತ ಎನಿಸುವುದಿಲ್ಲವೇ?

ಪ್ರೊ. ಪ್ರಕಾಶ ಎನ್., ಬೆಂಗಳೂರು

ಪ್ರತಿಕ್ರಿಯಿಸಿ (+)